52 ವರ್ಷ ಬಳಿಕ ಒಲಿಂಪಿಕ್ಸ್‌ನಲ್ಲಿ ಸತತ 2ನೇ ಕಂಚು ಕೊರಳಿಗೇರಿಸಿ ಮಿಂಚಿದ ಹಾಕಿ ಇಂಡಿಯಾ

KannadaprabhaNewsNetwork |  
Published : Aug 09, 2024, 12:34 AM ISTUpdated : Aug 09, 2024, 03:56 AM IST
ಭಾರತ ತಂಡ | Kannada Prabha

ಸಾರಾಂಶ

52 ವರ್ಷ ಬಳಿಕ ಸತತ 2 ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತ ತಂಡ. ಕಂಚಿನ ಪದಕ ಪಂದ್ಯದಲ್ಲಿ ಸ್ಪೇನ್‌ ವಿರುದ್ಧ 2-1 ಜಯಭೇರಿ. ಟೋಕಿಯೋ ಬಳಿಕ ಪ್ಯಾರಿಸ್‌ ಗೇಮ್ಸ್‌ನಲ್ಲೂ ಮೆಡಲ್‌ ಮೆರುಗು.

ಪ್ಯಾರಿಸ್‌: ಭಾರತ ಪುರುಷರ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಸತತ 2ನೇ ಪದಕದ ಸಾಧನೆ ಮಾಡಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದ ಟೀಂ ಇಂಡಿಯಾ, ಪ್ಯಾರಿಸ್‌ನಲ್ಲೂ ಕಂಚನ್ನು ಕೊರಳಿಗೇರಿಸಿಕೊಂಡಿತು. ಆ ಮೂಲಕ 52 ವರ್ಷಗಳ ಬಳಿಕ ಸತತ 2 ಒಲಿಂಪಿಕ್ಸ್‌ಗಳಲ್ಲಿ ಭಾರತ ಪದಕದ ಸಾಧನೆ ಮಾಡಿದೆ.

 1968, 1972ರ ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದಿದ್ದ ಭಾರತ, ಇದೀಗ 2020 ಹಾಗೂ 2024ರಲ್ಲಿ ಪದಕ ಜಯಿಸಿದೆ. ಗುರುವಾರ ಸ್ಪೇನ್‌ ವಿರುದ್ಧ ನಡೆದ ಕಂಚಿನ ಪದಕ ಪಂದ್ಯದಲ್ಲಿ ಭಾರತ 2-1 ಗೋಲುಗಳ ರೋಚಕ ಗೆಲುವು ಸಾಧಿಸಿತು. 1980ರ ಬಳಿಕ ಚಿನ್ನ ಗೆಲ್ಲುವ ವಿಶ್ವಾಸದೊಂದಿಗೆ ಪ್ಯಾರಿಸ್‌ಗೆ ತೆರಳಿದ್ದ ಭಾರತ ತಂಡ ಕಂಚಿನ ಪದಕದೊಂದಿಗೆ ಹಿಂದಿರುಗಲಿದೆ. 

ಪಂದ್ಯದ 18ನೇ ನಿಮಿಷದಲ್ಲೇ ಪೆನಾಲ್ಟಿ ಸ್ಟ್ರೋಕ್‌ ಮೂಲಕ ಗೋಲು ಬಾರಿಸಿದ ಸ್ಪೇನ್‌, ಭಾರತಕ್ಕೆ ಆರಂಭಿಕ ಶಾಕ್‌ ನೀಡಿತು. ಆದರೆ 30ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌, ಮೊದಲಾರ್ಧ ಕೊನೆಗೊಳ್ಳುವ ಮೊಲದೇ ಭಾರತ ಸಮಬಲ ಸಾಧಿಸಲು ನೆರವಾದರು. 3ನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳಿಂದಲೂ ಗೋಲು ಗಳಿಸಲು ಪ್ರಬಲ ಪೈಪೋಟಿ ಕಂಡುಬಂತು. 33ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ದಾಖಲಿಸಿದ ಹರ್ಮನ್‌, ಭಾರತದ ಪಾಳಯದಲ್ಲಿ ಗೆಲುವಿನ ಆತ್ಮವಿಶ್ವಾಸ ಮೂಡಿಸಲು ಯಶಸ್ವಿಯಾದರು.

