ಇಗಾ ಫ್ರೆಂಚ್‌ ರಾಣಿ: ಸತತ 3ನೇ ಬಾರಿ ಪೋಲೆಂಡ್‌ ತಾರೆಗೆ ಕಿರೀಟ

KannadaprabhaNewsNetwork |  
Published : Jun 09, 2024, 01:31 AM ISTUpdated : Jun 09, 2024, 03:52 AM IST
ಇಗಾ ಸ್ವಿಯಾಟೆಕ್‌ | Kannada Prabha

ಸಾರಾಂಶ

ಮಹಿಳಾ ಸಿಂಗಲ್ಸ್‌ ಫೈನಲಲ್ಲಿ ಇಟಲಿಯ ಪೌಲಿನಿ ವಿರುದ್ಧ 6-2, 6-1 ಜಯ. ಸತತ 3ನೇ, ಒಟ್ಟಾರೆ 4ನೇ ಫ್ರೆಂಚ್‌ ಓಪನ್‌ ಗೆದ್ದ ಇಗಾ ಸ್ವಿಯಾಟೆಕ್‌. ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ 5ನೇ ಬಾರಿ ಚಾಂಪಿಯನ್‌.

ಪ್ಯಾರಿಸ್‌: ಫ್ರೆಂಚ್ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ವಿಶ್ವ ನಂ.1 ಇಗಾ ಸ್ವಿಯಾಟೆಕ್‌ ಸತತ 3ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಟೂರ್ನಿಯುದ್ದಕ್ಕೂ ಎದುರಾಳಿಗಳ ಮೇಲೆ ಪ್ರಾಬಲ್ಯ ಸಾಧಿಸಿದ ಪೋಲೆಂಡ್‌ ತಾರೆ ಫೈನಲ್‌ನಲ್ಲೂ ಪರಾಕ್ರಮ ಮೆರೆದು 4ನೇ ಫ್ರೆಂಚ್‌ ಓಪನ್‌, ಒಟ್ಟಾರೆ 5ನೇ ಗ್ರ್ಯಾನ್‌ಸ್ಲಾಂ ಮುಡಿಗೇರಿಸಿಕೊಂಡಿದ್ದಾರೆ.

ಶನಿವಾರ ನಡೆದ ಮಹಿಳಾ ಸಿಂಗಲ್ಸ್‌ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅಗ್ರ ಶ್ರೇಯಾಂಕಿತ ಸ್ವಿಯಾಟೆಕ್‌, 12ನೇ ಶ್ರೇಯಾಂಕಿತ ಇಟಲಿಯ ಜಾಸ್ಮಿನ್‌ ಪೌಲಿನಿ ವಿರುದ್ಧ 6-2, 6-1 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. 

ಕ್ವಾರ್ಟರ್‌ ಫೈನಲ್‌ನಲ್ಲಿ ವಿಂಬಲ್ಡನ್‌ ಚಾಂಪಿಯನ್‌ ಎಲೆನಾ ರಬೈಕೆನಾರನ್ನು ಸೋಲಿಸಿದ್ದ ವಿಶ್ವ ನಂ.26 ಪೌಲಿನಿ, ಫೈನಲ್‌ನಲ್ಲಿ ಇಗಾಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿತ್ತು. ಆದರೆ ಪ್ರಶಸ್ತಿ ಸುತ್ತಿನ ಪಂದ್ಯ ಏಕಪಕ್ಷೀಯವಾಗಿ ಸಾಗಿತು. 23 ವರ್ಷದ ಸ್ವಿಯಾಟೆಕ್‌ರ ಪ್ರಬಲ ಮತ್ತು ನಿಖರ ಹೊಡೆತಗಳ ಮುಂದೆ ತಬ್ಬಿಬ್ಬಾದ ಪೌಲಿನಿ ಹೆಚ್ಚು ಪ್ರತಿರೋಧ ತೋರದೆ ಶರಣಾದರು.

