ಇಂದು ಆರ್‌ಸಿಬಿ vs ರಾಯಲ್ಸ್‌ ಐಪಿಎಲ್‌ ಎಲಿಮಿನೇಟರ್‌ ಕದನ

KannadaprabhaNewsNetwork |  
Published : May 22, 2024, 12:57 AM IST
ಆರ್‌ಸಿಬಿ vs ರಾಯಲ್ಸ್‌ | Kannada Prabha

ಸಾರಾಂಶ

ಇಂದು ಗೆಲ್ಲುವ ತಂಡ 2ನೇ ಕ್ವಾಲಿಫೈಯರ್‌ ಪ್ರವೇಶ. ಸೋತ ತಂಡ ಟೂರ್ನಿಯಿಂದ ಹೊರಕ್ಕೆ. ಅಹಮದಾಬಾದ್‌ ಕ್ರೀಡಾಂಗಣ ಆತಿಥ್ಯ. ಸತತ 6 ಪಂದ್ಯ ಗೆದ್ದಿರುವ ಆರ್‌ಸಿಬಿ vs ಸತತ 4 ಪಂದ್ಯಗಳಲ್ಲಿ ಸೋತಿರುವ ರಾಜಸ್ಥಾನ. ಕೊಹ್ಲಿ, ರಜತ್‌, ಡುಪ್ಲೆಸಿ ಮೇಲೆ ಎಲ್ಲರ ನಿರೀಕ್ಷೆ

