ತವರಿನಲ್ಲಿ ಸತತ 18 ಟೆಸ್ಟ್‌ ಸರಣಿ ಗೆದ್ದು ಭಾರತ ಹೊಸ ಇತಿಹಾಸ

KannadaprabhaNewsNetwork | Published : Oct 2, 2024 1:15 AM

ಸಾರಾಂಶ

2012 ಇಂಗ್ಲೆಂಡ್‌ ವಿರುದ್ಧ ಸೋತ ಬಳಿಕ ಭಾರತ ಯಾವುದೇ ಸರಣಿಯಲ್ಲೂ ಸೋಲು ಕಂಡಿಲ್ಲ. ಇನ್ನು, ಟೆಸ್ಟ್‌ನಲ್ಲಿ ಗರಿಷ್ಠ ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನಕ್ಕೇರಿತು.

ಕಾನ್ಪುರ: ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದ ಟೀಂ ಇಂಡಿಯಾ ತವರಿನಲ್ಲಿ ಸತತ 18 ಸರಣಿಗಳನ್ನು ಗೆದ್ದು ಹೊಸ ಇತಿಹಾಸ ನಿರ್ಮಿಸಿದೆ. ಭಾರತ ತನ್ನ ತವರಿನಲ್ಲಿ ಕೊನೆ ಬಾರಿ ಟೆಸ್ಟ್‌ ಸರಣಿ ಸೋತಿದ್ದು 2012ರಲ್ಲಿ. ಇಂಗ್ಲೆಂಡ್‌ ವಿರುದ್ಧ ಸೋತ ಬಳಿಕ ಭಾರತ ಯಾವುದೇ ಸರಣಿಯಲ್ಲೂ ಸೋಲು ಕಂಡಿಲ್ಲ. ಆಸ್ಟ್ರೇಲಿಯಾ, ಇಂಗ್ಲೆಂಡ್‌, ಬಾಂಗ್ಲಾದೇಶ ವಿರುದ್ಧ ತಲಾ 3, ವೆಸ್ಟ್‌ಇಂಡೀಸ್‌, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌, ಶ್ರೀಲಂಕಾ ವಿರುದ್ಧ ತಲಾ 2 ಹಾಗೂ ಅಫ್ಘಾನಿಸ್ತಾನ ವಿರುದ್ಧ ಒಂದು ಸರಣಿಯಲ್ಲಿ ಭಾರತ ಗೆದ್ದಿದೆ.

ಗರಿಷ್ಠ ಟೆಸ್ಟ್‌ ಗೆಲುವು: ಭಾರತ 4ನೇ ಸ್ಥಾನಕ್ಕೆ

ಟೆಸ್ಟ್‌ನಲ್ಲಿ ಗರಿಷ್ಠ ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನಕ್ಕೇರಿತು. ಬಾಂಗ್ಲಾದೇಶ ವಿರುದ್ಧ ಮಂಗಳವಾರದ ಜಯದೊಂದಿಗೆ ಭಾರತ ಟೆಸ್ಟ್‌ ಗೆಲುವನ್ನು 180ಕ್ಕೆ ಹೆಚ್ಚಿಸಿತು. ಈ ಮೂಲಕ ದಕ್ಷಿಣ ಆಫ್ರಿಕಾ(179 ಗೆಲುವು)ವನ್ನು ಹಿಂದಿಕ್ಕಿತು. 414 ಗೆಲುವಿನೊಂದಿಗೆ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ 397, ವೆಸ್ಟ್‌ಇಂಡೀಸ್‌ 183 ಗೆಲುವು ಸಾಧಿಸಿ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.52 ಓವರ್‌ ಆಡಿ ಗೆದ್ದ ಭಾರತ: 4ನೇ ಕನಿಷ್ಠ

