ಡಾಕಾ: ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಅಂಡರ್-19 ಮಹಿಳಾ ಸ್ಯಾಫ್ ಕಪ್ ಚಾಂಪಿಯನ್‌ಶಿಪ್‌ನಲ್ಲಿ ಭಾರೀ ಹೈಡ್ರಾಮ ನಡೆದಿದೆ. ಹಲವು ಗಂಟೆಗಳ ನಾಟಕೀಯ ಬೆಳವಣಿಗೆ ಬಳಿಕ ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗಿದೆ.
ಗುರುವಾರ ನಡೆದ ಫೈನಲ್ ಪಂದ್ಯ ನಿಗದಿ ಅವಧಿಯಲ್ಲಿ 1-1ರಲ್ಲಿ ಸಮಬಲಗೊಂಡಿತು. ಹೀಗಾಗಿ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
ಪೆನಾಲ್ಟಿಯಲ್ಲಿ ಇತ್ತಂಡಗಳು 11-11ರಲ್ಲಿ ಸಮಬಲ ಸಾಧಿಸಿದವು. ಹೀಗಾಗಿ ವಿಜೇತರನ್ನು ನಿರ್ಧರಿಸಲು ಟಾಸ್ ಮೊರೆ ಹೋದ ರೆಫ್ರಿಗಳು, ಟಾಸ್ ಗೆದ್ದ ಭಾರತವನ್ನು ಚಾಂಪಿಯನ್ ಎಂದು ಘೋಷಿಸಿದರು.
ಭಾರತೀಯ ಆಟಗಾರ್ತಿಯರು ಸಂಭ್ರಮಿಸಲು ಶುರು ಮಾಡಿದರೆ, ಬಾಂಗ್ಲಾ ಆಟಗಾರ್ತಿಯರು ಮೈದಾನದಲ್ಲೇ ಪ್ರತಿಭಟಿಸಿದರು. ಬಾಂಗ್ಲಾ ಅಭಿಮಾನಿಗಳು ಕೂಟಾ ಬಾಟಲ್‌ಗಳನ್ನು ಮೈದಾನಕ್ಕೆ ಎಸೆದು ಆಕ್ರೋಶ ಹೊರಹಾಕಿದರು.
ಬಳಿಕ ಆಯೋಜಕರು, ರೆಫ್ರಿಗಳು ನಿಯಮಗಳನ್ನು ಪರಿಶೀಲಿಸಿ, ನಾಣ್ಯ ಚಿಮ್ಮುಗೆಗೆ ಯಾವುದೇ ಮಾನ್ಯತೆ ಇಲ್ಲದ ಕಾರಣ ಉಭಯ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಿದರು.