ದ.ಆಫ್ರಿಕಾ ವಿರುದ್ಧ ಟೆಸ್ಟ್‌ನಲ್ಲಿ ಭಾರತ ಕುಬ್ಜ!

Published : Nov 17, 2025, 11:39 AM IST
Team India vs SA

ಸಾರಾಂಶ

  ಭಾರತೀಯ ವೇಗಿ ಜಸ್‌ಪ್ರೀತ್‌ ಬೂಮ್ರಾ, ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾರನ್ನು ‘ಕುಬ್ಜ’ ಎಂದು ಹಂಗಿಸಿದ್ದರು. ಆದರೆ ಸಣ್ಣ ಮೊತ್ತವನ್ನೂ ಬೆನ್ನತ್ತಿ ಗೆಲ್ಲಲಾಗದೆ ಸೋತು, ನಿಜವಾಗಿಯೂ ಸಣ್ಣವರಾಗಿದ್ದು ಯಾರು ಎಂಬುದನ್ನು ಈಗ ಅದೇ ಬವುಮಾ ಟೀಮ್‌ ಕ್ರಿಕೆಟ್‌ ಜಗತ್ತಿಗೆ ತೋರಿಸಿಕೊಟ್ಟಿದೆ.

 ಕೋಲ್ಕತಾ: ಈಡನ್‌ ಗಾರ್ಡನ್ಸ್‌ ಟೆಸ್ಟ್‌ ಪಂದ್ಯದ ಮೊದಲ ದಿನ ಭಾರತೀಯ ವೇಗಿ ಜಸ್‌ಪ್ರೀತ್‌ ಬೂಮ್ರಾ, ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾರನ್ನು ‘ಕುಬ್ಜ’ ಎಂದು ಹಂಗಿಸಿದ್ದರು. ಆದರೆ ಸಣ್ಣ ಮೊತ್ತವನ್ನೂ ಬೆನ್ನತ್ತಿ ಗೆಲ್ಲಲಾಗದೆ ಸೋತು, ನಿಜವಾಗಿಯೂ ಸಣ್ಣವರಾಗಿದ್ದು ಯಾರು ಎಂಬುದನ್ನು ಈಗ ಅದೇ ಬವುಮಾ ಟೀಮ್‌ ಕ್ರಿಕೆಟ್‌ ಜಗತ್ತಿಗೆ ತೋರಿಸಿಕೊಟ್ಟಿದೆ. ಇದರ ಜೊತೆಗೇ, ತಾವೇಕೆ ವಿಶ್ವ ಟೆಸ್ಟ್‌ ಚಾಂಪಿಯನ್‌ ಎಂಬುದನ್ನೂ ದ.ಆಫ್ರಿಕಾ ಮತ್ತೊಮ್ಮೆ ಸಾಬೀತುಪಡಿಸಿದೆ.

ಶುಕ್ರವಾರ ಆರಂಭಗೊಂಡು ಭಾನುವಾರ ಮಧ್ಯಾಹ್ನ ವೇಳೆಗಾಗಲೇ ಮುಕ್ತಾಯಗೊಂಡ ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಎದುರಾಗಿದ್ದು 30 ರನ್‌ ಸೋಲು. ಬೌಲರ್‌ಗಳೇ ಮೇಲುಗೈ ಸಾಧಿಸಿದ ಪಂದ್ಯದಲ್ಲಿ ಭಾರತ ಗೆಲ್ಲಲು ಕೇವಲ 124 ರನ್‌ ಗಳಿಸಬೇಕಿತ್ತು. ಆದರೆ ಪರಿಸ್ಥಿತಿಗೆ ಒಗ್ಗಿಕೊಂಡು, ಯಾವಾಗ ಯಾವ ರೀತಿ ಆಡಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲದಂತೆ ಬ್ಯಾಟ್‌ ಬೀಸಿದ ಭಾರತೀಯ ಬ್ಯಾಟರ್‌ಗಳು 93 ರನ್‌ ಗಳಿಸುವಷ್ಟರಲ್ಲೇ ಗಂಟುಮೂಟೆ ಕಟ್ಟಿದರು. ಇದರೊಂದಿಗೆ ದ.ಆಫ್ರಿಕಾ ತಂಡ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ಭಾರತದ ಸರಣಿ ಗೆಲುವಿನ ಆಸೆ ಭಗ್ನಗೊಂಡಿತು.

153ಕ್ಕೆ ಆಲೌಟ್‌:

