ಇಂದಿನಿಂದ ಭಾರತ vs ಬಾಂಗ್ಲಾ ಟಿ20: ಸೂರ್ಯಕುಮಾರ್‌ ನಾಯಕತ್ವದಲ್ಲಿ ಯುವ ಪ್ರತಿಭೆಗಳು ಕಣಕ್ಕೆ

KannadaprabhaNewsNetwork |  
Published : Oct 06, 2024, 01:28 AM ISTUpdated : Oct 06, 2024, 04:09 AM IST
ಸೂರ್ಯಕುಮಾರ್‌ | Kannada Prabha

ಸಾರಾಂಶ

ಮೊದಲ ಪಂದ್ಯಕ್ಕೆ ಗ್ವಾಲಿಯರ್‌ ಆತಿಥ್ಯ. ಮಯಾಂಕ್‌ ಯಾದವ್‌, ಹರ್ಷಿತ್‌ ರಾಣಾ ಮೇಲೆ ಭಾರಿ ನಿರೀಕ್ಷೆ. ಅವಕಾಶ ನಿರೀಕ್ಷೆಯಲ್ಲಿ ಜಿತೇಶ್‌ ಶರ್ಮಾ, ನಿತೀಶ್‌ ಕುಮಾರ್‌, ವರುಣ್‌.

ಗ್ವಾಲಿಯರ್‌: ಟೆಸ್ಟ್‌ ಸರಣಿಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಭಾರತ ತಂಡ ಈಗ ಬಾಂಗ್ಲಾದೇಶ ವಿರುದ್ಧ ಟಿ20 ಕದನಕ್ಕೆ ಸಜ್ಜಾಗಿದೆ. ಉಭಯ ತಂಡಗಳ ನಡುವಿನ 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ಭಾನುವಾರ ನಡೆಯಲಿದ್ದು, ಗ್ವಾಲಿಯರ್‌ನ ಹೊಸ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಬಾಂಗ್ಲಾ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಆಡಿದ್ದ ಯಾವುದೇ ಆಟಗಾರ ಭಾರತ ಟಿ20 ತಂಡದಲ್ಲಿಲ್ಲ. ಸೂರ್ಯಕುಮಾರ್‌ ಯಾದವ್‌ ತಂಡ ಮುನ್ನಡೆಸಲಿದ್ದು, ಐಪಿಎಲ್‌ ಸ್ಟಾರ್‌ಗಳು ತಮ್ಮ ಪ್ರತಿಭೆ ಪ್ರದರ್ಶಿಸಲು ಕಾಯುತ್ತಿದ್ದಾರೆ. 

ಪ್ರಮುಖವಾಗಿ ಎಕ್ಸ್‌ಪ್ರೆಸ್‌ ವೇಗಿ ಖ್ಯಾತಿಯ ಮಯಾಂಕ್‌ ಯಾದವ್‌ ಮೇಲೆ ಭಾರಿ ನಿರೀಕ್ಷೆ ಇಡಲಾಗಿದೆ. ಅವರ ಜೊತೆಗೆ ಮತ್ತೋರ್ವ ಯುವ ವೇಗಿ ಹರ್ಷಿತ್‌ ರಾಣಾ, ಆಲ್ರೌಂಡರ್‌ ನಿತೀಶ್‌ ಕುಮಾರ್‌ ಕೂಡಾ ಪಾದಾರ್ಪಣೆ ನಿರೀಕ್ಷೆಯಲ್ಲಿದ್ದಾರೆ.ಸೂರ್ಯ ಹೊರತುಪಡಿಸಿ ಹಾರ್ದಿಕ್‌ ಪಾಂಡ್ಯ, ಸಂಜು ಸ್ಯಾಮ್ಸನ್‌, ಶಿವಂ ದುಬೆ, ಅರ್ಶ್‌ದೀಪ್‌ ಸಿಂಗ್‌ ತಂಡದಲ್ಲಿರುವ ಪ್ರಮುಖ ಆಟಗಾರರು. ಇವರ ನಡುವೆ ಜಿತೇಶ್‌ ಶರ್ಮಾ, ರಿಯಾನ್‌ ಪರಾಗ್‌, ಅಭಿಷೇಕ್‌ ಶರ್ಮಾ ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಲು ಕಾಯುತ್ತಿದ್ದಾರೆ. 

