ದುಬೈ: 9ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಭಾರತ, ಮೊದಲೆರಡು ಪಂದ್ಯಗಳಲ್ಲಿ ನೀಡಿದ್ದು ಸಾಧಾರಣ ಪ್ರದರ್ಶನ. ಆದರೆ ಈ ರೀತಿ ಆಟವಾಡಿದರೆ ಭಾರತ ನಾಕೌಟ್ ತಲುಪುವ ಸಾಧ್ಯತೆ ಕಡಿಮೆ. ಕಳೆದ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಹೊರತಾಗಿಯೂ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿರುವ ಟೀಂ ಇಂಡಿಯಾ, ಬುಧವಾರ ಶ್ರೀಲಂಕಾ ವಿರುದ್ಧ ಸೆಣಸಾಡಲಿದೆ. ಎಷ್ಟು ದೊಡ್ಡ ಅಂತರದಲ್ಲಿ ಗೆಲ್ಲಲಿದೆ ಎಂಬುದರ ಮೇಲೆ ತಂಡದ ಸೆಮೀಸ್ ಭವಿಷ್ಯ ಅಡಗಿದೆ. ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿಕೊಂಡು ಟೂರ್ನಿಗೆ ಕಾಲಿರಿಸಿದ್ದ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 58 ರನ್‌ಗಳ ಹೀನಾಯ ಸೋಲನುಭವಿಸಿತ್ತು. ಪಾಕ್ ವಿರುದ್ಧ ದೊಡ್ಡ ಜಯದ ನಿರೀಕ್ಷೆಯಲ್ಲಿದ್ದರೂ 105 ರನ್ ಗುರಿಯನ್ನು ಚೇಸ್ ಮಾಡಲು 18.5 ಓವರ್ ಬಳಿಸಿಕೊಂಡಿತ್ತು.ಭಾರತದ ನೆಟ್ ರನ್‌ರೇಟ್ ಸದ್ಯ -1.217 ಇದ್ದು, ‘ಎ’ ಗುಂಪಿನಲ್ಲಿ 4ನೇ ಸ್ಥಾನದಲ್ಲೇ ಬಾಕಿಯಾಗಿದೆ. ಹೀಗಾಗಿ ಶ್ರೀಲಂಕಾ ವಿರುದ್ಧ ಬೃಹತ್ ಗೆಲುವು ತಂಡದ ಮುಂದಿರುವ ಏಕೈಕ ಗುರಿ. ಕೊನೆ ಪಂದ್ಯದಲ್ಲಿ ಭಾರತಕ್ಕೆ ಬಲಿಷ್ಠ ಆಸ್ಟ್ರೇಲಿಯಾ ಸವಾಲು ಎದುರಾಗಲಿದೆ.ಬ್ಯಾಟರ್‌ಗಳದ್ದೇ ತಲೆಬಿಸಿ: ಭಾರತ ತಂಡದಲ್ಲಿ ಸದ್ಯ ಪ್ರಮುಖ ಸಮಸ್ಯೆ ಇರುವುದು ಬ್ಯಾಟಿಂಗ್ ವಿಭಾಗದಲ್ಲಿ. ಸ್ಫೋಟಕ ಆರಂಭಿಕರಾದ ಸ್ಮೃತಿ ಮಂಧನಾ, ಶಫಾಲಿ ವರ್ಮಾ ಮಂಕಾಗುತ್ತಿದ್ದಾರೆ. 2 ಪಂದ್ಯಗಳಲ್ಲಿ ಶಫಾಲಿ 34, ಮಂಧನಾ ಗಳಿಸಿದ್ದು ಕೇವಲ 19 ರನ್. ಇನ್ನು ಹರ್ಮನ್‌ಪ್ರೀತ್ ಕೌರ್, ಜೆಮಿಮಾ ರೋಡ್ರಿಗ್ಸ್, ರಿಚಾ ಘೋಷ್ ಬ್ಯಾಟ್ ಕೂಡಾ ಸದ್ದು ಮಾಡುತ್ತಿಲ್ಲ.