ಭಾರತೀಯರಲ್ಲಿ ಶುರುವಾಗಿದೆ ಐಪಿಎಲ್‌ ಜ್ವರ : ಭಾರತದತ್ತ ಇಡೀ ಕ್ರಿಕೆಟ್ ಜಗತ್ತಿನ ಚಿತ್ತ

KannadaprabhaNewsNetwork |  
Published : Mar 17, 2025, 12:32 AM ISTUpdated : Mar 17, 2025, 04:14 AM IST
ಐಪಿಎಲ್‌ | Kannada Prabha

ಸಾರಾಂಶ

ಭಾರತೀಯರಲ್ಲಿ ಶುರುವಾಗಿದೆ ಐಪಿಎಲ್‌ ಜ್ವರ: ಭಾರತದತ್ತ ಇಡೀ ಕ್ರಿಕೆಟ್ ಜಗತ್ತಿನ ಚಿತ್ತ

*ಇಂದಿನ ವಿಶೇಷ: ‘ಎ’ ಗುಂಪಿನ ತಂಡಗಳ ಪರಿಚಯ*

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

ತಂಡದಲ್ಲಿರುವ ಆಟಗಾರರು: 25ಕಳೆದ ವರ್ಷದ ಸಾಧನೆ: ಎಲಿಮಿನೇಟರ್‌ನಲ್ಲಿ ಸೋಲು

ತಂಡದ ಒಟ್ಟು ಸಾಧನೆ: 3 ಬಾರಿ ರನ್ನರ್‌-ಅಪ್‌

ಬಲಾಬಲ: ಐಪಿಎಲ್‌ನಲ್ಲಿ ಈ ಹಿಂದಿನ 17 ಆವೃತ್ತಿಗಳಲ್ಲಿ ಆಡಿದ ಆಟಗಾರರ ಪಟ್ಟಿಯನ್ನೊಮ್ಮೆ ಅವಲೋಕಿಸಿದಾಗ, ವಿಶ್ವ ಕ್ರಿಕೆಟ್‌ನಲ್ಲಿ ಬಲಿಷ್ಠ ಆಟಗಾರರಾಗಿ ಗುರುತಿಸಿಕೊಂಡ ಬಹುತೇಕರು, ಒಂದಲ್ಲ ಒಂದು ಆವೃತ್ತಿಯಲ್ಲಿ ಆರ್‌ಸಿಬಿ ಪರ ಆಡಿದ್ದಾರೆ. ಆದರೂ, ತಂಡಕ್ಕೆ ಒಮ್ಮೆಯೂ ಕಪ್‌ ಗೆಲ್ಲಲು ಆಗಿಲ್ಲ. ಈ ವರ್ಷ ತಂಡ ಬಹಳ ಅಳೆದು ತೂಗಿ ತಂಡ ಸಿದ್ಧಪಡಿಸಿದೆ. ಇದು 18ನೇ ಆವೃತ್ತಿ. ವಿರಾಟ್‌ ಕೊಹ್ಲಿಯ ಜೆರ್ಸಿ ಸಂಖ್ಯೆಯೂ 18. ತನ್ನ ನಂ.1 ರಾಯಭಾರಿಗಾಗಿ ಈ ಬಾರಿ ಆರ್‌ಸಿಬಿ ಕಪ್‌ ಗೆಲ್ಲಲು ಪಣ ತೊಟ್ಟಿದೆ. ಹೊಸ ನಾಯಕ ರಜತ್‌ ಪಾಟೀದಾರ್‌ ಹೇಗೆ ತಂಡ ಮುನ್ನಡೆಸಲಿದ್ದಾರೆ ಎನ್ನುವ ಕುತೂಹಲವೂ ಇದೆ. 

ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್‌ ಫಿಲ್‌ ಸಾಲ್ಟ್‌ರನ್ನು ಖರೀದಿಸಿರುವ ಆರ್‌ಸಿಬಿ, ಕೊಹ್ಲಿ ಜೊತೆ ಅಗ್ರ ಕ್ರಮಾಂಕದಲ್ಲಿ ಅವರನ್ನು ಆಡಿಸಲಿದೆ. ಪ್ರತಿ ವರ್ಷ ಆರ್‌ಸಿಬಿಗೆ ಎದುರಾಗುವ ಪ್ರಮುಖ ಸಮಸ್ಯೆಯೇ ಬೌಲರ್‌ಗಳ ಕೊರತೆ. ಅದನ್ನು ನೀಗಿಸಲು ಈ ಬಾರಿ ಜೋಶ್‌ ಹೇಜಲ್‌ವುಡ್‌ ಜೊತೆಗೆ ಅನುಭವಿ ಭುವನೇಶ್ವರ್‌ ಕುಮಾರ್‌ರನ್ನು ಕರೆತಂದಿದೆ. ಹೆಚ್ಚು ಆಲ್ರೌಂಡರ್‌ಗಳ ಬಲವೂ ತಂಡಕ್ಕಿದ್ದು, ಬಹುಶಃ ಇಷ್ಟು ವರ್ಷದಲ್ಲಿ ಇದೇ ಮೊದಲ ಬಾರಿಗೆ ಆರ್‌ಸಿಬಿ ಕೆಲವೇ ಕೆಲವು ಆಟಗಾರರ ಮೇಲೆ ಹೆಚ್ಚಾಗಿ ಅವಲಂಬಿತಗೊಳ್ಳಬೇಕಾದ ಅನಿವಾರ್ಯತೆ ಇರುವುದಿಲ್ಲ ಎನಿಸುತ್ತಿದೆ. 

ಅತ್ಯುತ್ತಮ 12 ಆಯ್ಕೆ (ಇಂಪ್ಯಾಕ್ಟ್‌ ಆಟಗಾರ ಸೇರಿ): ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌, ರಜತ್‌ ಪಾಟೀದಾರ್‌ (ನಾಯಕ), ಕೃನಾಲ್‌ ಪಾಂಡ್ಯ, ಜಿತೇಶ್‌ ಶರ್ಮಾ, ಟಿಮ್‌ ಡೇವಿಡ್‌/ಜೇಕಬ್‌ ಬೆತ್‌ಹೆಲ್‌, ರಸಿಕ್‌ ಸಲಾಂ, ಭುವನೇಶ್ವರ್‌ ಕುಮಾರ್‌, ಜೋಶ್‌ ಹೇಜಲ್‌ವುಡ್‌, ಯಶ್‌ ದಯಾಳ್‌, ಸುಯಶ್‌ ಶರ್ಮಾ/ದೇವ್‌ದತ್‌ ಪಡಿಕ್ಕಲ್‌. 

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿರುವ ಆಟಗಾರರು: 25ಕಳೆದ ವರ್ಷದ ಸಾಧನೆ: 5ನೇ ಸ್ಥಾನ ತಂಡದ ಒಟ್ಟು ಸಾಧನೆ: 5 ಬಾರಿ ಚಾಂಪಿಯನ್‌

ಬಲಾಬಲ: ತಾರಾ ಸ್ಪಿನ್ನರ್‌ಗಳನ್ನು ಒಂದೆಡೆ ಸೇರಿಸಿ, ಸ್ಪಿನ್‌ ಆಸ್ತ್ರಗಳನ್ನೇ ಬಳಸಿ ಮತ್ತೊಮ್ಮೆ ಚಾಂಪಿಯನ್‌ ಪಟ್ಟಕ್ಕೇರಲು ಚೆನ್ನೈ ಸೂಪರ್‌ ಕಿಂಗ್ಸ್‌ ರಣತಂತ್ರ ರೂಪಿಸಿದೆ. 10 ವರ್ಷ ಬಳಿಕ ಆರ್‌.ಅಶ್ವಿನ್‌, ಸಿಎಸ್‌ಕೆಗೆ ಮರಳಿದ್ದು, ಜಡೇಜಾ ಜೊತೆ ಜಾದೂ ನಡೆಸಲು ಹಾತೊರೆಯುತ್ತಿದ್ದಾರೆ . ಅಫ್ಘಾನಿಸ್ತಾನದ ನೂರ್‌ ಅಹ್ಮದ್‌ ಮೇಲೆ ಎಲ್ಲರೂ ಕಣ್ಣಿಡಬೇಕಿದೆ. 

