ಮೂರೇ ದಿನಕ್ಕೆ ಗಂಟುಮೂಟೆ ಕಟ್ಟಿದ ಭಾರತ!

KannadaprabhaNewsNetwork | Published : Dec 29, 2023 1:30 AM

ಸಾರಾಂಶ

ಭಾರತ 3 ದಶಕದಿಂದಲೂ ದ.ಆಫ್ರಿಕಾದಲ್ಲಿ ಟೆಸ್ಟ್‌ ಸರಣಿ ಗೆದ್ದಿಲ್ಲ. ಅದನ್ನು ಈ ಬಾರಿಯಾದರೂ ಸಾಧಿಸುವ ನಿರೀಕ್ಷೆ ಇದ್ದರೂ, ಗುರುವಾರ ಮೊದಲ ಪಂದ್ಯದ ಸೋಲಿನೊಂದಿಗೆ ಆ ಕನಸು ಭಗ್ನಗೊಂಡಿದೆ. 2 ಪಂದ್ಯಗಳ ಸರಣಿಯಲ್ಲಿ ದ.ಆಫ್ರಿಕಾ 1-0 ಮುನ್ನಡೆ ಪಡೆಯಿತು.

ಸೆಂಚೂರಿಯನ್‌: 3 ದಶಕದಿಂದಲೂ ಗೆಲ್ಲಲಾಗದ ಟೆಸ್ಟ್‌ ಸರಣಿಯನ್ನು ಈ ಬಾರಿಯಾದರೂ ಪಡೆದೇ ತೀರುತ್ತೇವೆ ಎಂದು ದ.ಆಫ್ರಿಕಾಕ್ಕೆ ವಿಮಾನವೇರಿದ್ದ ಟೀಂ ಇಂಡಿಯಾ, ಸರಣಿ ಶುರುವಾದ 3ನೇ ದಿನಕ್ಕೇ ತನ್ನ ಕನಸಿಗೆ ಎಳ್ಳು ನೀರು ಬಿಟ್ಟಿದೆ. ಹರಿಣಗಳ ವಿರುದ್ಧದ 2 ಪಂದ್ಯದ ಸರಣಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ ಗುರುವಾರ ಇನ್ನಿಂಗ್ಸ್‌ ಹಾಗೂ 32 ರನ್‌ಗಳ ಹೀನಾಯ ಸೋಲು ಎದುರಾಯಿತು. ಇದರೊಂದಿಗೆ 1-0 ಮುನ್ನಡೆ ಸಾಧಿಸಿದ ಆಫ್ರಿಕಾ, ಸರಣಿಯನ್ನು ತನ್ನಲ್ಲೇ ಉಳಿಸಿಕೊಂಡಿತು.ಬ್ಯಾಟಿಂಗ್‌ ವೈಭವ: 2ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 256 ರನ್‌ ರನ್‌ ಗಳಿಸಿದ್ದ ಹರಿಣಗಳ ಆಟಕ್ಕೆ ಕಡಿವಾಣ ಹಾಕಲು ಭಾರತೀಯ ಬೌಲರ್‌ಗಳಿಗೆ ಗುರುವಾರವೂ ಸಾಧ್ಯವಾಗಲಿಲ್ಲ. ಮೊನಚು ಕಳೆದುಕೊಂಡಂತಿಲ್ಲ ವೇಗಿಗಳನ್ನು ಮೈದಾನದ ಮೂಲೆ ಮೂಲೆಗೂ ಅಟ್ಟಿದ ಡೀನ್‌ ಎಲ್ಗರ್‌ ಹಾಗೂ ಮಾರ್ಕೊ ಯಾನ್ಸನ್‌ ತಂಡವನ್ನು 400ರ ಗಡಿ ದಾಟಿಸಿದರು.ಈ ಜೋಡಿ 6ನೇ ವಿಕೆಟ್‌ಗೆ 111 ರನ್‌ಗಳ ಜೊತೆಯಾಟವಾಡಿತು. ವಿದಾಯದ ಸರಣಿ ಆಡುತ್ತಿರುವ ಎಲ್ಗರ್‌ 287 ಎಸೆತಗಳನ್ನು ಎದುರಿಸಿ 28 ಬೌಂಡರಿಗಳೊಂದಿಗೆ 185 ರನ್‌ ಸಿಡಿಸಿ ಪೆವಿಲಿಯನ್‌ ಮರಳಿದರು. ಬಳಿಕ ಕೊನೆವರೆಗೂ ಕ್ರೀಸ್‌ನಲ್ಲಿ ನೆಲೆಯೂರಿದ ಯಾನ್ಸನ್‌ 84 ರನ್‌ಗಳೊಂದಿಗೆ ಔಟಾಗದೆ ಉಳಿದರು. ಬೂಮ್ರಾ 69 ರನ್‌ಗೆ 4 ವಿಕೆಟ್‌ ಕಬಳಿಸಿದರೆ, ಸಿರಾಜ್‌ಗೆ 2 ವಿಕೆಟ್‌ ಲಭಿಸಿತು.