ಕ್ಯಾಚ್‌ ಬಿಟ್ಟರೂ ಮ್ಯಾಚ್‌ ಬಿಡದ ಭಾರತ!

Published : Dec 29, 2025, 11:47 AM IST
shafali verma

ಸಾರಾಂಶ

2026ರ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ಯಾವುದಾದರೂ ಒಂದು ವಿಭಾಗದ ಕಡೆಗೆ ಅತಿಹೆಚ್ಚು ಗಮನ ಹರಿಸಬೇಕಿದ್ದರೆ ಅದು ಫೀಲ್ಡಿಂಗ್‌. ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 4ನೇ ಪಂದ್ಯದಲ್ಲಿ ಭಾರತದ ಫೀಲ್ಡಿಂಗ್‌ ಎಷ್ಟು ಕಳಪೆಯಾಗಿದೆ ಎನ್ನುವುದನ್ನು ಮತ್ತೊಮ್ಮೆ ಎತ್ತಿ ತೋರಿಸಿತು

 ತಿರುವನಂತಪುರಂ: 2026ರ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ಯಾವುದಾದರೂ ಒಂದು ವಿಭಾಗದ ಕಡೆಗೆ ಅತಿಹೆಚ್ಚು ಗಮನ ಹರಿಸಬೇಕಿದ್ದರೆ ಅದು ಫೀಲ್ಡಿಂಗ್‌. ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 4ನೇ ಪಂದ್ಯದಲ್ಲಿ ಭಾರತದ ಫೀಲ್ಡಿಂಗ್‌ ಎಷ್ಟು ಕಳಪೆಯಾಗಿದೆ ಎನ್ನುವುದನ್ನು ಮತ್ತೊಮ್ಮೆ ಎತ್ತಿ ತೋರಿಸಿತು. ಬ್ಯಾಟರ್‌ಗಳ ಅಬ್ಬರದಿಂದ ಬೃಹತ್‌ ಕಲೆಹಾಕಿದ ಪರಿಣಾಮ, ಫೀಲ್ಡಿಂಗ್‌ ವೇಳೆ 5-6 ಕ್ಯಾಚ್‌ ಕೈಚೆಲ್ಲಿದರೂ 30 ರನ್‌ ಗೆಲುವು ಪಡೆಯಲು ಭಾರತ ಯಶಸ್ವಿಯಾಯಿತು.

ಭಾರತ 2 ವಿಕೆಟ್‌ಗೆ 221 ರನ್‌ ಗಳಿಸಿದರೆ, ಲಂಕಾ 6 ವಿಕೆಟ್‌ಗೆ 191 ರನ್‌ ಗಳಿಸಿತು. ಅಂತಾರಾಷ್ಟ್ರೀಯ ಟಿ20ಯಲ್ಲಿ ಎರಡೂ ತಂಡಗಳು ತಮ್ಮ ಗರಿಷ್ಠ ಮೊತ್ತ ದಾಖಲಿಸಿದವು.

ಸರಣಿಯಲ್ಲಿ ಮೊದಲ ಬಾರಿಗೆ ಮೊದಲು ಬ್ಯಾಟ್‌ ಮಾಡಿದ ಭಾರತ

ಸರಣಿಯಲ್ಲಿ ಮೊದಲ ಬಾರಿಗೆ ಮೊದಲು ಬ್ಯಾಟ್‌ ಮಾಡಿದ ಭಾರತಕ್ಕೆ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧನಾ ಆಸರೆಯಾದರು. ಇವರಿಬ್ಬರ ನಡುವೆ ಮೊದಲ ವಿಕೆಟ್‌ಗೆ 162 ರನ್‌ ಜೊತೆಯಾಟ ಮೂಡಿಬಂತು. ಇದು ಅಂ.ರಾ. ಟಿ20ಯಲ್ಲಿ ಭಾರತ ಪರ ದಾಖಲಾದ ಅತಿದೊಡ್ಡ ಮೊದಲ ವಿಕೆಟ್‌ ಜೊತೆಯಾಟ ಎನಿಸಿತು. ಇಬ್ಬರೂ ಶತಕ ದಾಖಲಿಸುವ ನಿರೀಕ್ಷೆಯಿತ್ತು. ಆದರೆ ಇಬ್ಬರಿಗೂ ಶತಕ ಒಲಿಯಲಿಲ್ಲ. ಶಫಾಲಿ 46 ಎಸೆತದಲ್ಲಿ 12 ಬೌಂಡರಿ, 1 ಸಿಕ್ಸರ್‌ನೊಂದಿಗೆ 79 ರನ್‌ ಗಳಿಸಿ ಔಟಾದರೆ, ಸ್ಮೃತಿ 48 ಎಸೆತದಲ್ಲಿ 11 ಬೌಂಡರಿ, 3 ಸಿಕ್ಸರ್‌ನೊಂದಿಗೆ 80 ರನ್‌ ಗಳಿಸಿ ವಿಕೆಟ್‌ ಕಳೆದುಕೊಂಡರು.