ರಾಹುಲ್‌ ತ್ರಿಪಾಠಿ, ವಿಜಯ್ ಶಂಕರ್‌, ಕಮ್ಲೇಶ್‌ ನಾಗರಕೋಟಿ, ದೀಪಕ್‌ ಹೂಡಾ, ಶ್ರೇಯಸ್‌ ಗೋಪಾಲ್‌. ಹೀಗೆ ತಮ್ಮ ವೃತ್ತಿ ಬದುಕಿಗೆ ಪುನರ್‌ಜನ್ಮ ಬಯಸುತ್ತಿರುವ ಕೆಲ ಆಟಗಾರರು ಸಹ ಸಿಎಸ್‌ಕೆಯಲ್ಲಿದ್ದಾರೆ. ಇದೆಲ್ಲದರ ನಡುವೆ ಒಬ್ಬ ಆಟಗಾರನ ಮೇಲೆ ಎಲ್ಲರ ಕಣ್ಣಿರಲಿದೆ. ಅವರೇ ಎಂ.ಎಸ್‌.ಧೋನಿ. ಇದು ಅವರಿಗೆ ಕೊನೆ ಐಪಿಎಲ್‌ ಆಗುತ್ತಾ? ಅದಕ್ಕೆ ಉತ್ತರ ಧೋನಿ ಬಳಿ ಮಾತ್ರ ಇದೆ. ಅತ್ಯುತ್ತಮ 12 ಆಯ್ಕೆ: ಋತುರಾಜ್‌ ಗಾಯಕ್ವಾಡ್‌ (ನಾಯಕ), ಡೆವೊನ್‌ ಕಾನ್‌ವೇ/ರಚಿನ್‌ ರವೀಂದ್ರ, ರಾಹುಲ್‌ ತ್ರಿಪಾಠಿ, ಶಿವಂ ದುಬೆ, ಸ್ಯಾಮ್‌ ಕರ್ರನ್‌, ವಿಜಯ್‌ ಶಂಕರ್‌, ರವೀಂದ್ರ ಜಡೇಜಾ, ಎಂ.ಎಸ್‌.ಧೋನಿ, ಆರ್‌.ಅಶ್ವಿನ್‌, ನೂರ್‌ ಅಹ್ಮದ್/ನೇಥನ್‌ ಎಲ್ಲೀಸ್‌, ಖಲೀಲ್‌ ಅಹ್ಮದ್‌/ಗುರ್‌ಜಪ್‌ನೀತ್‌, ಮಥೀಶ ಪತಿರನ. 

ಕೋಲ್ಕತಾ ನೈಟ್‌ ರೈಡರ್ಸ್‌

ತಂಡದಲ್ಲಿರುವ ಒಟ್ಟು ಆಟಗಾರರು: 21

ಕಳೆದ ವರ್ಷದ ಸಾಧನೆ: ಚಾಂಪಿಯನ್‌

ಒಟ್ಟಾರೆ ಸಾಧನೆ: 3 ಬಾರಿ ಚಾಂಪಿಯನ್‌ ಬಲಾಬಲ: ಹಾಲಿ ಚಾಂಪಿಯನ್‌ ಕೆಕೆಆರ್‌ ಈ ಬಾರಿ ಕೆಲ ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ಕಳೆದ ವರ್ಷ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ನಾಯಕ ಶ್ರೇಯಸ್‌ ಅಯ್ಯರ್‌ ಹಾಗೂ ಕೋಚ್‌ ಗೌತಮ್‌ ಗಂಭೀರ್‌ ಇಬ್ಬರ ಬಲವೂ ಈ ಬಾರಿ ತಂಡಕ್ಕಿಲ್ಲ. ಅಜಿಂಕ್ಯ ರಹಾನೆಯನ್ನು ನಾಯಕನನ್ನಾಗಿ ನೇಮಿಸಿರುವ ಕೆಕೆಆರ್‌, ಬರೋಬ್ಬರಿ ₹23.75 ಕೋಟಿ ಕೊಟ್ಟು ಖರೀದಿಸಿದ ವೆಂಕಟೇಶ್‌ ಅಯ್ಯರ್ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ಕ್ವಿಂಟನ್‌ ಡಿ ಕಾಕ್‌ ಬ್ಯಾಟಿಂಗ್‌ ಪಡೆಗೆ ಬಲ ತುಂಬಬಲ್ಲರು ಎನ್ನುವ ನಂಬಿಕೆ ತಂಡದ್ದು. 