2ನೇ ದಿನದಂತ್ಯಕ್ಕೆ 2ನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 93 ರನ್‌ ಗಳಿಸಿದ್ದ ದ.ಆಫ್ರಿಕಾವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಲು ಭಾರತಕ್ಕೆ ಸಾಧ್ಯವಾಗಲಿಲ್ಲ. 8ನೇ ವಿಕೆಟ್‌ಗೆ ಜೊತೆಯಾಗಿದ್ದ ಬವುಮಾ ಹಾಗೂ ಕಾರ್ಬಿನ್‌ ಬಾಶ್‌ 44 ರನ್‌ ಸೇರಿಸಿದರು. ಸ್ಪಿನ್ನರ್‌ಗಳಿಂದ ಈ ಜೋಡಿಯನ್ನು ಬೇರ್ಪಡಿಸಲು ಸಾಧ್ಯವಾಗದಿದ್ದಾಗ ಭಾರತಕ್ಕೆ ಮೇಲುಗೈ ಒದಗಿಸಿದ್ದು ಜಸ್‌ಪ್ರೀತ್‌ ಬೂಮ್ರಾ. 25 ರನ್‌ಗಳ ಅಮೂಲ್ಯ ಕೊಡುಗೆ ನೀಡಿದ ಬಾಶ್‌, ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್‌ ಸೇರಿದರು. ಅದಾಗಲೇ ದ.ಆಫ್ರಿಕಾದ ಮುನ್ನಡೆ 100ರ ಗಡಿ ದಾಟಿತ್ತು. ಬಳಿಕ ಚೆಂಡು ಕೈಗೆತ್ತಿಕೊಂಡ ಸಿರಾಜ್‌, ಕೊನೆ 2 ವಿಕೆಟ್‌ಗಳನ್ನು ಎಗರಿಸಿದರು. ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ, ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್‌ ಮಾಡಿದ ಬವುಮಾ 136 ಎಸೆತಗಳಲ್ಲಿ 55 ರನ್ ಗಳಿಸಿ ಔಟಾಗದೆ ಉಳಿದರು.

ಬ್ಯಾಟಿಂಗ್‌ ವೈಫಲ್ಯ:

ನಾಯಕ ಗಿಲ್‌ ಪಂದ್ಯದಿಂದ ಹೊರಬಿದ್ದಿದ್ದರಿಂದ ಭಾರತ ಚೇಸಿಂಗ್‌ಗೆ ಇಳಿಯುವ ಮೊದಲೇ 1 ವಿಕೆಟ್‌ ಕಳೆದುಕೊಂಡಂತಾಗಿತ್ತು. 1 ರನ್‌ ಆಗುವಾಗಲೇ ಯಶಸ್ವಿ ಜೈಸ್ವಾಲ್‌, ಕೆ.ಎಲ್‌.ರಾಹುಲ್‌ರನ್ನು ಮಾರ್ಕೊ ಯಾನ್ಸನ್‌ ಪೆವಿಲಿಯನ್‌ಗೆ ಅಟ್ಟಿದ್ದರು. ಧ್ರುವ್‌ ಜುರೆಲ್(13), ರಿಷಭ್‌ ಪಂತ್‌(2), ಜಡೇಜಾ(18) ಕೂಡಾ ಮಿಂಚಲಿಲ್ಲ. ಈ ವೇಳೆ ತಂಡಕ್ಕೆ ಆಸರೆಯಾಗಿದ್ದು ವಾಷಿಂಗ್ಟನ್‌ ಸುಂದರ್‌. ಆದರೆ ಅವರು 31 ರನ್‌ ಗಳಿಸಿ ಔಟಾದಾಗ ತಂಡ ಗೆಲುವಿನ ಆಸೆ ಕೈಬಿಟ್ಟಿತ್ತು. ಕೇಶವ್‌ ಮಹಾರಾಜ್‌ ಎಸೆದ ಇನ್ನಿಂಗ್ಸ್‌ನ 35ನೇ ಓವರ್‌ನಲ್ಲಿ ಅಕ್ಷರ್‌ ಪಟೇಲ್‌ 2 ಸಿಕ್ಸರ್‌, 1 ಬೌಂಡರಿ ಸಿಡಿಸಿ ಭಾರತೀಯ ಪಾಳಯದಲ್ಲಿ ಸಂಭ್ರಮಕ್ಕೆ ಕಾರಣರಾದರು. ಆದರೆ ಅದೇ ಓವರ್‌ನಲ್ಲಿ ಮತ್ತೊಂದು ದೊಡ್ಡ ಹೊಡೆತಕ್ಕೆ ಕೈಹಾಕಿದ ಅಕ್ಷರ್‌(26) ವಿಕೆಟ್‌ ಒಪ್ಪಿಸಿದರು. ಮುಂದಿನ ಎಸೆತದಲ್ಲೇ ಸಿರಾಜ್‌ ಔಟಾಗಿದ್ದು, ತಂಡ ಆಲೌಟಾಯಿತು. ಹಾರ್ಮರ್‌ 4, ಮಹಾರಾಜ್‌ 2 ವಿಕೆಟ್‌ ಕಿತ್ತರು.

ಸ್ಕೋರ್‌: ದ.ಆಫ್ರಿಕಾ 159/10 ಮತ್ತು 153/10 (ಬವುಮಾ ಔಟಾಗದೆ 55, ಬಾಶ್‌ 25, ಜಡೇಜಾ 4-50, ಸಿರಾಜ್‌ 2-2), ಭಾರತ 1ನೇ ಇನ್ನಿಂಗ್ಸ್‌ 189/10 ಮತ್ತು 2ನೇ ಇನ್ನಿಂಗ್ಸ್‌ 93/10 (ವಾಷಿಂಗ್ಟನ್‌ 31, ಅಕ್ಷರ್‌ 26, ಹಾರ್ಮರ್‌ 4-30, ಯಾನ್ಸನ್‌ 3-35)

ಪಂದ್ಯಶ್ರೇಷ್ಠ: ಸಿಮೋನ್‌ ಹಾರ್ಮರ್

PREV
Read more Articles on

Recommended Stories

ಜೈಲು ಅಧಿಕಾರಿಗಳ ನೋವು ಕೇಳೋರ್ಯಾರು !
ಜಡೇಜಾ ಸ್ಪಿನ್‌ ಜಾದೂ : ಗೆಲುವಿನತ್ತ ಭಾರತ