;Resize=(412,232))
ಬೆಂಗಳೂರು: ಜೂ.4ರಂದು ಸಂಭವಿಸಿದ ಭೀಕರ ಕಾಲ್ತುಳಿತದ ಬಳಿಕ ಹಲವು ಮಹತ್ವದ ಟೂರ್ನಿಗಳ ಆತಿಥ್ಯ ತಪ್ಪಿಸಿಕೊಂಡಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮುಂದಿನ ಐಪಿಎಲ್ ಪಂದ್ಯಗಳೂ ಎತ್ತಂಗಡಿಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಹೀಗಾಗಿ, ಐಪಿಎಲ್‌ನ ಹಾಲಿ ಚಾಂಪಿಯನ್, ತನ್ನ ತವರು ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುತ್ತಿದ್ದ ಆರ್‌ಸಿಬಿ ಬೇರೆ ಕ್ರೀಡಾಂಗಣದ ಹುಡುಕಾಟದಲ್ಲಿದೆ ಎಂದು ತಿಳಿದುಬಂದಿದೆ.
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಕಾಲ್ತುಳಿತಕ್ಕೆ 11 ಮಂದಿ ಮೃತಪಟ್ಟಿದ್ದರು. ಆ ಬಳಿಕ ಇಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ನಡೆದಿಲ್ಲ. ಮಹಿಳಾ ಏಕದಿನ ವಿಶ್ವಕಪ್ ಬೇರೆಡೆ ಸ್ಥಳಾಂತರಗೊಂಡಿದ್ದರೆ, ಮುಂದಿನ ಪುರುಷರ ಟಿ20 ವಿಶ್ವಕಪ್ ಪಂದ್ಯಗಳೂ ಇಲ್ಲಿ ನಡೆಯುವುದಿಲ್ಲ. ಸದ್ಯದ ವರದಿ ಪ್ರಕಾರ, 2026ರ ಐಪಿಎಲ್ ಆತಿಥ್ಯವೂ ಬೆಂಗಳೂರಿನ ಕೈತಪ್ಪುವ ಸಾಧ್ಯತೆಯಿದೆ. ಪಂದ್ಯ ಆಯೋಜನೆಗೆ ರಾಜ್ಯ ಸರ್ಕಾರದಿಂದ ಅನುಮತಿ ಸಿಗುತ್ತಿಲ್ಲ. ಹೀಗಾಗಿ ಆರ್‌ಸಿಬಿ ತನ್ನ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಗೊಳಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ ಎಂದು ಹೇಳಲಾಗುತ್ತಿದೆ.
ಚಿನ್ನಸ್ವಾಮಿಯಿಂದ ಐಪಿಎಲ್ ಸ್ಥಳಾಂತರ ಮಾಹಿತಿ ಸಿಕ್ಕ ಬೆನ್ನಲ್ಲೇ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ(ಎಂಸಿಎ)ಯು ಪಂದ್ಯಗಳನ್ನು ಪುಣೆಯಲ್ಲಿ ನಡೆಸಲು ಆರ್‌ಸಿಬಿಗೆ ಆಫರ್ ನೀಡಿದೆ. ‘ಪುಣೆಯಲ್ಲಿ ಆರ್‌ಸಿಬಿ ಪಂದ್ಯ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಇನ್ನೂ ದೃಢಪಟ್ಟಿಲ್ಲ. ಪಂದ್ಯ ನಡೆಸಲು ಆರ್‌ಸಿಬಿ ಸ್ಥಳ ಹುಡುಕುತ್ತಿದೆ. ಹೀಗಾಗಿ ನಮ್ಮ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ಆಫರ್ ನೀಡಿದ್ದೇವೆ. ಪ್ರಾಥಮಿಕ ಹಂತದ ಚರ್ಚೆ ನಡೆಯುತ್ತಿವೆ. ಕೆಲ ತಾಂತ್ರಿಕ ಸಮಸ್ಯೆಗಳಿವೆ. ಅದು ಬಗೆಹರಿದರೆ ಪುಣೆಯಲ್ಲಿ ಪಂದ್ಯ ನಡೆಯಬಹುದು’ ಎಂದು ಎಂಸಿಎ ಕಾರ್ಯದರ್ಶಿ ಕಮಲೇಶ್ ಪಿಶಾಲ್ ಹೇಳಿದ್ದಾರೆ.