ಗ್ರೇಟ್‌ ಬ್ರಿಟನ್‌ನ ಸೋಲಿಸಿ ಒಲಿಂಪಿಕ್ಸ್‌ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ

KannadaprabhaNewsNetwork | Updated : Aug 05 2024, 04:26 AM IST

ಸಾರಾಂಶ

ಬ್ರಿಟನ್‌ ವಿರುದ್ಧ ಕ್ವಾರ್ಟರ್‌ ಫೈನಲ್‌ನಲ್ಲಿ ಜಯ. 60 ನಿಮಿಷಗಳಲ್ಲಿ 1-1 ಸಮಬಲ. ಶೂಟೌಟ್‌ನಲ್ಲಿ ಭಾರತಕ್ಕೆ 4-2 ಗೆಲುವು. 18ನೇ ನಿಮಿಷದಲ್ಲಿ ಅಮಿತ್‌ಗೆ ಕೆಂಪು ಕಾರ್ಡ್‌. ಹೀಗಾಗಿ 42 ನಿಮಿಷ ಕೇವಲ 10 ಆಟಗಾರರೊಂದಿಗೆ ಆಡಿದ ಭಾರತ.

ಪ್ಯಾರಿಸ್‌: ಭಾರತೀಯ ಹಾಕಿಯ ಮಹಾಗೋಡೆ ಎಂದೇ ಕರೆಸಿಕೊಳ್ಳುವ ಹಿರಿಯ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ರ ಸಾಹಸ, ಅಮೋಘ ರಕ್ಷಣಾ ಕೌಶಲ್ಯಗಳ ಫಲವಾಗಿ ಭಾರತ ತಂಡ ಪ್ಯಾರಿಸ್‌ ಒಲಿಂಪಿಕ್ಸ್‌ನ ಸೆಮಿಫೈನಲ್‌ ಪ್ರವೇಶಿಸಿದೆ. ಭಾನುವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಬ್ರಿಟನ್‌ ವಿರುದ್ಧ ಶೂಟೌಟ್‌ನಲ್ಲಿ 4-2 ಗೋಲುಗಳ ಅಂತರದಲ್ಲಿ ಗೆದ್ದ ಭಾರತ, ಚಿನ್ನದ ಪದಕ ಗೆಲ್ಲುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

 ಪಂದ್ಯದ 18ನೇ ನಿಮಿಷದಲ್ಲೇ ಡಿಫೆಂಡರ್‌ ಅಮಿತ್‌ ರೋಹಿದಾಸ್‌ಗೆ ರೆಫ್ರಿ ಕೆಂಪು ಕಾರ್ಡ್‌ ನೀಡಿ ಹೊರಕಳುಹಿಸಿದ ಬಳಿಕ, ಭಾರತ ಮುಂದಿನ 42 ನಿಮಿಷ ಕೇವಲ 10 ಆಟಗಾರರೊಂದಿಗೆ ಆಡಬೇಕಾಯಿತು. ಆದರೆ, ಛಲ ಬಿಡದೆ ಹೋರಾಡಿದ ಭಾರತ, ಬ್ರಿಟನ್‌ನ ಎಲ್ಲಾ ಅಸ್ತ್ರಗಳಿಗೂ ಸಮರ್ಥ ರೀತಿಯಲ್ಲಿ ಉತ್ತರಿಸಿ 60 ನಿಮಿಷಗಳ ಆಟ ಮುಕ್ತಾಯಗೊಳ್ಳುವ ವೇಳೆಗೆ 1-1ರಲ್ಲಿ ಸಮಬಲ ಸಾಧಿಸಲು ಯಶಸ್ವಿಯಾಯಿತು. 

ಪಂದ್ಯದಲ್ಲಿ ಭಾರತ ಮೊದಲ ಮುನ್ನಡೆ ಸಾಧಿಸಿತು. 22ನೇ ನಿಮಿಷದಲ್ಲಿ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ಬಾರಿಸಿದರು. ಆದರೆ 27ನೇ ನಿಮಿಷದಲ್ಲಿ ಬ್ರಿಟನ್‌ ಸಮಬಲ ಸಾಧಿಸಿತು. ಲೀ ಮಾರ್ಟನ್‌ ಬಾರಿಸಿದ ಆಕರ್ಷಕ ಫೀಲ್ಡ್‌ ಗೋಲು ಭಾರತ ತನ್ನ ಆಟದ ಶೈಲಿಯಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳುವಂತೆ ಮಾಡಿತು.

ಬ್ರಿಟನ್‌ಗೆ ಸಾಲು ಸಾಲು ಪೆನಾಲ್ಟಿ ಕಾರ್ನರ್‌ಗಳು ಸಿಕ್ಕರೂ, ಶ್ರೀಜೇಶ್‌ ಒಂದರಲ್ಲೂ ಗೋಲು ಬಾರಿಸಲು ಬಿಡಲಿಲ್ಲ. ಪ್ರಮುಖ ಡಿಫೆಂಡರ್‌ ರೋಹಿದಾಸ್‌ರ ಅನುಪಸ್ಥಿತಿಯಲ್ಲೂ ಭಾರತ ಉತ್ತಮ ಆಟವಾಡಿತು. ಕೊನೆಯ ಕ್ವಾರ್ಟರ್‌ನಲ್ಲಿ ಬ್ರಿಟನ್‌ ಹೆಚ್ಚು ಆಕ್ರಮಣಕಾರಿಯಾಗಿ ಆಡಿದರೂ, ಭಾರತದ ಭದ್ರಕೋಟೆಯನ್ನು ಬೇಧಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಫಲಿತಾಂಶಕ್ಕಾಗಿ ಶೂಟೌಟ್‌ ಮೊರೆ ಹೋಗಬೇಕಾಯಿತು.

ಹೇಗಿತ್ತು ಶೂಟೌಟ್‌?

ಎರಡೂ ತಂಡಗಳು ಮೊದಲೆರೆಡು ಯತ್ನಗಳಲ್ಲಿ ಗೋಲು ಬಾರಿಸಿದವು. ಬ್ರಿಟನ್‌ 3ನೇ ಯತ್ನವನ್ನು ವ್ಯರ್ಥ ಮಾಡಿದರೂ, ಲಲಿತ್‌ ಉಪಾಧ್ಯಾಯ ಗೋಲು ಬಾರಿಸುವಲ್ಲಿ ಹಿಂದೆ ಬೀಳಲಿಲ್ಲ. ಹೀಗಾಗಿ ಭಾರತ 3-2ರ ಮುನ್ನಡೆ ಪಡೆಯಿತು. ಬಳಿಕ 4ನೇ ಯತ್ನದಲ್ಲಿ ಶ್ರೀಜೇಶ್‌ ಗೋಲು ಪೆಟ್ಟಿಗೆಯ ಮುಂದೆ ತೋರಿದ ಸಾಹಸ, ಬ್ರಿಟನ್‌ಗೆ ಮತ್ತೆ ಆಘಾತ ನೀಡಿತು. ರಾಜ್‌ಕುಮಾರ್‌ ಪಾಲ್‌ ಗೋಲು ಬಾರಿಸಿ ಭಾರತದ ಗೆಲುವಿಗೆ ನೆರವಾದರು.

Share this article