ಇಂದಿನಿಂದ ಭಾರತ vs ಲಂಕಾ ಏಕದಿನ: ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಮೇಲೆ ನಿರೀಕ್ಷೆ

KannadaprabhaNewsNetwork |  
Published : Aug 02, 2024, 12:59 AM ISTUpdated : Aug 02, 2024, 04:14 AM IST
ಅಭ್ಯಾಸದ ವೇಳೆ ಕಾಣಿಸಿಕೊಂಡ ಗಂಭೀರ್‌ ಹಾಗೂ ರೋಹಿತ್‌ | Kannada Prabha

ಸಾರಾಂಶ

ಲಂಕಾ ಬೇಟೆಗೆ ಸಜ್ಜಾದ ಟೀಂ ಇಂಡಿಯಾ. ಇಂದಿನಿಂದ 3 ಪಂದ್ಯಗಳ ಏಕದಿನ ಸರಣಿ. ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಮೇಲೆ ಎಲ್ಲರ ಕಣ್ಣು. ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌ ನಡುವೆ ವಿಕೆಟ್‌ ಕೀಪರ್‌-ಬ್ಯಾಟರ್‌ ಸ್ಥಾನಕ್ಕೆ ಪೈಪೋಟಿ.

ಕೊಲಂಬೊ: ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್‌ ಸ್ವೀಪ್ ಮಾಡಿದ ಭಾರತ ತಂಡ, ಶುಕ್ರವಾರದಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲೂ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ.

ಗೌತಮ್‌ ಗಂಭೀರ್‌ ನೇತೃತ್ವದ ಟೀಂ ಮ್ಯಾನೇಜ್‌ಮೆಂಟ್‌ಗೆ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸವಾಲು ಎದುರಾಗಲಿದ್ದು, 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ಸೂಕ್ತ ಆಟಗಾರರನ್ನು ಗುರುತಿಸುವ ಕೆಲಸವನ್ನು ಗಂಭೀರ್‌ ಈಗಿನಿಂದಲೇ ಆರಂಭಿಸಲಿದ್ದಾರೆ.

 ಸರಣಿಯಿಂದ ವಿಶ್ರಾಂತಿ ಪಡೆಯಲು ಬಯಸಿದ್ದರು ಎನ್ನಲಾದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿಗೆ ಆಯ್ಕೆಗೆ ಲಭ್ಯರಿರುವಂತೆ ಗಂಭೀರ್‌ ಸೂಚಿಸಿದ್ದರು ಎನ್ನುವ ಸುದ್ದಿ ಹರಿದಾಡಿತ್ತು. ನಿರೀಕ್ಷೆಯಂತೆ ಇಬ್ಬರೂ ಹಿರಿಯ ಆಟಗಾರರು ತಂಡದಲ್ಲಿದ್ದು, ಎಲ್ಲರ ಕಣ್ಣು ಅವರ ಮೇಲೆ ಇರಲಿದೆ. 

ಇನ್ನು ವಿಕೆಟ್‌ ಕೀಪರ್‌-ಬ್ಯಾಟರ್‌ ಸ್ಥಾನಕ್ಕೆ ಕೆ.ಎಲ್‌.ರಾಹುಲ್‌ ಹಾಗೂ ರಿಷಭ್‌ ಪಂತ್‌ ನಡುವೆ ಪೈಪೋಟಿ ಏರ್ಪಡಲಿದೆ. ಕಳೆದ ವರ್ಷ ಏಷ್ಯಾಕಪ್‌ನಿಂದ ರಾಹುಲ್‌ ತಂಡದ ಕೀಪರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು, ಬ್ಯಾಟಿಂಗ್‌ನಲ್ಲೂ ಮಿಂಚಿದ್ದಾರೆ. ಆದರೆ, ಗಂಭೀರ್ ಸಹ ರಾಹುಲ್‌ರನ್ನೇ ಮುಂದುವರಿಸಲಿದ್ದಾರೆಯೇ ಅಥವಾ ಪಂತ್‌ ಮೇಲೆ ಹೆಚ್ಚು ವಿಶ್ವಾಸ ಇರಿಸಲಿದ್ದಾರೆಯೇ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. 