 ಟೂರ್ನಿಯಲ್ಲಿ ಕೇವಲ 1 ಸೆಟ್‌ ಕಳೆದುಕೊಂಡಿದ್ದ ಇಗಾ, ಫೈನಲ್‌ ಪಂದ್ಯವನ್ನು ಕೇವಲ 1 ಗಂಟೆ 8 ನಿಮಿಷಗಳಲ್ಲೇ ಗೆದ್ದುಕೊಂಡರು. ಇದರೊಂದಿಗೆ ಚೊಚ್ಚಲ ಬಾರಿ ಗ್ರ್ಯಾನ್‌ಸ್ಲಾಂ ಫೈನಲ್‌ಗೇರಿದ್ದ 28 ವರ್ಷದ ಪೌಲಿನಿ ಮೊದಲ ಪ್ರಯತ್ನದಲ್ಲೇ ಟ್ರೋಫಿ ಗೆಲ್ಲುವ ಅವಕಾಶ ಕಳೆದುಕೊಂಡರು.

2020, 2022, 2023, 2024ರಲ್ಲಿ ಪ್ರಶಸ್ತಿ ಜಯ!

ಇಗಾ ಸ್ವಿಯಾಟೆಕ್‌ 4ನೇ ಬಾರಿ ಫ್ರೆಂಚ್‌ ಓಪನ್‌ ಗೆದ್ದರು. 2020ರಲ್ಲಿ ಮೊದಲ ಬಾರಿ ಪ್ರಶಸ್ತಿ ಗೆದ್ದಿದ್ದ ಇಗಾ 2021ರಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಪರಾಭವಗೊಂಡಿದ್ದರು. ಬಳಿಕ 2022, 2023, 2024ರಲ್ಲಿ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. 4 ಬಾರಿ ಫೈನಲ್‌ನಲ್ಲೂ ಅವರು ಬೇರೆ ಬೇರೆ ಆಟಗಾರ್ತಿಯರ ವಿರುದ್ಧ ಗೆಲುವು ಸಾಧಿಸಿದ್ದಾರೆ.

₹21.6 ಕೋಟಿ: ಫ್ರೆಂಚ್‌ ಓಪನ್‌ ವಿಜೇತೆ ಇಗಾ ಸ್ವಿಯಾಟೆಕ್‌ ಪಡೆದ ಬಹುಮಾನ ಮೊತ್ತ.

₹10.8 ಕೋಟಿ: ರನ್ನರ್‌-ಅಪ್‌ ಸ್ಥಾನ ಪಡೆದ ಇಟಲಿಯ ಪೌಲಿನಿ ಪಡೆದ ಬಹುಮಾನ ಮೊತ್ತ. 

ಇಂದು ಮಹಿಳಾ ಡಬಲ್ಸ್‌ ಫೈನಲಲ್ಲಿ ಪೌಲಿನಿ ಕಣಕ್ಕೆ!

ಸಿಂಗಲ್ಸ್ ಫೈನಲ್‌ನಲ್ಲಿ ಸ್ವಿಯಾಟೆಕ್‌ ವಿರುದ್ಧ ಸೋತ ಪೌಲಿನಿ, ಭಾನುವಾರ ಮಹಿಳಾ ಡಬಲ್ಸ್ ಫೈನಲ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಇಟಲಿಯ ಸಾರಾ ಎರ್ರಾನಿ ಜೊತೆಗೂಡಿ ಆಡುತ್ತಿರುವ ಪೌಲಿನಿ, ಫೈನಲ್‌ ಪಂದ್ಯದಲ್ಲಿ ಅಮೆರಿಕದ ಕೊಕೊ ಗಾಫ್‌-ಚೆಕ್‌ ಗಣರಾಜ್ಯದ ಕ್ಯಾಥೆರಿನಾ ಸಿನಿಕೋವಾ ವಿರುದ್ಧ ಸೆಣಸಲಿದ್ದು, ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