ನಾರ್ತ್ ಸೌಂಡ್(ಆ್ಯಂಟಿಗಾ): ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿ ಎದುರಾಳಿ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸುವಲ್ಲಿ ಯಶಸ್ವಿಯಾದ ಮಾಜಿ ಚಾಂಪಿಯನ್ ಭಾರತ ತಂಡ, ಸೂಪರ್-8 ಹಂತದಲ್ಲಿ ಸತತ 2ನೇ ಗೆಲುವು ದಾಖಲಿಸಿದೆ.
ಶನಿವಾರ ಮಿಂಚಿನ ಬ್ಯಾಟಿಂಗ್ ಪ್ರದರ್ಶನ, ಮಾರಕ ಬೌಲಿಂಗ್ ದಾಳಿ ಮೂಲಕ ಬಾಂಗ್ಲಾದೇಶ ವಿರುದ್ಧ 50 ರನ್ ಭರ್ಜರಿ ಗೆಲುವು ತನ್ನದಾಗಿಸಿಕೊಂಡ ಟೀಂ ಇಂಡಿಯಾ, ಸೆಮಿಫೈನಲ್‌ಗೆ ಇನ್ನಷ್ಟು ಹತ್ತಿರವಾಗಿದೆ. ಸತತ 2ನೇ ಸೋಲು ಕಂಡ ಬಾಂಗ್ಲಾದೇಶ ಸೆಮೀಸ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ.ಟಾಸ್ ಸೋತರೂ ತಾನು ಬಯಸಿದಂತೆ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ, 5 ವಿಕೆಟ್ ಕಳೆದುಕೊಂಡು 196 ರನ್ ಕಲೆಹಾಕಿತು.
ಬೃಹತ್ ಮೊತ್ತದ ಮುಂದೆ ಬಾಂಗ್ಲಾ ಬ್ಯಾಟರ್‌ಗಳಿಗೆ ಹೆಚ್ಚಿನ ಪ್ರತಿರೋಧ ತೋರಲು ಸಾಧ್ಯವಾಗಲಿಲ್ಲ. ಪವರ್-ಪ್ಲೇನಲ್ಲಿ 42, ಮೊದಲ 10 ಓವರ್‌ನಲ್ಲಿ 67 ರನ್ ಗಳಿಸಿದ್ದ ತಂಡ ಬಳಿಕ ಒತ್ತಡಕ್ಕೊಳಗಾಯಿತು. ನಾಯಕ ನಜ್ಮುಲ್ ಹೊಸೈನ್(40) ಅಲ್ಪ ಹೋರಾಡಿದರೂ, ಇತರರಿಂದ ಸೂಕ್ತ ಬೆಂಬಲ ಸಿಗದ ಕಾರಣ ತಂಡ ಸೋಲಿನ ಸುಳಿಗೆ ಸಿಲುಕಿತು. ಕೊನೆಯಲ್ಲಿ ರಿಶಾದ್ ಹೊಸೈನ್(24) ಅಬ್ಬರಿಸಿದ್ದರಿಂದ ತಂಡದ ಸೋಲಿನ ಅಂತರ ತಗ್ಗಿತು.
ತನ್ನ ಸ್ಪಿನ್ ಮೋಡಿ ಮೂಲಕ ಬಾಂಗ್ಲಾವನ್ನು ಕಾಡಿದ ಕುಲ್ದೀಪ್, 19 ರನ್‌ಗೆ 3 ವಿಕೆಟ್ ಕಿತ್ತರು.ಸ್ಫೋಟಕ ಆಟ: ಟೂರ್ನಿಯ ಬಹುತೇಕ ಪಂದ್ಯಗಳಲ್ಲಿ ರನ್ ಗಳಿಸಲು ತಿಣುಕಾಡಿದ್ದ ಭಾರತ ಈ ಪಂದ್ಯದಲ್ಲಿ ದೊಡ್ಡ ಮೊತ್ತದ ಸ್ಪಷ್ಟ ಗುರಿಯೊಂದಿಗೆ ಕಣಕ್ಕಿಳಿಯಿತು. ರೋಹಿತ್-ಕೊಹ್ಲಿ ಮೊದಲ ವಿಕೆಟ್‌ಗೆ 39 ರನ್ ಜೊತೆಯಾಟವಾಡಿದರು. ಇದು ಟೂರ್ನಿಯಲ್ಲಿ ಈ ಜೋಡಿಯ ಗರಿಷ್ಠ ರನ್ ಜೊತೆಯಾಟ.
ಪವರ್‌ಪ್ಲೇನಲ್ಲಿ 53 ರನ್ ಗಳಿಸಿದ್ದ ತಂಡ ಆ ಬಳಿಕವೂ ಅಬ್ಬರದ ಆಟವಾಡಿತು. ರೋಹಿತ್ 23, ಕೊಹ್ಲಿ 37 ರನ್ ಗಳಿಸಿ ಔಟಾದರೂ, ರಿಷಭ್ ಪಂತ್(36), ಶಿಬಂ ದುಬೆ(34) ತಂಡದ ರನ್ ಗತಿ ಏರಿಸಿದರು. ಕೊನೆಯಲ್ಲಿ ಬಾಂಗ್ಲಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಹಾರ್ದಿಕ್ ಪಾಂಡ್ಯ 27 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ನೊಂದಿಗೆ 50 ರನ್ ಸಿಡಿಸಿ ತಂಡವನ್ನು 200ರ ಸನಿಹಕ್ಕೆ ತಲುಪಿಸಿದರು.
01ನೇ ಬ್ಯಾಟರ್: ಟಿ20 ವಿಶ್ವಕಪ್‌ನಲ್ಲಿ 6ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಅರ್ಧಶತಕ ಬಾರಿಸಿದ ಭಾರತದ ಮೊದಲ ಬ್ಯಾಟರ್ ಹಾರ್ದಿಕ್ ಪಾಂಡ್ಯ.
01ನೇ ಆಟಗಾರ: ಟಿ20 ವಿಶ್ವಕಪ್‌ನಲ್ಲಿ 300+ ರನ್, 20+ ವಿಕೆಟ್ ಕಿತ್ತ ಭಾರತದ ಮೊದಲ ಆಟಗಾರ ಹಾರ್ದಿಕ್ ಪಾಂಡ್ಯ.
02ನೇ ಆಟಗಾರ: ಟಿ20 ವಿಶ್ವಕಪ್ ಪಂದ್ಯದಲ್ಲಿ 50+ ರನ್ ಹಾಗೂ 1 ವಿಕೆಟ್ ಕಿತ್ತ ಭಾರತದ 2ನೇ ಆಟಗಾರ ಹಾರ್ದಿಕ್. ವಿರಾಟ್ ಕೊಹ್ಲಿ ಕೂಡಾ ಈ ಸಾಧನೆ ಮಾಡಿದ್ದಾರೆ.