ಅಹಮದಾಬಾದ್‌: ಒಂದೆಡೆ ಅದ್ಭುತ ಕಮ್‌ಬ್ಯಾಕ್‌ ಮೂಲಕ ಸತತ 6 ಪಂದ್ಯಗಳಲ್ಲಿ ಗೆದ್ದಿರುವ ಆರ್‌ಸಿಬಿ. ಮತ್ತೊಂದೆಡೆ ಸತತ 4 ಪಂದ್ಯಗಳ ಸೋಲಿನೊಂದಿಗೆ ಕುಗ್ಗಿ ಹೋಗಿರುವ ಮಾಜಿ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್‌. ಉಭಯ ತಂಡಗಳು ಬುಧವಾರ 17ನೇ ಆವೃತ್ತಿ ಐಪಿಎಲ್‌ನ ಎಲಿಮಿನೇಟರ್‌ನಲ್ಲಿ ಸೆಣಸಾಡಲಿವೆ. ಗೆಲ್ಲುವ ತಂಡ ಕ್ವಾಲಿಫೈಯರ್‌-2ಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದು, ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ.ಟೂರ್ನಿಯ ಆರಂಭಿಕ 8 ಪಂದ್ಯಗಳ ಪೈಕಿ 7ರಲ್ಲಿ ಸೋತಿದ್ದ ಆರ್‌ಸಿಬಿ ಪ್ಲೇ-ಆಫ್‌ ಪ್ರವೇಶಿಸಿದ್ದೇ ಆಶ್ಚರ್ಯ. ಅತ್ತ ರಾಜಸ್ಥಾನ ಮೊದಲಾರ್ಧದಲ್ಲಿ ಅಬ್ಬರಿಸಿದ್ದರೂ, ಸದ್ಯ ಮಂಕಾಗಿದೆ. ಲೀಗ್‌ ಹಂತದ ಕೊನೆ ಪಂದ್ಯ ಮಳೆಗಾಹುತಿಯಾಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಸಂಘಟಿತ ಪ್ರದರ್ಶನ: ಆರ್‌ಸಿಬಿ ಪರ ಟೂರ್ನಿಯುದ್ದಕ್ಕೂ ಅಬ್ಬರಿಸಿರುವ ವಿರಾಟ್‌ ಕೊಹ್ಲಿ ಮೇಲೆ ಹೆಚ್ಚಿನ ಭಯ ಇದ್ದರೂ, ಕಳೆದ ಕೆಲವು ಪಂದ್ಯಗಳಲ್ಲಿ ತಂಡದ ಸಂಘಟಿತ ಹೋರಾಟ ಎದುರಾಳಿಗಳನ್ನು ಕಂಗೆಟ್ಟಿಸಿದೆ. ಭಾರಿ ಟೀಕೆಗೊಳಗಾಗಿದ್ದ ಬೌಲಿಂಗ್‌ ಪಡೆ ಈಗ ಎಂಥಾ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನೇ ಕಟ್ಟಿಹಾಕಬಲ್ಲ ಸಾಮರ್ಥ್ಯ ಹೊಂದಿದೆ. 14 ಪಂದ್ಯಗಳಲ್ಲಿ 708 ರನ್‌ ಸಿಡಿಸಿರುವ ಕೊಹ್ಲಿ ಆರ್‌ಸಿಬಿ ಪಾಲಿನ ಡೈಮಂಡ್‌. ಟೂರ್ನಿ ಸಾಗುತ್ತಿದ್ದಂತೆಯೆ ಲಯ ಕಂಡುಕೊಂಡ ನಾಯಕ ಫಾಫ್‌ ಡು ಪ್ಲೆಸಿ(421 ರನ್‌) ಹಾಗೂ ರಜತ್‌ ಪಾಟೀದಾರ್‌(361 ರನ್‌) ಕೂಡಾ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ. ನಿರ್ಣಾಯಕ ಘಟ್ಟದಲ್ಲಿ ಫಾರ್ಮ್‌ಗೆ ಮರಳಿರುವ ಆಸ್ಟ್ರೇಲಿಯಾ ತಾರೆಗಳಾದ ಕ್ಯಾಮರೂನ್‌ ಗ್ರೀನ್‌ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ರ ಪ್ರದರ್ಶನ ತಂಡದ ಗೆಲುವು-ಸೋಲನ್ನು ನಿರ್ಧರಿಸುವಂತಿದ್ದು, ಮತ್ತೊಮ್ಮೆ ತಂಡದ ಕೈಹಿಡಿಯಬೇಕಿದೆ. ದಿನೇಶ್‌ ಕಾರ್ತಿಕ್‌ ತಮ್ಮ ನೈಜ ಫಿನಿಶಿಂಗ್‌ ಹುದ್ದೆಯನ್ನು ಮಹತ್ವದ ಪಂದ್ಯದಲ್ಲಿ ಸಮರ್ಥವಾಗಿ ನಿಭಾಯಿಸಬಲ್ಲರೇ ಎಂಬ ಕುತೂಹಲವಿದೆ.ಬೌಲಿಂಗ್‌ ವಿಭಾಗವೂ ಬಲಿಷ್ಠವಾಗಿದ್ದು, ಕಳೆದ 4 ಪಂದ್ಯಗಳ ಪೈಕಿ 3ರಲ್ಲಿ ಎದುರಾಳಿ ತಂಡವನ್ನು ಆಲೌಟ್‌ ಮಾಡಿದೆ. ಅಹಮದಾಬಾದ್‌ನಲ್ಲಿ ಈ ಬಾರಿ ನಡೆದ 12 ಇನ್ನಿಂಗ್ಸ್‌ಗಳ ಪೈಕಿ ಕೇವಲ 2ರಲ್ಲಿ 200+ ಮೊತ್ತ ದಾಖಲಾಗಿದ್ದು, ಶಿಸ್ತುಬದ್ಧ ದಾಳಿ ನಡೆಸಿದರೆ ಆರ್‌ಸಿಬಿಗೆ ಗೆಲುವು ಸುಲಭವಾಗಲಿದೆ.ಕುಗ್ಗಿದ ಆತ್ಮವಿಶ್ವಾಸ: ಆರ್‌ಸಿಬಿಗೆ ಹೋಲಿಸಿದರೆ ರಾಜಸ್ಥಾನದ ಆತ್ಮವಿಶ್ವಾಸ ಸಂಪೂರ್ಣ ಕುಗ್ಗಿದೆ. ಲೀಗ್‌ ಹಂತದಲ್ಲಿ ಆರ್‌ಸಿಬಿ ವಿರುದ್ಧ ಶತಕ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ಜೋಸ್‌ ಬಟ್ಲರ್‌ ಕೂಡಾ ಈ ಪಂದ್ಯಕ್ಕೆ ಲಭ್ಯರಿಲ್ಲ. ಯಶಸ್ವಿ ಜೈಸ್ವಾಲ್‌ ಲಯ ಕಂಡುಕೊಳ್ಳಲು ಪರದಾಡುತ್ತಿದ್ದು, ಸಂಜು ಸ್ಯಾಮ್ಸನ್, ರಿಯಾನ್‌ ಪರಾಗ್‌ರ ಮೇಲೆ ಹೆಚ್ಚಿನ ವಿಶ್ವಾಸ ಇಟ್ಟುಕೊಂಡಿದೆ. ಲೀಗ್‌ ಹಂತದಲ್ಲಿ ಅಹಮದಾಬಾದ್‌ನಲ್ಲಿ ಗುಜರಾತ್‌ ವಿರುದ್ಧ ಆಡಿದ್ದ ಆರ್‌ಸಿಬಿ 16 ಓವರಲ್ಲೇ 200+ ರನ್‌ ಚೇಸ್‌ ಮಾಡಿದ್ದು, ಹೀಗಾಗಿ ಈ ಪಂದ್ಯದಲ್ಲಿ ರಾಜಸ್ಥಾನಕ್ಕೆ ಆರ್‌ಸಿಬಿ ಬ್ಯಾಟರ್‌ಗಳಿಂದ ಕಠಿಣ ಸವಾಲು ಎದುರಾಗುವುದು ಖಚಿತ.