ಕೊಹ್ಲಿ ಏಕಾಂಗಿ ಹೋರಾಟ: 163 ರನ್‌ಗಳ ದೊಡ್ಡ ಹಿನ್ನಡೆಯೊಂದಿಗೆ ಇನ್ನಿಂಗ್ಸ್‌ ಆರಂಭಿಸಿದ ಭಾರತದಿಂದ ಪ್ರಬಲ ಹೋರಾಟ ನಿರೀಕ್ಷಿಸಲಾಗಿತ್ತು. ಆದರೆ ವಿರಾಟ್‌ ಕೊಹ್ಲಿ ಹೊರತುಪಡಿಸಿ ಬೇರೆ ಯಾರಿಗೂ ಹರಿಣ ವೇಗಿಗಳ ದಾಳಿಯನ್ನು ಮೆಟ್ಟಿ ನಿಲ್ಲಲಾಗಲಿಲ್ಲ. ರೋಹಿತ್‌ ಶರ್ಮಾ(00), ಯಶಸ್ವಿ ಜೈಸ್ವಾಲ್‌(05) ಔಟಾದ ಬಳಿಕ ಶುಭ್‌ಮನ್‌ ಗಿಲ್‌(26) ಕೊಂಚ ಪ್ರತಿರೋಧ ತೋರಿದರು. ಆದರೆ ಅವರನ್ನು ಯಾನ್ಸನ್‌ ಔಟ್‌ ಮಾಡಿದ ಬಳಿಕ ಭಾರತೀಯರ ಪೆವಿಲಿಯನ್ ಪರೇಡ್‌ಗೆ ತಡೆ ಬೀಳಲಿಲ್ಲ. ಶ್ರೇಯಸ್‌ ಅಯ್ಯರ್‌(06), ಮೊದಲ ಇನ್ನಿಂಗ್ಸ್‌ನ ಶತಕವೀರ ಕೆ.ಎಲ್‌.ರಾಹುಲ್‌(04), ಆರ್‌.ಅಶ್ವಿನ್‌(00), ಶಾರ್ದೂಲ್‌ ಠಾಕೂರ್‌(02) ಬಂದಷ್ಟೇ ವೇಗದಲ್ಲಿ ಡಗೌಟ್‌ಗೆ ಮರಳಿದರು. ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಕೊಹ್ಲಿ, ಶತಕದತ್ತ ಮುನ್ನುಗ್ಗುತ್ತಿದ್ದರೂ 76 ರನ್‌ ಗಳಿಸಿದ್ದಾಗ ಯಾನ್ಸನ್‌ ಎಸೆತದಲ್ಲಿ ರಬಾಡಗೆ ಕ್ಯಾಚಿತ್ತು ನಿರ್ಗಮಿಸಿದರು. ನಂಡ್ರೆ ಬರ್ಗರ್‌ 4, ಯಾನ್ಸನ್‌ 3, ಕಗಿಸೊ ರಬಾಡ 2 ವಿಕೆಟ್‌ ಕಬಳಿಸಿದರು.ಸ್ಕೋರ್‌: ಭಾರತ 245/10 ಮತ್ತು 34.1 ಓವರಲ್ಲಿ 131/10 (ಕೊಹ್ಲಿ 76, ಶುಭ್‌ಮನ್‌ 26, ಬರ್ಗರ್‌ 4-33, ಯಾನ್ಸನ್‌ 3-36), ದ.ಆಫ್ರಿಕಾ 108.4 ಓವರಲ್ಲಿ 408/10 (ಎಲ್ಗರ್‌ 185, ಯಾನ್ಸನ್‌ ಔಟಾಗದೆ 84, ಬೂಮ್ರಾ 4-64, ಸಿರಾಜ್ 2-91)---9ನೇ ಬಾರಿಯೂಸರಣಿ ಗೆಲುವಿಲ್ಲ!ಭಾರತ ಮೊದಲ ಪಂದ್ಯ ಸೋತಿದ್ದರಿಂದ ಸರಣಿ ಗೆಲ್ಲುವ ಅವಕಾಶ ಕಳೆದುಕೊಂಡಿದೆ. 