ಪ್ಲೇ-ಆಫ್‌ಗೇರಿದ ರಾಜಸ್ಥಾನ ರಾಯಲ್ಸ್‌ಗೆ ಇಂದು ಪಂಜಾಬ್‌ ಸವಾಲು

KannadaprabhaNewsNetwork | Updated : May 16 2024, 04:51 AM IST

ಸಾರಾಂಶ

ಐಪಿಎಲ್‌ ಪ್ಲೇ-ಆಫ್‌ಗೆ ಪ್ರವೇಶಿಸಿರುವ ರಾಜಸ್ಥಾನ ರಾಯಲ್ಸ್‌ಗೆ ಹೊಸ ಉತ್ಸಾಹ. ಇಂದು ಪಂಜಾಬ್‌ ಕಿಂಗ್ಸ್‌ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ಗುರಿ. ಗುವಾಹಟಿಯಲ್ಲಿ ರೋಚಕ ಹಣಾಹಣಿ.

ಗುವಾಹಟಿ: ಕಳೆದ 3 ಪಂದ್ಯಗಳಲ್ಲಿ ಸೋತು ಕಂಗೆಟ್ಟಿದ್ದ ರಾಜಸ್ಥಾನ ರಾಯಲ್ಸ್‌ಗೆ ಪ್ಲೇ-ಆಫ್‌ಗೆ ಅದೃಷ್ಟ ಒಲಿದಿದೆ. ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ಸೋಲುಂಡ ಕಾರಣ, ರಾಜಸ್ಥಾನ ಪ್ಲೇ-ಆಫ್ ಹಂತಕ್ಕೆ ಪ್ರವೇಶ ಪಡೆಯಿತು.

ತಂಡಕ್ಕೆ ಗುಂಪು ಹಂತದಲ್ಲಿ ಇನ್ನೂ ೨ ಪಂದ್ಯ ಬಾಕಿ ಉಳಿದಿದ್ದು, ಅಂಕಪಟ್ಟಿಯಲ್ಲಿ ಅಗ್ರ-೨ರಲ್ಲೇ ಉಳಿಯುವ ನಿರೀಕ್ಷೆಯಲ್ಲಿದೆ. ಬುಧವಾರ ತಂಡಕ್ಕೆ ಈಗಾಗಲೇ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿರುವ ಪಂಜಾಬ್ ಕಿಂಗ್ಸ್ ಎದುರಾಗಲಿದ್ದು, ಸಂಜು ಸ್ಯಾಮ್ಸನ್ ಪಡೆ ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿದೆ.

ಬಟ್ಲರ್‌ ಬದಲು ಯಾರು?: ರಾಜಸ್ಥಾನ ಕೊನೆಯ 2 ಲೀಗ್‌ ಪಂದ್ಯಗಳನ್ನು ತನ್ನ ಹೊಸ ತವರು ಗುವಾಹಟಿಯಲ್ಲಿ ಆಡಲಿದೆ. ಆರಂಭಿಕ ಬ್ಯಾಟರ್‌ ಜೋಸ್‌ ಬಟ್ಲರ್‌ ಈಗಾಗಲೇ ಇಂಗ್ಲೆಂಡ್‌ಗೆ ವಾಪಸಾಗಿರುವ ಕಾರಣ, ಅವರ ಬದಲು ಇನ್ನಿಂಗ್ಸ್‌ ಆರಂಭಿಸಲಿರುವ ಆಟಗಾರ ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಇಂಗ್ಲೆಂಡ್‌ನ ಯುವ ಆಟಗಾರ ಟಾಮ್‌ ಕೊಹ್ಲೆರ್‌ಗೆ ಅವಕಾಶ ಸಿಗಬಹುದು ಅಥವಾ ಧೃವ್‌ ಜುರೆಲ್‌ರನ್ನು ಆರಂಭಿಕನನ್ನಾಗಿ ಆಡಿಸಬಹುದು. ಇನ್ನು ಗಾಯದ ಸಮಸ್ಯೆಯಿಂದ ಕಳೆದೆರಡು ಪಂದ್ಯಗಳನ್ನು ತಪ್ಪಿಸಿಕೊಂಡ ಶಿಮ್ರೊನ್‌ ಹೆಟ್ಮೇಯರ್‌ ಈ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ.

ಕೊನೆ ಸ್ಥಾನದಿಂದ ಮೇಲೇರುವ ಗುರಿ: ಮತ್ತೊಂದೆಡೆ ಪಂಜಾಬ್‌ ಈಗಾಗಲೇ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದಿದ್ದು, ತಂಡಕ್ಕಿದು ಪ್ರತಿಷ್ಠಿತ ಪಂದ್ಯವಷ್ಟೇ. ಲೀಗ್‌ ಹಂತದಲ್ಲಿ ತಂಡಕ್ಕೆ 2 ಪಂದ್ಯ ಬಾಕಿ ಇದ್ದು, ಈ ಎರಡು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೇರುವ ಗುರಿ ಹೊಂದಿದೆ. ಶಿಖರ್‌ ಧವನ್‌ ಹಾಗೂ ಕಗಿಸೋ ರಬಾಡ ಕೊನೆಯ 2 ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಹೀಗಾಗಿ ಸ್ಯಾಮ್‌ ಕರ್ರನ್‌ ಈ ಪಂದ್ಯದಲ್ಲೂ ತಂಡ ಮುನ್ನಡೆಸಲಿದ್ದು, ಕರ್ನಾಟಕದ ವಿದ್ವತ್‌ ಕಾವೇರಪ್ಪಗೆ ಮತ್ತೊಂದು ಅವಕಾಶ ಸಿಗುವ ನಿರೀಕ್ಷೆ ಇದೆ.

ಒಟ್ಟು ಮುಖಾಮುಖಿ: 27

ರಾಜಸ್ಥಾನ: 16ಪಂಜಾಬ್‌: 11

ಸಂಭವನೀಯ ಆಟಗಾರರ ಪಟ್ಟಿ

ರಾಜಸ್ಥಾನ: ಜೈಸ್ವಾಲ್‌, ಟಾಮ್‌ ಕೊಹ್ಲೆರ್‌, ಸ್ಯಾಮ್ಸನ್‌ (ನಾಯಕ), ರಿಯಾನ್‌, ಜುರೆಲ್‌, ಹೆಟ್ಮೇಯರ್‌, ಅಶ್ವಿನ್‌, ಬೌಲ್ಟ್‌, ಆವೇಶ್‌, ಸಂದೀಪ್‌, ಚಹಲ್‌, ಬರ್ಗರ್‌/ಪೋವೆಲ್‌/ಕೇಶವ್‌.ಪಂಜಾಬ್‌: ಪ್ರಭ್‌ಸಿಮ್ರನ್‌, ಬೇರ್‌ಸ್ಟೋವ್‌, ರುಸ್ಸೌ, ಶಶಾಂಕ್‌, ಜಿತೇಶ್‌, ಅಶುತೋಷ್‌, ಕರ್ರನ್‌ (ನಾಯಕ), ಹರ್ಷಲ್‌, ಎಲ್ಲೀಸ್‌, ಚಹರ್‌, ಅರ್ಶ್‌ದೀಪ್‌, ವಿದ್ವತ್‌/ಹರ್ಪ್ರೀತ್‌.

ಪಂದ್ಯ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

Share this article