ತನ್ನ ಆಧಾರಸ್ತಂಭಗಳಾದ ನರೈನ್‌, ರಸೆಲ್‌, ರಿಂಕು, ವರುಣ್‌ರನ್ನು ತಂಡ ನೆಚ್ಚಿಕೊಂಡಿದೆ. ಅತ್ಯುತ್ತಮ 12 ಆಯ್ಕೆ: ಸುನಿಲ್‌ ನರೈನ್‌, ಕ್ವಿಂಟನ್‌ ಡಿ ಕಾಕ್‌, ಅಜಿಂಕ್ಯ ರಹಾನೆ (ನಾಯಕ), ಅಂಗ್‌ಕೃಷ್‌ ರಘುವಂಶಿ, ವೆಂಕಟೇಶ್‌ ಅಯ್ಯರ್, ರಿಂಕು ಸಿಂಗ್‌, ಆ್ಯಂಡ್ರೆ ರಸೆಲ್‌, ರಮಣ್‌ದೀಪ್‌ ಸಿಂಗ್‌, ಹರ್ಷಿತ್‌ ರಾಣಾ, ಸ್ಪೆನ್ಸರ್‌ ಜಾನ್ಸನ್‌/ಏನ್ರಿಕ್‌ ನೋಕಿಯ, ವರುಣ್‌ ಚಕ್ರವರ್ತಿ, ವೈಭವ್‌ ಅರೋರಾ/ಮನೀಶ್‌ ಪಾಂಡೆ/ಲುವ್ನಿತ್‌ ಸಿಸೋಡಿಯಾ.

ರಾಜಸ್ಥಾನ ರಾಯಲ್ಸ್‌ ತಂಡದಲ್ಲಿರುವ ಆಟಗಾರರು: 20

ಕಳೆದ ವರ್ಷದ ಸಾಧನೆ: 3ನೇ ಸ್ಥಾನ

ಒಟ್ಟಾರೆ ಸಾಧನೆ: 1 ಬಾರಿ ಚಾಂಪಿಯನ್‌ ಬಲಾಬಲ: ರಾಜಸ್ಥಾನ ರಾಯಲ್ಸ್‌ ಈ ಬಾರಿ ಭಾರೀ ಪ್ರಯೋಗಕ್ಕೆ ಕೈಹಾಕಿದೆ. ಬ್ಯಾಟಿಂಗ್‌ ಆಧಾರ ಎನಿಸಿದ್ದ ಜೋಸ್‌ ಬಟ್ಲರ್‌ರನ್ನು ತಂಡ ಉಳಿಸಿಕೊಳ್ಳಲಿಲ್ಲ. ಟ್ರೆಂಟ್‌ ಬೌಲ್ಟ್‌, ಯಜುವೇಂದ್ರ ಚಹಲ್‌, ಆರ್‌.ಅಶ್ವಿನ್‌ ಹೀಗೆ ಅನೇಕ ಅನುಭವಿಗಳನ್ನು ಕೈಬಿಟ್ಟು ಬಹುತೇಕ ಯುವ ಆಟಗಾರರೊಂದಿಗೆ ಆಡಲು ನಿರ್ಧರಿಸಿದೆ. ಶಿಮ್ರೊನ್‌ ಹೆಟ್ಮೇಯರ್‌ ತಂಡದಲ್ಲಿರುವ ಏಕೈಕ ವಿದೇಶಿ ಬ್ಯಾಟರ್‌. ಹೀಗಾಗಿ ನಾಯಕ ಸಂಜು ಸ್ಯಾಮ್ಸನ್‌, ಯಶಸ್ವಿ ಜೈಸ್ವಾಲ್‌, ರಿಯಾನ್‌ ಪರಾಗ್‌, ಧೃವ್‌ ಜುರೆಲ್‌ ಮೇಲೆ ಹೆಚ್ಚು ನಿರೀಕ್ಷೆ ಇರಲಿದೆ. 13ರ ವೈಭವ್‌ ಸೂರ್ಯವಂಶಿ ಮೇಲೆ ಎಲ್ಲರೂ ಕಣ್ಣಿಡಲಿದ್ದಾರೆ. ಜೋಫ್ರಾ ಆರ್ಚರ್‌ ತಂಡದ ಬೌಲಿಂಗ್‌ ಪಡೆಯನ್ನು ಮುನ್ನಡೆಸಲಿದ್ದಾರೆ. ರಾಹುಲ್‌ ದ್ರಾವಿಡ್‌ರ ಕೋಚಿಂಗ್‌ ಶೈಲಿ ಬಗ್ಗೆಯೂ ಕುತೂಹಲವಿದೆ.ಅತ್ಯುತ್ತಮ 12 ಆಯ್ಕೆ: ಯಶಸ್ವಿ ಜೈಸ್ವಾಲ್‌, ಸಂಜು ಸ್ಯಾಮ್ಸನ್‌ (ನಾಯಕ), ನಿತೀಶ್‌ ರಾಣಾ, ರಿಯಾನ್‌ ಪರಾಗ್‌, ಧೃವ್‌ ಜುರೆಲ್‌, ಶಿಮ್ರೊನ್‌ ಹೆಟ್ಮೇಯರ್‌, ವನಿಂಡು ಹಸರಂಗ, ಶುಭಂ ದುಬೆ/ಆಕಾಶ್‌ ಮಧ್ವಾಲ್‌, ಜೋಫ್ರಾ ಆರ್ಚರ್‌, ಮಹೀಶ್‌ ತೀಕ್ಷಣ/ಫಜಲ್‌ಹಕ್‌ ಫಾರೂಕಿ, ಸಂದೀಪ್‌ ಶರ್ಮಾ, ತುಷಾರ್‌ ದೇಶಪಾಂಡೆ. 

ಪಂಜಾಬ್‌ ಕಿಂಗ್ಸ್‌

ತಂಡದಲ್ಲಿರುವ ಆಟಗಾರರು: 25

ಕಳೆದ ವರ್ಷದ ಸಾಧನೆ: 9ನೇ ಸ್ಥಾನ

ಒಟ್ಟಾರೆ ಸಾಧನೆ: 1 ಬಾರಿ ರನ್ನರ್‌-ಅಪ್‌ ಬಲಾಬಲ: ಬರೋಬ್ಬರಿ ₹26.75 ಕೋಟಿ ಕೊಟ್ಟು ಶ್ರೇಯಸ್‌ ಅಯ್ಯರ್‌ರನ್ನು ಖರೀದಿಸಿ ಅವರಿಗೆ ನಾಯಕನ ಪಟ್ಟ ನೀಡಿರುವ ಪಂಜಾಬ್‌ ಕಿಂಗ್ಸ್‌, ಈ ಸಲವಾದರೂ ತಾನು ಕಟ್ಟಿರುವ ತಂಡ ಮಿಂಚು ಹರಿಸಲಿ ಎಂದು ಹಪಹಪಿಸುತ್ತಿದೆ. ಘಟಾನುಘಟಿಗಳಿದ್ದರೂ ಅಸ್ಥಿರ ಪ್ರದರ್ಶನದಿಂದಾಗಿ ಈ ವರೆಗೂ ಟ್ರೋಫಿ ಗೆಲ್ಲಲು ಸಾಧ್ಯವಾಗದ ಪಂಜಾಬ್‌, ಈ ಸಲ ಅದೃಷ್ಟ ಬದಲಾಗುವ ನಂಬಿಕೆ ಇಟ್ಟುಕೊಂಡಿದೆ. ರಿಕಿ ಪಾಂಟಿಂಗ್‌ ತಂಡದ ಕೋಚ್‌ ಆಗಿರುವ ಕಾರಣ, 8 ವಿದೇಶಿಗರ ಪೈಕಿ ಐವರು ಆಸ್ಟ್ರೇಲಿಯನ್ನರು. ಇನ್ನು ತಲಾ ₹18 ಕೋಟಿ ಪಡೆಯಲಿರುವ ಅರ್ಶ್‌ದೀಪ್‌ ಹಾಗೂ ಚಹಲ್‌ ಮೇಲೂ ದೊಡ್ಡ ಜವಾಬ್ದಾರಿ ಇರಲಿದೆ.ಅತ್ಯುತ್ತಮ 12 ಆಯ್ಕೆ: ಜೋಶ್‌ ಇಂಗ್ಲಿಸ್‌, ಪ್ರಭ್‌ಸಿಮ್ರನ್‌ ಸಿಂಗ್‌, ಮಾರ್ಕಸ್‌ ಸ್ಟೋಯ್ನಿಸ್‌, ಶ್ರೇಯಸ್‌ ಅಯ್ಯರ್‌(ನಾಯಕ), ಗ್ಲೆನ್‌ ಮ್ಯಾಕ್ಸ್‌ವೆಲ್‌, ನೇಹಲ್‌ ವಧೇರಾ, ಶಶಾಂಕ್‌ ಸಿಂಗ್‌, ಮಾರ್ಕೊ ಯಾನ್ಸನ್‌, ಹರ್ಪ್ರೀತ್‌ ಬ್ರಾರ್‌, ಯಶ್ ಠಾಕೂರ್‌/ಕುಲ್ದೀಪ್‌ ಸೇನ್/ವೈಶಾಖ್‌ ವಿಜಯ್‌ಕುಮಾರ್‌, ಅರ್ಶ್‌ದೀಪ್‌ ಸಿಂಗ್‌, ಯಜುವೇಂದ್ರ ಚಹಲ್‌.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!