2ನೇ ಪಂದ್ಯ ಗೆದ್ದರೂ ಸರಣಿ ಸಮಗೊಳಿಸಲು ಮಾತ್ರ ಸಾಧ್ಯವಿದೆ. ಇದರೊಂದಿಗೆ 9ನೇ ಬಾರಿಯೂ ದ.ಆಫ್ರಿಕಾ ಮಣ್ಣಲ್ಲಿ ಭಾರತಕ್ಕೆ ಸರಣಿ ಗೆಲುವು ಮರೀಚಿಕೆಯಾಯಿತು. 1992ರಿಂದ ಭಾರತ ಈ ಬಾರಿಯದ್ದು ಹೊರತುಪಡಿಸಿ 8 ಸರಣಿ ಆಡಿವೆ. ಇದರಲ್ಲಿ 7ರಲ್ಲಿ ಸೋತಿದ್ದು, 2010ರಲ್ಲಿ 1-1 ಡ್ರಾಗೊಂಡಿತ್ತು. --01ನೇ ಬಾರಿರೋಹಿತ್‌ ನಾಯಕತ್ವದಲ್ಲಿ ಭಾರತ ಮೊದಲ ಬಾರಿ ಇನ್ನಿಂಗ್ಸ್‌ ಸೋಲನುಭವಿಸಿತು. ಅವರ ನಾಯಕತ್ವದಲ್ಲಿ ಭಾರತ 10 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದ್ದು, 2 ಡ್ರಾಗೊಂಡರೆ, 3 ಪಂದ್ಯ ಸೋತಿದೆ.-ಲಕ್ಷ್ಮಣ್‌ರನ್ನು ಹಿಂದಿಕ್ಕಿದರನ್‌ ಮೆಷಿನ್‌ ವಿರಾಟ್‌!ಏಕಾಂಗಿ ಹೋರಾಟ ನಡೆಸಿ 76 ರನ್‌ ಸಿಡಿಸಿದ ವಿರಾಟ್‌ ಕೊಹ್ಲಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್‌ ಕಲೆಹಾಕಿದ ಭಾರತೀಯರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದರು. ಕೊಹ್ಲಿ ಸದ್ಯ 189 ಇನ್ನಿಂಗ್ಸ್‌ಗಳಲ್ಲಿ 8790 ರನ್‌ ಗಳಿಸಿದ್ದಾರೆ. ಇದರೊಂದಿಗೆ ವಿವಿಎಸ್‌ ಲಕ್ಷ್ಮಣ್‌(8781) 5ನೇ ಸ್ಥಾನಕ್ಕೆ ಜಾರಿದರು. ಸಚಿನ್‌ 15921 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ರಾಹುಲ್‌ ದ್ರಾವಿಡ್‌(13265), ಸುನಿಲ್‌ ಗವಾಸ್ಕರ್‌(10122) ನಂತರದ 2 ಸ್ಥಾನಗಳಲ್ಲಿದ್ದಾರೆ.--13 ವರ್ಷದ ಬಳಿಕಇನ್ನಿಂಗ್ಸ್‌ ಸೋಲುಭಾರತಕ್ಕೆ ದ.ಆಫ್ರಿಕಾ ವಿರುದ್ಧ 13 ವರ್ಷಗಳ ಬಳಿಕ ಮತ್ತೊಮ್ಮೆ ಇನ್ನಿಂಗ್ಸ್‌ ಸೋಲು ಎದುರಾಯಿತು. ಕೊನೆ ಬಾರಿ ಭಾರತ 2010ರಲ್ಲಿ ಈ ಮುಖಭಂಗಕ್ಕೊಳಗಾಗಿತ್ತು. ಸೆಂಚೂರಿಯನ್‌ನಲ್ಲೇ ನಡೆದಿದ್ದ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್‌ ಹಾಗೂ 25 ರನ್‌ಗಳಿಂದ ಪರಾಭವಗೊಂಡಿತ್ತು.

Share this article