ಬೌಲಿಂಗ್ ವಿಭಾಗದಲ್ಲಿ ಅರುಂಧತಿ ರೆಡ್ಡಿ, ಶ್ರೇಯಾಂಕ ಪಾಟೀಲ್ ಮತ್ತೊಮ್ಮೆ ಮಿಂಚಲು ಕಾಯುತ್ತಿದ್ದು, ರೇಣುಕಾ ಸಿಂಗ್, ದೀಪ್ತಿ ಶರ್ಮಾ ಪರಿಣಾಮಕಾರಿಯಾಗಬೇಕಿದೆ. ಸೇಡಿಗೆ ಕಾತರ: ಭಾರತ ತಂಡ ಲಂಕಾ ವಿರುದ್ಧ ಉತ್ತಮ ದಾಖಲೆ ಹೊಂದಿದ್ದರೂ, ಕಳೆದ ಏಷ್ಯಾಕಪ್ ಫೈನಲ್‌ನಲ್ಲಿ ವಿರುದ್ಧ ಸೋತಿತ್ತು. ಅದಕ್ಕೆ ಸೇಡು ತೀರಿಸಿಕೊಳ್ಳಲು ಭಾರತ ಕಾಯುತ್ತಿದೆ.ಸಿಗುತ್ತಾ ಮೊದಲ ಜಯ: ಲಂಕಾ ತಂಡ ಈ ಬಾರಿ ಹೇಳುಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಮೊದಲೆರಡು ಪಂದ್ಯಗಳಲ್ಲಿ ತಂಡ ಕ್ರಮವಾಗಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದೆ. ಹೀಗಾಗಿ ಟೂರ್ನಿಯ ಮೊದಲ ಗೆಲುವಿನ ಕಾತರದಲ್ಲಿದೆ. ಈ ಪಂದ್ಯದಲ್ಲೂ ಸೋತರೆ ತಂಡವನ್ನು ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.
ಒಟ್ಟು ಮುಖಾಮುಖಿ: 25ಭಾರತ: 19ಶ್ರೀಲಂಕಾ: 05ಫಲಿತಾಂಶವಿಲ್ಲ: 01
ಸಂಭವನೀಯ ಆಟಗಾರರ ಪಟ್ಟಿಭಾರತ: ಸ್ಮೃತಿ ಮಂಧನಾ, ಶಫಾಲಿ, ಜೆಮಿಮಾ, ಹರ್ಮನ್(ನಾಯಕಿ), ರಿಚಾ, ದೀಪ್ತಿ, ಅರುಂಧತಿ, ಸಜನಾ/ಪೂಜಾ, ಶ್ರೇಯಾಂಕ, ಆಶಾ, ರೇಣುಕಾ.ಶ್ರೀಲಂಕಾ: ವಿಶ್ಮಿ, ಚಾಮರಿ(ನಾಯಕಿ), ಹರ್ಷಿತಾ, ಕವಿಶಾ, ನೀಲಾಕ್ಷಿ, ಹಶಿನಿ, ಅನುಷ್ಕಾ, ಸುಗಂಧಿಕಾ, ಇನೋಶಿ, ಉದೇಶಿಕಾ, ಇನೋಕಾ.
ಪಂದ್ಯ: ಸಂಜೆ 7.30ಕ್ಕೆ । ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಹಾಟ್ಸ್ಟಾರ್ಹರ್ಮನ್ ಲಭ್ಯ?
ಪಾಕ್ ವಿರುದ್ಧ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಹರ್ಮನ್ ಕುತ್ತಿಗೆ ನೋವಿಗೆ ತುತ್ತಾಗಿ, ಅರ್ಧದಲ್ಲೇ ಬ್ಯಾಟಿಂಗ್ ತೊರೆದಿದ್ದರು. ಆದರೆ ಅವರು ಗುಣಮುಖರಾಗಿದ್ದು, ಪಂದ್ಯಕ್ಕೆ ಲಭ್ಯವಿರುವುದಾಗಿ ಸ್ಮೃತಿ ಮಂಧನಾ ತಿಳಿಸಿದ್ದಾರೆ.