ಐಪಿಎಲ್‌: ಸನ್‌ರೈಸರ್ಸ್‌ ಆರ್ಭಟಕ್ಕೆ ಬೆಚ್ಚಿಬಿದ್ದ ಡೆಲ್ಲಿ ಕ್ಯಾಪಿಟಲ್ಸ್‌

KannadaprabhaNewsNetwork | Updated : Apr 21 2024, 04:11 AM IST

ಸಾರಾಂಶ

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ಗೆ 67 ರನ್‌ ಭರ್ಜರಿ ಗೆಲುವು. ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದ ಸನ್‌ರೈಸರ್ಸ್‌. 266 ರನ್‌ಗಳ ಬೃಹತ್‌ ಮೊತ್ತ ಪೇರಿಸಿದ ಹೈದರಾಬಾದ್‌, ಡೆಲ್ಲಿ 199 ರನ್‌ಗೆ ಆಲೌಟ್‌.

ನವದೆಹಲಿ: ಟ್ರ್ಯಾವಿಸ್‌ ಹೆಡ್‌ ಹಾಗೂ ಅಭಿಷೇಕ್‌ ಶರ್ಮಾರ ಅಬ್ಬರದ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ಮೇಲೆ ಸವಾರಿ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌, 67 ರನ್‌ಗಳ ಅಮೋಘ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದೆ.

ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿ 7 ವಿಕೆಟ್‌ಗೆ 266 ರನ್‌ಗಳ ಬೃಹತ್‌ ಮೊತ್ತ ಪೇರಿಸಿದ ಸನ್‌ರೈಸರ್ಸ್‌, ಜೇಕ್‌ ಫ್ರೇಸರ್‌-ಮೆಕ್‌ಗರ್ಕ್‌ರ ವಿಸ್ಫೋಟಕ ಅರ್ಧಶತಕದ ಹೊರತಾಗಿಯೂ ಡೆಲ್ಲಿಯನ್ನು 199 ರನ್‌ಗೆ ಆಲೌಟ್‌ ಮಾಡಿತು.

ಪೃಥ್ವಿ ಶಾ ಮೊದಲ 4 ಎಸೆತಗಳನ್ನು ಬೌಂಡರಿಗಟ್ಟಿ ಡೆಲ್ಲಿಗೆ ಭರ್ಜರಿ ಆರಂಭ ನೀಡಿದರೂ, 2ನೇ ಓವರಲ್ಲೇ ಶಾ ಹಾಗೂ ವಾರ್ನರ್‌ ಔಟಾಗಿದ್ದು ಡೆಲ್ಲಿಗೆ ಆಘಾತ ನೀಡಿತು. ಆದರೆ 22ರ ಜೇಕ್‌, ಕೇವಲ 15 ಎಸೆತದಲ್ಲಿ ಅರ್ಧಶತಕ ಸಿಡಿಸಿ ಡೆಲ್ಲಿಯ ಜಯದ ಆಸೆಯನ್ನು ಜೀವಂತವಾಗಿರಿಸಲು ಪ್ರಯತ್ನಿಸಿದರು. ಅಭಿಷೇಕ್‌ ಪೊರೆಲ್‌ 42 ರನ್‌ ಗಳಿಸಿದರು. ಇವರಿಬ್ಬರು ಔಟಾದಾಗ ತಂಡದ ಮೊತ್ತ 8.4 ಓವರಲ್ಲಿ 135 ರನ್‌. ಅಲ್ಲಿಂದ ಮುಂದಕ್ಕೆ ಡೆಲ್ಲಿ 10.3 ಓವರಲ್ಲಿ ಕೇವಲ 64 ರನ್‌ಗೆ 6 ವಿಕೆಟ್‌ ಕಳೆದುಕೊಂಡಿತು. ನಟರಾಜನ್‌ 4 ವಿಕೆಟ್‌ ಕಿತ್ತರು.

ಇದಕ್ಕೂ ಮುನ್ನ ಹೆಡ್‌ ಹಾಗೂ ಅಭಿಷೇಕ್‌ ಮೊದಲ ವಿಕೆಟ್‌ಗೆ 6.2 ಓವರಲ್ಲಿ 131 ರನ್‌ ಜೊತೆಯಾಟವಾಡಿ, ಸನ್‌ರೈಸರ್ಸ್‌ಗೆ ಕನಸಿನ ಆರಂಭ ಒದಗಿಸಿದರು. ಹೆಡ್‌ 11 ಬೌಂಡರಿ, 6 ಸಿಕ್ಸರ್ ಸಿಡಿಸಿದರೆ, ಅಭಿಷೇಕ್‌ 2 ಬೌಂಡರಿ, 6 ಸಿಕ್ಸರ್‌ ಚಚ್ಚಿದರು. ಶಾಬಾಜ್‌ ಅಹ್ಮದ್‌ರ ಸ್ಫೋಟಕ ಅರ್ಧಶತಕ (29 ಎಸೆತದಲ್ಲಿ 59 ರನ್‌, 2 ಬೌಂಡರಿ, 5 ಸಿಕ್ಸರ್‌) ಸನ್‌ರೈಸರ್ಸ್‌ 260ರ ಗಡಿ ದಾಟಲು ನೆರವಾಯಿತು.

ಸ್ಕೋರ್‌: ಸನ್‌ರೈಸರ್ಸ್‌ 20 ಓವರಲ್ಲಿ 266/7 (ಹೆಡ್‌ 89, ಶಾಬಾಜ್‌ 59, ಶರ್ಮಾ 46, ಕುಲ್ದೀಪ್‌ 4-55), ಡೆಲ್ಲಿ 19.1 ಓವರಲ್ಲಿ 199/10 (ಜೇಕ್‌ 65, ಪಂತ್‌ 44, ಪೊರೆಲ್‌ 42, ನಟರಾಜನ್‌ 4-19) ಪಂದ್ಯಶ್ರೇಷ್ಠ: ಟ್ರ್ಯಾವಿಸ್‌ ಹೆಡ್‌

Share this article