ಒಟ್ಟು ಮುಖಾಮುಖಿ: 30ಆರ್‌ಸಿಬಿ: 15ರಾಜಸ್ಥಾನ: 13ಫಲಿತಾಂಶವಿಲ್ಲ: 02

ಸಂಭವನೀಯರ ಪಟ್ಟಿ:

ಆರ್‌ಸಿಬಿ: ಕೊಹ್ಲಿ, ಡು ಪ್ಲೆಸಿ(ನಾಯಕ), ರಜತ್‌, ಗ್ರೀನ್‌, ಮ್ಯಾಕ್ಸ್‌ವೆಲ್‌, ದಿನೇಶ್‌, ಲೊಮ್ರೊರ್‌, ಕರ್ಣ್‌, ಫರ್ಗ್ಯೂಸನ್‌, ಸಿರಾಜ್‌, ಯಶ್‌ ದಯಾಳ್‌.ರಾಜಸ್ಥಾನ: ಜೈಸ್ವಾಲ್‌, ಕೊಹ್ಲೆರ್‌, ಸಂಜು(ನಾಯಕ), ರಿಯಾನ್‌, ಜುರೆಲ್‌, ಪೊವೆಲ್‌, ಅಶ್ವಿನ್‌, ಬೌಲ್ಟ್‌, ಸಂದೀಪ್‌, ಆವೇಶ್‌, ಬರ್ಗರ್‌.

ಪಂದ್ಯ: ಸಂಜೆ 7.30ಕ್ಕೆಪಿಚ್‌ ರಿಪೋರ್ಟ್: ಅಹಮದಾಬಾದ್‌ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದರೂ, ಬೌಲರ್‌ಗಳಿಗೂ ನೆರವು ನೀಡಿದ ಉದಾಹರಣೆ ಇದೆ. ಈ ಆವೃತ್ತಿಯಲ್ಲಿ ಬೌಲರ್‌ಗಳೇ ಹೆಚ್ಚಿನ ಯಶಸ್ಸು ಕಂಡಿದ್ದಾರೆ. ಮೊದಲು ಬ್ಯಾಟ್‌ ಮಾಡುವ ತಂಡ 200+ ಗಳಿಸದರೆ ಚೇಸಿಂಗ್‌ ಕಷ್ಟವಾಗಲಿದೆ. ಹೀಗಾಗಿ ಟಾಸ್ ನಿರ್ಣಾಯಕ ಎನಿಸಿಕೊಳ್ಳಲಿದೆ.ಇತ್ತಂಡಗಳ ಪ್ರಾಬಲ್ಯ-ದೌರ್ಬಲ್ಯ

