ಐಪಿಎಲ್ ಹರಾಜು ಪ್ರಕ್ರಿಯೆ ನಡೆದಿದ್ದು ಕೆಲ ಆಟಗಾರರು ಕೋಟಿ ಮೊತ್ತದಲ್ಲಿ ಬಿಕರಿಯಾಗಿದ್ದಾರೆ. ರಿಷಬ್ ಪಂತ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್ ಭಾರೀ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಇನ್ನು ಇದೇ ವೇಳೆ ಆರ್‌ಸಿಬಿ ತಂಡದ ಮೇಲೆ ಅಭಿಮಾನಿಗಳು ಗರಂ ಆಗಿದ್ದಾರೆ.
ದೆಹಲಿ : ಐಪಿಎಲ್ ಹರಾಜು ಪ್ರಕ್ರಿಯೆ ನಡೆದಿದ್ದು ಕೆಲ ಆಟಗಾರರು ಕೋಟಿ ಮೊತ್ತದಲ್ಲಿ ಬಿಕರಿಯಾಗಿದ್ದಾರೆ. ರಿಷಬ್ ಪಂತ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್ ಭಾರೀ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಇನ್ನು ಇದೇ ವೇಳೆ ಆರ್‌ಸಿಬಿ ತಂಡದ ಮೇಲೆ ಅಭಿಮಾನಿಗಳು ಗರಂ ಆಗಿದ್ದಾರೆ.
ಆಟಗಾರ ಮೊತ್ತ (ಕೋಟಿ ರು.ಗಳಲ್ಲಿ) ತಂಡ
ರಿಷಭ್ ಪಂತ್ 27 ಲಖನೌ
ಶ್ರೇಯಸ್ ಅಯ್ಯರ್ 26.75 ಪಂಜಾಬ್
ವೆಂಕಟೇಶ್ ಅಯ್ಯರ್ 23.75 ಕೆಕೆಆರ್
ಅರ್ಶ್‌ದೀಪ್ ಸಿಂಗ್ 18 ಪಂಜಾಬ್
ಯಜುವೇಂದ್ರ ಚಹಲ್ 18 ಪಂಜಾಬ್
ಜೋಸ್ ಬಟ್ಲರ್ 15.75 ಗುಜರಾತ್
ಕೆ.ಎಲ್.ರಾಹುಲ್ 14 ಡೆಲ್ಲಿ
ಹೇಜಲ್‌ವುಡ್ 12.5 ಆರ್‌ಸಿಬಿ
ಇಬ್ಬರು ಅಯ್ಯರ್‌ಗಳಿಗೆ ಒಟ್ಟು 50+ ಕೋಟಿ ರು.!
ಹರಾಜಿನಲ್ಲಿ ಅಯ್ಯರ್ ಹೆಸರಿನ ಇಬ್ಬರು ಬರೋಬ್ಬರಿ ₹50 ಕೋಟಿಗಿಂತ ಹೆಚ್ಚು ಮೊತ್ತಕ್ಕೆ ಬಿಕರಿಯಾದರು. ಶ್ರೇಯಸ್ ಅಯ್ಯರ್ ಪಂಜಾಬ್ ತಂಡಕ್ಕೆ ₹26.75 ಕೋಟಿಗೆ ಹರಾಜಾದರೆ, ವೆಂಕಟೇಶ್ ಅಯ್ಯರ್ ₹23.75 ಕೋಟಿಗೆ ಕೋಲ್ಕತಾ ತಂಡಕ್ಕೆ ಸೇರ್ಪಡೆಗೊಂಡರು.
