ಪದಕ ಗಳಿಕೆಯಲ್ಲಿ ಬಂಗಾರದ ದಾಖಲೆ ಬರೆದ ಭಾರತ : ಟೋಕಿಯೋ ಗೇಮ್ಸ್‌ನ ದಾಖಲೆ ಪತನ, ಸಂಭ್ರಮಾಚರಣೆ

KannadaprabhaNewsNetwork | Updated : Sep 07 2024, 04:03 AM IST

ಸಾರಾಂಶ

ಒಟ್ಟಾರೆ ಪದಕ ಗಳಿಕೆಯಲ್ಲಿ ಈಗಾಗಲೇ ಭಾರತ ಸಾರ್ವಕಾಲಿಕ ಗರಿಷ್ಠ ಸಾಧನೆ ಮಾಡಿದೆ. ಟೋಕಿಯೋದಲ್ಲಿ 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚು ಸೇರಿ 19 ಪದಕ ಲಭಿಸಿದ್ದರೆ, ಪ್ಯಾರಿಸ್‌ನಲ್ಲಿ 6 ಚಿನ್ನ, 9 ಬೆಳ್ಳಿ ಹಾಗೂ 11 ಕಂಚಿನೊಂದಿಗೆ 26 ಪದಕ ತನ್ನದಾಗಿಸಿಕೊಂಡಿದೆ.

ಪ್ಯಾರಿಸ್‌: ಈ ಬಾರಿ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಮತ್ತೊಂದು ದಾಖಲೆ ನಿರ್ಮಿಸಿದೆ. ಪ್ಯಾರಾಲಿಂಪಿಕ್ಸ್‌ ಆವೃತ್ತಿಯೊಂದರಲ್ಲಿ ಗರಿಷ್ಠ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ. 

ಈ ಬಾರಿ ಭಾರತಕ್ಕೆ ಒಟ್ಟು 6 ಚಿನ್ನದ ಪದಕ ಲಭಿಸಿದೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಗೆದ್ದಿದ್ದ 5 ಚಿನ್ನದ ಪದಕಗಳ ದಾಖಲೆ ಪತನಗೊಂಡಿತು. ಒಟ್ಟಾರೆ ಪದಕ ಗಳಿಕೆಯಲ್ಲಿ ಈಗಾಗಲೇ ಭಾರತ ಸಾರ್ವಕಾಲಿಕ ಗರಿಷ್ಠ ಸಾಧನೆ ಮಾಡಿದೆ. ಟೋಕಿಯೋ ಕ್ರೀಡಾಕೂಟದಲ್ಲಿ ಭಾರತಕ್ಕೆ 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚು ಸೇರಿ 19 ಪದಕ ಲಭಿಸಿದ್ದರೆ, ಪ್ಯಾರಿಸ್‌ನಲ್ಲಿ 6 ಚಿನ್ನ, 9 ಬೆಳ್ಳಿ ಹಾಗೂ 11 ಕಂಚಿನೊಂದಿಗೆ 26 ಪದಕ ತನ್ನದಾಗಿಸಿಕೊಂಡಿದೆ.

ಮೊದಲ ಸಲ ಅಗ್ರ-20ರಲ್ಲಿ ಸ್ಥಾನ ಗಿಟ್ಟಿಸುವ ವಿಶ್ವಾಸ

ಭಾರತ ಸದ್ಯ ಪ್ಯಾರಿಸ್‌ ಕ್ರೀಡಾಕೂಟದ ಪದಕ ಪಟ್ಟಿಯಲ್ಲಿ 14ನೇ ಸ್ಥಾನದಲ್ಲಿದೆ. ಇದು ಈವರೆಗಿನ ಶ್ರೇಷ್ಠ ಪ್ರದರ್ಶನ. ಕ್ರೀಡಾಕೂಟ ಇನ್ನೂ 2 ದಿನ ಬಾಕಿಯಿದ್ದು, ಭಾರತ ಅಗ್ರ-10ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಕಾತರದಲ್ಲಿದೆ. ಅದಾಗ್ಯೂ ಭಾರತ ಇದೇ ಮೊದಲ ಬಾರಿ ಅಗ್ರ-20ರೊಳಗೆ ಸ್ಥಾನ ಪಡೆಯುವ ಎಲ್ಲಾ ಸಾಧ್ಯತೆಗಳಿವೆ. 1972ರಲ್ಲಿ ಕೇವಲ 1 ಚಿನ್ನ ಗೆದ್ದಿದ್ದ ಭಾರತ, ಪದಕ ಪಟ್ಟಿಯಲ್ಲಿ 25ನೇ ಸ್ಥಾನ ಪಡೆದಿತ್ತು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ 24ನೇ ಸ್ಥಾನಿಯಾಗಿದ್ದು ಭಾರತದ ಈವರೆಗಿನ ಶ್ರೇಷ್ಠ ಪ್ರದರ್ಶನ.

25 ಮೆಡಲ್‌: ಜೈಕಾರ ಕೂಗಿ ಸಂಭ್ರಮಿಸಿದ ಭಾರತ

ಪ್ಯಾರಾಲಿಂಪಿಕ್ಸ್‌ನಲ್ಲಿ 25 ಪದಕಗಳ ಗುರಿ ಸಾಧಿಸಿದ ಹಿನ್ನೆಲೆಯಲ್ಲಿ ಪ್ಯಾರಿಸ್‌ನ ಕ್ರೀಡಾ ಗ್ರಾಮದಲ್ಲಿ ಭಾರತದ ಕ್ರೀಡಾಪಟುಗಳು, ಕೋಚ್‌ಗಳು ಹಾಗೂ ಅಧಿಕಾರಿಗಳು ಸಂಭ್ರಮಾಚರಣೆ ನಡೆಸಿದರು. ಭಾರತ ಜಿಂದಾಬಾದ್ ಎಂದು ಘೋಷಣೆ ಕೂಗಿ ಸಂತಸಪಟ್ಟರು.

Share this article