ಬೆಂಗಳೂರು : ಭಾನುವಾರ ನಡೆದ ಬೆಂಗಳೂರು ಮ್ಯಾರಥಾನ್‌ನಲ್ಲಿ ಕಾರ್ತಿಕ್ ಕುಮಾರ್ ಹಾಗೂ ಕೆ.ಎಂ.ಲಕ್ಷ್ಮಿ ಕ್ರಮವಾಗಿ ಎಲೈಟ್ ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣ ಕೇಂದ್ರವಾಗಿಟ್ಟುಕೊಂಡು ನಡೆದ ಮ್ಯಾರಥಾನ್‌ನಲ್ಲಿ ಭಾರತೀಯ ಸೇನೆಯ ಕಾರ್ತಿಕ್ 2 ಗಂಟೆ 22.50 ನಿಮಿಷಗಳಲ್ಲಿ ಗುರಿ ತಲುಪಿದರು.
ಸೇನೆಯ ಪ್ರದೀಪ್ ಸಿಂಗ್(2 ಗಂಟೆ 23.35 ನಿ.) ದ್ವಿತೀಯ, ರೈಲ್ವೇಸ್‌ನ ಹರ್ಷದ್(2 ಗಂಟೆ 25:50 ನಿ.) 3ನೇ ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ ರೈಲ್ವೇಸ್‌ನ ಲಕ್ಷ್ಮಿ 3 ಗಂಟೆ 00.21 ನಿಮಿಷಗಳಲ್ಲಿ ಕ್ರಮಿಸಿದರು.
ಹಾಫ್ ಮ್ಯಾರಥಾನ್ ಪುರುಷರ ವಿಭಾಗದಲ್ಲಿ ಅಶೋಕ್, ಮಹಿಳಾ ವಿಭಾಗದಲ್ಲಿ ತೇಜಶ್ವಿನಿ, ಪುರುಷರ 10ಕೆ ಓಟದಲ್ಲಿ ಆವಿಕ್ ಭಟ್ಟಾಚಾರ್ಯ, ಮಹಿಳಾ ವಿಭಾಗದಲ್ಲಿ ಭಾರತಿ ಚಾಂಪಿಯನ್ ಆದರು. ವಿವಿಧ ವಿಭಾಗಗಳ ರೇಸ್‌ನಲ್ಲಿ ಒಟ್ಟಾರೆ 30000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡರು. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಫಿಬಾ ಏಷ್ಯಾ ಅಧ್ಯಕ್ಷ ಡಾ.ಕೆ.ಗೋವಿಂದರಾಜು, ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್, ಸಂಸದ ತೇಜಸ್ವಿ ಸೂರ್ಯ ಸೇರಿ ಪ್ರಮುಖರು ರೇಸ್ ವೇಳೆ ಉಪಸ್ಥಿತರಿದ್ದರು.
ಜೋಹರ್ ಕಪ್ ಹಾಕಿ: ಭಾರತಕ್ಕೆ ಅಲಿ ನಾಯಕ
ಬೆಂಗಳೂರು: ಅ.19ರಿಂದ ಮಲೇಷ್ಯಾದಲ್ಲಿ ನಡೆಯಲಿರುವ ಸುಲ್ತಾನ್ ಆಫ್ ಜೋಹರ್ ಕಪ್ ಕಿರಿಯರ ಹಾಕಿ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದ್ದು, ಡಿಫೆಂಡರ್ ಅಮೀರ್ ಅಲಿ ನಾಯಕನಾಗಿ ನೇಮಕಗೊಂಡಿದ್ದಾರೆ. 18 ಆಟಗಾರರ ತಂಡದಲ್ಲಿ ರೋಹಿತ್ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ.
ಕಿರಿಯರ ತಂಡದ ಕೋಚ್ ಆಗಿ ನೇಮಕಗೊಂಡಿರುವ ದಿಗ್ಗಜ ಗೋಲ್‌ಕೀಪರ್ ಶ್ರೀಜೇಶ್ ಮೊದಲ ಬಾರಿ ಹುದ್ದೆ ನಿಭಾಯಿಸಲಿದ್ದಾರೆ. ಭಾರತ ತಂಡ ಅ.19ರಂದು ಜಪಾನ್ ವಿರುದ್ಧ ಮೊದಲ ಪಂದ್ಯ ಆಡಲಿದೆ. ಬಳಿಕ ಅ.20ಕ್ಕೆ ಗ್ರೇಟ್ ಬ್ರಿಟನ್, ಅ.22ಕ್ಕೆ ಮಲೇಷ್ಯಾ, ಅ.23ಕ್ಕೆ ಆಸ್ಟ್ರೇಲಿಯಾ ಹಾಗೂ ಅ.25ಕ್ಕೆ ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿದೆ. ಅಗ್ರ-2 ತಂಡಗಳು ಅ.26ಕ್ಕೆ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.