ಟಿ20 ಕ್ರಿಕೆಟ್‌ಗೆ ಟೀಂ ಇಂಡಿಯಾ ಬಾಸ್‌!

KannadaprabhaNewsNetwork | Updated : Jun 30 2024, 05:15 AM IST

ಸಾರಾಂಶ

17 ವರ್ಷ ಬಳಿಕ ಭಾರತದ ಮಡಿಲಿಗೆ ಟಿ20 ವಿಶ್ವಕಪ್‌ ಟ್ರೋಫಿ. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ರೋಚಕ ಗೆಲುವು. 2ನೇ ಬಾರಿಗೆ ಟಿ20 ವಿಶ್ವಕಪ್‌ ಜಯ. 11 ವರ್ಷ ಬಳಿಕ ಭಾರತಕ್ಕೆ ಐಸಿಸಿ ಟ್ರೋಫಿ. ಭಾರತ 176/7, ಕೊಹ್ಲಿ 76 । ಗೆಲುವಿನ ಸನಿಹಕ್ಕೆ ತಲುಪಿದರೂ ಎಡವಿದ ‘ಚೋಕರ್ಸ್‌’

ಬ್ರಿಡ್ಜ್‌ಟೌನ್‌ (ಬಾರ್ಬಡೋಸ್‌): 140 ಕೋಟಿ ಭಾರತೀಯರ ಪ್ರಾರ್ಥನೆ ಫಲಿಸಿದೆ. 17 ವರ್ಷ ಬಳಿಕ ಭಾರತ ಟಿ20 ವಿಶ್ವಕಪ್‌ ಗೆದ್ದಿದೆ. ಶನಿವಾರ ನಡೆದ 2024ರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಬಗ್ಗುಬಡಿದ ಟೀಂ ಇಂಡಿಯಾ 2007ರ ಬಳಿಕ ಮತ್ತೊಮ್ಮೆ ವಿಶ್ವ ಚಾಂಪಿಯನ್‌ ಪಟ್ಟಕ್ಕೇರಿತು.ಚೊಚ್ಚಲ ವಿಶ್ವಕಪ್‌ ಗೆಲ್ಲುವ ಮಹದಾಸೆಯೊಂದಿಗೆ ಫೈನಲ್‌ನಲ್ಲಿ ಕಣಕ್ಕಿಳಿದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲು ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರಿದ ಭಾರತ 7 ವಿಕೆಟ್‌ಗೆ 176 ರನ್‌ ಕಲೆಹಾಕಿತು. ಬಳಿಕ ಬೌಲರ್‌ಗಳು ಅಸಾಧಾರಣ ದಾಳಿ ಸಂಘಟಿಸಿ, ಹರಿಣ ಪಡೆಯನ್ನು 169 ರನ್‌ಗೆ ನಿಯಂತ್ರಿಸಿದರು.

ಆರಂಭಿಕ ಯಶಸ್ಸು: ವಿಶ್ವಕಪ್‌ನಲ್ಲಿ ದಾಖಲೆಯ ಮೊತ್ತವನ್ನು ಬೆನ್ನತ್ತಿದ ದ.ಆಫ್ರಿಕಾ ವಿರುದ್ಧ ಭಾರತ ಆರಂಭಿಕ ಯಶಸ್ಸು ಸಾಧಿಸಿತು. ಹೆಂಡ್ರಿಕ್ಸ್‌ ಹಾಗೂ ನಾಯಕ ಮಾರ್ಕ್‌ರಮ್‌ರನ್ನು ಬೇಗನೆ ಔಟ್‌ ಮಾಡುವಲ್ಲಿ ಬೂಮ್ರಾ ಹಾಗೂ ಅರ್ಶ್‌ದೀಪ್‌ ಯಶಸ್ವಿಯಾದರು. 12ಕ್ಕೆ 2 ವಿಕೆಟ್‌ ಕಳೆದುಕೊಂಡ ದ.ಆಫ್ರಿಕಾಕ್ಕೆ ಡಿ ಕಾಕ್‌ ಹಾಗೂ ಸ್ಟಬ್ಸ್‌ ಕೆಲ ಕಾಲ ಆಸರೆಯಾದರು. ಇವರಿಬ್ಬರ ನಡುವೆ 3ನೇ ವಿಕೆಟ್‌ಗೆ 58 ರನ್‌ ಜೊತೆಯಾಟ ಮೂಡಿಬಂತು. 31 ರನ್‌ ಗಳಿಸಿ ಸ್ಟಬ್ಸ್‌ ಔಟಾದ ಬಳಿಕ, ಡಿ ಕಾಕ್‌ಗೆ ಕ್ಲಾಸೆನ್‌ ಜೊತೆಯಾದರು. ದ.ಆಫ್ರಿಕಾಕ್ಕೆ ಕೊನೆಯ 10 ಓವರಲ್ಲಿ 96 ರನ್‌ಗಳು ಬೇಕಿದ್ದವು. ಡಿ ಕಾಕ್‌ 39 ರನ್‌ ಗಳಿಸಿ ಔಟಾದ ಬಳಿಕ, ಕ್ಲಾಸೆನ್‌ ತಮ್ಮ ರೌದ್ರಾವಾತಾರ ಪ್ರದರ್ಶಿಸಿದರು. ಭಾರತೀಯ ಸ್ಪಿನ್ನರ್‌ಗಳನ್ನು ಚೆಂಡಾಡಿದ ಕ್ಲಾಸೆನ್‌, ಸಿಕ್ಸರ್‌ಗಳ ಮೇಲೆ ಸಿಕ್ಸರ್‌ ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಡೇವಿಡ್ ಮಿಲ್ಲರ್‌ರಿಂದಲೂ ಉತ್ತಮ ಬೆಂಬಲ ದೊರೆಯಿತು. ಕೊನೆಯ 4 ಓವರಲ್ಲಿ ದ.ಆಫ್ರಿಕಾಕ್ಕೆ ಕೇವಲ 26 ರನ್‌ ಬೇಕಿತ್ತು. ಆದರೆ ಕ್ಲಾಸೆನ್‌ರನ್ನು ಔಟ್‌ ಮಾಡಿದ ಭಾರತ, ಗೆಲುವಿನ ಆಸೆಯನ್ನು ಕೈಬಿಡಲಿಲ್ಲ. ಅಮೋಘ ಹೋರಾಟ ಪ್ರದರ್ಶಿಸಿದ ಭಾರತ ಗೆಲುವನ್ನು ಒಲಿಸಿಕೊಂಡಿತು.

