ಐಸಿಸಿ ಚಾಂಪಿಯನ್ಸ್‌ ಟ್ರೋಫಿ : ಮತ್ತೆ ಮಂಡಿಯೂರಿದ ಪಾಕ್‌ - ಸತತ 2 ಗೆಲುವಿನೊಂದಿಗೆ ಸೆಮಿಫೈನಲ್‌ನತ್ತ ಭಾರತ

ಸಾರಾಂಶ

ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಸತತ 2 ಗೆಲುವಿನೊಂದಿಗೆ ಸೆಮಿಫೈನಲ್‌ನತ್ತ ಭಾರತ । ಪಾಕ್‌ ವಿರುದ್ಧ 6 ವಿಕೆಟ್‌ ಭರ್ಜರಿ ಗೆಲುವುಪಾಕ್‌ 241 ಆಲೌಟ್‌ । ಭಾರತಕ್ಕೆ 42.3 ಓವರಲ್ಲೇ ಜಯ । ವಿರಾಟ್‌ ಏಕದಿನದಲ್ಲಿ 51ನೇ ಸೆಂಚುರಿ, ಔಟಾಗದೆ100 । ಶ್ರೇಯಸ್‌ 56

 ದುಬೈ: ಕ್ರಿಕೆಟ್‌ ಜಗತ್ತಿನ ಕುತೂಹಲ ಕೆರಳಿಸಿದ್ದ, ಬದ್ಧವೈರಿ ಪಾಕಿಸ್ತಾನ ವಿರುದ್ಧದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯದಲ್ಲಿ ಭಾರತ ಗೆದ್ದಿದೆ. ದುಬೈನಲ್ಲಿ ನಡೆದ ಹೈವೋಲ್ಟೇಜ್ ಕದನದಲ್ಲಿ ಭಾರತ ಪರಾಕ್ರಮ ಮೆರೆದರೆ, ಪಾಕ್‌ ಅಕ್ಷರಶಃ ಬರ್ನ್‌ ಆಗಿದೆ. ಪಂದ್ಯದಲ್ಲಿ 6 ವಿಕೆಟ್‌ ಗೆಲುವು ಸಾಧಿಸಿದ ಟೀಂ ಇಂಡಿಯಾ ಸೆಮಿಫೈನಲ್‌ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿತು. ಆದರೆ ಆತಿಥ್ಯ ರಾಷ್ಟ್ರ ಪಾಕ್‌ ಸೆಮಿಫೈನಲ್‌ ರೇಸ್‌ನಿಂದಲೇ ಹೊರಬೀಳುವ ಮೂಲಕ ತೀವ್ರ ಮುಖಭಂಗಕ್ಕೆ ಒಳಗಾಗಿದೆ.

ಭಾರತ 2 ಪಂದ್ಯಗಳಲ್ಲಿ ಗೆದ್ದು, ‘ಎ’ ಗುಂಪಿನಲ್ಲಿ ಅಗ್ರಸ್ಥಾನದಲ್ಲೇ ಇದೆ. ತಂಡ ನ್ಯೂಜಿಲೆಂಡ್‌ ವಿರುದ್ಧ ಸೋತರೂ ಸೆಮಿಫೈನಲ್‌ಗೇರುವ ಸಾಧ್ಯತೆ ಹೆಚ್ಚು. ಅತ್ತ ಪಾಕ್ ಸತತ 2ನೇ ಸೋಲು ಕಂಡಿತು. ಇನ್ನು ಬಾಂಗ್ಲಾ ವಿರುದ್ಧ ಗೆದ್ದರೂ ತಂಡ ಸೆಮಿಫೈನಲ್‌ಗೇರಲು ಸಾಧ್ಯವಿಲ್ಲ.

ಸುಲಭ ಗೆಲುವು: ಭಾರತಕ್ಕೆ ಟಾಸ್‌ ಸೋತಿದ್ದರಿಂದ ದೊಡ್ಡ ನಷ್ಟವೇನೂ ಆಗಲಿಲ್ಲ. ಅದು ನಾಯಕ ರೋಹಿತ್‌ರ ಮಾತುಗಳಿಂದಲೇ ಸ್ಪಷ್ಟವಾಗಿತ್ತು. ಭಾರತೀಯ ಬೌಲರ್ಸ್‌ನ ಮಾರಕ ದಾಳಿಗೆ ತತ್ತರಿಸಿದ ಪಾಕ್‌ 49.4 ಓವರ್‌ಗಳಲ್ಲಿ 241 ರನ್‌ಗೆ ಗಂಟುಮೂಟೆ ಕಟ್ಟಿತು. ಪಿಚ್‌ ನಿಧಾನಗತಿ ವರ್ತಿಸಲಿದೆ ಎಂಬ ಕಾರಣಕ್ಕೆ ಭಾರತದ ಚೇಸಿಂಗ್ ಕಷ್ಟ ಎಂದು ವಿಶ್ಲೇಷಿಸಲಾಗುತ್ತಿತ್ತು. ಆದರೆ ಹಾಗಾಗಲಿಲ್ಲ. ತಂಡ 42.3 ಓವರ್‌ಗಳಲ್ಲೇ ಗೆದ್ದು, ಪಾಕ್‌ನ ಹೊರದಬ್ಬಿತು.

