ಜೈಲು ಅಧಿಕಾರಿಗಳ ನೋವು ಕೇಳೋರ್ಯಾರು !

Published : Nov 16, 2025, 01:26 PM IST
Parappana agrahara

ಸಾರಾಂಶ

 ಕೈದಿಗಳ ವಿಶೇಷ ಸೌಲಭ್ಯದ ವೀಡಿಯೋ ಲೀಕ್‌ ಹಿನ್ನೆಲೆ ಸ್ಪೆಷಲ್‌ ಸ್ಟೋರಿ .  ಮೊನ್ನೆ ತಾನೇ ಪರಪ್ಪನ ಅಗ್ರಹಾರದ ಕೈದಿಗಳಿಗೆ ವಿಶೇಷ ಸೌಲಭ್ಯ ವೀಡಿಯೋ ಲೀಕ್‌ ಆಗಿ  ಚರ್ಚೆಗೆ ಗ್ರಾಸವಾಯಿತು. ವಾಸ್ತವದಲ್ಲಿ ಕೇಂದ್ರ ಕಾರಾಗ್ರಹದ ಸ್ಥಿತಿ ಹೇಗಿದೆ,   ಅಧಿಕಾರಿಗಳು ಪಡುತ್ತಿರುವ ಬವಣೆಗಳೇನು ಎಂಬುದರ ಕುರಿತು ಬರಹ.

ಪರಪ್ಪನ ಅಗ್ರಹಾರ ಕೈದಿಗಳಿಗೆ ಸಿಕ್ಕ ವಿಶೇಷ ಸೌಲಭ್ಯದ ವೀಡಿಯೋ ಲೀಕ್‌ ಹಿನ್ನೆಲೆಯಲ್ಲಿ ಸ್ಪೆಷಲ್‌ ಸ್ಟೋರಿ

ಮೊನ್ನೆ ತಾನೇ ಪರಪ್ಪನ ಅಗ್ರಹಾರದ ಕೈದಿಗಳಿಗೆ ವಿಶೇಷ ಸೌಲಭ್ಯ ಸಿಕ್ಕಿರುವ ವೀಡಿಯೋ ಲೀಕ್‌ ಆಗಿ ಭಾರೀ ಚರ್ಚೆಗೆ ಗ್ರಾಸವಾಯಿತು. ವಾಸ್ತವದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗ್ರಹದ ಸ್ಥಿತಿ ಹೇಗಿದೆ, ಅಲ್ಲಿ ಅಧಿಕಾರಿಗಳು ಪಡುತ್ತಿರುವ ಬವಣೆಗಳೇನು ಎಂಬುದರ ಕುರಿತು ವಸ್ತುನಿಷ್ಠ ಬರಹ.

- ಗಿರೀಶ್‌ ಮಾದೇನಹಳ್ಳಿ

‘ನಾನು ಸೂರ್ಯೋದಯಕ್ಕೂ ಮುನ್ನವೇ ಪ್ರಾಣ ಬಿಡುತ್ತೇನೆ. ನೀವು ನನಗೆ ಕೇಳಿದ್ದು ಕೊಡಲಿಲ್ಲ. ಏನ್ಮಾಡ್ತೀನಿ ನೋಡಿ’ ಹೀಗೆ ಬೆದರಿಸಿ ಸೆಲ್‌ನಲ್ಲಿ ಕುಳಿತ ಕೈದಿಯನ್ನು ಇಡೀ ರಾತ್ರಿ ನಿದ್ದೆಯಿಲ್ಲದೆ ಮಹಿಳಾ ಅಧಿಕಾರಿ ಕಾದರು. ಆ ದಿನ ಮಹಿಳಾ ಅಧಿಕಾರಿ ಹುಟ್ಟುಹಬ್ಬ. ಮನೆಯಲ್ಲಿದ್ದ ಮಕ್ಕಳು, ಕೆಲಸ ಮುಗಿಸಿ ಮನೆಗೆ ಬರುವ ಅಮ್ಮನ ನಿರೀಕ್ಷಿಸುತ್ತ ಮಲಗಿದರು...!ಇದೂ ಕರುನಾಡಿನ ಸೆರೆಮನೆಗಳ ‘ವಿಐಪಿ ಸೌಕರ್ಯ’ ವಿವಾದದ ಹೊರತಾದ ಅಲ್ಲಿನ ಅಧಿಕಾರಿ-ಸಿಬ್ಬಂದಿ, ಪ್ರತಿದಿನ ಪುಟ್ಟ ಕಾರಣಗಳಿಗೆ ರಚ್ಚೆ ಹಿಡಿದು ರಾದ್ದಾಂತವೆಬ್ಬಿಸುವ ಕೈದಿಗಳ ಜತೆ ಹೆಣಗಾಡುವ ಮತ್ತೊಂದು ಬದಿಯ ಚಿತ್ರಣದ ಕತೆ.

‘ನಾವು ಸಮಾಜದ ಕೆಟ್ಟ ಮನಸ್ಸುಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತೇವೆ. ಆದರೆ ನಮ್ಮ ಕೆಲಸಕ್ಕೆ ನಾಗರಿಕರ ಕರುಣೆ ಬೇಡ, ಕನಿಷ್ಠ ಮಾನವೀಯತೆ ತೋರಿಸುವುದಿಲ್ಲ. ಘನತೆ ಇಲ್ಲದ ಕೃತಘ್ನತೆ ಕೆಲಸ ನಮ್ಮದು. ನಾವೂ ಮನುಷ್ಯರು ಅನ್ನುವುದು ನೆನಪಿರಲಿ’ ಎನ್ನುವುದು ಆ ಅಧಿಕಾರಿ- ಸಿಬ್ಬಂದಿ ಒಡಲಾಳದ ನೋವಿನ ನುಡಿಗಳು.

ಕೆಲ ದಿನಗಳ ಹಿಂದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಕೃತ ಕಾಮಿ ಉಮೇಶ್ ರೆಡ್ಡಿ, ಶಂಕಿತ ಉಗ್ರ ಶಕೀಲ್ ಹಾಗೂ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದ ಆರೋಪಿ ತರುಣ್ ರಾಜ್‌ಗೆ ವಿಶೇಷ ಸೌಲಭ್ಯ ಪಡೆದಿರುವ ವಿಡಿಯೋಗಳು ಹೊರ ಬಂದು ಸಾರ್ವಜನಿಕ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದವು. ಆ ಟೀಕೆಗಳ ಸುಂಟರಗಾಳಿಗೆ ಸಿಲುಕಿ ಕಾರಾಗೃಹ ಅಧಿಕಾರಿ- ಸಿಬ್ಬಂದಿ ವರ್ಗ ಮತ್ತೆ ಅಪರಾಧಿ ಸ್ಥಾನದಲ್ಲಿ ನಿಂತಿದೆ. ಒಬ್ಬಿಬ್ಬರ ತಪ್ಪಿಗೆ ಇಡೀ ಇಲಾಖೆ ತಲೆ ತಗ್ಗಿಸುವಂತಾಗಿದೆ.

ಮೊದಲು ಕಾರಾಗೃಹ ಇಲಾಖೆ ಎಂದಿದ್ದ ಹೆಸರಿಗೆ ಹೊಸದಾಗಿ ‘ಸುಧಾರಣಾ ಸೇವಾ’ ಎನ್ನುವುದು ಸೇರಿತು. 2018ರಲ್ಲಿ ಇಲಾಖೆ ಮುಖ್ಯಸ್ಥರಾಗಿದ್ದ ದಕ್ಷ ಐಪಿಎಸ್ ಅಧಿಕಾರಿ ಎನ್‌.ಎಸ್‌.ಮೇಘರಿಕ್ ಅವರು, ‘ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ’ ಎಂದು ಮರು ನಾಮಕರಣ ಮಾಡಿದರು. ಸೆರೆಮನೆಗಳು ‘ಕೆಟ್ಟಮನ’ಗಳ ಪರಿವರ್ತನಾ ಕೇಂದ್ರಗಳು ಎಂದಿದ್ದರು ಮೇಘರಿಕ್.

ಒಲ್ಲದ ಪತಿ ಜತೆ ಸಂಸಾರ ಎನ್ನುವಂತಿದೆ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಪರಿಸ್ಥಿತಿ. ಈ ಇಲಾಖೆ ಬಗ್ಗೆ ಜನರಿಗಾಗಲಿ ಅಥವಾ ಆಳುವ ಸರ್ಕಾರಕ್ಕಾಗಲಿ ಸದಭಿಪ್ರಾಯವಿಲ್ಲ. ಸರ್ಕಾರಕ್ಕೆ ಜೈಲು ಕಟ್ಟುವ ಕಾಮಗಾರಿಗಳ ಗುತ್ತಿಗೆ ಮೇಲಿರುವ ಪ್ರೀತಿ ಆ ಇಲಾಖೆಯ ಸುಧಾರಣೆ ಕಡೆ ಇಲ್ಲ. ಇನ್ನು ಜನರಿಗೆ ಜೈಲು ಅಂದರೆ ಅದೂ ಪಾತಕಿಗಳ ಸಾಮ್ರಾಜ್ಯ. ರೌಡಿಗಳಿಗೆ, ಭಯೋತ್ಪಾದಕರ ಪಾಲಿಗೆ ಐಷರಾಮಿ ತಾಣ ಎನ್ನುವಂತಾಗಿದೆ.