 ಆ ಬಳಿಕ ತಂಡಕ್ಕೆ 9 ನಿಮಿಷದಲ್ಲಿ 3 ಬಾರಿ ಪೆನಾಲ್ಟಿ ಕಾರ್ನರ್‌ ಅವಕಾಶ ಸಿಕ್ಕರೂ ಬಳಸಿಕೊಳ್ಳಲಿಲ್ಲ.ಕೊನೆ 15 ನಿಮಿಷದಲ್ಲಿ ಸ್ಪೇನ್‌ ಮತ್ತಷ್ಟು ಆಕ್ರಮಣಕಾರಿಯಾಗಿ ಆಡಿತು. ತಂಡ ಚೆಂಡಿನ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದರೂ, ಭಾರತದ ಡಿಫೆಂಡರ್‌ಗಳು ಹಾಗೂ ಗೋಲ್‌ಕೀಪರ್‌ ಶ್ರೀಜೇಶ್‌ ಸ್ಪೇನ್‌ನ ಗೋಲು ಗಳಿಸುವ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿದರು. ಅದರಲ್ಲೂ ಪಂದ್ಯದ ಕೊನೆ ಕ್ಷಣಗಳು ಭಾರತೀಯ ಆಟಗಾರರು ಹಾಗೂ ಅಭಿಮಾನಿಗಳಲ್ಲಿ ನಡುಕ ಹುಟ್ಟಿಸುತ್ತು.

 ಕೊನೆ ಒಂದೂವರೆ ನಿಮಿಷದಲ್ಲಿ ಸ್ಪೇನ್‌ 4 ಬಾರಿ ಪೆನಾಲ್ಟಿ ಕಾರ್ನರ್‌ ಅವಕಾಶ ಪಡೆದುಕೊಂಡಿತು. ಆದರೆ ಕಂಚು ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಭಾರತೀಯ ಆಟಗಾರರು, ಅಭೂತಪೂರ್ವ ಆಟ ಪ್ರದರ್ಶಿಸಿ ಗೆಲುವನ್ನು ತಮ್ಮದಾಗಿಸಿಕೊಂಡರು. ಪಂದ್ಯದಲ್ಲಿ ಸ್ಪೇನ್‌ 9 ಪೆನಾಲ್ಟಿ ಕಾರ್ನರ್‌ ಅವಕಾಶ ಪಡೆದರೂ, ಒಂದರಲ್ಲೂ ಗೋಲು ದಾಖಲಾಗಲಿಲ್ಲ. ಭಾರತ 6 ಪ್ರಯತ್ನಗಳಲ್ಲಿ 2 ಬಾರಿ ಗೋಲು ಹೊಡೆದು ಪದಕಕ್ಕೆ ಮುತ್ತಿಕ್ಕಿತ್ತು.

ಒಲಿಂಪಿಕ್ಸ್‌ ಹಾಕಿಯಲ್ಲಿ ಭಾರತಕ್ಕೆ 4ನೇ ಕಂಚು

ಭಾರತ ಪುರುಷರ ತಂಡ ಒಲಿಂಪಿಕ್ಸ್‌ನಲ್ಲಿ 4ನೇ ಬಾರಿ ಕಂಚಿನ ಪದಕ ಗೆದ್ದುಕೊಂಡಿತು. 1968, 1972ರಲ್ಲಿ ಕಂಚು ಜಯಿಸಿದ್ದ ಭಾರತ, ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲೂ 3ನೇ ಸ್ಥಾನಿಯಾಗಿ ಮೆಡಲ್‌ ಮುಡಿಗೇರಿಸಿಕೊಂಡಿತ್ತು.

ಒಲಿಂಪಿಕ್ಸ್‌ನಲ್ಲಿ 13ನೇ ಪದಕ

ಒಲಿಂಪಿಕ್ಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡಕ್ಕಿದು 13ನೇ ಪದಕ. 1928ರಿಂದ 1972ರ ವರೆಗೆ ಸತತ 10 ಕ್ರೀಡಾಕೂಟಗಳಲ್ಲಿ ಭಾರತ ಅಬ್ಬರಿಸಿ, ಪದಕ ಸಾಧನೆ ಮಾಡಿತ್ತು. ಇದರಲ್ಲಿ 1960ರ ಬೆಳ್ಳಿ, 1968, 1972ರ ಕಂಚು ಹೊರತುಪಡಿಸಿ ಉಳಿದ 7 ಆವೃತ್ತಿಗಳಲ್ಲಿ ಬಂಗಾರಕ್ಕೆ ಮುತ್ತಿಟ್ಟಿತ್ತು. 1980ರಲ್ಲಿ ಮತ್ತೆ ಚಾಂಪಿಯನ್‌ ಆಗಿದ್ದ ಭಾರತ, ಆ ಬಳಿಕ ಮತ್ತೊಂದು ಪದಕಕ್ಕೆ ಬರೋಬ್ಬರಿ 41 ವರ್ಷ ಕಾದಿತ್ತು. ತಂಡ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದಿತ್ತು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!