-ಮತ್ತೆ ಕನ್ನಡಿಗರ ಕಡೆಗಣನೆ: ಆರ್‌ಸಿಬಿ ವಿರುದ್ಧ ಫ್ಯಾನ್ಸ್ ಕಿಡಿ
ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿ ಫ್ರಾಂಚೈಸಿಯ ನಡೆಗೆ ಅಭಿಮಾನಿಗಳಿಂದ ಈ ಬಾರಿಯೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರಮುಖವಾಗಿ ಕರ್ನಾಟಕದ ತಾರಾ ಆಟಗಾರರ ಕಡೆಗಣನೆ ಅಭಿಮಾನಿಗಳನ್ನು ಕೆರಳಿಸಿದೆ. ಕೆ.ಎಲ್.ರಾಹುಲ್‌ರನ್ನು ಆರ್‌ಸಿಬಿ ಹರಾಜಿನಲ್ಲಿ ಕೊಂಡುಕೊಳ್ಳಬಹುದು ಎಂದು ಅಭಿಮಾನಿಗಳು ಅಂದಾಜಿಸಿದ್ದರು. ರಾಹುಲ್‌ರ ಹರಾಜು ಆರಂಭಗೊಂಡಾಗ ಆರ್‌ಸಿಬಿ ಬಳಿ ಇನ್ನೂ 70 ಕೋಟಿ ರು. ಬಾಕಿ ಇತ್ತು. ಆದರೂ, ಕರ್ನಾಟಕದ ತಾರಾ ಆಟಗಾರನನ್ನು ಖರೀದಿಸದೆ ಇರಲು ನಿರ್ಧರಿಸಿದ್ದಕ್ಕೆ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಆರ್‌ಸಿಬಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲ ಮಾಜಿ ಕ್ರಿಕೆಟಿಗರು, ಸೆಲೆಬ್ರಿಟಿಗಳು ಸಹ ಆರ್‌ಸಿಬಿ ನಿರ್ಧಾರವನ್ನು ಖಂಡಿಸಿದ್ದಾರೆ. ಇನ್ನು, ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನೂ ಖರೀದಿಸಲು ಆರ್‌ಸಿಬಿ ಹಿಂದೇಟು ಹಾಕಿದ್ದಕ್ಕೂ ಟೀಕೆ ವ್ಯಕ್ತವಾಗಿದೆ. ಅಲ್ಲದೇ, ಫ್ರಾಂಚೈಸಿಯು ಹರಾಜು ಪ್ರಕ್ರಿಯೆಯಲ್ಲಿ ತೋರಿದ ತಂತ್ರಗಾರಿಕೆ ಬಗ್ಗೆಯೂ ಅನೇಕರಿಂದ ಆಕ್ಷೇಪ ವ್ಯಕ್ತವಾಗಿದೆ. ಜೋಶ್ ಹೇಜಲ್‌ವುಡ್‌ಗೆ 12.5 ಕೋಟಿ, ಜಿತೇಶ್ ಶರ್ಮಾಗೆ 11 ಕೋಟಿ ರು. ಅಗತ್ಯವಿತ್ತೇ ಎಂದು ಅಭಿಮಾನಿಗಳು ಆರ್‌ಸಿಬಿ ತಂಡದ ಆಡಳಿತವನ್ನು ಪ್ರಶ್ನಿಸಿದ್ದಾರೆ.
ಆರ್‌ಸಿಬಿಯ ಹರಾಜನ್ನು ‘ದುರಂತ’ ಎಂದು ಕರೆದಿರುವ ಫ್ಯಾನ್ಸ್, ಸಾಮಾಜಿಕ ತಾಣಗಳಲ್ಲಿ ಟ್ರೋಲ್, ಮೀಮ್ಸ್‌ಗಳನ್ನು ಪೋಸ್ಟ್ ಮಾಡಿ ವ್ಯಂಗ್ಯವಾಡಿದ್ದಾರೆ.
ಮೊದಲ ಬಿಡ್‌ನಲ್ಲೇ ಹೊಸ ಆರ್‌ಟಿಎಂ ನಿಯಮ ಬಳಕೆ!
ಹರಾಜಿಗೂ ಮುನ್ನ ತಂಡದಿಂದ ಕೈಬಿಡಲಾದ ಆಟಗಾರನನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶ ನೀಡುವ ಹೊಸ ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್ ನಿಯಮ ಮೊದಲ ಬಿಡ್‌ನಲ್ಲೇ ಬಳಕೆಯಾಯಿತು. ಪಂಜಾಬ್ ತಂಡ ಅರ್ಶ್‌ದೀಪ್ ಸಿಂಗ್‌ರನ್ನು ಆರ್‌ಟಿಎಂ ಮೂಲಕ 18 ಕೋಟಿ ರು. ನೀಡಿ ತಂಡಕ್ಕೆ ಮರಳಿ ಕರೆಸಿಕೊಂಡಿತು. ಒಂದು ಹಂತದಲ್ಲಿ ಅರ್ಶ್‌ದೀಪ್‌ಗೆ ಸನ್‌ರೈಸರ್ಸ್ ₹15.75 ಕೋಟಿ ಬಿಡ್ ಮಾಡಿತ್ತು. ಈ ವೇಳೆ ಪಂಜಾಬ್ ಆರ್‌ಟಿಎಂ ಕಾರ್ಡ್ ಬಳಸಿಕೊಂಡಿತು. ಆಗ ಬಿಡ್ ಮೊತ್ತವನ್ನು ಎಷ್ಟು ಬೇಕಾದರೂ ಹೆಚ್ಚಿಸುವ ಅವಕಾಶ ಪಡೆದ ಸನ್‌ರೈಸರ್ಸ್, ₹18 ಕೋಟಿ ಕೊಡುವುದಾಗಿ ಆಫರ್ ನೀಡಿತು. ಈ ವೇಳೆ ಪಂಜಾಬ್ ತಾನೇ 18 ಕೋಟಿ ರು. ನೀಡಿ ನಂ.1 ಬೌಲರ್ ಅನ್ನು ತನ್ನಲ್ಲೇ ಉಳಿಸಿಕೊಂಡಿತು.
ರಾಜ್ಯದ ರಾಹುಲ್, ಪ್ರಸಿದ್ಧ್ ಕೃಷ್ಣಗೆ ಬಂಪರ್: ಪಡಿಕ್ಕಲ್ ಅನ್‌ಸೋಲ್ಡ್
ಕರ್ನಾಟಕ ಕ್ರಿಕೆಟ್‌ನ 24 ಮಂದಿ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಮೊದಲ ದಿನ ಕೆ.ಎಲ್.ರಾಹುಲ್ ಹಾಗೂ ಪ್ರಸಿದ್ಧ್ ಕೃಷ್ಣ ಮಾತ್ರ ದೊಡ್ಡ ಮೊತ್ತಕ್ಕೆ ಹರಾಜಾದರು. ಕಳೆದ ಬಾರಿ ಲಖನೌ ತಂಡದಲ್ಲಿದ್ದ ರಾಹುಲ್‌ರನ್ನು ಈ ಸಲ ಡೆಲ್ಲಿ ಕ್ಯಾಪಿಟಲ್ಸ್ ₹14 ಕೋಟಿ ನೀಡಿ ಖರೀದಿಸಿತು. ರಾಜಸ್ಥಾನದಿಂದ ಹೊರಬಿದ್ದಿದ್ದ ವೇಗಿ ಪ್ರಸಿದ್ಧ್ ಕೃಷ್ಣ ₹9.50 ಕೋಟಿಗೆ ಗುಜರಾತ್ ಟೈಟಾನ್ಸ್ ಪಾಲಾದರು. ಆದರೆ ₹2 ಕೋಟಿ ಮೂಲಬೆಲೆಗೆ ಹೆಸರು ನೋಂದಾಯಿಸಿಕೊಂಡಿದ್ದ ದೇವದತ್ ಪಡಿಕ್ಕಲ್‌ರನ್ನು ಖರೀದಿಸಲು ಯಾವ ತಂಡವೂ ಮನಸು ಮಾಡಲಿಲ್ಲ. ಅವರು ಸೋಮವಾರ ಹರಾಜಾಗುವ ನಿರೀಕ್ಷೆ ಇದೆ.