ದುಬೈ: 9ನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಬದ್ಧವೈರಿ ಪಾಕಿಸ್ತಾನ ವಿರುದ್ಧ 6 ವಿಕೆಟ್ ಸುಲಭ ಗೆಲುವು ಸಾಧಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಗೆಲುವಿನ ಖಾತೆ ತೆರೆದಿರುವ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಸೆಮಿಫೈನಲ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.
ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪರಾಭವಗೊಂಡಿದ್ದ ಭಾರತ, ಪಾಕ್ ವಿರುದ್ಧ ಗೆಲುವಿನೊಂದಿಗೆ ‘ಎ’ ಗುಂಪಿನ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಿಂದ ಮೇಲೇರಿತು. ತಂಡ 2 ಪಂದ್ಯಗಳಲ್ಲಿ 2 ಅಂಕ ಗಳಿಸಿದ್ದು, 4ನೇ ಸ್ಥಾನದಲ್ಲಿದೆ. ಆದರೆ ತಂಡದ ನೆಟ್ ರನ್‌ರೇಟ್(-1.217) ತೀರಾ ಕಳಪೆಯಾಗಿದ್ದು, ಮುಂದಿನ ಎರಡೂ ಪಂದ್ಯಗಳಲ್ಲಿ ದೊಡ್ಡ ಅಂತರದಲ್ಲಿ ಗೆದ್ದರಷ್ಟೇ ತಂಡಕ್ಕೆ ಸೆಮೀಸ್‌ಗೇರುವ ಅವಕಾಶ ಸಿಗಲಿದೆ.
ಭಾನುವಾರ ದುಬೈ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 8 ವಿಕೆಟ್‌ಗೆ 105 ರನ್ ಕಲೆಹಾಕಿತು. ಸುಲಭ ಗುರಿ ಪಡೆದರೂ ಭಾರತಕ್ಕೆ ದೊಡ್ಡ ಅಂತರದ ಗೆಲುವೇನೂ ಸಿಗಲಿಲ್ಲ. ರನ್ ಗಳಿಸಲು ತಿಣುಕಾಡಿದ ತಂಡ 18.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯಗಳಿಸಿತು.ನೆಟ್ ರನ್‌ರೇಟ್ ಹೆಚ್ಚಿಸಲು ಭಾರತ ವೇಗವಾಗಿಯೇ ರನ್ ಚೇಸ್ ಮಾಡಲಿದೆ ಎಂಬ ಅಭಿಮಾನಿಗಳ ನಿರೀಕ್ಷೆ ಹುಸಿಯಾಯಿತು.
ಪವರ್-ಪ್ಲೇನ ಆರು ಓವರ್‌ಗಳಲ್ಲಿ ತಂಡ ಕೇವಲ 25 ರನ್ ಗಳಿಸಿತು. ಸ್ಮೃತಿ ಮಂಧನಾ(7 ರನ್) 5ನೇ ಓವರ್‌ನಲ್ಲಿ ಸಾದಿಯಾ ಇಕ್ಬಾಲ್‌ಗೆ ವಿಕೆಟ್ ಒಪ್ಪಿಸಿದರು. 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಜೆಮಿಮಾ ರೋಡ್ರಿಗ್ಸ್, ಶಫಾಲಿ ಜೊತೆಗೂಡಿ 2ನೇ ವಿಕೆಟ್‌ಗೆ 43 ರನ್ ಸೇರಿಸಿದರು. ಶಫಾಲಿ 35 ಎಸೆತಗಳಲ್ಲಿ 32 ರನ್ ಗಳಿಸಿದರೆ, ಜೆಮಿಮಾ 23 ರನ್ ಕೊಡುಗೆ ನೀಡಿದರು.
