ದುಬೈ: ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸುವ ಭಾರತದ ಕನಸು ಜೀವಂತವಾಗಿದೆ. ಬುಧವಾರ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾವನ್ನು 82 ರನ್‌ಗಳಿಂದ ಹೊಸಕಿ ಹಾಕಿದ ಭಾರತ, ‘ಎ’ ಗುಂಪಿನ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರಾಗಲಿದ್ದು, ಆ ಪಂದ್ಯದ ಫಲಿತಾಂಶ ಭಾರತದ ಸೆಮೀಸ್ ಭವಿಷ್ಯವನ್ನು ನಿರ್ಧರಿಸಲಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ 20 ಓವರಲ್ಲಿ 3 ವಿಕೆಟ್‌ಗೆ 172 ರನ್ ಕಲೆಹಾಕಿದರೆ, ಭಾರತದ ಬೌಲಿಂಗ್ ದಾಳಿಗೆ ನಲುಗಿದ ಲಂಕಾ 19.5 ಓವರಲ್ಲಿ ಕೇವಲ 90 ರನ್‌ಗೆ ಆಲೌಟ್ ಆಯಿತು.
ಭಾರತೀಯ ಇನ್ನಿಂಗ್ಸ್ ಆಕರ್ಷಕ ಆಟದಿಂದ ಕೂಡಿತ್ತು. ಸ್ಮೃತಿ ಮಂಧನಾ ಹಾಗೂ ಶಫಾಲಿ ವರ್ಮಾ ಮೊದಲ ವಿಕೆಟ್‌ಗೆ 98 ರನ್‌ಗಳ ಜೊತೆಯಾಟವಾಡಿ, ಭದ್ರ ಬುನಾದಿ ಹಾಕಿಕೊಟ್ಟರು. ಶಫಾಲಿ 43 ರನ್ ಗಳಿಸಿ ಔಟಾದರೆ, ಸ್ಮೃತಿ 38 ಎಸೆತದಲ್ಲಿ 50 ರನ್‌ಗೆ ತಮ್ಮ ಇನ್ನಿಂಗ್ಸ್ ಕೊನೆಗೊಳಿಸಿದರು. ಸತತ 2 ಎಸೆತಗಳಲ್ಲಿ ಆರಂಭಿಕರಿಬ್ಬರನ್ನೂ ಕಳೆದುಕೊಂಡ ಭಾರತಕ್ಕೆ ಸ್ವಲ್ಪ ಮಟ್ಟಿಗಿನ ಹಿನ್ನಡೆ ಆಯಿತು.
ಆದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್‌ರ ಅಬ್ಬರದ ಆಟ ಲಂಕನ್ನರನ್ನು ನಡುಗಿಸಿತು. ಕೇವಲ 27 ಎಸೆತದಲ್ಲಿ 8 ಬೌಂಡರಿ, 1 ಸಿಕ್ಸರ್‌ನೊಂದಿಗೆ 52 ರನ್ ಸಿಡಿಸಿ, ಭಾರತ ದೊಡ್ಡ ಮೊತ್ತ ದಾಖಲಿಸಲು ಕಾರಣರಾದರು. ಲಂಕಾ ಪತನ: ವಿಶ್ವಕಪ್‌ನಲ್ಲಿ ಬಳಕೆಯಾಗುತ್ತಿರುವ ಪಿಚ್‌ಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ, ಲಂಕಾ ಬೃಹತ್ ಗುರಿ ಬೆನ್ನತ್ತಬೇಕಾದ ಅನಿವಾರ್ಯತೆ ಸಿಲುಕಿದಂತೆ ಕಂಡು ಬಂತು. ಇನ್ನಿಂಗ್ಸ್‌ನ 2ನೇ ಎಸೆತದಲ್ಲೇ ರಾಧಾ ಯಾದವ್ ಹಿಡಿದ ಅಮೋಘ ಕ್ಯಾಚ್‌ನ ಪರಿಣಾಮ, ಭಾರತಕ್ಕೆ ಮೊದಲ ವಿಕೆಟ್ ದೊರೆಯಿತು. ಅಪಾಯಕಾರಿ ಚಾಮರಿ ಅಟಪಟ್ಟುರನ್ನು ಕನ್ನಡತಿ ಶ್ರೇಯಾಂಕ ಪಾಟೀಲ್ ಪೆವಿಲಿಯನ್‌ಗೆ ಕಳುಹಿಸಿದರು.
ನೋಡನೋಡುತ್ತಿದ್ದಂತೆ ಲಂಕನ್ನರ ವಿಕೆಟ್‌ಗಳು ಪತನಗೊಂಡವು. ಕವಿಶಾ ದಿಲ್ಹರಿ(21) ಹಾಗೂ ಅನುಷ್ಕಾ ಸಂಜೀವನಿ (20) ಹೊರತುಪಡಿಸಿ ಲಂಕಾದ ಉಳಿದ್ಯಾವ ಬ್ಯಾಟರ್‌ಗಳು 20 ರನ್ ತಲುಪಲಿಲ್ಲ. ಸ್ಕೋರ್: ಭಾರತ 20 ಓವರಲ್ಲಿ 172/3 (ಹರ್ಮನ್‌ಪ್ರೀತ್ 52*, ಸ್ಮೃತಿ 50, ಶಫಾಲಿ 43, ಚಾಮರಿ 1-34), ಶ್ರೀಲಂಕಾ 19.5 ಓವರಲ್ಲಿ 90/10 (ಕವಿಶಾ 21, ಅನುಷ್ಕಾ 20, ಆಶಾ 3-19, ಅರುಂಧತಿ 3-19) ಪಂದ್ಯಶ್ರೇಷ್ಠ: ಹರ್ಮನ್‌ಪ್ರೀತ್
ಪಾಕ್, ಕಿವೀಸನ್ನುಹಿಂದಿಕ್ಕಿದ ಭಾರತ
ಈ ಪಂದ್ಯಕ್ಕೂ ಮುನ್ನ ‘ಎ’ ಗುಂಪಿನ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದ ಭಾರತ, ಬೃಹತ್ ಗೆಲುವಿನಿಂದ 2ನೇ ಸ್ಥಾನಕ್ಕೇರಿದೆ. -1.217 ಇದ್ದ ಭಾರತದ ನೆಟ್ ರನ್‌ರೇಟ್ +0.576ಕ್ಕೆ ಏರಿಕೆಯಾಗಿದ್ದು, ತಂಡ ಸೆಮೀಸ್‌ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.