ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿ: ಇಗಾ vs ಪೌಲಿನಿ ಫೈನಲ್‌

KannadaprabhaNewsNetwork | Updated : Jun 07 2024, 04:26 AM IST

ಸಾರಾಂಶ

ಫ್ರೆಂಚ್‌ ಓಪನ್‌ ಟೆನಿಸ್ ಗ್ರ್ಯಾನ್‌ ಸ್ಲಾಂ ಮಹಿಳಾ ಸಿಂಗಲ್ಸ್‌ ಫೈನಲ್‌ಗೆ ವಿಶ್ವ ನಂ.1 ಇಗಾ ಸ್ವಿಯಾಟೆಕ್‌, 12ನೇ ಶ್ರೇಯಾಂಕಿತೆ ಇಟಲಿಯ ಜ್ಯಾಸ್ಮಿನ್‌ ಪೌಲಿನಿ. ಶನಿವಾರ ಫೈನಲ್‌ ಪಂದ್ಯ.

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ವಿಶ್ವ ನಂ.1 ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಹಾಗೂ 12ನೇ ಶ್ರೇಯಾಂಕಿತೆ ಇಟಲಿಯ ಜ್ಯಾಸ್ಮಿಸ್‌ ಪೌಲಿನಿ ಸೆಣಸಲಿದ್ದಾರೆ.ಗುರುವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ 3ನೇ ಶ್ರೇಯಾಂಕಿತೆ ಅಮೆರಿಕದ ಕೊಕೊ ಗಾಫ್‌ ವಿರುದ್ಧ ಸ್ವಿಯಾಟೆಕ್‌ 6-2, 6-4 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿ, ಸತತ 3ನೇ ಬಾರಿಗೆ ಫೈನಲ್‌ ಪ್ರವೇಶಿಸಿದರು. 2022, 2023ರಲ್ಲಿ ಚಾಂಪಿಯನ್‌ ಆಗಿದ್ದ ಸ್ವಿಯಾಟೆಕ್‌, ಪ್ಯಾರಿಸ್‌ನಲ್ಲಿ ಸತತ 20 ಪಂದ್ಯಗಳನ್ನು ಗೆದ್ದಿದ್ದು ಶನಿವಾರದ ಫೈನಲ್‌ನಲ್ಲೂ ಗೆಲುವು ಸಾಧಿಸಿ 4ನೇ ಫ್ರೆಂಚ್‌ ಓಪನ್‌ ಹಾಗೂ ಒಟ್ಟಾರೆ 5ನೇ ಗ್ರ್ಯಾನ್‌ ಸ್ಲಾಂ ಟ್ರೋಫಿ ಗೆಲ್ಲುವ ಗುರಿ ಹೊಂದಿದ್ದಾರೆ. 2020ರಲ್ಲಿ ಚೊಚ್ಚಲ ಫ್ರೆಂಚ್‌ ಓಪನ್‌ ಪ್ರಶಸ್ತಿ ಜಯಿಸಿದ್ದ ಇಗಾ, 2022ರಲ್ಲಿ ಯುಎಸ್‌ ಓಪನ್‌ ಟ್ರೋಫಿ ಜಯಿಸಿದ್ದರು.

ಇನ್ನು, ಇದೇ ಮೊದಲ ಬಾರಿಗೆ ಪೌಲಿನಿ ಗ್ರ್ಯಾನ್‌ ಸ್ಲಾಂ ಫೈನಲ್‌ಗೇರಿದ್ದಾರೆ. ಗುರುವಾರ 2ನೇ ಸೆಮೀಸ್‌ನಲ್ಲಿ ರಷ್ಯಾದ ಮಿರ್ರಾ ಆ್ಯಂಡ್ರೀವಾ ವಿರುದ್ಧ 6-3, 6-1 ಸೆಟ್‌ಗಳ ಸುಲಭ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೇರಿದರು.ಲಾರಾ-ರೋಜರ್‌ಗೆ ಮಿಶ್ರ ಡಬಲ್ಸ್‌ ಪ್ರಶಸ್ತಿ

ಜರ್ಮನಿಯ ಲಾರಾ ಸೀಜ್‌ಮಡ್‌ ಹಾಗೂ ಫ್ರಾನ್ಸ್‌ನ ರೋಜರ್‌ ವ್ಯಾಸಲೀನ್‌ ಫ್ರೆಂಚ್‌ ಓಪನ್‌ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಗುರುವಾರ ನಡೆದ ಫೈನಲ್ಸ್‌ನಲ್ಲಿ ಅಮೆರಿಕದ ಡಿಸೈರ್‌ ಕ್ರಾವ್ಸೈಕ್‌ ಹಾಗೂ ಬ್ರಿಟನ್‌ನ ನೀಲ್‌ ಸ್ಕುಪ್ಸ್ಕಿ ವಿರುದ್ಧ 6-4, 7-5ರಲ್ಲಿ ಗೆದ್ದರು.ಸತತ 4ನೇ ಬಾರಿಗೆ ಜ್ವೆರೆವ್‌ ಸೆಮೀಸ್‌ಗೆ

