ಈ ಸಲ ಕಪ್‌ ಬಿಟ್ಟು ಕೊಡಲ್ಲ: ಕನ್ನಡಪ್ರಭ ಸಂದರ್ಶನದಲ್ಲಿ ಬೆಂಗಳೂರು ಬುಲ್ಸ್‌ ನಾಯಕ ಪ್ರದೀಪ್‌

KannadaprabhaNewsNetwork | Updated : Oct 08 2024, 03:43 AM IST

ಸಾರಾಂಶ

ಬೆಂಗ್ಳೂರಿನ ಫ್ಯಾನ್ಸ್‌ ನಮ್ಮ ಬಲ, ಅವರನ್ನು ನಿರಾಸೆಗೊಳಿಸಲ್ಲ ಎಂದು ಪ್ರದೀಪ್‌ ಹೇಳಿದ್ದಾರೆ. ಬುಲ್ಸ್‌ಗೆ 2019ರ ಬಳಿಕ ಮತ್ತೊಮ್ಮೆ ಟ್ರೋಫಿ ಗೆಲ್ಲಿಸಿಕೊಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಸಿರ್‌ ಸಜಿಪ

 ಬೆಂಗಳೂರು :  ಕ್ರೀಡೆಯಲ್ಲಿ ‘ಬೆಂಗಳೂರು’ ಎಂಬುದು ಈಗ ಕೇವಲ ತಂಡಗಳ ಹೆಸರಾಗಿ ಉಳಿದಿಲ್ಲ. ಅದೊಂದು ಬ್ರ್ಯಾಂಡ್‌. ಯಾವುದೇ ಕ್ರೀಡೆಯ ಸ್ಟಾರ್‌ ಆಟಗಾರರು ಹೆಚ್ಚಾಗಿ ಬೆಂಗಳೂರು ತಂಡಗಳಲ್ಲೇ ಇದ್ದಾರೆ. ಐಪಿಎಲ್‌ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ವಿರಾಟ್‌ ಕೊಹ್ಲಿ, ಫುಟ್ಬಾಲ್‌ ಲೀಗ್‌ನ ಬೆಂಗಳೂರು ಎಫ್‌ಸಿ ತಂಡದಲ್ಲಿ ಸುನಿಲ್‌ ಚೆಟ್ರಿ ಇರುವಂತೆ ಪ್ರೊ ಕಬಡ್ಡಿಯ ಅತ್ಯಂತ ಯಶಸ್ವಿ ಆಟಗಾರ ಪ್ರದೀಪ್‌ ನರ್ವಾಲ್‌ ಈಗ ಬೆಂಗಳೂರು ಬುಲ್ಸ್‌ ತಂಡಕ್ಕೆ ಸೇರ್ಪಡೆಗೊಂಡು, ನಾಯಕನಾಗಿ ನೇಮಕಗೊಂಡಿದ್ದಾರೆ.

ಅಭಿಮಾನಿಗಳ ಬಾಯಲ್ಲಿ ರೆಕಾರ್ಡ್‌ ಬ್ರೇಕರ್‌ ಎಂದೇ ಕರೆಸಿಕೊಳ್ಳುವ ಪ್ರೊ ಕಬಡ್ಡಿಯ ಹೈ ಪ್ರೊಫೈಲ್‌ ಆಟಗಾರ ಪ್ರದೀಪ್‌ ಜೊತೆ ‘ಕನ್ನಡಪ್ರಭ’ ಸೋಮವಾರ ವಿಶೇಷ ಸಂದರ್ಶನ ನಡೆಸಿದೆ. ಬೆಂಗಳೂರು ತಂಡಕ್ಕೆ ಕಮ್‌ಬ್ಯಾಕ್‌, ನಾಯಕತ್ವದ ಒತ್ತಡ, ಟ್ರೋಫಿ ಬರ, ಬೆಂಗಳೂರಿನ ಫ್ಯಾನ್ಸ್‌ ಬಗ್ಗೆ ಪ್ರದೀಪ್‌ ಪತ್ರಿಕೆ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ.‘ಬೆಂಗಳೂರು ತಂಡಕ್ಕೆ ಖ್ಯಾತ, ಹಿರಿಯ ಆಟಗಾರರು ನಾಯಕತ್ವ ವಹಿಸಿದ್ದಾರೆ. ಈಗ ಅದೇ ಹುದ್ದೆಗೆ ನನ್ನನ್ನು ಆಯ್ಕೆ ಮಾಡಿದ್ದು ದೊಡ್ಡ ಗೌರವ. ಆ ಗೌರವ ಉಳಿಸಿಕೊಳ್ಳುವಂತೆ ಆಡುವ ವಿಶ್ವಾಸವಿದೆ. 