3ನೇ ಕ್ರಮಾಂಕದಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿದ್ದ ಹರ್ಮನ್‌ಪ್ರೀತ್ ಈ ಬಾರಿ 4ನೇ ಕ್ರಮಾಂಕದಲ್ಲಿ ಆಡಿದರು. ವೇಗವಾಗಿಯೇ ಬ್ಯಾಟ್ ಬೀಸಿದ ಅವರು 24 ಎಸೆತಗಳಲ್ಲಿ 29 ರನ್ ಗಳಿಸಿದ್ದಾಗ ಕುತ್ತಿಗೆ ನೋವಿಗೆ ಒಳಗಾಗಿ, ಮೈದಾನ ತೊರೆದರು. ದೀಪ್ತಿ ಶರ್ಮಾ(ಔಟಾಗದೆ 7) ಹಾಗೂ ಸಜನಾ(ಔಟಾಗದೆ 4) ತಂಡವನ್ನು ಗೆಲುವಿನ ದಡ ಸೇರಿಸಿದರು. ಫಾತಿಮಾ ಸನಾ 2 ವಿಕೆಟ್ ಪಡೆದರು.
ಭಾರತ ಬಿಗು ದಾಳಿ: ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಶುರುಮಾಡಿದ ಪಾಕ್ ನಿಧಾನ ಆರಂಭ ಪಡೆಯಿತು. ಮೊದಲ ಓವರ್‌ನಲ್ಲೇ ಗುಲ್ ಫಿರೋಜಾ ವಿಕೆಟ್ ಕಳೆದುಕೊಂಡರು. ಬಳಿಕ ಬಂದ ಸಿದ್ರಾ ಅಮೀನ್(08), ಒಮೈಮ ಸುಹೈಲ್(03) ಕೂಡಾ ಕ್ರೀಸ್‌ನಲ್ಲಿ ನೆಲೆಯೂರಲಿಲ್ಲ. ಈ ಹಂತದಲ್ಲಿ ನಿದಾ ದಾಸ್ 28, ಮುನೀಬಾ ಅಲಿ 17, ಸೈದಾ ಅರೂಬ್ ಶಾ ಔಟಾಗದೆ 14 ಹಾಗೂ ನಾಯಕಿ ಫಾತಿಮಾ ಸನಾ 13 ರನ್ ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಭಾರತ ಪರ ಅರುಂಧತಿ ರೆಡ್ಡಿ 19 ರನ್‌ಗೆ 3, ಕರ್ನಾಟಕದ ಶ್ರೇಯಾಂಕ ಪಾಟೀಲ್ 12 ರನ್‌ಗೆ 2 ವಿಕೆಟ್ ಕಿತ್ತರು.ಸ್ಕೋರ್: ಪಾಕಿಸ್ತಾನ 20 ಓವರಲ್ಲಿ 105/8 (ನಿದಾ 28, ಮುನೀಬಾ 17, ಅರುಂಧತಿ 3-19, ಶ್ರೇಯಾಂಕ 2-12), ಭಾರತ 18.5 ಓವರ್‌ಗಳಲ್ಲಿ 108/4 (ಶಫಾಲಿ 32, ಹರ್ಮನ್‌ಪ್ರೀತ್ 29, ಜೆಮಿಮಾ 23, ಫಾತಿಮಾ 2-23) ಪಂದ್ಯಶ್ರೇಷ್ಠ: ಅರುಂಧತಿ ರೆಡ್ಡಿ
06ನೇ ಗೆಲುವು: ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ 6ನೇ ಗೆಲುವು ಸಾಧಿಸಿತು. 2 ಪಂದ್ಯಗಳಲ್ಲಿ ಪಾಕಿಸ್ತಾನ ಗೆದ್ದಿದೆ.
ನಾಡಿದ್ದು ಭಾರತಕ್ಕೆ ಶ್ರೀಲಂಕಾ ಎದುರಾಳಿ
ಭಾರತ ತಂಡ ಗುಂಪು ಹಂತದ 3ನೇ ಪಂದ್ಯದಲ್ಲಿ ಬುಧವಾರ ಶ್ರೀಲಂಕಾ ವಿರುದ್ಧ ಸೆಣಸಾಡಲಿದೆ. ಸುಲಭ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ ಮೇಲೇರುವ ನಿರೀಕ್ಷೆಯಲ್ಲಿದೆ. ಲಂಕಾ ಈಗಾಗಲೇ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿದೆ.