ಸರಣಿ ವೈಟ್‌ವಾಶ್‌ ಭೀತಿಯಲ್ಲಿ ಟೀಂ ಇಂಡಿಯಾ

KannadaprabhaNewsNetwork |  
Published : Nov 25, 2025, 02:00 AM IST
cricket

ಸಾರಾಂಶ

ಸರಣಿ ವೈಟ್‌ವಾಶ್‌ ಭೀತಿಯಲ್ಲಿ ಟೀಂ ಇಂಡಿಯಾ -2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ 489 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿದ ಬಳಿಕ ಪ್ರತಿಕ್ರಿಯಿಸಿದ್ದ ಭಾರತದ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌, ಈ ಪಿಚ್‌ ರೋಡ್‌ (ರಸ್ತೆ) ರೀತಿ ಇದೆ ಎಂದಿದ್ದರು.

 ಗುವಾಹಟಿ :  2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ 489 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿದ ಬಳಿಕ ಪ್ರತಿಕ್ರಿಯಿಸಿದ್ದ ಭಾರತದ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌, ಈ ಪಿಚ್‌ ರೋಡ್‌ (ರಸ್ತೆ) ರೀತಿ ಇದೆ ಎಂದಿದ್ದರು. ಅವರ ಮಾತುಗಳನ್ನು ಕೇಳಿ ಭಾರತೀಯರು ದೊಡ್ಡ ಮೊತ್ತ ಕಲೆಹಾಕಬಹುದು ಎಂದುಕೊಂಡಿದ್ದವರಿಗೆ 3ನೇ ದಿನದಾಟ ಅಚ್ಚರಿ ಹಾಗೂ ಆಘಾತ ಎರಡನ್ನೂ ಮೂಡಿಸಿತು.

ಭಾರತದ ಕಳಪೆ ಬ್ಯಾಟಿಂಗ್‌ ನೋಡಿ ಆಘಾತವಾದರೆ, ಬೌಲರ್‌ಗಳಿಗೆ ಅಷ್ಟಾಗೇನೂ ನೆರವು ನೀಡದ ಪಿಚ್‌ನಲ್ಲಿ ದ.ಆಫ್ರಿಕಾದ ಆರೂವರೆ ಅಡಿ ಎತ್ತರದ ವೇಗಿ ಮಾರ್ಕೊ ಯಾನ್ಸನ್‌ರ ಶಾರ್ಟ್‌ ಪಿಚ್ಡ್‌ ಬೌಲಿಂಗ್‌ ದಾಳಿ ಎಚ್ಚರನ್ನೂ ಅಚ್ಚರಿಗೊಳಿಸಿತು.

2ನೇ ದಿನಕ್ಕೆ ವಿಕೆಟ್‌ ನಷ್ಟವಿಲ್ಲದೆ 9 ರನ್‌

2ನೇ ದಿನಕ್ಕೆ ವಿಕೆಟ್‌ ನಷ್ಟವಿಲ್ಲದೆ 9 ರನ್‌ ಗಳಿಸಿದ್ದ ಭಾರತ, 3ನೇ ದಿನ ತಕ್ಕಮಟ್ಟಿಗಿನ ಆರಂಭ ಪಡೆಯಿತು. ಆದರೆ ಸಿಕ್ಕ ಆರಂಭವನ್ನು ಗಟ್ಟಿಯಾಗಿ ಮುಂದುವರಿಸಲು ಭಾರತ ವಿಫಲವಾಯಿತು. ರಾಹುಲ್‌ 22 ರನ್‌ ಗಳಿಸಿ ಔಟದರು. ಯಶಸ್ವಿ ಜೈಸ್ವಾಲ್‌ (58) ಔಟಾಗುತ್ತಿದ್ದಂತೆ ಭಾರತದ ಬ್ಯಾಟಿಂಗ್‌ ಪತನ ಆರಂಭಗೊಂಡಿತು.

ಒಂದು ಹಂತದಲ್ಲಿ 1 ವಿಕೆಟ್‌ ನಷ್ಟಕ್ಕೆ 95 ರನ್‌ ಗಳಿಸಿದ್ದ ಭಾರತ, ದಿಢೀರನೆ ಕುಸಿದು 122ಕ್ಕೆ 7 ವಿಕೆಟ್ ಕಳೆದುಕೊಂಡಿತು. ಕೇವಲ 27 ರನ್‌ಗೆ 6 ವಿಕೆಟ್‌ ಪತನಗೊಂಡ ಬಳಿಕ ಆ ಆಘಾತದಿಂದ ಹೊರಬರಲು ಭಾರತಕ್ಕೆ ದಾರಿಯೇ ಇರಲಿಲ್ಲ.

