ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿ ಕ್ಲೀನ್‌ಸ್ವೀಪ್‌ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ

KannadaprabhaNewsNetwork | Updated : Jan 17 2024, 03:48 PM IST

ಸಾರಾಂಶ

ಅಫ್ಘಾನಿಸ್ತಾನ ವಿರುದ್ಧ ಮೊದಲೆರಡು ಪಂದ್ಯ ಗೆದ್ದಿರುವ ಭಾರತಕ್ಕೆ ಇದು ವಿಶ್ವಕಪ್‌ಗೂ ಮುನ್ನ ಕೊನೆಯ ಟಿ20. ಹೀಗಾಗಿ ಕ್ಲೀನ್‌ಸ್ವೀಪ್‌ ಜೊತೆಗೆ ಅತ್ಯುತ್ತಮ ಪ್ರದರ್ಶನದೊಂದಿಗೆ ಆಯ್ಕೆ ಸಮಿತಿ ಗಮನ ಸೆಳೆಯುವ ಕಾತರ ಆಟಗಾರರಲ್ಲಿದೆ. 

ಕನ್ನಡಪ್ರಭ ವಾರ್ತೆ ಬೆಂಗಳೂರು

ಭರ್ಜರಿ 2 ಗೆಲುವುಗಳ ಮೂಲಕ ಈಗಾಗಲೇ ಅಫ್ಘಾನಿಸ್ತಾನ ವಿರುದ್ಧದ ಸರಣಿಯನ್ನು ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ ಸದ್ಯ ಪ್ರವಾಸಿ ತಂಡದ ವಿರುದ್ಧ ಕ್ಲೀನ್‌ಸ್ವೀಪ್‌ಗಾಗಿ ತವಕಿಸುತ್ತಿದೆ. ಬುಧವಾರ ಭಾರತ 3 ಪಂದ್ಯಗಳ ಸರಣಿಯ ಕೊನೆ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೆಲುವನ್ನು 3-0ಗೆ ಏರಿರುವ ನಿರೀಕ್ಷೆಯಲ್ಲಿದೆ. 

ಜೊತೆಗೆ ವಿಶ್ವಕಪ್‌ಗೂ ಮುನ್ನ ತಮಗೆ ಉಳಿದಿರುವ ಏಕೈಕ ಅಂತಾರಾಷ್ಟ್ರೀಯ ಟಿ20 ಪಂದ್ಯ ಇದಾಗಿರುವುದರಿಂದ ಭಾರತೀಯ ಆಟಗಾರರು ಅತ್ಯುತ್ತಮ ಪ್ರದರ್ಶನದೊಂದಿಗೆ ಆಯ್ಕೆ ಸಮಿತಿಯ ಗಮನ ಸೆಳೆಯುವ ವಿಶ್ವಾಸದಲ್ಲಿದ್ದಾರೆ.

ಭಾರತ ಮೊದಲೆರಡೂ ಪಂದ್ಯಗಳಲ್ಲಿ ತಕ್ಕಮಟ್ಟಿನ ಪ್ರದರ್ಶನ ನೀಡಿದ್ದು, ತಲಾ 6 ವಿಕೆಟ್‌ ಜಯಗಳಿಸಿದೆ. ಆದರೆ 14 ತಿಂಗಳ ಬಳಿಕ ಟಿ20ಗೆ ಮರಳಿ, ಹೆಚ್ಚಿನ ನಿರೀಕ್ಷೆ ಹುಟ್ಟು ಹಾಕಿದ್ದ ನಾಯಕ ರೋಹಿತ್‌ ಶರ್ಮಾ ಎರಡೂ ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು. 

ಈ ಪಂದ್ಯದಲ್ಲಾದರೂ ಅವರ ಬ್ಯಾಟ್‌ನಿಂದ ರನ್‌ ಹರಿಯಬಹುದೇ ಎಂಬ ಕುತೂಹಲ ಅಭಿಮಾನಿಗಳದ್ದು. ಮತ್ತೊಂದೆಡೆ ಕೊಹ್ಲಿ ಕಳೆದ ಪಂದ್ಯದಲ್ಲಿ ಸ್ಟ್ರೈಕ್‌ರೇಟ್‌ ಹೆಚ್ಚಿಸುವತ್ತ ಗಮನ ಹರಿಸಿದ್ದು, ಈ ಪಂದ್ಯದಲ್ಲೂ ದೊಡ್ಡ ಇನ್ನಿಂಗ್ಸ್‌ ನಿರೀಕ್ಷೆಯಿದೆ. ಯಶಸ್ವಿ ಜೈಸ್ವಾಲ್‌, ಶಿವಂ ದುಬೆ, ರಿಂಕು ಸಿಂಗ್‌ ತಮ್ಮ ಅಭೂತಪೂರ್ವ ಲಯ ಮುಂದುವರಿಸಲು ಎದುರು ನೋಡುತ್ತಿದ್ದಾರೆ.

ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ನೆರವಾಗುವ ಕಾರಣಕ್ಕೆ ಅಕ್ಷರ್‌ ಪಟೇಲ್‌, ವಾಷಿಂಗ್ಟನ್‌ ಸುಂದರ್‌ರನ್ನು ಸರಣಿಯಲ್ಲಿ ಆಡಿಸುತ್ತಿರುವ ಆಯ್ಕೆ ಸಮಿತಿ, ಅವರಿಂದ ಮತ್ತಷ್ಟು ಕೊಡುಗೆ ನಿರೀಕ್ಷಿಸುತ್ತಿದೆ. ಈಗಾಗಲೇ ಸರಣಿ ಗೆದ್ದಿರುವ ಹಿನ್ನೆಲೆಯಲ್ಲಿ ತಂಡದಲ್ಲಿ ಕೆಲ ಬದಲಾವಣೆ ಸಾಧ್ಯತೆಯೂ ಇದೆ. 

ಪುಟಿದೇಳುತ್ತಾ ಆಫ್ಘನ್‌: ಆಫ್ಘನ್‌ ಸ್ಫೋಟಕ ಬ್ಯಾಟಿಂಗ್‌ ಹೆಸರುವಾಸಿಯಾದರೂ ಈ ಬಾರಿ ಸಪ್ಪೆಯಾದಂತಿದೆ. ಬ್ಯಾಟರ್‌ಗಳು ಅಬ್ಬರಿಸದ ಕಾರಣ ಬೌಲರ್‌ಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಹೀಗಾಗಿ ಈ ಪಂದ್ಯದಲ್ಲಾದರೂ ಪುಟಿದೆದ್ದು ಬೆಂಗಳೂರಿನ ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ಅಬ್ಬರಿಸಿ ದೊಡ್ಡ ಮೊತ್ತ ಹಾಕುವ ಹೊಣೆ ಬ್ಯಾಟರ್‌ಗಳ ಮೇಲಿದೆ.

ಒಟ್ಟು ಮುಖಾಮುಖಿ: 07 ಭಾರತ: 06 ಅಫ್ಘಾನಿಸ್ತಾನ: 00 ಫಲಿತಾಂಶವಿಲ್ಲ: 01

ಸಂಭವನೀಯ ಆಟಗಾರರ ಪಟ್ಟಿ : ಭಾರತ: ರೋಹಿತ್‌(ನಾಯಕ), ಯಶಸ್ವಿ, ಕೊಹ್ಲಿ, ದುಬೆ, ಜಿತೇಶ್‌, ರಿಂಕು, ಅಕ್ಷರ್‌, ವಾಷಿಂಗ್ಟನ್‌, ಅರ್ಶ್‌ದೀಪ್‌, ಆವೇಶ್‌/ಬಿಷ್ಣೋಯ್‌/ಕುಲ್ದೀಪ್‌, ಮುಕೇಶ್‌.
ಆಫ್ಘನ್‌: ರಹ್ಮಾನುಲ್ಲಾ, ಇಬ್ರಾಹಿಂ ಜದ್ರಾನ್‌(ನಾಯಕ), ಗುಲ್ಬದಿನ್‌, ಅಜ್ಮತುಲ್ಲಾ, ನಬಿ, ನಜೀಬುಲ್ಲಾ, ಕರೀಂ, ಮುಜೀಬ್‌, ನೂರ್‌/ಕೈಸ್‌, ನವೀನ್‌, ಫಾರೂಕಿ ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಪೋರ್ಟ್ಸ್‌ 18, ಜಿಯೋ ಸಿನಿಮಾ

ತವರಿನಲ್ಲಿ 6ನೇ ಟಿ20 ಸರಣಿ ಕ್ಲೀನ್‌ಸ್ವೀಪ್‌ ಗುರಿ: ಭಾರತ ಈವರೆಗೆ ತವರಿನಲ್ಲಿ 5 ಟಿ20 ಸರಣಿಗಳನ್ನು ಕ್ಲೀನ್‌ಸ್ವೀಪ್‌ ಮಾಡಿಕೊಂಡಿದೆ. ಈ ಬಾರಿ ಅದರನ್ನು 6ಕ್ಕೆ ಹೆಚ್ಚಿಸುವ ಗುರಿ ಭಾರತದ್ದು. 2017ರಲ್ಲಿ ಶ್ರೀಲಂಕಾ, 2018ರಲ್ಲಿ ವೆಸ್ಟ್‌ಇಂಡೀಸ್‌, 2021ರಲ್ಲಿ ನ್ಯೂಜಿಲೆಂಡ್‌, 2022ರಲ್ಲಿ ವೆಸ್ಟ್‌ಇಂಡೀಸ್, ಶ್ರೀಲಂಕಾ ವಿರುದ್ಧದ ಸರಣಿಗಳನ್ನು ಭಾರತ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮಾಡಿಕೊಂಡಿವೆ.

Share this article