ಅಭಿಮಾನಿಗಳನ್ನು ಎಂದಿಗೂ ನಿರಾಸೆಗೊಳಿಸುವುದಿಲ್ಲ’ ಎಂದು ಪ್ರದೀಪ್‌ ಭರವಸೆ ನೀಡಿದ್ದಾರೆ. ಪ್ರದೀಪ್‌ ತಮ್ಮ ಪ್ರೊ ಕಬಡ್ಡಿ ಪಯಣ ಆರಂಭಿಸಿದ್ದು ಬೆಂಗಳೂರು ಬುಲ್ಸ್‌ನಲ್ಲೇ. 2015ರಲ್ಲಿ ತಂಡ ಸೇರ್ಪಡೆಗೊಂಡಿದ್ದ ಪ್ರದೀಪ್‌, ಬಳಿಕ 5 ಆವೃತ್ತಿಗಳಲ್ಲಿ ಪಾಟ್ನಾ ಪೈರೇಟ್ಸ್‌, ಕಳೆದ 3 ಆವೃತ್ತಿಗಳಲ್ಲಿ ಯುಪಿ ಯೋಧಾಸ್‌ ಪರ ಆಡಿದ್ದಾರೆ. ಇತ್ತೀಚೆಗೆ ನಡೆದ ಹರಾಜಿನಲ್ಲಿ ಮತ್ತೆ ಬೆಂಗಳೂರು ತಂಡ ಸೇರ್ಪಡೆಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಹರ್ಯಾಣದ 27 ವರ್ಷದ ಪ್ರದೀಪ್‌, ‘ಬುಲ್ಸ್‌ಗೆ ಮರಳಿ ಬಂದಿರುವುದಕ್ಕೆ ಖುಷಿಯಿದೆ. ಅಭಿಮಾನಿಗಳು ಈಗಲೂ ಸಂದೇಶ ಕಳುಹಿಸುತ್ತಿದ್ದಾರೆ. ಈ ರೀತಿಯ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ’ ಎಂದಿದ್ದಾರೆ.

ಕುಗ್ಗಿಲ್ಲ, ಆಟ ಇನ್ನೂ ಇದೆ: ಪ್ರದೀಪ್‌ ಈ ವರೆಗೂ ಪ್ರೊ ಕಬಡ್ಡಿಯಲ್ಲಿ ಗಳಿಸಿದ ರೈಡ್‌ ಅಂಕ 1690. ಇದು ಪ್ರೊ ಕಬಡ್ಡಿ ಇತಿಹಾಸದಲ್ಲೇ ಗರಿಷ್ಠ. ಆದರೆ ಕಳೆದ ಬಾರಿ ಪ್ರದೀಪ್‌ ಸಾಧಾರಣ ಪ್ರದರ್ಶನ ನೀಡಿ, ಕೇವಲ 122 ಅಂಕ ಗಳಿಸಿದ್ದರು. ‘ಆಟದಲ್ಲಿ ಏರಿಳಿತ ಇದ್ದಿದ್ದೇ. ಕಳೆದ 3 ವರ್ಷ ನಿರೀಕ್ಷಿತ ಆಟವಾಡಿಲ್ಲ. ಆದರೆ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತೇನೆ. ನನ್ನಲ್ಲಿನ್ನೂ ಆಟ ಬಾಕಿಯಿದೆ’ ಎಂದು ಪ್ರದೀಪ್‌ ತಿಳಿಸಿದ್ದಾರೆ.

ತಂಡದ ಸಮತೋಲನದ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಪ್ರದೀಪ್‌, ‘ಸೌರಭ್‌, ನಿತಿನ್‌, ಪ್ರತೀಕ್‌, ಪಂಕಜ್‌ ಸೇರಿ ಪ್ರಮುಖ ಆಟಗಾರರು ನಮ್ಮಲಿದ್ದಾರೆ. 7-8 ರೈಡರ್‌ಗಳಿದ್ದಾರೆ. ಈ ಬಾರಿ ಶೇ.100ರಷ್ಟು ಪ್ರದರ್ಶನ ನೀಡುತ್ತೇವೆ’ ಎಂದಿದ್ದಾರೆ.ಈ ಬಾರಿ ಯಾವುದೇ ಪಂದ್ಯ ಬೆಂಗಳೂರಿನಲ್ಲಿಲ್ಲ. ಆದರೆ ಅಭಿಮಾನಿಗಳು ನಮ್ಮ ಜೊತೆಗಿದ್ದಾರೆ. ನಾವೆಲ್ಲೇ ಆಡಿದರೂ ಅವರ ಬೆಂಬಲ ಸಿಗುತ್ತದೆ. ಅವರನ್ನು ನಿರಾಸೆಗೊಳಿಸುವುದಿಲ್ಲ. ಟ್ರೋಫಿಯನ್ನು ನಾವೇ ಕೊಂಡುಹೋಗುತ್ತೇವೆ ಎಂಬುದು ಪ್ರದೀಪ್‌ ಅಭಿಮಾನಿಗಳಿಗೆ ನೀಡಿರುವ ಸಂದೇಶ.11ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ ಅ.18ರಿಂದ ಆರಂಭಗೊಳ್ಳಲಿದ್ದು, ಹೈದರಾಬಾದ್‌, ಗ್ರೇಟರ್‌ ನೋಯ್ಡಾ, ಪುಣೆ ಆತಿಥ್ಯ ವಹಿಸಲಿದೆ. ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ತಂಡ ತೆಲುಗು ಟೈಟಾನ್ಸ್‌ ವಿರುದ್ಧ ಸೆಣಸಾಡಲಿದೆ.

ಪ್ರದೀಪ್‌, ಬುಲ್ಸ್‌ಗೆ ಟ್ರೋಫಿ ಬರ: 2016, 2017ರಲ್ಲಿ ಪಾಟ್ನಾ ಪೈರೇಟ್ಸ್‌ ತಂಡ ಪ್ರದೀಪ್‌ ನಾಯಕತ್ವದಲ್ಲೇ ಸತತ 2 ಟ್ರೋಫಿ ಗೆದ್ದಿತ್ತು. ಆ ಬಳಿಕ ಪ್ರದೀಪ್‌ ಟ್ರೋಫಿ ಗೆದ್ದಿಲ್ಲ. ಮತ್ತೊಂದೆಡೆ ಬುಲ್ಸ್ ತಂಡ ಕೊನೆಯದಾಗಿ ಟ್ರೋಫಿ ಗೆದ್ದಿದ್ದು 2018-19ರ ಆವೃತ್ತಿಯಲ್ಲಿ. ಅಂದರೆ ಪ್ರದೀಪ್‌ ಜೊತೆ ಬುಲ್ಸ್‌ ತಂಡವೂ ಟ್ರೋಫಿ ಬರ ಎದುರಿಸುತ್ತಿದೆ. ಈ ಸಲ ಟ್ರೋಫಿ ಸಿಗಲಿದೆಯೇ ಎಂಬುದು ಅಭಿಮಾನಿಗಳಲ್ಲಿರುವ ಕುತೂಹಲ.

Share this article