ಮಿಸ್ಟರಿ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಕಮ್‌ಬ್ಯಾಕ್‌ ಕಾತರದಲ್ಲಿದ್ದು, ಅವಕಾಶಕ್ಕಾಗಿ ರವಿ ಬಿಷ್ಣೋಯ್‌ ಜೊತೆ ಪೈಪೋಟಿ ನಡೆಸಬೇಕಿದೆ.ಶಕೀಬ್‌ ಅನುಪಸ್ಥಿತಿ: ಅತ್ತ ಬಾಂಗ್ಲಾದೇಶ ಟೆಸ್ಟ್ ಸರಣಿಯ ಸೋಲಿನ ಕಹಿ ಮರೆತು ಟಿ20ಯಲ್ಲಾದರೂ ಗೆಲ್ಲುವ ವಿಶ್ವಾಸದಲ್ಲಿದೆ. ಇತ್ತೀಚೆಗಷ್ಟೇ ನಿವೃತ್ತಿಯಾಗಿರುವ ಹಿರಿಯ ಆಟಗಾರ ಶಕೀಬ್‌ ಅಲ್‌ ಹಸನ್‌ ಅನುಪಸ್ಥಿತಿ ತಂಡವನ್ನು ಕಾಡಲಿದ್ದು, ಅವರ ಸ್ಥಾನ ತುಂಬಬಲ್ಲ ಆಟಗಾರನಿಗಾಗಿ ಹುಡುಕಾಟದಲ್ಲಿದೆ. ತಂಡ ನಜ್ಮುಲ್‌ ಹೊಸೈನ್‌ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ.

ಒಟ್ಟು ಮುಖಾಮುಖಿ: 14ಭಾರತ: 13ಬಾಂಗ್ಲಾ: 01

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಅಭಿಷೇಕ್‌, ಸಂಜು, ಸೂರ್ಯ(ನಾಯಕ), ರಿಂಕು, ಹಾರ್ದಿಕ್‌, ರಿಯಾನ್‌, ವಾಷಿಂಗ್ಟನ್‌, ಬಿಷ್ಣೋಯ್‌/ವರುಣ್‌, ಮಯಾಂಕ್‌, ಅರ್ಶ್‌ದೀಪ್‌, ಹರ್ಷಿತ್‌.ಬಾಂಗ್ಲಾ: ಲಿಟನ್‌, ತಂಜೀದ್‌, ನಜ್ಮುಲ್‌(ನಾಯಕ), ತೌಹೀದ್‌, ಮಹ್ಮೂದುಲ್ಲಾ, ಜಾಕರ್‌, ಮೀರಾಜ್‌, ರಿಶಾದ್‌, ಮುಸ್ತಾಫಿಜುರ್‌, ತಸ್ಕೀನ್‌, ತಂಜೀಮ್‌.

ಪಂದ್ಯ: ಸಂಜೆ 7 ಗಂಟೆಗೆ, ನೇರಪ್ರಸಾರ: ಸ್ಪೋರ್ಟ್ಸ್‌ 18 ಚಾನೆಲ್‌, ಜಿಯೋ ಸಿನಿಮಾ 

14 ವರ್ಷಗಳ ಬಳಿಕ ಗ್ವಾಲಿಯರ್‌ನಲ್ಲಿ ಪಂದ್ಯ

ಮೊದಲ ಪಂದ್ಯ ಗ್ವಾಲಿಯರ್‌ನ ಮಾಧವ್‌ರಾವ್‌ ಸಿಂಧಿಯಾ ಕ್ರೀಡಾಂಗಣದಲ್ಲಿ ಆಯೋಜನೆಗೊಳ್ಳಲಿದೆ. ಇದು ಈ ಕ್ರೀಡಾಂಗಣದಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯ. ಕೊನೆಯದಾಗಿ ಗ್ವಾಲಿಯರ್‌ನಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆದಿದ್ದು 14 ವರ್ಷಗಳ ಹಿಂದೆ. 2010ರಲ್ಲಿ ಕ್ಯಾಪ್ಟನ್‌ ರೂಪ್‌ ಸಿಂಗ್‌ ಕ್ರೀಡಾಂಗಣದಲ್ಲಿ ಭಾರತ-ದಕ್ಷಿಣ ಆಫ್ರಿಕಾ ಏಕದಿನ ಪಂದ್ಯ ನಡೆದಿತ್ತು. ಸಚಿನ್‌ ತೆಂಡುಲ್ಕರ್‌ ಐತಿಹಾಸಿಕ 200 ರನ್‌ ಹೊಡೆದಿದ್ದು ಇದೇ ಪಂದ್ಯದಲ್ಲಿ. ಆ ಬಳಿಕ ನಗರದಲ್ಲೇ ಹೊಸ ಕ್ರೀಡಾಂಗಣ ನಿರ್ಮಿಸಲಾಗಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!