;Resize=(412,232))
ಬೆಂಗಳೂರು : ಶುಕ್ರವಾರದಿಂದ ಆರಂಭಗೊಳ್ಳಲಿರುವ 4ನೇ ಆವೃತ್ತಿಯ ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲಿರುವ ಕನ್ನಡತಿ ಶ್ರೇಯಾಂಕಾ ಪಾಟೀಲ್, ಈ ಋತುವಿಗಾಗಿ ಬಹಳ ಕಾತರದಿಂದ ಕಾಯುತ್ತಿರುವುದಾಗಿ ಹೇಳಿದರು. ಗುರುವಾರ ಆಯ್ದ ಮಾಧ್ಯಮಗಳ ಜೊತೆ ಮಾತುಕತೆ ನಡೆಸಿದ ಶ್ರೇಯಾಂಕಾ ಡಬ್ಲ್ಯುಪಿಎಲ್‌ಗೆ ಸಿದ್ಧತೆ, ಭಾರತ ತಂಡಕ್ಕೆ ಕಮ್‌ಬ್ಯಾಕ್, ಪದೇ ಪದೇ ಗಾಯಗೊಂಡಿದ್ದರಿಂದ ಅನುಭವಿಸಿದ ಮಾನಸಿಕ ಯಾತನೆ ಸೇರಿ ಹಲವು ವಿಚಾರಗಳ ಬಗ್ಗೆ ಮಾತನಾಡಿದರು.
‘ಆರ್‌ಸಿಬಿ ನನ್ನನ್ನು ರೀಟೈನ್ ಮಾಡುತ್ತದೆ ಎಂದುಕೊಂಡಿರಲಿಲ್ಲ. ಆದರೆ ರೀಟೈನ್ ಆಗಿದ್ದೇನೆ ಎಂದು ವಿಷಯ ತಿಳಿದಾಗ ನಾನು ಭಾವುಕಳಾದೆ. ನನಗೆ ಕೆಲ ಹೊತ್ತು ಮಾತೇ ಹೊರಡಲಿಲ್ಲ’ ಎಂದರು.
2025ರಲ್ಲಿ ಬಹುತೇಕ ಸಮಯವನ್ನು ಗಾಯಾಳುವಾಗೇ ಕಳೆದ ಶ್ರೇಯಾಂಕಾ ಆರಂಭದಲ್ಲಿ ತಮ್ಮ ಕೊಠಡಿಯೊಳಗೇ ಬಂಧಿಯಾಗಿದ್ದರಂತೆ. ಆ ಬಳಿಕ ನಿಧಾನಕ್ಕೆ ಪುನಶ್ಚೇತನ ಶಿಬಿರಕ್ಕೆ ಕಾಲಿಟ್ಟ ಅವರಿಗೆ ಅದೇ ಸಮಯದಲ್ಲಿ ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನಲ್ಲಿ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಭಾರತ ತಂಡದ ವೇಗಿ ಜಸ್‌ಪ್ರೀತ್ ಬೂಮ್ರಾ ಹಲವು ಸಲಹೆಗಳನ್ನು ನೀಡಿದರಂತೆ. ‘ಒತ್ತಡ, ಗಾಯದ ಸಮಸ್ಯೆಯನ್ನು ನಿಭಾಯಿಸುವುದನ್ನು ಬೂಮ್ರಾ ಬಹಳ ಚೆನ್ನಾಗಿ ವಿವರಿಸಿದರು’ ಎಂದು ಶ್ರೇಯಾಂಕ ಹೇಳಿದರು.
ಇನ್ನು, ಈ ವರ್ಷ ಡಬ್ಯುಪಿಎಲ್ ಅವನ್ನು ಉತ್ತಮವಾಗಿ ಬಳಸಿಕೊಳ್ಳುವ ಭರವಸೆ ವ್ಯಕ್ತಪಡಿಸಿದ ಶ್ರೇಯಾಂಕಾ, ಭಾರತ ತಂಡಕ್ಕೆ ವಾಪಸಾಗುವ ವಿಶ್ವಾಸವನ್ನೂ ವ್ಯಕ್ತಪಡಿಸಿದರು.