ಕಾರಾಗೃಹಗಳೆಲ್ಲವು ಪರಿಶುದ್ಧವಾಗಿವೆ. ಅಲ್ಲಿನ ಕೆಲಸಗಾರರೆಲ್ಲರು ಶುದ್ಧ ಹಸ್ತರು ಎನ್ನುತ್ತಿಲ್ಲ. ಒಳ್ಳೆಯವರು-ಕೆಟ್ಟವರು ಎಲ್ಲೆಡೆ ಇರುತ್ತಾರೆ. ಕಾಂಚಾಣದ ದುರಾಸೆಗೆ ಬಿದ್ದು ಒಂದಿಬ್ಬರ ತಪ್ಪಿಗೆ ಇಡೀ ಇಲಾಖೆ ದೂಷಣೆಗೊಳಗಾಬೇಕಿದೆ. ಒಂದು ಕ್ಷಣ ಯೋಚಿಸಿ. ನಾವು ಯಾರನ್ನಾದರೂ ಕೆಟ್ಟವನೆಂದರೆ ಮಾರು ದೂರು ನಿಲ್ಲುತ್ತೇವೆ. ಸಮಾಜ ಕೆಟ್ಟವರೆಂದು ಸೆರೆಮನೆಗೆ ತಳ್ಳುವವರ ಜತೆ ಬಂದೀಖಾನೆಯ ಅಧಿಕಾರಿ-ಸಿಬ್ಬಂದಿ ಜೀವ ತಂತು ಬೆಸೆದುಕೊಂಡಿದೆ.

ಜೈಲು ಸೇರುವ ಕೊಲೆಗಡುಕ, ಮೋಸಗಾರ, ದರೋಡೆಕೋರ, ಭಯೋತ್ಪಾದಕ, ಸುಲಿಗೆಕೋರ, ಕಳ್ಳ, ವಂಚಕ ಹೀಗೆ ಆರೋಪಿತರ ಜೊತೆಯೇ ತಮ್ಮ ವೃತ್ತಿ ಜೀವನ ಉದ್ದಕ್ಕೂ ಪಯಣಿಸಬೇಕು. ಕೆಟ್ಟವರನ್ನು ಒಳ್ಳೆಯನ್ನಾಗಿಸುವ ಸಾಮಾಜಿಕ ಹೊಣೆಗಾರಿಕೆ ಹೆಗಲಿಗೆ ಬಿದ್ದಿದೆ. ಕೆಲವು ಬಾರಿ ಜೀವಕ್ಕೆ ಅಪಾಯವೂ ತಪ್ಪಿದಲ್ಲ ಎನ್ನುತ್ತಾರೆ ಅಧಿಕಾರಿಗಳು.

‘ನಾನು ಎರಡು ದಶಕಗಳಿಂದ ಕಾರಾಗೃಹ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಸಮಾಜದಲ್ಲಿ ಹೆಮ್ಮೆಯಿಂದ ನನ್ನ ಕೆಲಸದ ಬಗ್ಗೆ ಹೇಳಿಕೊಳ್ಳಲಾಗುತ್ತಿಲ್ಲ. ಜೈಲು ಅಕ್ರಮದ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾದರೆ ಸ್ನೇಹಿತರು ಹಾಗೂ ಸಂಬಂಧಿಕರು ಕರೆ ಮಾಡಿ, ನೀನು ಏನಾದರೂ ಮಾಡಿಕೊಂಡೆಯ ಅಂತಾರೆ. ನಮ್ಮ ಮಕ್ಕಳಿಗೆ ಸಹಪಾಠಿಗಳು ಏನೋ ನಿಮ್ಮಪ್ಪ ಯಾರೋ ಕೈದಿಗೆ ಸಪೋರ್ಟ್ ಮಾಡಿದ್ದರಂತೆ ಅಂತ ಕೇಳುತ್ತಾರೆ. ಇಂಥ ಮುಜುಗರ ಪರಿಸ್ಥಿತಿ ಪ್ರತಿದಿನ ಅನುಭವಿಸುತ್ತೇವೆ. ಎಷ್ಟೋ ಬಾರಿ ಸ್ವಯಂ ನಿವೃತ್ತಿ ಬಗ್ಗೆ ಯೋಚಿಸಿದೆ. ಆದರೆ ನನ್ನ ನಂಬಿರುವ ಪತ್ನಿ ಹಾಗೂ ಮಕ್ಕಳು ಇದ್ದಾರೆ’ ಎನ್ನುತ್ತಾರೆ ಅಧಿಕಾರಿ.

