ಇಂದು ಬಾಂಗ್ಲಾದೇಶ ವಿರುದ್ಧ 2ನೇ ಟಿ20 ಪಂದ್ಯ: ಭಾರತಕ್ಕೆ ಸರಣಿ ಗೆಲುವಿನ ಗುರಿ

KannadaprabhaNewsNetwork | Published : Oct 9, 2024 1:31 AM

ಸಾರಾಂಶ

ಗ್ವಾಲಿಯರ್‌ ಪಂದ್ಯದಲ್ಲಿ ಎಲ್ಲಾ ವಿಭಾಗದಲ್ಲೂ ಅಭೂತಪೂರ್ವ ಪ್ರದರ್ಶನ ತೋರಿದ್ದ ಟೀಂ ಇಂಡಿಯಾ ಈ ಪಂದ್ಯದಲ್ಲಿ ಆಡುವ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ.

ನವದೆಹಲಿ: ಭಾರತ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಟಿ20 ಪಂದ್ಯ ಬುಧವಾರ ನಡೆಯಲಿದ್ದು, ನವದೆಹಲಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಆರಂಭಿಕ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದ್ದರೆ, ಬಾಂಗ್ಲಾದೇಶ ಸುಧಾರಿತ ಪ್ರದರ್ಶನ ತೋರಿ ಸಮಬಲಗೊಳಿಸುವ ಕಾತರದಲ್ಲಿದೆ.ಗ್ವಾಲಿಯರ್‌ ಪಂದ್ಯದಲ್ಲಿ ಎಲ್ಲಾ ವಿಭಾಗದಲ್ಲೂ ಅಭೂತಪೂರ್ವ ಪ್ರದರ್ಶನ ತೋರಿದ್ದ ಟೀಂ ಇಂಡಿಯಾ ಈ ಪಂದ್ಯದಲ್ಲಿ ಆಡುವ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಭಾರತ ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಲು ಹೆಣಗಾಡುತ್ತಿರುವ ಸಂಜು ಸ್ಯಾಮ್ಸನ್‌ ಆರಂಭಿಕ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದರು. ಆದರೆ ಅವರಿಂದ ದೊಡ್ಡ ಇನ್ನಿಂಗ್ಸ್‌ ಅಗತ್ಯವಿದ್ದು, ಮತ್ತೆ ವಿಫಲರಾದರೆ ತಂಡದಿಂದ ಹೊರಬೀಳುವ ಸಾಧ್ಯತೆ ಹೆಚ್ಚು. ಅಭಿಷೇಕ್‌ ಶರ್ಮಾ ಕೂಡಾ ಸಿಕ್ಕ ಅವಕಾಶ ಬಳಸಿಕೊಳ್ಳಬೇಕಿದೆ. ಈಗಾಗಲೇ ಆರಂಭಿಕ ಬ್ಯಾಟರ್‌ಗಳ ಸ್ಥಾನವನ್ನು ಯಶಸ್ವಿ ಜೈಸ್ವಾಲ್‌, ಶುಭ್‌ಮನ್‌ ಗಿಲ್‌ ಬಹುತೇಕ ಗಟ್ಟಿಗೊಳಿಸಿರುವ ಕಾರಣ ಸ್ಯಾಮ್ಸನ್‌, ಅಭಿಷೇಕ್‌ ಮೇಲೆ ಹೆಚ್ಚಿನ ಒತ್ತಡವಿದೆ. ಮೊದಲ ಟಿ20ಯಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ್ದ ಎಕ್ಸ್‌ಪ್ರೆಸ್‌ ವೇಗಿ ಮಯಾಂಕ್‌ ಯಾದವ್‌ ಮತ್ತೊಮ್ಮೆ ಮಿಂಚುವ ಕಾತರದಲ್ಲಿದೆ.ಸಮಬಲದ ಗುರಿ: ಮತ್ತೊಂದೆಡೆ ಟಿ20ಯಲ್ಲಿ ಆಕ್ರಮಣಕಾರಿ ಆಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರೂ ಆರಂಭಿಕ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದ್ದ ಬಾಂಗ್ಲಾ ಈ ಪಂದ್ಯದಲ್ಲಾದರೂ ಸುಧಾರಿತ ಪ್ರದರ್ಶನ ನೀಡಲು ಕಾಯುತ್ತಿದೆ. ಹಿರಿಯ ಆಟಗಾರರಾದ ಲಿಟನ್‌ ದಾಸ್‌, ಮಹ್ಮೂದುಲ್ಲಾ ಹೆಚ್ಚಿನ ಜವಾಬ್ದಾರಿ ಹೊರಬೇಕಿದೆ.

ಒಟ್ಟು ಮುಖಾಮುಖಿ: 15

ಭಾರತ: 14

ಬಾಂಗ್ಲಾ: 01

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಅಭಿಷೇಕ್‌, ಸಂಜು, ಸೂರ್ಯ(ನಾಯಕ), ನಿತೀಶ್‌, ಹಾರ್ದಿಕ್‌, ರಿಯಾನ್‌, ರಿಂಕು, ವಾಷಿಂಗ್ಟನ್‌, ವರುಣ್‌, ಮಯಾಂಕ್‌, ಅರ್ಶ್‌ದೀಪ್‌.

ಬಾಂಗ್ಲಾ: ಪರ್ವೇಜ್‌, ಲಿಟನ್‌, ನಜ್ಮುಲ್‌(ನಾಯಕ), ತೌಹೀದ್‌, ಮಹ್ಮೂದುಲ್ಲಾ, ಜಾಕರ್‌, ಮೀರಾಜ್‌, ರಿಶಾದ್‌, ಮುಸ್ತಾಫಿಜುರ್‌, ತಸ್ಕೀನ್‌, ಶೊರೀಫುಲ್‌.ಪಂದ್ಯ: ಸಂಜೆ 7 ಗಂಟೆಗೆ, ನೇರಪ್ರಸಾರ: ಸ್ಪೋರ್ಟ್ಸ್‌ 18 ಚಾನೆಲ್‌, ಜಿಯೋ ಸಿನಿಮಾ

Share this article