ದುಬೈ: ಟೆಸ್ಟ್ ಕ್ರಿಕೆಟ್‌ಅನ್ನು ಇನ್ನಷ್ಟು ಸ್ಪರ್ಧಾತ್ಮಕಗೊಳಿಸುವ ನಿಟ್ಟಿನಲ್ಲಿ ಐಸಿಸಿ ಹೊಸ ಯೋಜನೆಗೆ ಸಿದ್ಧವಾಗಿದೆ. ಬಲಿಷ್ಠ ತಂಡಗಳ ನಡುವೆ ಹೆಚ್ಚಿನ ಸರಣಿ ಆಯೋಜಿಸಲು ಟೆಸ್ಟ್ ಸರಣಿಗಳನ್ನೇ 2 ದರ್ಜೆಗಳನ್ನಾಗಿ ವಿಂಗಡಿಸಲು ಚಿಂತನೆ ನಡೆಸುತ್ತಿದೆ.
ಐಸಿಸಿ ನೂತನ ಅಧ್ಯಕ್ಷ ಜಯ್ ಶಾ ಈ ತಿಂಗಳ ಕೊನೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ, ಕ್ರಿಕೆಟ್ ಇಂಗ್ಲೆಂಡ್ ಮುಖ್ಯಸ್ಥರೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಟೆಸ್ಟ್ ಕ್ರಿಕೆಟ್ ಹೊಸ ಶೈಲಿ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ.
ಸದ್ಯದ ಪ್ರಸ್ತಾವದ ಪ್ರಕಾರ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದ.ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾಗಳನ್ನು ಮೊದಲ ದರ್ಜೆ ಎಂದು ಪರಿಗಣಿಸಲಾಗುತ್ತದೆ. ಈ ದರ್ಜೆಯ ತಂಡಗಳೇ ಪರಸ್ಪರ ಸರಣಿ ಆಡಲಿವೆ. ವೆಸ್ಟ್ಇಂಡೀಸ್, ಜಿಂಬಾಬ್ವೆ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಐರ್ಲೆಂಡ್ 2ನೇ ದರ್ಜೆಯಲ್ಲಿರಲಿವೆ. ಆ ತಂಡಗಳು ಮೊದಲ ದರ್ಜೆಯ ತಂಡಗಳ ನಡುವೆ ಸರಣಿ ಆಡುವ ಅವಕಾಶವಿರುವುದಿಲ್ಲ. ಈ ಶೈಲಿ 2027ರ ಬಳಿಕವಷ್ಟೇ ಜಾರಿಗೊಳ್ಳುವ ಸಾಧ್ಯತೆಯಿದೆ.
ಆದರೆ ಬಲಿಷ್ಠ ತಂಡಗಳ ಜೊತೆ ಆಡುವ ಅವಕಾಶ ಸಿಗುವುದಿಲ್ಲ ಹಾಗೂ ಆದಾಯ ಕಡಿತಗೊಳ್ಳುವ ಭೀತಿಯಿಂದ ಈ ಯೋಜನೆಗೆ ಬಾಂಗ್ಲಾ, ಜಿಂಬಾಬ್ವೆ ಸೇರಿ ಕೆಲ ದೇಶಗಳು ವಿರೋಧ ವ್ಯಕ್ತಪಡಿಸಿವೆ.
18 ವರ್ಷದ ಬಳಿಕ ಟೆಸ್ಟ್ ಸರಣಿಗಾಗಿ ಪಾಕಿಸ್ತಾನಕ್ಕೆ ಬಂದ ವಿಂಡೀಸ್ ತಂಡ!
ಕರಾಚಿ: 18 ವರ್ಷಗಳ ನಂತರ ವೆಸ್ಟ್‌ಇಂಡೀಸ್ ತಂಡವು ಟೆಸ್ಟ್ ಸರಣಿಗಾಗಿ ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ಬಂದಿಳಿದಿದೆ. 2006ರಲ್ಲಿ ವಿಂಡೀಸ್ ತಂಡ ಕೊನೆಯದಾಗಿ ಟೆಸ್ಟ್ ಸರಣಿ ಆಡಲು ಪಾಕಿಸ್ತಾನಕ್ಕೆ ಆಗಮಿಸಿತ್ತು. ಜ.10ರಿಂದ ವಿಂಡೀಸ್ ತಂಡ ಪಾಕಿಸ್ತಾನದ ಶಾಹೀನ್ಸ್ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯವಾಡಲಿದೆ. ಬಳಿಕ ಮುಲ್ತಾನ್‌ನಲ್ಲಿ ಜ.17ರಿಂದ ಪಾಕ್-ವಿಂಡೀಸ್ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಜ.25ರಿಂದ ಎರಡನೇ ಟೆಸ್ಟ್ ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ.