ಸರಣಿ ಸೋಲಿಂದ ಪಾರು ಮಾಡಿದ ಸೂರ್ಯ

KannadaprabhaNewsNetwork | Published : Dec 15, 2023 1:30 AM

ಸಾರಾಂಶ

Suryakumar Yadav ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ನಡೆದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಭಾರತವನ್ನು ಸರಣಿ ಸೋಲಿನಿಂದ ಪಾರು ಮಾಡಿದರು. 106 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ, 3 ಪಂದ್ಯಗಳ ಸರಣಿಯನ್ನು 1-1ರಲ್ಲಿ ಡ್ರಾ ಮಾಡಿಕೊಂಡಿತು. ಮೊದಲ ಪಂದ್ಯ ಮಳೆಗೆ ಬಲಿಯಾದ ಬಳಿಕ, 2ನೇ ಪಂದ್ಯದಲ್ಲಿ ಭಾರತ ಸೋಲುಂಡಿತ್ತು.

ಜೋಹಾನ್ಸ್‌ಬರ್ಗ್‌: ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್‌ನಲ್ಲಿ ಸೂರ್ಯಕುಮಾರ್‌ರನ್ನು ಆಡಿಸಿದ್ದು ಸರಿಯೋ ತಪ್ಪೋ ಎನ್ನುವ ಚರ್ಚೆ ಇನ್ನೂ ನಿಂತಿಲ್ಲ. ಆದರೆ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಅವರು ಆಡಲೇ ಬೇಕು ಎಂದು ಈಗಾಗಲೇ ಎಲ್ಲರೂ ಹೇಳಲು ಆರಂಭಿಸಿದ್ದಾರೆ.

ಟಿ20 ಮಾದರಿಯಲ್ಲಿ ಅವರೆಷ್ಟು ಪರಿಣಾಮಕಾರಿ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ಸೂರ್ಯ, ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ನಡೆದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಭಾರತವನ್ನು ಸರಣಿ ಸೋಲಿನಿಂದ ಪಾರು ಮಾಡಿದರು. 106 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ, 3 ಪಂದ್ಯಗಳ ಸರಣಿಯನ್ನು 1-1ರಲ್ಲಿ ಡ್ರಾ ಮಾಡಿಕೊಂಡಿತು. ಮೊದಲ ಪಂದ್ಯ ಮಳೆಗೆ ಬಲಿಯಾದ ಬಳಿಕ, 2ನೇ ಪಂದ್ಯದಲ್ಲಿ ಭಾರತ ಸೋಲುಂಡಿತ್ತು. ಗುರುವಾರ ಟಾಸ್‌ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟ ಭಾರತ 20 ಓವರಲ್ಲಿ 7 ವಿಕೆಟ್‌ಗೆ 201 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಆತಿಥೇಯ ತಂಡ 13.5 ಓವರಲ್ಲಿ ಕೇವಲ 95 ರನ್‌ಗೆ ಆಲೌಟ್‌ ಆಯಿತು. ಬೃಹತ್‌ ಗುರಿ ಬೆನ್ನತ್ತಿದ ದ.ಆಫ್ರಿಕಾ, ಪವರ್‌-ಪ್ಲೇನಲ್ಲೇ 3 ವಿಕೆಟ್‌ ಕಳೆದುಕೊಂಡು ಹಿನ್ನಡೆ ಅನುಭವಿಸಿತು. 7ನೇ ಓವರ್‌ನ ಮೊದಲ ಎಸೆತದಲ್ಲೇ ನಾಯಕ ಏಡನ್‌ ಮಾರ್ಕ್‌ರಮ್‌ರನ್ನು ಔಟ್‌ ಮಾಡಿದ ಜಡೇಜಾ ಭಾರತದ ಗೆಲುವನ್ನು ಖಚಿತಪಡಿಸಿದರು. ಒಂದೆಡೆ ಡೇವಿಡ್‌ ಮಿಲ್ಲರ್‌ (35) ಏಕಾಂಗಿ ಹೋರಾಟ ನಡೆಸಿದರೆ, ಮತ್ತೊಂದೆಡೆ ಕುಲ್ದೀಪ್‌ ಯಾದವ್‌ ವಿಕೆಟ್‌ ಮೇಲೆ ವಿಕೆಟ್‌ ಉದುರಿಸಿ, ದ.ಆಫ್ರಿಕಾದ ಉಸಿರುಗಟ್ಟಿಸಿದರು. 2.5 ಓವರಲ್ಲಿ 17 ರನ್‌ಗೆ 5 ವಿಕೆಟ್‌ ಕಿತ್ತರು. ಸೂರ್ಯನಬ್ಬರ: ಗಿಲ್‌ (12) ಹಾಗೂ ತಿಲಕ್‌ (00) ಬೇಗನೆ ಔಟಾದ ಬಳಿಕ ಸೂರ್ಯಕುಮಾರ್‌ ಹಾಗೂ ಯಶಸ್ವಿ ಜೈಸ್ವಾಲ್‌ ಭಾರತಕ್ಕೆ ಆಸರೆಯಾದರು. ತಂಡ ಆರಂಭಿಕ ಆಘಾತ ಕಂಡರೂ, ಇವರಿಬ್ಬರು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗದೆ ಎದುರಾಳಿಯ ಮೇಲೆ ಒತ್ತಡ ಹೇರುವ ಕೆಲಸ ಮಾಡಿದರು. ಜೈಸ್ವಾಲ್‌ 41 ಎಸೆತದಲ್ಲಿ 6 ಬೌಂಡರಿ, 3 ಸಿಕ್ಸರ್‌ನೊಂದಿಗೆ 60 ರನ್‌ ಸಿಡಿಸಿ, 3ನೇ ವಿಕೆಟ್‌ಗೆ ಸೂರ್ಯ ಜೊತೆ 112 ರನ್‌ ಜೊತೆಯಾಟದಲ್ಲಿ ಭಾಗಿಯಾದರು. 55 ಎಸೆತದಲ್ಲಿ ಶತಕ ಪೂರೈಸಿದ ಸೂರ್ಯ 56 ಎಸೆತದಲ್ಲಿ 7 ಬೌಂಡರಿ, 8 ಸಿಕ್ಸರ್‌ನೊಂದಿಗೆ 100 ರನ್ ಚಚ್ಚಿದರು. ಸ್ಕೋರ್‌: ಭಾರತ 20 ಓವರಲ್ಲಿ 201/7 (ಸೂರ್ಯ 100, ಯಶಸ್ವಿ 60, ಕೇಶವ್‌ 2-26), ದ.ಆಫ್ರಿಕಾ 13.5 ಓವರಲ್ಲಿ 95/10 (ಮಿಲ್ಲರ್‌ 35, ಕುಲ್ದೀಪ್‌ 5-17, ಜಡೇಜಾ 2-25) ===ರೋಹಿತ್‌, ಮ್ಯಾಕ್ಸ್‌ವೆಲ್‌ ದಾಖಲೆ ಸರಿಗಟ್ಟಿದ ಸೂರ್ಯಅಂ.ರಾ. ಟಿ20ಯಲ್ಲಿ ಸೂರ್ಯಗಿದು 4ನೇ ಶತಕ. ಭಾರತದ ಹಂಗಾಮಿ ನಾಯಕ, ರೋಹಿತ್‌ ಶರ್ಮಾ ಹಾಗೂ ಆಸ್ಟ್ರೇಲಿಯಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ರ ದಾಖಲೆಯನ್ನು ಸರಿಗಟ್ಟಿದ್ದಾರೆ. ರೋಹಿತ್‌ 140 ಇನ್ನಿಂಗ್ಸ್‌ಗಳಲ್ಲಿ 4 ಶತಕ ಬಾರಿಸಿದ್ದರೆ, ಮ್ಯಾಕ್ಸ್‌ವೆಲ್‌ 92 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಸೂರ್ಯ ಕೇವಲ 57 ಇನ್ನಿಂಗ್ಸ್‌ಗಳಲ್ಲಿ 4 ಶತಕ ಸಿಡಿಸಿರುವುದು ಅವರ ಆಟ ಎಷ್ಟು ಸ್ಥಿರತೆಯಿಂದ ಕೂಡಿದೆ ಎನ್ನುವುದಕ್ಕೆ ಸಾಕ್ಷಿ.==2023ರಲ್ಲಿ 13 ಜಯ, 7 ಸೋಲು!ಭಾರತಕ್ಕೆ ಈ ವರ್ಷ ಇನ್ನು ಟಿ20 ಪಂದ್ಯಗಳಿಲ್ಲ. 2023ರಲ್ಲಿ ಒಟ್ಟು 22 ಟಿ20 ಪಂದ್ಯಗಳನ್ನಾಡಿದ ಭಾರತ 13ರಲ್ಲಿ ಗೆದ್ದರೆ, 7 ಸೋಲು ಕಂಡಿತು. 2 ಪಂದ್ಯಗಳು ಮಳೆಗೆ ಬಲಿಯಾದವು. ಶ್ರೀಲಂಕಾ, ನ್ಯೂಜಿಲೆಂಡ್‌, ಐರ್ಲೆಂಡ್‌, ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದ ಭಾರತ, ವೆಸ್ಟ್‌ಇಂಡೀಸ್‌ ವಿರುದ್ಧ ಸರಣಿ ಸೋಲು ಕಂಡಿತು. ದ.ಆಫ್ರಿಕಾ ವಿರುದ್ಧದ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಭಾರತ ಯಶಸ್ವಿಯಾಯಿತು.

Share this article