ಪ್ರತಿ ದಿನ ಜೀವ ಕೈಯಲ್ಲಿ ಹಿಡಿಯಬೇಕು

ಕಾರಾಗೃಹಗಳಲ್ಲಿ ಕಾರ್ಯನಿರ್ವಹಣೆ ಹೊರಗೆ ನಿಂತು ಕಾಣುವಷ್ಟು ಸುಲಭವಿಲ್ಲ. ಹಗಲಿರುಳು ಒಂದಿಲ್ಲೊಂದು ಸಮಸ್ಯೆಗಳ

ಜತೆ ಗುದ್ದಾಡುತ್ತಲೇ ಬದುಕು ಸವೆಸಬೇಕಿದೆ. ಭಿನ್ನ ವಿಭಿನ್ನ ಮನಸ್ಥಿತಿ ಕೈದಿಗಳ ನಿಭಾಯಿಸುವುದು ಮಾತಿನಲ್ಲಿ ಹೇಳಲು ಸಾಧ್ಯವಾಗುವುದಿಲ್ಲ. ‘ಊಟ ಸರಿಯಲ್ಲ ಅಂದ್ರೂ ಪ್ರಾಣ ಬಿಡುತ್ತೇವೆ ಅಂತಾರೆ. ಸುಖಾಸುಮ್ಮನೆ ಹೊಟ್ಟೆ ನೋವಿನ ನಾಟಕವಾಡಿ ರಾತ್ರಿಯಲ್ಲೇ ಗಲಾಟೆ ಮಾಡುತ್ತಾರೆ. ಕೆಲವರಂತೂ ಸೆಲ್‌ನಲ್ಲಿ ವಾಂತಿ ಮಾಡಿಕೊಂಡು ಗಲೀಜು ಮಾಡಿಕೊಳ್ಳುತ್ತಾರೆ. ಮೈಗೆ ನೀರು ತೋರಿಸಿಯೇ ವಾರಗಳಾಗಿರುತ್ತವೆ. ಸೆಲ್‌ನಲ್ಲಿ ತಪಾಸಣೆಗೆ ಹೋದರೆ ಆ ಕೊಳಕು ಪರಿಸ್ಥಿತಿಯಲ್ಲೇ ಅವರ ಸಮಸ್ಯೆ ಆಲಿಸಬೇಕು’ ಎನ್ನುತ್ತಾ ನೋವು ತೋಡಿಕೊಳ್ಳುತ್ತಾರೆ ಮಹಿಳಾ ಅಧಿಕಾರಿಯೊಬ್ಬರು.

‘ ಇಲ್ಲಿ ಅಡುಗೆ ತಯಾರಿಸುವುದೂ ಸಹ ಕೈದಿಗಳು. ನಮ್ಮ (ಅಧಿಕಾರಿಗಳ) ಮೇಲಿನ ಸಿಟ್ಟಿಗೆ ಏನಾದರೂ ಅಚಾತುರ್ಯ ಮಾಡಿದರೆ ಪರಿಸ್ಥಿತಿ ಏನಾಗಬಹುದು. ಥ್ಯಾಂಕ್ ಗಾಡ್‌. ಇದುವವರೆಗೆ ಆ ರೀತಿಯ ಅಪಾಯ ಎದುರಾಗಿಲ್ಲ. ನಮ್ಮ ವಿರುದ್ಧ ಕೋರ್ಟ್‌ಗಳು, ಮಾನವ ಹಕ್ಕು ಆಯೋಗಗಳು ಹಾಗೂ ಸರ್ಕಾರಕ್ಕೆ ಕೈದಿಗಳು ದೂರು ಕೊಡುತ್ತಾರೆ. ಈಗ ವಿಡಿಯೋ ಮಾಡಿ ಮಾಧ್ಯಮಗಳಿಗೆ ಹರಿಯಬಿಟ್ಟು ಬೆದರಿಸುವುದು ಶುರುವಾಗಿದೆ. ಪೆರೋಲ್‌ಗೆ ಪೊಲೀಸರ ವರದಿ ನೀಡಿದರೆ ಅನುಮತಿ ಸಿಗುತ್ತದೆ. ಪೊಲೀಸರ ಸಮ್ಮತಿ ಸಿಗಲಿಲ್ಲವೆಂದರೆ ಕೈದಿಗಳು ಗಲಾಟೆ ಮಾಡುತ್ತಾರೆ. ಜೈಲಿನಲ್ಲಿ ಊಟ ವಸತಿ ಮಾತ್ರವಲ್ಲದೆ ಕೈದಿಗಳನ್ನು ನ್ಯಾಯಾಲಯದ ವಿಚಾರಣೆಗೆ ಕರೆದೊಯ್ಯುವುದು ಸೇರಿದಂತೆ ಇತರೆ ಕೆಲಸಗಳಿರುತ್ತವೆ. ಕಾರ್ಯದೊತ್ತಡ ಅರಿಯದೆ ನಮ್ಮ ಮೇಲೆ ಕೈದಿಗಳು ಗಲಾಟೆ ಮಾಡುತ್ತಾರೆ’ ಎನ್ನುವುದು ಅಧಿಕಾರಿಯೊಬ್ಬರ ನುಡಿ.

ಮೊಬೈಲ್, ಅಕ್ರಮಗಳ ಕೇಸ್ ಏನಾದವು?