ಭಾರತ ಈ ಪಂದ್ಯದಲ್ಲಿ ಕೇವಲ 312 ಎಸೆತ(52 ಓವರ್‌) ಆಡಿ ಗೆಲುವು ಸಾಧಿಸಿತು. ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ(ಎರಡೂ ಇನ್ನಿಂಗ್ಸ್‌ ಸೇರಿ) 4ನೇ ಕನಿಷ್ಠ. ಈ ಮೊದಲು 1935ರಲ್ಲಿ ವಿಂಡೀಸ್‌ ವಿರುದ್ಧ ಇಂಗ್ಲೆಂಡ್‌ ಕೇವಲ 276 ಎಸೆತಗಳನ್ನಾಡಿ ಪಂದ್ಯ ಗೆದ್ದಿತ್ತು. 2024ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 281, 2005ರಲ್ಲಿ ಜಿಂಬಾಬ್ವೆ ವಿರುದ್ಧ ದ.ಆಫ್ರಿಕಾ 300 ಎಸೆತ ಎದುರಿಸಿ ಪಂದ್ಯ ಜಯಿಸಿತ್ತು.08ನೇ ಪಂದ್ಯ: ಇದು ಟೆಸ್ಟ್‌ ಕ್ರಿಕೆಟ್‌ನ 2 ದಿನದಾಟ ಮಳೆಗೆ ರದ್ದಾದ ಬಳಿಕ ಪಂದ್ಯ ಗೆದ್ದ 8ನೇ ನಿದರ್ಶನ.

02ನೇ ಬ್ಯಾಟರ್‌: ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲಿ 100+ ಸ್ಟ್ರೈಕ್‌ರೇಟ್‌ನಲ್ಲಿ ಅರ್ಧಶತಕ ಬಾರಿಸಿದ ಭಾರತದ 2ನೇ ಬ್ಯಾಟರ್‌ ಜೈಸ್ವಾಲ್‌. ವಿರೇಂದ್ರ ಸೆಹ್ವಾಗ್‌ 2011ರಲ್ಲಿ ವಿಂಡೀಸ್‌ ವಿರುದ್ಧ ಈ ಸಾಧನೆ ಮಾಡಿದ್ದರು.ಮುರಳೀಧರನ್‌ ದಾಖಲೆ ಸರಿಗಟ್ಟಿದ ಆರ್‌.ಅಶ್ವಿನ್‌

ಭಾರತದ ಹಿರಿಯ ಸ್ಪಿನ್ನರ್‌ ಆರ್‌.ಅಶ್ವಿನ್‌, ಶ್ರೀಲಂಕಾದ ಮಾಂತ್ರಿಕ ಸ್ಪಿನ್ನರ್‌ ಮುತ್ತಯ್ಯ ಮುರಳೀಧರನ್‌ರ ಮತ್ತೊಂದು ದಾಖಲೆಯನ್ನು ಸರಿಗಟ್ಟಿದ್ದಾರೆ. ಅಶ್ವಿನ್‌ ಟೆಸ್ಟ್‌ನಲ್ಲಿ 11ನೇ ಬಾರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಟೆಸ್ಟ್‌ನಲ್ಲಿ ಅತಿ ಹೆಚ್ಚು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಸಾಧಕರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಮುರಳೀಧರನ್‌ ಕೂಡಾ 11 ಬಾರಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ದ.ಆಫ್ರಿಕಾದ ಕ್ಯಾಲಿಸ್‌ 9, ನ್ಯೂಜಿಲೆಂಡ್‌ನ ರಿಚರ್ಡ್‌ ಹಾಡ್ಲೀ, ಪಾಕಿಸ್ತಾನದ ಇಮ್ರಾನ್‌ ಖಾನ್‌, ಆಸ್ಟ್ರೇಲಿಯಾದ ಶೇನ್‌ ವಾರ್ನ್‌ ತಲಾ 8 ಬಾರಿ ಈ ಸಾಧನೆ ಮಾಡಿದ್ದಾರೆ.

Share this article