ರೋಹಿತ್‌ 15 ಎಸೆತಗಳಲ್ಲಿ 20 ರನ್‌ಗೆ ಔಟಾದ ಬಳಿಕ ಗಿಲ್‌-ಕೊಹ್ಲಿ ತಮ್ಮ ಮನಮೋಹಕ ಆಟದ ಮೂಲಕ ಪಾಕ್‌ನ ಬೆವರಿಳಿಸಿತು. ಈ ಜೋಡಿ 69 ರನ್‌ ಜೊತೆಯಾಟವಾಡಿತು. ಅತ್ಯಾಕರ್ಷಕ ಹೊಡೆತಗಳ ಮೂಲಕ ಮಿಂಚಿದ ಗಿಲ್ 52 ಎಸೆತಗಳಲ್ಲಿ 46 ರನ್‌ಗೆ ಔಟಾದರು. ಆಗ ತಂಡದ ಸ್ಕೋರ್ 17.3 ಓವರಲ್ಲಿ 2 ವಿಕೆಟ್‌ಗೆ 100.

ಬಳಿಕ ನಡೆದಿದ್ದು ಕೊಹ್ಲಿ-ಶ್ರೇಯಸ್‌ ಅಯ್ಯರ್‌ ಮ್ಯಾಜಿಕ್‌. ಇಬ್ಬರೂ ಪಾಕ್‌ನ ಬೆಂಡೆತ್ತಿದರು. ಇವರಿಂದ 128 ಎಸೆತಗಳಲ್ಲಿ 114 ರನ್‌ ಜೊತೆಯಾಟ ಮೂಡಿಬಂತು. ಶ್ರೇಯಸ್‌ 67 ಎಸೆತಗಳಲ್ಲಿ 56 ರನ್‌ ಔಟಾದರೆ, ವಿರಾಟ್‌ ಕೊಹ್ಲಿ ಏಕದಿನದಲ್ಲಿ 51ನೇ ಶತಕ ಪೂರ್ಣಗೊಳಿಸಿದರು. ಅವರು 111 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 100 ರನ್‌ ಸಿಡಿಸಿದರು.

ಸೌದ್‌-ರಿಜ್ವಾನ್‌ ಮಿಂಚು: ಇದಕ್ಕೂ ಮುನ್ನ, ಭಾರತೀಯರ ಬೆಂಕಿ ದಾಳಿ ಎಷ್ಟರ ಮಟ್ಟಿಗೆ ಇತ್ತೆಂದರೆ ಪಾಕ್‌ನ ಬ್ಯಾಟರ್‌ಗಳು ರನ್‌ ಗಳಿಸುವುದಕ್ಕಿಂತ ವಿಕೆಟ್‌ ಉಳಿಸಿಕೊಳ್ಳುವುದಕ್ಕೇ ಹೆಚ್ಚು ಒತ್ತು ಕೊಟ್ಟರು. 3ನೇ ವಿಕೆಟ್‌ಗೆ ನಾಯಕ ರಿಜ್ವಾನ್‌ ಹಾಗೂ ಸೌದ್‌ ಶಕೀಲ್‌ 144 ಎಸೆತಗಳಲ್ಲಿ 104 ರನ್‌ ಸೇರಿಸಿದರು. ಆದರೆ 46 ರನ್‌ ಗಳಿಸಿದ ರಿಜ್ವಾನ್‌ 34ನೇ ಓವರಲ್ಲಿ ಔಟಾದ ಬಳಿಕ ತಂಡ ಕುಸಿಯಿತು. ಶಕೀಲ್‌ 62 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಕೊನೆಯಲ್ಲಿ ಕುಶ್ದಿಲ್‌ ಶಾ 38 ರನ್‌ ಗಳಿಸಿದ್ದರಿಂದ ತಂಡದ ಮೊತ್ತ 240 ದಾಟಿತು. ಕುಲ್ದೀಪ್‌ ಯಾದವ್‌ 3, ಹಾರ್ದಿಕ್‌ 2, ಹರ್ಷಿತ್‌, ಅಕ್ಷರ್‌, ಜಡೇಜಾ ತಲಾ 1 ವಿಕೆಟ್‌ ಕಿತ್ತರು.

ಸ್ಕೋರ್‌: ಪಾಕಿಸ್ತಾನ 49.4 ಓವರ್‌ಗಳಲ್ಲಿ 241/10 (ಶಕೀಲ್‌ 62, ರಿಜ್ವಾನ್‌ 46, ಕುಶ್ದಿಲ್‌ 38, ಕುಲ್ದೀಪ್‌ 3-40, ಹಾರ್ದಿಕ್‌ 2-31), ಭಾರತ 38.1 ಓವರಲ್ಲಿ 209/2 (ಕೊಹ್ಲಿ ಔಟಾಗದೆ 100, ಶ್ರೇಯಸ್‌ 56, ಗಿಲ್‌ 46, ಶಾಹೀನ್‌ 2-74)

ಭಾರತಕ್ಕೆ ಭಾನುವಾರ ಕಿವೀಸ್‌ ವಿರುದ್ಧ ಪಂದ್ಯ

ಭಾರತ ತಂಡ ಗುಂಪು ಹಂತದ ಮುಂದಿನ ಪಂದ್ಯದಲ್ಲಿ ಭಾನುವಾರ ನ್ಯೂಜಿಲೆಂಡ್‌ ವಿರುದ್ಧ ಆಡಲಿದೆ. ಬಾಂಗ್ಲಾದೇಶ ವಿರುದ್ಧ ಸೋಮವಾರ ನ್ಯೂಜಿಲೆಂಡ್‌ ಗೆದ್ದರೆ, ಆಗ ಭಾರತ-ನ್ಯೂಜಿಲೆಂಡ್‌ ಪಂದ್ಯ ಔಪಚಾರಿಕ ಎನಿಸಲಿದೆ. ಉಭಯ ತಂಡಗಳೂ ಸೆಮಿಫೈನಲ್‌ಗೇರಲಿರುವುದರಿಂದ ಗುಂಪಿನಲ್ಲಿ ಅಗ್ರಸ್ಥಾನಕ್ಕಾಗಿ ಸೆಣಸಾಡಬೇಕಿದೆ.

ಹೈವೋಲ್ಟೇಜ್‌ ಪಂದ್ಯದ ಹೈಲೈಟ್ಸ್‌

- ಪಂದ್ಯದ ಮೊದಲ ಓವರ್‌ನಲ್ಲೇ 5 ವೈಡ್ ಎಸೆದ ಶಮಿ.

- ಪವರ್‌ಪ್ಲೇ ಬಳಿಕ ಪಾಕ್‌ ನಿಧಾನ ಆಟ. ರಿಜ್ವಾನ್‌-ಶಕೀಲ್‌ ಆಸರೆ.

- 34ನೇ ಓವರಲ್ಲಿ ರಿಜ್ವಾನ್‌ ಔಟಾದ ಬಳಿಕ ತಂಡ ದಿಢೀರ್‌ ಕುಸಿತ.

- ಒತ್ತಡದಲ್ಲೇ ಆಡಿದ ಪಾಕ್‌. 14 ರನ್‌ ಅಂತರದಲ್ಲಿ 3 ವಿಕೆಟ್‌.

- ಕುಶ್ದಿಲ್‌ ಮಿಂಚಿನ ಆಟ. 240 ದಾಟಿದ ಪಾಕ್‌ನ ಸ್ಕೋರ್‌.

- ರೋಹಿತ್‌-ಗಿಲ್‌ ಅಬ್ಬರದ ಆಟ. ಭಾರತಕ್ಕೆ ಉತ್ತಮ ಆರಂಭ.

- ರೋಹಿತ್‌ ನಿರ್ಗಮನ ಬಳಿಕ ಗಿಲ್‌-ವಿರಾಟ್‌ ಮನಮೋಹಕ ಆಟ.

- ಅರ್ಧಶತಕದ ಅಂಚಿನಲ್ಲಿ ಎಡವಿದ ಗಿಲ್. 46ಕ್ಕೆ ಔಟ್‌

- ಬಳಿಕ ಪಾಕ್‌ ಬೌಲರ್ಸ್‌ ಬೆಂಡೆತ್ತಿದ ಶ್ರೇಯಸ್‌. 56 ರನ್‌ ಸಿಡಿಸಿ ನಿರ್ಗಮನ.

- ಅತ್ಯಾಕರ್ಷಕ ಶತಕ ಸಿಡಿಸಿ ತಂಡವನ್ನು ಗೆಲ್ಲಿಸಿದ ವಿರಾಟ್‌ ಕೊಹ್ಲಿ.

07 ಗೆಲುವು

ಭಾರತ ತಂಡ ದುಬೈ ಅಂ.ರಾ. ಕ್ರೀಡಾಂಗಣದಲ್ಲಿ ಆಡಿರುವ 8 ಪಂದ್ಯಗಳಲ್ಲಿ 7ನೇ ಗೆಲುವು ದಾಖಲಿಸಿದೆ.

03 ಜಯ

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 3ನೇ ಜಯಗಳಿಸಿತು. 3ರಲ್ಲಿ ಸೋತಿದೆ.

Share this article