‘ಜೈಲಿನಲ್ಲಿ ಅಕ್ರಮದ ಬಗ್ಗೆ ಕಾರಾಗೃಹ ಸಿಬ್ಬಂದಿ ದೂಷಣೆ ಮಾಡಿದರೆ ಪ್ರಯೋಜನವಿಲ್ಲ. ಇದುವರೆಗೆ ಜೈಲಿನಲ್ಲಿ ಮೊಬೈಲ್ ಅಥವಾ ಡ್ರಗ್ಸ್ ಪತ್ತೆಯಾದ ಪ್ರಕರಣದಲ್ಲಿ ಎಷ್ಟು ಮಂದಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ? ಇದಕ್ಕೆ ಉತ್ತರದಾಯಿತ್ವ ಯಾರದ್ದು? ಮೊಬೈಲ್ ತಂದು ಕೊಟ್ಟವನಿಗೆ ಶಿಕ್ಷೆಯಿಲ್ಲ. ಆದರೆ ಮೊಬೈಲ್ ಬಳಸುವಾಗ ಕರ್ತವ್ಯದಲ್ಲಿದ್ದವನು ಮನೆಗೆ ಹೋಗಬೇಕು. ಇತ್ತೀಚಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ತರಕಾರಿ ಕತ್ತರಿಸಲು ತಟ್ಟೆಯಲ್ಲಿ ಮಾಡಿ ಕೊಂಡಿದ್ದ ಚಿಕ್ಕ ಚಾಕು ಸಿಕ್ಕಿದ್ದಕ್ಕೆ ಮೂವರು ಜೈಲು ವಾರ್ಡನ್‌ಗಳು ಇಲಾಖೆ ವಿಚಾರಣೆ ಎದುರಿಸಿದರು’ ಎನ್ನುತ್ತಾರೆ ಸಿಬ್ಬಂದಿ.

ಬ್ಯಾರಕ್‌ಗಳ ಪರಿಸ್ಥಿತಿ ಹೀಗಿದೆ..

ಕಾರಾಗೃಹಗಳಲ್ಲಿ ವಿಚಾರಣಾಧೀನ ಹಾಗೂ ಕೈದಿಗಳನ್ನು ಪ್ರತ್ಯೇಕ ಬ್ಯಾರೆಕ್‌ಗಳಲ್ಲಿಡಲಾಗುತ್ತದೆ. ರಾಜ್ಯದ ಅತಿದೊಡ್ಡ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಒಂದು ಬ್ಯಾರಕ್‌ ನಲ್ಲಿ 6 ಸೆಲ್‌ಗಳಿದ್ದು, ತಲಾ ಸೆಲ್‌ 60*70 ಅಡಿ ವಿಸ್ತೀರ್ಣವಿರುತ್ತದೆ.

ಪ್ರತಿ ಸೆಲ್‌ನಲ್ಲಿ 50 ರಿಂದ 60 ಕೈದಿಗಳಂತೆ ಒಂದು ಬ್ಯಾರಕ್‌ನಲ್ಲಿ 300 ಕೈದಿಗಳಿರುತ್ತಾರೆ. ಆದರೆ ಈ ಬ್ಯಾರೆಕ್‌ ಗಳ ಕಾವಲಿಗೆ ಇಬ್ಬರು ಅಥವಾ ಮೂವರು ನಿಲ್ಲುತ್ತಾರೆ. ಇತರೆ ಜೈಲುಗಳಲ್ಲಿ ದೊಡ್ಡ ದೊಡ್ಡ ಕೋಣೆಗಳೇ ಬ್ಯಾರಕ್‌ಗಳಾಗಿವೆ.

ಪರಪ್ಪನ ಅಗ್ರಹಾರ ಸೆಂಟ್ರಲ್‌ ಜೈಲಿನಲ್ಲಿ 10 ಬ್ಯಾರಕ್‌ಗಳಲ್ಲಿವೆ. ಪಾಳಿ ಮುಗಿದ ಬಳಿಕ ಪ್ರತಿಸೆಲ್ ಹಾಗೂ ವ್ಯಕ್ತಿಗತ ಕೈದಿ ತಪಾಸಣೆ ನಡೆಸಿ ಕರ್ತವ್ಯದಿಂದ ಸಿಬ್ಬಂದಿ ಬಿಡುಗಡೆಗೊಳ್ಳಬೇಕು. ಕೂಲಂಕುಷವಾಗಿ ತಪಾಸಣೆಗೆ ಕನಿಷ್ಟ 10 ನಿಮಿಷ ಬೇಕಾಗುತ್ತದೆ. ಹೀಗೆ ಪ್ರತಿ ಸೆಲ್‌ ತಪಾಸಣೆ ನಡೆಸಲು ಎಷ್ಟು ಸಮಯ ಬೇಕಾಗುತ್ತದೆ. ಕೆಲಸ ಮುಗಿಸಿ ಮನೆಗೆ ಹೋದರೂ ನೆಮ್ಮದಿ ಇಲ್ಲ ಎಂದು ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಾರೆ.