ಆರಂಭಿಕ ಆಘಾತ: ಮೊದಲ ಓವರಲ್ಲಿ ಕೊಹ್ಲಿ 3 ಬೌಂಡರಿ ಬಾರಿಸಿದ ಪರಿಣಾಮ 15 ರನ್‌ ಗಳಿಸಿದ ಭಾರತ, 2ನೇ ಓವರಲ್ಲಿ ದಿಢೀರ್‌ ಕುಸಿತ ಕಂಡಿತು. ಎಡಗೈ ಸ್ಪಿನ್ನರ್‌ ಕೇಶವ್‌ ಮಹಾರಾಜ್‌, ನಾಯಕ ರೋಹಿತ್‌ ಹಾಗೂ ಪಂತ್‌ರನ್ನು ಪೆವಿಲಿಯನ್‌ಗಟ್ಟಿದರು. ಸೂರ್ಯಕುಮಾರ್‌ ದೊಡ್ಡ ಹೊಡೆತಕ್ಕೆ ಯತ್ನಿಸಿ ಕೈಸುಟ್ಟುಕೊಂಡರು. ಭಾರತ 5ನೇ ಓವರಲ್ಲಿ 34 ರನ್‌ಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೊಹ್ಲಿ-ಅಕ್ಷರ್‌ ಆಧಾರ: ಅಕ್ಷರ್‌ ಪಟೇಲ್‌ಗೆ ಬಡ್ತಿ ನೀಡಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಯಿತು. ಕೊಹ್ಲಿ ಜೊತೆ ಕ್ರೀಸ್‌ನಲ್ಲಿ ನೆಲೆಯೂರಿದ ಅಕ್ಷರ್‌, ಹರಿಣಗಳ ಮೇಲೆ ದಾಳಿ ನಡೆಸಿದರು. ಕೊಹ್ಲಿ ಎಚ್ಚರಿಕೆಯ ಆಟಕ್ಕೆ ಮುಂದಾದರೆ, ಅಕ್ಷರ್‌ ಆಕ್ರಮಣಕಾರಿಯಾಗಿ ಆಡಿ ತಂಡದ ರನ್‌ರೇಟ್‌ ಕುಸಿಯದಂತೆ ನೋಡಿಕೊಂಡರು. 31 ಎಸೆತದಲ್ಲಿ 1 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 47 ರನ್‌ ಸಿಡಿಸಿದ ಅಕ್ಷರ್‌, 72 ರನ್‌ ಜೊತೆಯಾಟದ ಬಳಿಕ ಅನಗತ್ಯ ರನ್‌ಗೆ ಯತ್ನಿಸಿ ವಿಕೆಟ್‌ ಕಳೆದುಕೊಂಡರು. ಬಳಿಕ ಕೊಹ್ಲಿಗೆ ಜೊತೆಯಾಗಿದ್ದು ಶಿವಂ ದುಬೆ. ತಮ್ಮ ಮೇಲೆ ಭಾರಿ ನಂಬಿಕೆಯಿಟ್ಟು ಆಡುವ ಹನ್ನೊಂದರಲ್ಲಿ ಉಳಿಸಿಕೊಂಡಿದ್ದಕ್ಕೆ ದುಬೆ ನ್ಯಾಯ ಒದಗಿಸಿದರು. 16 ಎಸೆತದಲ್ಲಿ 28 ರನ್‌ ಗಳಿಸಿ 5ನೇ ವಿಕೆಟ್‌ಗೆ 56 ರನ್‌ ಜೊತೆಯಾಟದಲ್ಲಿ ಭಾಗಿಯಾದರು.

ಮೊದಲ ಫಿಫ್ಟಿ: ಅರ್ಧಶತಕ ಬಾರಿಸಲು 48 ಎಸೆತ ತೆಗೆದುಕೊಂಡ ಕೊಹ್ಲಿ, ಆ ಬಳಿಕ ಅಬ್ಬರಿಸಿದರು. ಅತ್ಯಂತ ಕಷ್ಟದ ಪರಿಸ್ಥಿತಿಯಿಂದ ತಂಡವನ್ನು ಮೇಲೆತ್ತಿದ ವಿರಾಟ್‌, ತಾವೆದುರಿಸಿದ ಕೊನೆಯ 11 ಎಸೆತದಲ್ಲಿ 26 ರನ್‌ ಚಚ್ಚಿದರು. 59 ಎಸೆತದಲ್ಲಿ 6 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 76 ರನ್‌ ಗಳಿಸಿ ತಂಡದ ಪಾಲಿಗೆ ಆಪತ್ಭಾಂದವರಾದರು. ಕೊನೆಯ 3 ಓವರಲ್ಲಿ 44 ರನ್‌ ಚಚ್ಚಿದ ಭಾರತ, ಟಿ20 ವಿಶ್ವಕಪ್‌ ಫೈನಲ್‌ಗಳಲ್ಲೇ ಅತಿದೊಡ್ಡ ಮೊತ್ತದ ದಾಖಲೆ ಬರೆಯಿತು.

Share this article