ಆರ್‌ಸಿಬಿ: ಸಾಮರ್ಥ್ಯ

-ಲಯದಲ್ಲಿರುವ ಕೊಹ್ಲಿ. ಅಬ್ಬರಿಸಬಲ್ಲ ಡು ಪ್ಲೆಸಿ, ರಜತ್‌-ಗ್ರೀನ್‌ ಆಲ್ರೌಂಡ್‌ ಆಟ, ದಿನೇಶ್‌ ಫಿನಿಶಿಂಗ್‌ ಸಾಮರ್ಥ್ಯ-ಎದುರಾಳಿಗಳನ್ನು ಕಟ್ಟಿಹಾಕುತ್ತಿರುವ ಸ್ಪಿನ್ನರ್‌ಗಳು

ದೌರ್ಬಲ್ಯ

-ಆರಂಭಿಕರು ವಿಫಲರಾದರೆ ಕೈಕೊಡುವ ಮಧ್ಯಮ ಕ್ರಮಾಂಕ

-ಸ್ಥಿರತೆ ಕಳೆದುಕೊಂಡಿರುವ ಗ್ಲೆನ್‌ ಮ್ಯಾಕ್ಸ್‌ವೆಲ್-ನಿರ್ಣಾಯಕ ಘಟ್ಟದಲ್ಲಿ ದುಬಾರಿಯಾಗುವ ವೇಗಿಗಳು.

ರಾಜಸ್ಥಾನ

ಸಾಮರ್ಥ್ಯ

-ಸಂಜು ಸ್ಯಾಮ್ಸನ್‌, ರಿಯಾನ್‌ ಸ್ಫೋಟಕ ಆಟ-ಅನುಭವಿ ಸ್ಪಿನ್ನರ್‌ಗಳಾದ ಚಹಲ್‌, ಅಶ್ವಿನ್‌.-ಬೌಲ್ಟ್‌ ಜೊತೆ ಸಂದೀಪ್‌, ಆವೇಶ್‌ ಮೊನಚು ದಾಳಿ

ದೌರ್ಬಲ್ಯ

-ಜೋಸ್‌ ಬಟ್ಲರ್‌ ಗೈರು, ಹೀಗಾಗಿ ಆರಂಭಿಕನ ಕೊರತೆ.- ಲಯ ಕಳೆದುಕೊಂಡಿರುವ ಯಶಸ್ವಿ ಜೈಸ್ವಾಲ್‌- ಮ್ಯಾಚ್‌ ಫಿನಿಶ್‌ ಮಾಡಬಲ್ಲ ಬ್ಯಾಟರ್ಸ್‌ ಇಲ್ಲ3 ಬಾರಿ ಎಲಿಮಿನೇಟರ್‌ ಪಂದ್ಯ ಗೆದ್ದಿದೆ ಆರ್‌ಸಿಬಿ

ಆರ್‌ಸಿಬಿ ಈ ವರೆಗೂ 5 ಬಾರಿ ಎಲಿಮಿನೇಟರ್‌ನಲ್ಲಿ ಆಡಿದೆ. 2009, 2015, 2020, 2021 ಹಾಗೂ 2022ರಲ್ಲಿ ಆರ್‌ಸಿಬಿ ಎಲಿಮಿನೇಟರ್‌ ಆಡಿತ್ತು. ಈ ಪೈಕಿ 2009ರಲ್ಲಿ ಫೈನಲ್‌ವರೆಗೂ ಪ್ರವೇಶಿಸಿತ್ತು. 2015, 2022ರಲ್ಲೂ ಎಲಿಮಿನೇಟರ್‌ ಪಂದ್ಯ ಗೆದ್ದು ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿತ್ತು. 2020, 2021ರಲ್ಲಿ ಎಲಿಮಿನೇಟರ್‌ನಲ್ಲೇ ಸೋತು ಹೊರಬಿದ್ದಿತ್ತು

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!