ರಾತ್ರೋರಾತ್ರಿ ಅವಘಡಗಳ ನಿರ್ವಹಣೆ

ಮೊದಲೆಲ್ಲ ಜೈಲಿನಲ್ಲಿ ಕೈದಿಗಳಿಗೆ ಎನ್‌ಜಿಓಗಳು ಅಥವಾ ಖಾಸಗಿ ವ್ಯಕ್ತಿಗಳು ಆಹಾರ ವಿತರಣೆಗೆ ಅ‍ವಕಾಶವಿತ್ತು.

2005ರಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಬಿರಿಯಾನಿ ತಂದು ಎನ್‌ಜಿಓ ವಿತರಿಸಿತು. ಆ ಬಿರಿಯಾನಿ ತಿಂದು ಆ ದಿನ ನಡುರಾತ್ರಿ ಸುಮಾರು 1 ಸಾವಿರ ವಿಚಾರಣಾಧೀನ ಕೈದಿಗಳಿಗೆ ಬೇಧಿಯಾಗಿ ನಿತ್ರಾಣರಾದರು. ಇದರಲ್ಲಿ 50-60 ಕೈದಿಗಳು ಆರೋಗ್ಯ ತೀರಾ ಹದೆಗಟ್ಟಿತು. ಅಷ್ಟೊತ್ತಿನಲ್ಲಿ ಜೈಲಿನ ವೈದ್ಯರು ಮಾತ್ರವಲ್ಲದೆ ವಿಕ್ಟೋರಿಯಾ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಲಾಯಿತು. ಇತ್ತೀಚಿಗೆ ಮಂಗಳೂರಿನ ಜೈಲಿನಲ್ಲಿ ಅಂಥಾದ್ದೇ ಘಟನೆ ಮರುಕಳಿಸಿತು. ರಾತ್ರಿ ವೇಳೆ ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಒಂದೆಡೆ ಕೈದಿಗಳ ಆರೋಗ್ಯ ಮತ್ತೊಂದೆಡೆ ಕೈದಿಗಳ ಭದ್ರತೆ ಕೆಲಸವನ್ನು ನಿಭಾಯಿಸುವುದು ಸವಾಲಾಗಿರುತ್ತದೆ ಎಂದು ಅಧಿಕಾರಿ ನೆನಪಿಸಿಕೊಳ್ಳುತ್ತಾರೆ.

ರೌಡಿ ಗ್ಯಾಂಗ್‌ಗಳು ಒಟ್ಟಿಗಿದ್ದರೆ ಶಾಂತಿ

‘ಛಾಪಾಕಾಗದ ಹಗರಣದ ರೂವಾರಿ ಕರೀಂಲಾಲ್‌ ತೆಲಗಿ ಜೈಲಿಗೆ ಕಾಲಿಟ್ಟ ಆರಂಭದಲ್ಲಿ ರಾಜಕೀಯ ಪ್ರಭಾವ ಬಳಸಿ ಸವಲತ್ತು ಪಡೆದಿದ್ದ. ಆತನ ಅಹಂಕಾರ ಮಿತಿ ಮೀರಿತ್ತು. ಅನಾರೋಗ್ಯಕ್ಕೀಡಾದ ನಂತರ ಆತ ತಣ್ಣಗಾದ. ಹಲವು ಬಾರಿ ಆತನ ಸೆಲ್‌ ಮೇಲೆ ದಾಳಿ ನಡೆದಿತ್ತು. ತೆಲಗಿಗೆ ಸೌಲಭ್ಯ ಕೊಟ್ಟ ಆರೋಪ ಹೊತ್ತು ಇಬ್ಬರು ಜೈಲು ಅಧಿಕಾರಿಗಳು ಬಂಧಿತರಾದರು. ಆದರೆ ಮಾಜಿ ಡಾನ್‌ ಮುತ್ತಪ್ಪ ರೈ ಮಾತ್ರ ಅತಿ ಭದ್ರತಾ ವಿಭಾಗದಲ್ಲಿದ್ದ. ಆದರೆ ಜೈಲಿನಲ್ಲಿದ್ದಷ್ಟು ದಿನಗಳು ಆಡಳಿತಾತ್ಮಕವಾಗಿ ಆತ ತೊಂದರೆ ಕೊಡಲಿಲ್ಲ’ ಎನ್ನುತ್ತಾರೆ ಹಿರಿಯ ಸಿಬ್ಬಂದಿ.

ಜೈಲಿನಲ್ಲಿ ಸುರಕ್ಷತೆ ದೃಷ್ಟಿಯಿಂದ ರೌಡಿ ಹಾಗೂ ಆತನ ಸಹಚರರನ್ನು ಒಟ್ಟಿಗೆ ಇಡಲಾಗುತ್ತದೆ. ಸೆರೆಮನೆಯಲ್ಲಿ ಸಹ ಪರಸ್ಪರ ರೌಡಿಗಳು ಗುಂಪು ಕತ್ತಿ ಮಸೆಯುತ್ತವೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 15 ರೌಡಿಗಳ ಗುಂಪುಗಳಿವೆ.

ರೌಡಿಗಳಾದ ಸೈಕಲ್ ರವಿ, ವಿಲ್ಸನ್ ಗಾರ್ಡನ್‌ ನಾಗ, ಸೈಲೆಂಟ್ ಸುನೀಲ, ಒಂಟೆ ರೋಹಿತ ಹೀಗೆ ಕೆಲ ರೌಡಿಗಳನ್ನು ಅವರ ಸಹಚರರ ಜತೆಯೇ ಬಂಧಿಸಿಡಬೇಕು. ರೌಡಿಗಳನ್ನು ಪ್ರತ್ಯೇಕವಾಗಿಟ್ಟರೆ ಗ್ಯಾಂಗ್ ವಾರ್‌ಗಳಾಗುತ್ತವೆ. ಬೆಳಗ್ಗೆ- ಸಂಜೆ ಊಟ ತಿಂಡಿ ಕೊಡುವುದಾಗಲೂ ಒಂದು ಗುಂಪು ಬ್ಯಾರಕ್‌ನಿಂದ ಹೊರಬಂದರೆ ಮತ್ತೊಂದು ಗುಂಪನ್ನು ನಿರ್ಬಂಧಿಸಬೇಕು. ಈ ರೌಡಿಗಳು ಸಂದರ್ಶನ ಹಾಗೂ ಊಟ ಹೊತ್ತಿನಲ್ಲಿ ಕೈ ಕೈ ಮೀಲಾಯಿಸುತ್ತಾರೆ. ಆದರೆ ಇತ್ತೀಚಿನ ರೌಡಿ ಗುಂಪುಗಳಲ್ಲಿ ಯಾರ ಜೊತೆ ಯಾರಿರುತ್ತಾರೆ ಎಂಬುದನ್ನು ಗ್ರಹಿಸಲಾಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಫೈವ್‌ಸ್ಟಾರ್‌ ಹೋಟೆಲ್ ಊಟ

‘ಬಹಳ ವರ್ಷಗಳ ಹಿಂದೆ ಅಶೋಕ ಹೋಟೆಲ್‌ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಅಪರಂಜಿತ್‌ ಎಂಬಾತ ಬಂಧಿತನಾಗಿ ಜೈಲಿಗೆ ಬಂದಿದ್ದ. ತುಂಬಾ ಬುದ್ಧಿವಂತ ಆತ. ಈತನಿಂದ ಕಾನೂನು ಸಲಹೆ ಪಡೆಯಲು ಸುಪ್ರೀಂಕೋರ್ಟ್‌ ವಕೀಲರು ಬರುತ್ತಿದ್ದರು. ಫೈವ್‌ ಸ್ಟಾರ್ ಹೋಟೆಲ್‌ನಿಂದ ಆತನಿಗೆ ಊಟ ತರಿಸಿಕೊಡುತ್ತಿದ್ದರು’ ಎಂದು ಸಿಬ್ಬಂದಿ ನೆನೆಯುತ್ತಾರೆ.

ನಾಗರಹಾವು ಹಿಡಿದು ಬೆದರಿಸಿದ ಶಂಕಿತ ಉಗ್ರ

‘ಜೈಲಿನಲ್ಲಿ ತನಗೆ ಮುಕ್ತವಾಗಿ ಓಡಾಡಲು ಅವಕಾಶ ನೀಡುವಂತೆ ಮಲ್ಲೇಶ್ವರ ಬಿಜೆಪಿ ಕಚೇರಿ ಸಮೀಪದ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಉಗ್ರ ಗಲಾಟೆ ಶುರು ಮಾಡಿದ್ದ. ಆದರೆ ಈತನ ಬೇಡಿಕೆಗೆ ಕಾರಾಗೃಹ ಅಧಿಕಾರಿಗಳು ಕ್ಯಾರೇ ಎನ್ನಲಿಲ್ಲ. ಇದರಿಂದ ಪ್ರತಿದಿನ ಆತನ ರಗಳೆ ಇತ್ತು. ಕೆಲ ದಿನಗಳ ಹಿಂದೆ ಜೈಲು ಹೊರಾವರಣದಲ್ಲಿ ಕಂಡ ನಾಗರ ಹಾವನ್ನು ಕೈಯಲ್ಲಿ ಹಿಡಿದು ತಾನು ಸಾಯುವುದಾಗಿ ಆತ ಬೆದರಿಸಿದ್ದ. ಕೊನೆಗೆ ಆತನನ್ನು ಸಮಾಧಾನಪಡಿಸಿ ಹಾವಿನಿಂದ ಪಾರು ಮಾಡಿದ್ದು ದೊಡ್ಡ ಸಾಹಸವಾಯಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