ಇನ್ನು, ಶ್ರೇಯಸ್‌ ಅಯ್ಯರ್‌ ಮೇಲೂ ಎಲ್ಲರ ಕಣ್ಣಿದೆ. ವೈಯಕ್ತಿಕ ಕಾರಣಗಳಿಂದ ಹಾರ್ದಿಕ್‌ ಪಾಂಡ್ಯ ಸರಣಿಗೆ ಗೈರಾಗಲು ನಿರ್ಧರಿಸಿದ್ದು, ಶಿವಂ ದುಬೆ ಅಥವಾ ರಿಯಾನ್‌ ಪರಾಗ್‌ಗೆ ಸ್ಥಾನ ಸಿಗಬಹುದು. ಇತ್ತೀಚೆಗೆ ಮುಕ್ತಾಯಗೊಂಡ ಟಿ20 ಸರಣಿಯಲ್ಲಿ ಪರಾಗ್‌ ಬೌಲಿಂಗ್‌ನಲ್ಲೂ ಮಿಂಚಿದ ಕಾರಣ, ಏಕದಿನದಲ್ಲೂ ಅವರನ್ನೇ ಆಡಿಸುವ ಸಾಧ್ಯತೆ ಹೆಚ್ಚು. 

ಜಸ್‌ಪ್ರೀತ್‌ ಬೂಮ್ರಾಗೆ ವಿಶ್ರಾಂತಿ ನೀಡಿರುವ ಕಾರಣ, ಮೊಹಮದ್‌ ಸಿರಾಜ್‌ ಬೌಲಿಂಗ್‌ ಪಡೆಯನ್ನು ಮುನ್ನಡೆಸಲಿದ್ದಾರೆ. ಅರ್ಶ್‌ದೀಪ್‌ ಸಿಂಗ್‌, ಖಲೀಲ್‌ ಅಹ್ಮದ್‌ ಇಬ್ಬರು ಎಡಗೈ ವೇಗಿಗಳಿದ್ದು, ಹರ್ಷಿತ್‌ ರಾಣಾ ಪಾದಾರ್ಪಣೆ ಮಾಡುವ ನಿರೀಕ್ಷೆ ಇದೆ. ಕುಲ್ದೀಪ್‌ ಯಾದವ್‌, ಅಕ್ಷರ್‌ ಪಟೇಲ್‌ ಸ್ಪಿನ್ನರ್‌ಗಳಾಗಿ ಆಡಲಿದ್ದಾರೆ. ಇನ್ನು ಲಂಕಾ ತಂಡವನ್ನು ಚರಿತ್‌ ಅಸಲಂಕ ಮುನ್ನಡೆಸಲಿದ್ದು, ಗಾಯದ ಸಮಸ್ಯೆ ಕಾರಣ ಹಲವು ಆಟಗಾರರು ಹೊರಬಿದ್ದಿದ್ದಾರೆ. ಹೀಗಾಗಿ, ತಂಡ ಸರಣಿ ಆರಂಭಕ್ಕೂ ಮೊದಲೇ ಸಂಕಷ್ಟಕ್ಕೆ ಗುರಿಯಾಗಿದೆ.

ಪಂದ್ಯ ಆರಂಭ: ಮಧ್ಯಾಹ್ನ 2.30ಕ್ಕೆ, ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್‌

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ವಿಶ್ವಕಪ್‌ ಪಂದ್ಯ ಬಹಿಷ್ಕಾರಕ್ಕಿದೆ ದೀರ್ಘ ಇತಿಹಾಸ
ರೋಲರ್‌ ಸ್ಕೇಟಿಂಗ್‌: ಮಂಗಳೂರು ಮೂಲದ ಅಹ್ಯಾನ್ ಅನ್ವರ್‌ಗೆ ಚಿನ್ನ