ಮೂರೇ ದಿನಗಳಲ್ಲಿ 62 ಪದಕ ಬೇಟೆಯಾಡಿದ ಭಾರತ!

Published : Oct 22, 2026, 11:50 AM IST
Games

ಸಾರಾಂಶ

ಜಪಾನ್‌ನಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಪದಕ ಬೇಟೆ ಮುಂದುವರಿಸಿದೆ. ಕೇವಲ 3 ದಿನಗಳಲ್ಲೇ ಬರೋಬ್ಬರಿ 62 ಪದಕ ಗೆದ್ದಿದೆ.ಮೊನ್ನೆ 5 ಚಿನ್ನ ಸೇರಿ 24 ಪದಕ, ನಿನ್ನೆ 5 ಚಿನ್ನ ಸೇರಿ 27 ಪದಕ

ನಗೋಯಾ: ಜಪಾನ್‌ನಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಪದಕ ಬೇಟೆ ಮುಂದುವರಿಸಿದೆ. ಕೇವಲ 3 ದಿನಗಳಲ್ಲೇ ಬರೋಬ್ಬರಿ 62 ಪದಕ ಗೆದ್ದಿದೆ. ಮೊದಲ ದಿನವಾದ ಸೋಮವಾರ 4 ಚಿನ್ನ ಸೇರಿ 11 ಪದಕ ಗೆದ್ದಿದ್ದ ಭಾರತ, ಮಂಗಳವಾರ 5 ಚಿನ್ನ ಸೇರಿ 24 ಪದಕ ಹಾಗೂ 3ನೇ ದಿನವಾದ ಬುಧವಾರ 5 ಚಿನ್ನ ಸೇರಿ 27 ಪದಕ ತನ್ನದಾಗಿಸಿಕೊಂಡಿತು.

ಭಾರತಕ್ಕೆ ಸಿಕ್ಕ ಪದಕಗಳಲ್ಲಿ ಬಹುತೇಕ ಪ್ಯಾರಾ ಅಥ್ಲೆಟಿಕ್ಸ್‌ನಲ್ಲೇ ಒಲಿದವು. ಮಹಿಳೆಯರ 400 ಮೀ. ಟಿ20 ವಿಭಾಗದಲ್ಲಿ ದೀಪ್ತಿ ಜೀವಾಂಜಿ ಚಿನ್ನ ಸಂಪಾದಿಸಿದರು. ಪುರುಷರ 100 ಮೀ. ಟಿ45 ವಿಭಾಗದಲ್ಲಿ ದಿಲೀಪ್‌ ಗಾವಿಟ್‌ ಚಿನ್ನ, ಮೊಹಮ್ಮದ್‌ ಬಾಸಿಲ್‌ ಬೆಳ್ಳೀ ಪಡೆದರು. ಹೈಜಂಪ್‌ ಟಿ64 ವಿಭಾಗದಲ್ಲಿ ಪ್ರವೀಣ್‌ ಕುಮಾರ್‌ ಚಿನ್ನ, ಬಂಟಿ ಬೆಳ್ಳಿ ಗೆದ್ದರು. ಶಾಟ್‌ಪುಟ್‌ನ ಎಫ್‌53 ವಿಭಾಗದಲ್ಲಿ ಆಯುಶ್‌ ವರ್ಮಾ ಬಂಗಾರದ ಸಾಧನೆ ಮಾಡಿದರು. ಪುರುಷರ ಡಿಸ್ಕಸ್‌ ಎಸೆತದ ಟಿ51/ಟಿ52/ಟಿ53 ವಿಭಾಗದಲ್ಲಿ ಪ್ರಣವ್‌ ಸೂರ್ಮ ಚಿನ್ನ, ರಾಮ್‌ರತನ್‌ ಸಿಂಗ್‌ ಬೆಳ್ಳಿ ಗೆದ್ದರು.

ಶೀತಲ್‌-ಪಾಯಲ್‌ ಬೆಳ್ಳಿಗೆ ತೃಪ್ತಿ:

ಚಿನ್ನದ ನಿರೀಕ್ಷೆಯಲ್ಲಿದ್ದ ಭಾರತದ ಪ್ಯಾರಾ ಆರ್ಚರಿ ತಾರೆಗಳಾದ ಶೀತಲ್‌ ದೇವಿ ಹಾಗೂ ಪಾಯಲ್‌ ನಾಗ್‌ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಈ ಜೋಡಿ ಕಾಂಪೌಂಡ್‌ ಮಹಿಳಾ ಡಬಲ್ಸ್‌ನಲ್ಲಿ ಚೀನಾ ವಿರುದ್ಧ 141-150ರಲ್ಲಿ ಸೋತಿತು.

ನಿಶಾದ್‌, ಸಿಮ್ರನ್‌ಗೆ 2 ಚಿನ್ನ:

ನಿಶಾದ್‌ ಕುಮಾರ್‌ ಲಾಂಗ್‌ಜಂಪ್‌ ಬಳಿಕ ಹೈಜಂಪ್‌ನಲ್ಲೂ ಚಿನ್ನ ಬಾಚಿದರು. ಅವರು ಟಿ47 ವಿಭಾಗದಲ್ಲಿ ಚಾಂಪಿಯನ್‌ ಆದರು. ಭಾರತದ ಧ್ವಜದಾರಿಯಾಗಿದ್ದ ಸಿಮ್ರನ್‌ಗೆ ಶರ್ಮಾ ಅಥ್ಲೆಟಿಕ್ಸ್‌ನ 100 ಮೀ., 200 ಮೀ. ರೇಸ್‌ನಲ್ಲಿ ಬಂಗಾರ ಗೆದ್ದರು.

ಶಾಟ್‌ಪುಟ್‌, ಡಿಸ್ಕಸ್‌ ಥ್ರೋನಲ್ಲಿ ಕ್ಲೀನ್‌ಸ್ವೀಪ್

ಭಾರತ 2 ದಿನಗಳಲ್ಲಿ 2 ವಿಭಾಗದಲ್ಲಿ ಕ್ಲೀನ್‌ಸ್ವೀಪ್‌ ಸಾಧನೆ ಮಾಡಿತು. ಪುರುಷರ ಡಿಸ್ಕಸ್‌ ಎಸೆತದ ಎಫ್‌43/ಎಫ್‌44/ಎಫ್‌62/ಎಫ್‌64 ವಿಭಾಗದಲ್ಲಿ ದೇವೇಂದರ್‌ ಕುಮಾರ್‌ ಚಿನ್ನ, ರಾಕೇಶ್‌ ಬೆಳ್ಳಿ, ಪ್ರದೀಪ್‌ ಕುಮಾರ್‌ ಕಂಚು ಗೆದ್ದರು. ಶಾಟ್‌ಪುಟ್‌ನ ಎಫ್‌46 ವಿಭಾಗದಲ್ಲಿ ಸಚಿನ್‌ ಖಿಲಾರಿ ಚಿನ್ನ, ಮೊಹಮ್ಮದ್‌ ಯಾಸಿರ್‌ ಬೆಳ್ಳಿ, ಪರ್ವೀನ್‌ ಕಂಚು ತಮ್ಮದಾಗಿಸಿಕೊಂಡರು.

ರಾಜ್ಯದ ನಿರಂಜನ್‌ಗೆ ಕಂಚು, ಶರತ್‌ಗೆ ಬೆಳ್ಳಿ

ಕರ್ನಾಟಕದ ಮತ್ತಿಬ್ಬರು ಅಥ್ಲೀಟ್‌ಗಳು ಪದಕ ಗೆದ್ದಿದ್ದಾರೆ. ಪುರುಷರ 200 ಮೀ. ವೈಯಕ್ತಿಕ ಮೆಡ್ಲೆ ಎಸ್‌ಎಮ್‌7 ವಿಭಾಗದಲ್ಲಿ ನಿರಂಜನ್‌ ಮುಕುಂದನ್‌ ಬೆಳ್ಳಿ ಪದಕ ಗೆದ್ದರು. ಶರತ್ ಮಾಕೇನಹಳ್ಳಿ ಪುರುಷರ 1500 ಮೀ. ಟಿ12 ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು. ಸ್ಪರ್ಧೆ ಮುಗಿದಾಗ ಶರತ್‌ ಕಂಚು ಗೆದ್ದಿದ್ದರು. ಆದರೆ ಚಿನ್ನ ವಿಜೇತ ಉಜ್ಬೇಕಿಸ್ತಾನದ ಫಖ್ರಿದ್ದೀನ್‌ ಖಮರೇವ್‌ ನಿಯಮ ಉಲ್ಲಂಘನೆ ಕಾರಣಕ್ಕೆ ಅನರ್ಹಗೊಂಡ ಕಾರಣ ಶರತ್‌ಗೆ ಕಂಚಿನ ಪದಕ ಬೆಳ್ಳಿ ಲಭಿಸಿತು.

62ರ ಪೈಕಿ 42 ಪದಕ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಪಡೆದ ಭಾರತೀಯರು

ಭಾರತ ಕೂಟದಲ್ಲಿ ಈವರೆಗೂ 62 ಪದಕ ಗೆದ್ದಿದೆ. ಈ ಪೈಕಿ 42 ಪದಕಗಳು ಪ್ಯಾರಾ ಅಥ್ಲೆಟಿಕ್ಸ್‌ನಲ್ಲೇ ಒಲಿದಿವೆ. ಈ ವಿಭಾಗದಲ್ಲಿ 13 ಚಿನ್ನ, 14 ಬೆಳ್ಳಿ ಹಾಗೂ 15 ಕಂಚು ಸೇರಿ 42 ಪದಕ ಗೆದ್ದಿದ್ದಾರೆ. ಉಳಿದಂತೆ ಪ್ಯಾರಾ ಆರ್ಚರಿಯಲ್ಲಿ 1, ಜುಡೋ, ಪವರ್‌ಲಿಫ್ಟಿಂಗ್‌ನಲ್ಲಿ ತಲಾ 2, ಈಜಿನಲ್ಲಿ 6, ಟೇಬಲ್‌ ಟೆನಿಸ್‌ನಲ್ಲಿ 5 ಹಾಗೂ ಶೂಟಿಂಗ್‌ನಲ್ಲಿ 4 ಪದಕ ಬಂದಿವೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ರನ್‌ ‘ಹಬ್ಬ’ದಲ್ಲಿ ಗೆದ್ದ ಭಾರತ!
ಕೂಲಿ ಕಾರ್ಮಿಕನ ಮಗ ರಣಜಿ ತಂಡಕ್ಕೆ ಆಯ್ಕೆ