300 ಶಂಕಿತ ಉಗ್ರರು, 150 ವಿದೇಶಿಯರು

‘ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಸೇರಿದಂತೆ ಇದುವರೆಗೆ ವಿವಿಧ ಭಯೋತ್ಪಾದಕ ಕೃತ್ಯ ಸಂಬಂಧ ಬಂಧಿತರಾದ 300 ಶಂಕಿತರು ಉಗ್ರರು ಇದ್ದಾರೆ. ಅದೇ ರೀತಿ ಜೈಲಿನ ಬ್ಯಾರಕ್‌-1 ರಲ್ಲಿ ಡ್ರಗ್ಸ್ ಸೇರಿ ಇತರೆ ಕೇಸ್‌ನಲ್ಲಿ ಸೆರೆಯಾದ 150ಕ್ಕೂ ಹೆಚ್ಚಿನ ವಿದೇಶಿಯರು ಇದ್ದಾರೆ. ತಮ್ಮ ಬ್ಯಾರೆಕ್‌ಗಳ ತಪಾಸಣೆಗೆ ಕೆಲವು ಬಾರಿ ಅಡ್ಡಿಪಡಿಸುತ್ತಾರೆ. ವಿದೇಶಿಯರು ದೈಹಿಕವಾಗಿ ಬಲಾಢ್ಯರು. ಮೂರು ನಾಲ್ಕು ಮಂದಿ ಹೋಗಿ ತಪಾಸಣೆ ಮಾಡಬೇಕು. ಉಗ್ರರ ಕಾಯುವಿಕೆಗೆ ತಲೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ’ ಸಿಬ್ಬಂದಿ.

ಜೈಲಿನ ದಿನಚರಿ

ಬೆಳಗ್ಗೆ 6.45 ರಿಂದ 7.15 ಗಂಟೆಗೆ

ಸೆಲ್‌ಗಳ ಬೀಗ ತೆರೆದು ಕೈದಿಗಳು ಹೊರಗೆ

ಬೆಳಗ್ಗೆ 7.30 ಗಂಟೆಗೆ ಉಪಹಾರ.

ಉಪ್ಪಿಟ್ಟು, ಚಿತ್ರಾನ್ನ ಹೀಗೆ ಪ್ರತಿದಿನ ಬೇರೆ ಬೇರೆ ತಿಂಡಿ

ಬೆಳಗ್ಗೆ 9 ಗಂಟೆಗೆ

ಕೈದಿಗಳ ಹಾಜರಾತಿ ಪಡೆಯುವುದು

ಬೆಳಗ್ಗೆ 11 ಗಂಟೆಗೆ ಊಟ

ಸಂಜೆ 5 ಗಂಟೆಗೆ ಸಂಜೆ ಊಟ

ಸಂಜೆ.6.45 ಲಾಕ್

ಪ್ರತಿಯೊಬ್ಬನ ತಲೆ ಲೆಕ್ಕ ಹಾಕಿ ಲಾಕ್. ಗೇಟ್‌ನಲ್ಲಿ ಹೊಸದಾಗಿ ಬಂದವರ ತಲೆ ಲೆಕ್ಕ.

ಪ್ರತಿ 6 ಕೈದಿಗೆ ಓರ್ವ ಸಿಬ್ಬಂದಿ ಬೇಕು?

‘ರಾಜ್ಯದಲ್ಲಿ ಜೈಲುಗಳಲ್ಲಿ 5 ಸಾವಿರ ಸಜಾ ಕೈದಿಗಳು ಸೇರಿದಂತೆ 13 ಸಾವಿರ ಕೈದಿಗಳಿದ್ದಾರೆ. ನಿಯಮದ ಪ್ರಕಾರ ಪ್ರತಿ 6 ಕೈದಿಗೆ ಓರ್ವ ಸಿಬ್ಬಂದಿ ಇರಬೇಕು. ಆದರೀಗ 150ಕ್ಕೂ ಜನರಿಗೆ ಒಬ್ಬ ಸಿಬ್ಬಂದಿ ಇದ್ದರೆ ಹೆಚ್ಚು. ಪರಪ್ಪನ ಅಗ್ರಹಾರ ಸೆಂಟ್ರಲ್‌ ಜೈಲಿನಲ್ಲಿ 5 ಸಾವಿರ ಕೈದಿಗಳಿದ್ದು, 300 ಜನ ಅಧಿಕಾರಿ-ಸಿಬ್ಬಂದಿ ಇದ್ದಾರೆ. ಕಾರಾಗೃಹ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಅಧಿಕಾರಿಗಳು ಬೇಸರದಿಂದ ನುಡಿದರು.

 

PREV
Read more Articles on

Recommended Stories

ಜಡೇಜಾ ಸ್ಪಿನ್‌ ಜಾದೂ : ಗೆಲುವಿನತ್ತ ಭಾರತ
ಐಪಿಎಲ್‌ ಕೂಡಾ ಬೆಂಗ್ಳೂರಿನ ಚಿನ್ನಸ್ವಾಮಿಯಿಂದ ಎತ್ತಂಗಡಿ ?