3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಆರ್ಭಟಿಸಿದ ರಿಚಾ ಘೋಷ್‌ 16 ಎಸೆತದಲ್ಲಿ 4 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ ಔಟಾಗದೆ 40, ಹರ್ಮನ್‌ಪ್ರೀತ್‌ 10 ಎಸೆತದಲ್ಲಿ ಔಟಾಗದೆ 16 ರನ್‌ ಸಿಡಿಸಿ, ತಂಡ ದೊಡ್ಡ ಮೊತ್ತ ಗಳಿಸಲು ನೆರವಾದರು.

ಲಂಕಾಕ್ಕೆ ಸ್ಫೋಟಕ ಆರಂಭ:

 ಲಂಕಾಕ್ಕೆ ನಾಯಕಿ ಚಾಮರಿ ಅಟಾಪಟ್ಟು(52) ಹಾಗೂ ಹಾಸಿನಿ ಪೆರೇರಾ(33) ಸ್ಫೋಟಕ ಆರಂಭ ಒದಗಿಸಿದರು. ತಂಡ 3.3 ಓವರಲ್ಲಿ 50 ರನ್‌ ಗಳಿಸಿತು. 59 ರನ್‌ಗಳ ಮೊದಲ ವಿಕೆಟ್‌ ಜೊತೆಯಾಟವನ್ನು ಅರುಂಧತಿ ರೆಡ್ಡಿ ಮುರಿದರು. 20 ವರ್ಷದ ಎಡಗೈ ಸ್ಪಿನ್ನರ್‌ ವೈಷ್ಣವಿ ಶರ್ಮಾ ಬಿಗುವಿನ ದಾಳಿ ನಡೆಸಿ ಲಂಕಾ ರನ್‌ ಗಳಿಕೆಯನ್ನು ನಿಯಂತ್ರಿಸಿದರು. ಭಾರತದ ಕಳಪೆ ಫೀಲ್ಡಿಂಗ್‌ ಸಹ ಲಂಕಾಕ್ಕೆ ನೆರವಾಯಿತು. ಲಂಕಾ ದಿಟ್ಟ ಹೋರಾಟ ಪ್ರದರ್ಶಿಸಿದರೂ, ಗುರಿ ತಲುಪಲು ಸಾಧ್ಯವಾಗಲಿಲ್ಲ. ಈ ಜಯದೊಂದಿಗೆ ಸರಣಿಯಲ್ಲಿ ಭಾರತ 4-0 ಮುನ್ನಡೆ ಸಾಧಿಸಿದ್ದು, ಕೊನೆಯ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್‌ ಸ್ವೀಪ್‌ ಮೇಲೆ ಕಣ್ಣಿಟ್ಟಿದೆ.

ಸ್ಕೋರ್‌: ಭಾರತ 221/2 (ಸ್ಮೃತಿ 80, ಶಫಾಲಿ 79, ರಿಚಾ 40*, ಶೆಹಾನಿ 1-32), ಶ್ರೀಲಂಕಾ 20 ಓವರಲ್ಲಿ 191/6 (ಚಾಮರಿ 52, ಹಾಸಿನಿ 33, ವೈಷ್ಣವಿ 2-24, ಅರುಂಧತಿ 2-42) ಪಂದ್ಯಶ್ರೇಷ್ಠ: ಸ್ಮೃತಿ ಮಂಧನಾ

 

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಚಿನ್ನಸ್ವಾಮಿಯಲ್ಲಿ ಪಂದ್ಯಕ್ಕೆ ಇನ್ನೂ ಸಿಗದ ಅನುಮತಿ
ಟಿ20 ವಿಶ್ವಕಪ್‌ನಿಂದ ಉಪನಾಯಕ ಗಿಲ್‌ಗೆ ಗೇಟ್‌ಪಾಸ್‌, ಕಿಶನ್ ಆಯ್ಕೆ!