ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಬಳಿಕ 8 ದಿನಗಳ ವಿಶ್ರಾಂತಿ ಸಮಯದಲ್ಲಿ ಭಾರತ ತಂಡದ ಚಿತ್ರಣವೇ ಬದಲಾಗಿದೆ. ಹಲವರ ಗಾಯ, ಫಿಟ್ನೆಸ್ ಸಮಸ್ಯೆಯಿಂದಾಗಿ ತಂಡ ನಲುಗಿ ಹೋಗಿದೆ. ಇದರ ನಡುವೆಯೂ ತಂಡ ಬುಧವಾರದಿಂದ ನಿರ್ಣಾಯಕ 4ನೇ ಟೆಸ್ಟ್ ಪಂದ್ಯದಿಂದ ಕಣಕ್ಕಿಳಿಯಲಿದೆ.
ಈ ಟೆಸ್ಟ್ 2 ಕಾರಣಗಳಿಂದಾಗಿ ಭಾರತಕ್ಕೆ ಮಹತ್ವದ್ದು. ಒಂದು, ಭಾರತ ಈ ಕ್ರೀಡಾಂಗಣದಲ್ಲಿ 9 ದಶಕದಲ್ಲಿ ಒಮ್ಮೆಯೂ ಟೆಸ್ಟ್ ಗೆದ್ದಿಲ್ಲ. ಮತ್ತೊಂದು, ಈ ಟೆಸ್ಟ್ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಸೋತರೆ ಸರಣಿಯನ್ನೇ ಕಳೆದುಕೊಳ್ಳಲಿದೆ.ಶುಭ್‌ಮನ್ ಗಿಲ್ ಸಾರಥ್ಯದ ಭಾರತ ಈ ಬಾರಿ ನೀಡಿರುವ ಪ್ರದರ್ಶನ ಗಮನಿಸಿದರೆ ತಂಡ ಈಗಾಗಲೇ 3-0 ಅಂತರದಲ್ಲಿ ಗೆದ್ದಿರಬೇಕಿತ್ತು.
ಲೀಡ್ಸ್‌ನಲ್ಲಿ ತನ್ನದೇ ಹತ್ತಾರು ಎಡವಟ್ಟುಗಳಿಂದ ಸೋತಿದ್ದ ಭಾರತ, ಲೀಡ್ಸ್‌ನಲ್ಲಿ ಹೋರಾಡಿ ಪಂದ್ಯ ಕೈಚೆಲ್ಲಿತ್ತು. ಆದರೆ ಎಜ್‌ಬಾಸ್ಟನ್‌ನಲ್ಲಿ ಮಾತ್ರ ಐತಿಹಾಸಿಕ ಗೆಲುವು ಸಾಧಿಸಿದೆ. ಅಂಥದ್ದೇ ಮತ್ತೊಂದು ಐತಿಹಾಸಿಕ ಗೆಲುವಿಗಾಗಿ ಭಾರತ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಕಾಯುತ್ತಿದೆ.ಆಯ್ಕೆ ಗೊಂದಲ: ಕೈಬೆರಳಿನ ಗಾಯಕ್ಕೆ ತುತ್ತಾಗಿದ್ದ ರಿಷಭ್ ಪಂತ್ ವಿಕೆಟ್ ಕೀಪಿಂಗ್ ಮಾಡುವ ಬಗ್ಗೆ ಗೊಂದಲ ಎದುರಾಗಿತ್ತು.
ಈ ಬಗ್ಗೆ ಸ್ವತಃ ನಾಯಕ ಗಿಲ್ ಸ್ಪಷ್ಟನೆ ನೀಡಿದ್ದು, ರಿಷಭ್ ಕೀಪರ್ ಆಗಿಯೇ ಕಣಕ್ಕಿಳಿಯಲಿದ್ದಾರೆ ಎಂದಿದ್ದಾರೆ. ಮತ್ತೊಂದೆಡೆ ಪ್ರಮುಖ ವೇಗಿ ಜಸ್‌ಪ್ರೀತ್ ಬೂಮ್ರಾ ಆಡುವುದು ಖಚಿತವಾಗಿದೆ. ಗಾಯಾಳು ಆಕಾಶ್‌ದೀಪ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಗಿಲ್ ತಿಳಿಸಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಯುವ ವೇಗಿ ಅನ್ಶುಲ್ ಕಂಬೋಜ್‌ಗೆ ಪಾದಾರ್ಪಣೆ ಭಾಗ್ಯ ಸಿಗಲಿದೆಯೇ ಅಥವಾ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಅವಕಾಶ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು, ಲಯ ಕಂಡುಕೊಳ್ಳಲು ಪರದಾಡುತ್ತಿರುವ ಕರುಣ್ ನಾಯರ್ ಮತ್ತೆ ಆಡುವ 11ರ ಬಳಗದಲ್ಲಿ ಕಾಣಸಿಕೊಳ್ಳಲಿದ್ದಾರೊ ಎಂಬುದು ಮತ್ತೊಂದು ಯಕ್ಷ ಪ್ರಶ್ನೆ. ನಿತೀಶ್ ರೆಡ್ಡಿ ಹೊರಬಿದ್ದಿದ್ದರಿಂದ ಅವರ ಸ್ಥಾನ ಯಾರ ಪಾಲಾಗಲಿದೆ ಎಂಬುದೂ ಖಚಿತವಾಗಿಲ್ಲ. ಸಾಯಿ ಸುದರ್ಶನ್‌ಗೆ ಅವಕಾಶ, 2ನೇ ಸ್ಪಿನ್ನರ್, ಆಲ್ರೌಂಡರ್‌ಗಳ ಆಯ್ಕೆ ಬಗ್ಗೆ ಇರುವ ಗೊಂದಲಗಳಿಗೆ ಟಾಸ್ ಸಮಯದಲ್ಲಷ್ಟೇ ಸ್ಪಷ್ಟ ಉತ್ತರ ಸಿಗಲಿದೆ.ಇದೆಲ್ಲರದ ನಡುವೆ ನಾಯಕ ಗಿಲ್, ಯಶಸ್ವಿ ಜೈಸ್ವಾಲ್, ಕನ್ನಡಿಗ ಕೆ.ಎಲ್.ರಾಹುಲ್, ರಿಷಭ್ ಪಂತ್ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ಮೋಡಿ ಮಾಡಲು ಕಾಯುತ್ತಿದ್ದಾರೆ.
ಸರಣಿ ಗೆಲುವಿನ ತವಕ:
ಇಂಗ್ಲೆಂಡ್ ತಂಡ ಆತ್ಮವಿಶ್ವಾದೊಂದಿಗೆ ಈ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದ್ದು, ಸರಣಿ ಗೆಲುವಿನ ವಿಶ್ವಾಸದಲ್ಲಿದೆ. ತಂಡ ಈಗಾಗಲೇ ಆಡುವ 11ರ ಬಳಗವನ್ನು ಪ್ರಕಟಿಸಿದ್ದು, ಗಾಯಾಳು ಶೋಯೆಬ್ ಬಶೀರ್ ಬದಲು ಲಿಯಾಮ್ ಡಾವ್ಸನ್ ಆಡಲಿದ್ದಾರೆ.
ಪಂದ್ಯಕ್ಕೆ ಮಳೆ ಅಡ್ಡಿ ಭೀತಿ
ಮ್ಯಾಂಚೆಸ್ಟರ್‌ನಲ್ಲಿ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಪಂದ್ಯಕ್ಕೂ ಅಡ್ಡಿಪಡಿಸುವ ಸಾಧ್ಯತೆಯಿದೆ. ಮೊದಲ ದಿನ(ಜು.23) ಶೇ.60ರಷ್ಟು ಮಳೆ ನಿರೀಕ್ಷೆಯಿದೆ. ಉಳಿದ 4 ದಿನಗಳಲ್ಲೂ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆಟಗಾರರ ಪಟ್ಟಿ
ಭಾರತ(ಸಂಭವನೀಯ): ರಾಹುಲ್, ಜೈಸ್ವಾಲ್, ಕರುಣ್, ಗಿಲ್(ನಾಯಕ), ರಿಷಭ್, ಸುದರ್ಶನ್, ಜಡೇಜಾ, ವಾಷಿಂಗ್ಟನ್/ಶಾರ್ದೂಲ್, ಅನ್ಶುಲ್/ಪ್ರಸಿದ್ಧ್, ಬೂಮ್ರಾ, ಸಿರಾಜ್.
ಇಂಗ್ಲೆಂಡ್(ಆಡುವ 11): ಜ್ಯಾಕ್ ಕ್ರಾವ್ಲಿ, ಡಕೆಟ್, ಓಲಿ ಪೋಪ್, ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್(ನಾಯಕ), ಜೆಮೀ ಸ್ಮಿತ್. ಡಾವ್ಸನ್, ವೋಕ್ಸ್, ಕಾರ್ಸ್, ಆರ್ಚರ್
ಪಿಚ್ ರಿಪೋರ್ಟ್
ಮ್ಯಾಂಚೆಸ್ಟರ್ ಕ್ರೀಡಾಂಗಣದ ಪಿಚ್ ವೇಗಿಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆಯಿದೆ. ಇಲ್ಲಿ ಹೆಚ್ಚಿನ ಬೌನ್ಸರ್‌ಗಳೂ ಕಂಡುಬರಲಿದೆ. ಆದರೆ ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳು ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.
ಮ್ಯಾಂಚೆಸ್ಟರ್ ಬಗ್ಗೆ ಒಂದಿಷ್ಟು...
1. ಭಾರತ ಇಲ್ಲಿ 1936ರಿಂದ ಟೆಸ್ಟ್ ಆಡುತ್ತಿದೆ. ಆದರೆ ಒಮ್ಮೆಯೂ ಗೆದ್ದಿಲ್ಲ. 9 ಪಂದ್ಯಗಳ ಪೈಕಿ 4ರಲ್ಲಿ ಸೋತಿದ್ದರೆ, 5 ಡ್ರಾಗೊಂಡಿದೆ.2. ಇಂಗ್ಲೆಂಡ್ ಮ್ಯಾಂಚೆಸ್ಟರ್‌ನಲ್ಲಿ 86 ಟೆಸ್ಟ್ ಆಡಿದೆ. 35ರಲ್ಲಿ ಗೆದ್ದಿದ್ದು, 15ರಲ್ಲಿ ಸೋತಿದೆ. 36 ಪಂದ್ಯ ಡ್ರಾಗೊಂಡಿವೆ.3. ಟೀಂ ಇಂಡಿಯಾ ಇಲ್ಲಿ ಕೊನೆ ಬಾರಿ ಆಡಿದ್ದು 2014ರಲ್ಲಿ. ಆ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 54 ರನ್‌ನಿಂದ ಸೋತಿತ್ತು.4. ಮ್ಯಾಂಚೆಸ್ಟರ್‌ನಲ್ಲಿ ಕೊನೆ ಬಾರಿ ಭಾರತದ ಬ್ಯಾಟರ್ ಶತಕ ಬಾರಿಸಿದ್ದು 1990ರಲ್ಲಿ. ಅವರಿಗೆ ಆಗ ಕೇವಲ 17 ವರ್ಷ.
5. ಇಂಗ್ಲೆಂಡ್ ಇಲ್ಲಿ ಆಡಿರುವ ಕೊನೆ 10 ಪಂದ್ಯಗಳಲ್ಲಿ ಸೋತಿದ್ದು ಒಮ್ಮೆ ಮಾತ್ರ. 8ರಲ್ಲಿ ಗೆದ್ದಿದ್ದರೆ ಮತ್ತೊಂದು ಡ್ರಾ ಆಗಿದೆ.