ಟಿ20 ವಿಶ್ವಕಪ್‌ಗೆ ಭಾರತದ ತಯಾರಿ ಶುರು: ಬಿಸಿಲಿನಲ್ಲೇ ಆಟಗಾರರ ಅಭ್ಯಾಸ

KannadaprabhaNewsNetwork |  
Published : May 30, 2024, 12:53 AM ISTUpdated : May 30, 2024, 04:44 AM IST
ಭಾರತ ತಂಡ | Kannada Prabha

ಸಾರಾಂಶ

ಭಾರತಕ್ಕೆ ಗುಂಪು ಹಂತದ ಎಲ್ಲಾ ಪಂದ್ಯಗಳು ಹಗಲಿನಲ್ಲಿ ಆಯೋಜನೆ. ಹೀಗಾಗಿ ಬಿಸಿಲಲ್ಲೇ ಮೈದಾನಕ್ಕಿಳಿದ ಟೀಂ ಇಂಡಿಯಾ ಆಟಗಾರರು. ವಿಶ್ವಕಪ್‌ ಆರಂಭಕ್ಕೂ ಮುನ್ನ ಅಮೆರಿಕ, ವೆಸ್ಟ್‌ಇಂಡೀಸ್‌ ವಾತಾವರಣಕ್ಕೆ ಹೊಂದಿಕೊಳ್ಳುವ ಸವಾಲು.

ನ್ಯೂಯಾರ್ಕ್‌: ಕಳೆದೆರಡು ತಿಂಗಳುಗಳಿಂದ ಐಪಿಎಲ್‌ನಲ್ಲಿ ತಲ್ಲೀನರಾಗಿದ್ದ ಭಾರತೀಯ ಆಟಗಾರರು ಕೆಲ ದಿನಗಳ ಬಿಡುವಿನ ಬಳಿಕ ಐಸಿಸಿ ಟಿ20 ವಿಶ್ವಕಪ್‌ಗೆ ತಯಾರಿ ಆರಂಭಿಸಿದ್ದಾರೆ. ದಿನಗಳ ಹಿಂದಷ್ಟೇ ಅಮೆರಿಕದ ವಿಮಾನವೇರಿದ್ದ ಟೀಂ ಇಂಡಿಯಾ ಆಟಗಾರರು ಬುಧವಾರ ಬೆಳಗ್ಗೆ ನ್ಯೂಯಾರ್ಕ್‌ನ ಮೈದಾನದಲ್ಲಿ ಕಾಣಿಸಿಕೊಂಡಿದ್ದು, ಕೆಲ ಗಂಟೆಗಳ ಕಾಲ ಅಭ್ಯಾಸ ನಡೆಸಿದರು.

ನಾಯಕ ರೋಹಿತ್‌ ಶರ್ಮಾ, ಉಪನಾಯಕ ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಜಸ್‌ಪ್ರೀತ್‌ ಬೂಮ್ರಾ, ರಿಷಭ್‌ ಪಂತ್‌, ಮೊಹಮದ್ ಸಿರಾಜ್‌, ಸೂರ್ಯಕುಮಾರ್‌ ಯಾದವ್‌, ಕುಲ್ದೀಪ್‌ ಯಾದವ್‌, ಸಂಜು ಸ್ಯಾಮ್ಸನ್‌, ಅರ್ಶ್‌ದೀಪ್‌ ಸಿಂಗ್‌, ಶಿವಂ ದುಬೆ ಸೇರಿದಂತೆ ಬಹುತೇಕ ಆಟಗಾರರು ಕೆಲ ಕಾಲ ಜಾಗಿಂಗ್‌ ನಡೆಸಿ, ಫುಟ್ಬಾಲ್‌ ಆಡಿದರು.

 ಸಹಾಯಕ ಸಿಬ್ಬಂದಿ ಕೂಡಾ ಆಟಗಾರರ ಜೊತೆ ಕಾಣಿಸಿಕೊಂಡರು.ಬಿಸಿಲಿನ ಸವಾಲು: ಭಾರತೀಯ ಆಟಗಾರರು ಕಳೆದೆರಡು ತಿಂಗಳಲ್ಲಿ ಐಪಿಎಲ್‌ನ ಬಹುತೇಕ ಪಂದ್ಯಗಳನ್ನು ರಾತ್ರಿ ವೇಳೆ ಆಡಿದ್ದಾರೆ. ಆದರೆ ಟಿ20 ವಿಶ್ವಕಪ್‌ನ ಗುಂಪು ಹಂತದ ಭಾರತದ ಪಂದ್ಯಗಳು ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ಹಗಲಿನಲ್ಲಿ ನಡೆಯುತ್ತವೆ. 

ಹೀಗಾಗಿ ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಭಾರತದ ಆಟಗಾರರು ಬುಧವಾರ ಹಗಲಿನಲ್ಲೇ ಅಭ್ಯಾಸ ಶುರು ಮಾಡಿದರು. ಇಲ್ಲಿ ಸಾಮಾನ್ಯವಾಗಿ 25ರಿಂದ 27 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಹೀಗಾಗಿ ವಿಶ್ವಕಪ್‌ ಆರಂಭಕ್ಕೂ ಮುನ್ನ ಭಾರತೀಯ ಆಟಗಾರರಿಗೆ ಈ ವಾತಾವರಣಕ್ಕೆ ಒಗ್ಗಿಕೊಳ್ಳುವ ಅಗತ್ಯವಿದೆ. 

ಸಾಮಾನ್ಯವಾಗಿ ಸಂಜೆ ಬಳಿಕ ಅಭ್ಯಾಸ ನಡೆಸುವ ಭಾರತೀಯ ಆಟಗಾರರು ಸ್ಥಳೀಯ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಬಿಸಿಲಲ್ಲೇ ತಯಾರಿ ಆರಂಭಿಸಿದರು. ಆದರೆ ಮೊದಲ ದಿನ ಕೇವಲ ಆಟೋಟದಲ್ಲಿ ತೊಡಗಿಸಿಕೊಂಡ ಆಟಗಾರರು ಗುರುವಾರದಿಂದ ನೆಟ್‌ ಅಭ್ಯಾಸ ನಡೆಸಲಿದ್ದಾರೆ.ಸದ್ಯ ಭಾರತ ತಂಡದಲ್ಲಿರುವ ಹಲವು ಆಟಗಾರರು ಕಳೆದ ವರ್ಷ ವೆಸ್ಟ್‌ಇಂಡೀಸ್‌ ವಿರುದ್ಧ ಫ್ಲೋರಿಡಾ, ಗಯಾನಾದಲ್ಲಿ ಸರಣಿ ಆಡಿದ್ದರು. ಆದರೆ ಕೆಲ ಆಟಗಾರರು ಇದೇ ಮೊದಲ ಬಾರಿ ವೆಸ್ಟ್‌ಇಂಡೀಸ್‌, ಅಮೆರಿಕದಲ್ಲಿ ಆಡಲು ಸಜ್ಜಾಗಿದ್ದು, ಕಠಿಣ ಸವಾಲು ಎದುರಾಗಲಿದೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