ಸಾಯಿ ಸುದರ್ಶನ್‌ (15) ಅವಕಾಶ ವ್ಯರ್ಥ

ಸಾಯಿ ಸುದರ್ಶನ್‌ (15) ಅವಕಾಶ ವ್ಯರ್ಥ ಮಾಡಿದರೆ, ಧೃವ್‌ ಜುರೆಲ್‌ (0)ಗೆ ಖಾತೆ ತೆರೆಯಲು ಸಹ ಆಗಲಿಲ್ಲ. ತಂಡ ಸಂಕಷ್ಟದಲ್ಲಿದ್ದಾಗಲೂ ರಿಷಭ್‌ ಪಂತ್‌ (07) ತಾಳ್ಮೆಯಿಂದ ಆಡುವ ಪ್ರಬುದ್ಧತೆ ತೋರಲಿಲ್ಲ. ರವೀಂದ್ರ ಜಡೇಜಾ (06), ನಿತೀಶ್‌ ರೆಡ್ಡಿ (10)ಯಿಂದ ಹೋರಾಟ ಕಂಡುಬರಲಿಲ್ಲ. ಯಾನ್ಸನ್‌ರ ಶಾರ್ಟ್‌ ಪಿಚ್ಡ್‌ ಎಸೆತಗಳು ಭಾರತೀಯರನ್ನು ನೆಲಕ್ಕುರುಳಿಸಿದವು.

ವಾಷಿಂಗ್ಟನ್‌ ಸುಂದರ್‌(48) ಹಾಗೂ ಕುಲ್ದೀಪ್‌ ಯಾದವ್‌ (134 ಎಸೆತದಲ್ಲಿ 19 ರನ್‌) ಕೊಂಚ ಪ್ರತಿರೋಧ ತೋರಿ ತಂಡದ ಮೊತ್ತ 200 ರನ್‌ ದಾಟಲು ಕಾರಣರಾದರು. 83.5 ಓವರಲ್ಲಿ ಭಾರತ 201 ರನ್‌ಗೆ ಆಲೌಟ್‌ ಆಯಿತು. ಯಾನ್ಸನ್‌ 48 ರನ್‌ಗೆ 6 ವಿಕೆಟ್‌ ಕಬಳಿಸಿದರು.

288 ರನ್‌ ಮುನ್ನಡೆ ಪಡೆದರೂ ದ.ಆಫ್ರಿಕಾ ಫಾಲೋ ಆನ್‌ ಹೇರಲಿಲ್ಲ. 2ನೇ ಇನ್ನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿರುವ ಪ್ರವಾಸಿ ತಂಡ 3ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 26 ರನ್‌ ಗಳಿಸಿದ್ದು, ಒಟ್ಟಾರೆ 314 ರನ್‌ ಮುನ್ನಡೆ ಪಡೆದಿದೆ. 4ನೇ ದಿನ ಮೊದಲ ಅವಧಿ ಬ್ಯಾಟ್‌ ಮಾಡಿ ಭಾರತಕ್ಕೆ 450ರ ಆಸುಪಾಸಿನಲ್ಲಿ ಗುರಿ ನಿಗದಿಪಡಿಸುವ ನಿರೀಕ್ಷೆ ಇಟ್ಟುಕೊಂಡಿದೆ. 2ನೇ ಇನ್ನಿಂಗ್ಸಲ್ಲಿ ಭಾರತವನ್ನು ಆಲೌಟ್‌ ಮಾಡಲು ದ.ಆಫ್ರಿಕಾ 120-130 ಓವರ್‌ ಉಳಿಸಿಕೊಳ್ಳುವ ಸಾಧ್ಯತೆ ಇದ್ದು, ಸದ್ಯದ ಮಟ್ಟಿಗೆ ದ.ಆಫ್ರಿಕಾ ಐತಿಹಾಸಿಕ ಸರಣಿ ಕ್ಲೀನ್‌ ಸ್ವೀಪ್‌ ಬಗ್ಗೆ ಕನಸು ಕಾಣುತ್ತಿದೆ. ಸ್ಕೋರ್‌: ದ.ಆಫ್ರಿಕಾ 489 ಹಾಗೂ 26/0, ಭಾರತ 201/10 (ಜೈಸ್ವಾಲ್‌ 58, ವಾಷಿಂಗ್ಟನ್‌ 48, ಯಾನ್ಸನ್‌ 6-48)

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಟಿ20 ವಿಶ್ವಕಪ್‌ ಮುನ್ನ ಭಾರತಕ್ಕೆ ಕೊನೆ ಚಾಲೆಂಜ್‌
ಭಾರತಕ್ಕೆ ಬರದಿದ್ದರೆ ವಿಶ್ವಕಪ್‌ನಿಂದ ಹೊರಕ್ಕೆ : ಬಾಂಗ್ಲಾಗೆ ಐಸಿಸಿ ಎಚ್ಚರಿಕೆ