ದುಬೈ: 9ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಕ್ಟೋಬರ್ 6ರಂದು ಪರಸ್ಪರ ಸೆಣಸಾಡಲಿವೆ.ಬಾಂಗ್ಲಾದಲ್ಲಿ ಅ.3ರಿಂದ 20ರ ವರೆಗೆ ನಡೆಯಲಿರುವ ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಳ್ಳಲಿವೆ.
ಭಾನುವಾರ ಐಸಿಸಿ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, 2020ರ ರನ್ನರ್-ಅಪ್ ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಕೂಡಾ ಇದೇ ಗುಂಪಿನಲ್ಲಿವೆ. ಭಾರತ ಅ.4ರಂದು ನ್ಯೂಜಿಲೆಂಡ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದು, ಅ.9ಕ್ಕೆ ಕ್ವಾಲಿಫೈಯರ್ 1 ತಂಡ ಎದುರಾಗಲಿದೆ.
6 ಬಾರಿ ಚಾಂಪಿಯನ್ ಆಸೀಸ್ ವಿರುದ್ಧ ಅ.13ಕ್ಕೆ ಆಡಲಿದೆ. ಆತಿಥೇಯ ಬಾಂಗ್ಲಾದೇಶ, ದ.ಆಫ್ರಿಕಾ. ಇಂಗ್ಲೆಂಡ್, ವೆಸ್ಟ್‌ಇಂಡೀಸ್ ಹಾಗೂ ಕ್ವಾಲಿಫೈಯರ್ 2 ತಂಡ ‘ಬಿ’ ಗುಂಪಿನಲ್ಲಿವೆ. ಪ್ರತಿ ಗುಂಪಿನ ಅಗ್ರ-2 ತಂಡಗಳು ನಾಕೌಟ್‌ಗೇರಲಿವೆ. ಅ.20ಕ್ಕೆ ಫೈನಲ್ ಪಂದ್ಯ ನಡೆಯಲಿದೆ.
ವಿಶ್ವ ರಿಲೇ: ಭಾರತದ 3 ತಂಡಗಳಿಗೂ ನಿರಾಸೆ!
ನಾಸೌ: ಒಲಿಂಪಿಕ್ಸ್ ಅರ್ಹತೆಯ ನಿರೀಕ್ಷೆಯೊಂದಿಗೆ ರಿಲೇ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಣಕ್ಕಿಳಿದಿರುವ ಭಾರತದ 3 ತಂಡಗಳೂ ನಿರಾಸೆ ಅನುಭವಿಸಿವೆ. ಭಾನುವಾರ ಮೊದಲ ಸುತ್ತಿನಲ್ಲಿ 3 ತಂಡಕ್ಕೂ ಒಲಿಂಪಿಕ್ಸ್ ಅರ್ಹತೆ ಗಳಿಸಲಾಗಲಿಲ್ಲ. ಪುರುಷರ 4*400 ಮೀ. ತಂಡದ ರಾಜೇಶ್ ರಮೇಶ್ ಓಟದ ನಡುವೆ ಗಾಯಗೊಂಡಿದ್ದರಿಂದ ರೇಸ್ ಪೂರ್ತಿಗೊಳಿಸಲಾಗಲಿಲ್ಲ.
4*400 ಮೀ. ಮಿಶ್ರ ತಂಡ 3 ನಿಮಿಷ 20.36 ಸೆಕೆಂಡ್‌ಗಳಲ್ಲಿ ಕ್ರಮಿಸಿ ಹೀಟ್ಸ್‌ನಲ್ಲಿ 6ನೇ ಸ್ಥಾನ ಪಡೆದರೆ, 4*400 ಮಹಿಳಾ ತಂಡ 3 ನಿಮಿಷ 29.74 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಹೀಟ್ಸ್‌ನಲ್ಲಿ 5ನೇ ಸ್ಥಾನಿಯಾಯಿತು. ಪ್ರತಿ ಹೀಟ್ಸ್‌ನ ಅಗ್ರ-4 ತಂಡಗಳು ಒಲಿಂಪಿಕ್ಸ್ ಪ್ರವೇಶಿಸಿದವು. ಭಾರತ 3 ತಂಡಗಳೂ ಸೋಮವಾರ 2ನೇ ಸುತ್ತಿನಲ್ಲಿ ಸ್ಪರ್ಧಿಸಲಿದ್ದು, ಉತ್ತಮ ಪ್ರದರ್ಶನ ತೋರಿ ಒಲಿಂಪಿಕ್ಸ್‌ಗೇರುವ ನಿರೀಕ್ಷೆಯಲ್ಲಿದೆ.