ಪ್ಯಾರಿಸ್‌: ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಸತತ 4ನೇ ವರ್ಷ ಫ್ರೆಂಚ್‌ ಓಪನ್ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಬುಧವಾರ ತಡರಾತ್ರಿ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್‌ ಡಿ ಮಿನ್ಯೊರ್‌ ವಿರುದ್ಧ 6-4, 7-6(5), 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಶುಕ್ರವಾರ ಮೊದಲ ಸೆಮೀಸ್‌ನಲ್ಲಿ ಜ್ವೆರೆವ್‌ಗೆ ನಾರ್ವೆಯ ಕ್ಯಾಸ್ಪರ್‌ ರುಡ್‌ ಎದುರಾಗಲಿದ್ದು, 2ನೇ ಸೆಮೀಸ್‌ನಲ್ಲಿ ಸ್ಪೇನ್‌ನ ಕಾರ್ಲೊಸ್‌ ಆಲ್ಕರಜ್‌ ಹಾಗೂ ಇಟಲಿಯ ಯಾನ್ನಿಕ್‌ ಸಿನ್ನರ್‌ ಸೆಣಸಲಿದ್ದಾರೆ. ಈ ನಾಲ್ಕೂ ಆಟಗಾರರ ಪೈಕಿ ಯಾರೊಬ್ಬರೂ ಈ ವರೆಗೂ ಫ್ರೆಂಚ್‌ ಓಪನ್‌ ಗೆದ್ದಿಲ್ಲ. ಅಲ್ಲದೇ 2004ರ ಬಳಿಕ ಇದೇ ಮೊದಲ ಬಾರಿಗೆ ನಡಾಲ್‌, ಫೆಡರರ್‌ ಹಾಗೂ ಜೋಕೋವಿಚ್‌ ಇಲ್ಲದ ಫೈನಲ್‌ಗೆ ಫ್ರೆಂಚ್‌ ಓಪನ್‌ ಸಾಕ್ಷಿಯಾಗಲಿದೆ.ಬೋಪಣ್ಣ ಜೋಡಿಗೆ ಸೆಮೀಸಲ್ಲಿ ಸೋಲು

ಪ್ಯಾರಿಸ್‌: ಭಾರತದ ರೋಹನ್‌ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಫ್ರೆಂಚ್‌ ಓಪನ್‌ ಪುರುಷರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಸೋಲುಂಡಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ ಇಟಲಿಯ ಸಿಮೊನ್‌ ಬೊಲಿಲಿ ಹಾಗೂ ಆ್ಯಂಡ್ರೆಯಾ ವವಸ್ಸೊರಿ ವಿರುದ್ಧ 5-7, 6-2, 2-6 ಸೆಟ್‌ಗಳಲ್ಲಿ ಸೋಲುಂಡಿತು. ಈ ವರ್ಷ ಆಸ್ಟ್ರೇಲಿಯನ್‌ ಓಪನ್‌ ಗೆದ್ದಿದ್ದ ಬೋಪಣ್ಣ ಜೋಡಿ ಮತ್ತೊಂದು ಗ್ರ್ಯಾನ್‌ ಸ್ಲಾಂ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ ಆ ನಿರೀಕ್ಷೆ ಈಡೇರಲಿಲ್ಲ.

ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಜೋಕೋವಿಚ್‌

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಪಂದ್ಯದ ವೇಳೆ ಮಂಡಿ ಗಾಯಕ್ಕೆ ತುತ್ತಾಗಿದ್ದ ಸರ್ಬಿಯಾದ ಟೆನಿಸ್‌ ದಿಗ್ಗಜ ನೋವಾಕ್‌ ಜೋಕೋವಿಚ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಬಗ್ಗೆ ಟ್ವೀಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಜೋಕೋವಿಚ್‌, ಕೆಲ ವಾರಗಳ ಕಾಲ ವಿಶ್ರಾಂತಿಯಲ್ಲಿ ಇರುವುದಾಗಿ ತಿಳಿಸಿದ್ದಾರೆ. ಜು.1ರಿಂದ ಆರಂಭಗೊಳ್ಳಲಿರುವ ವಿಂಬಲ್ಡನ್‌ ವೇಳೆಗೆ ಜೋಕೋವಿಚ್‌ ಫಿಟ್‌ ಆಗುವ ನಿರೀಕ್ಷೆ ಇದೆ.

Share this article