ಪ್ಯಾರಿಸ್: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದ ಭಾರತದ ತಾರಾ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, ಮಂಗಳವಾರ ಪ್ಯಾರಿಸ್ ಕ್ರೀಡಾಕೂಟದ ಅರ್ಹತಾ ಸುತ್ತಿನಲ್ಲಿ ಕಣಕ್ಕಿಳಿಯಲಿದ್ದಾರೆ.
ಭಾರತದ ಮತ್ತೋರ್ವ ಸ್ಪರ್ಧಿ ಕಿಶೋರೆ ಜೆನಾ ಕೂಡಾ ಸ್ಪರ್ಧಿಸಲಿದ್ದಾರೆ. ಅರ್ಹತಾ ಸುತ್ತಿನಲ್ಲಿ ಒಟ್ಟು 32 ಮಂದಿ ಸ್ಪರ್ಧಿಸಲಿದ್ದಾರೆ. 84 ಮೀ. ದಾಖಲಿಸಿದವರು ಅಥವಾ ಅಗ್ರ-12 ಸ್ಥಾನ ಪಡೆದ ಸ್ಪರ್ಧಿಗಳು ಫೈನಲ್‌ಗೆ ಪ್ರವೇಶಿಸಲಿದ್ದಾರೆ.
ಕಳೆದ ಮೇ ತಿಂಗಳಲ್ಲಿ ದೋಹಾ ಡೈಮಂಡ್ ಲೀಗ್‌ನಲ್ಲಿ ನೀರಜ್ 88.36 ಮೀಟರ್ ದೂರಕ್ಕೆ ಎಸೆದಿದ್ದು ಅವರು ಈ ಋತುವಿನ ಶ್ರೇಷ್ಠ ಪ್ರದರ್ಶನ. ಅತ್ತ ಕಿಶೋರ್ ಕಳೆದ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ 87.54 ಮೀ. ದೂರ ದಾಖಲಿಸಿ ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಆದರೆ ಆ ಬಳಿಕ 80 ಮೀ. ಗೆರೆ ದಾಟಲು ವಿಫಲರಾಗುತ್ತಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಚೆಕ್ ಗಣರಾಜ್ಯದ ಜಾಕುವ್ ವೆಡ್ಲೆಚ್, ಜರ್ಮನಿಯ ಜೂಲಿಯನ್ ವೆಬೆರ್, ಮಾಜಿ ವಿಶ್ವ ಚಾಂಪಿಯನ್ ಆ್ಯಂಡರ್‌ಸನ್ ಪೀಟರ್ಸ್ ಅವರು ನೀರಜ್‌ರ ಪ್ರಮುಖ ಎದುರಾಗಳಿಗಳಾಗಿದ್ದು, ಪ್ರಬಲ ಪೈಪೋಟಿ ಕಂಡುಬರುವ ನಿರೀಕ್ಷೆಯಿದೆ.
ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಗ್ರಹಾಮ್ ಥೋರ್ಪ್ ನಿಧನ
ಲಂಡನ್: ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಗ್ರಹಾಮ್ ಥೋರ್ಪ್(55) ಸೋಮವಾರ ನಿಧನರಾಗಿದ್ದಾರೆ. 2022ರಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಥೋರ್ಪ್ ಈ ವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ.
ಥೋರ್ಪ್ 1993ರಿಂದ 2005ರ ನಡುವೆ ಇಂಗ್ಲೆಂಡ್ ಪರ 100 ಟೆಸ್ಟ್ ಪಂದ್ಯಗಳನ್ನಾಡಿದ್ದು, 16 ಶತಕಗಳ ಸಹಿತ 6744 ರನ್ ಕಲೆಹಾಕಿದ್ದಾರೆ. 82 ಏಕದಿನ, 341 ಪ್ರಥಮ ದರ್ಜೆ ಪಂದ್ಯಗಳನ್ನೂ ಆಡಿದ್ದಾರೆ. ನಿವೃತ್ತಿ ಬಳಿಕ ಅವರು ಇಂಗ್ಲೆಂಡ್, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ತಂಡಗಳಿಗೆ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ.