ಟಿ20 ಕ್ರಿಕೆಟ್‌ನಂತೆ ಆಡಿ ಟೆಸ್ಟ್‌ ಗೆಲ್ಲಲು ಭಾರತ ಪಣ: ಇಂದಿನ ಕ್ಲೈಮ್ಯಾಕ್ಸ್‌ ಮೇಲೆ ಎಲ್ಲರ ಚಿತ್ತರ

KannadaprabhaNewsNetwork |  
Published : Oct 01, 2024, 01:22 AM ISTUpdated : Oct 01, 2024, 04:17 AM IST
ಕೆ.ಎಲ್‌.ರಾಹುಲ್‌ | Kannada Prabha

ಸಾರಾಂಶ

2ನೇ ಟೆಸ್ಟ್‌. ಎರಡೂವರೆ ದಿನ ಮಳೆಗೆ ಬಲಿಯಾದರೂ ಭಾರತಕ್ಕಿದೆ ಗೆಲುವಿನ ನಿರೀಕ್ಷೆ. ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ 233/10. ಭಾರತ ಕೇವಲ 34.4 ಓವರಲ್ಲೇ 285/9 ರನ್‌ಗೆ ಡಿಕ್ಲೇರ್‌. 52 ರನ್‌ ಲೀಡ್‌. 2ನೇ ಇನ್ನಿಂಗ್ಸಲ್ಲಿ ಬಾಂಗ್ಲಾ 2ಕ್ಕೆ 26. ಇಂದು ಕೊನೆ ದಿನ

ಕಾನ್ಪುರ: ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್‌ ಪಂದ್ಯದ 5 ದಿನಗಳ ಆಟದ ಪೈಕಿ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಮಳೆ ಆಹುತಿ ಪಡೆದರೂ ಟೀಂ ಇಂಡಿಯಾ ಗೆಲುವಿನ ಆತ್ಮವಿಶ್ವಾಸ ಮಾತ್ರ ಕಳೆದುಕೊಂಡಿಲ್ಲ. ಆದರೆ ಇದಕ್ಕೆ ಟೆಸ್ಟ್‌ನ ಅಸಲಿ ಆಟ ಆಡಿದರೆ ಸಾಕಾಗಲ್ಲ ಎಂದು ಚೆನ್ನಾಗಿಯೇ ಅರಿತಿರುವ ಭಾರತ, ಆಟದ ಶೈಲಿಯನ್ನು ಸದ್ಯ ಟಿ20 ಮೋಡ್‌ಗೆ ಬದಲಾಯಿಸಿಕೊಂಡಿದೆ. 

ಈ ಮೂಲಕ 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಗೆಲ್ಲಲು ಪಣ ತೊಟ್ಟಿದೆ. ಇದರಲ್ಲಿ ಭಾರತ ಯಶ ಕಾಣಲಿದೆಯೇ ಎಂಬುದು ಪಂದ್ಯದ ಕೊನೆ ದಿನವಾದ ಮಂಗಳವಾರ ಗೊತ್ತಾಗಲಿದೆ.ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ 233ಕ್ಕೆ ಆಲೌಟಾದರೆ, ಭಾರತ ಸ್ಫೋಟಕ ಆಟವಾಡಿ 9 ವಿಕೆಟ್‌ಗೆ 285 ರನ್‌ ಕಲೆಹಾಕಿ ಡಿಕ್ಲೇರ್‌ ಘೋಷಿಸಿತು. 52 ರನ್‌ ಹಿನ್ನಡೆ ಅನುಭವಿಸಿದ ಬಾಂಗ್ಲಾ 2ನೇ ಇನ್ನಿಂಗ್ಸ್‌ನಲ್ಲಿ 4ನೇ ದಿನದಾಟದಂತ್ಯಕ್ಕೆ 2 ವಿಕೆಟ್‌ಗೆ 26 ರನ್‌ ಗಳಿಸಿದ್ದು, ಇನ್ನೂ 26 ರನ್‌ ಹಿನ್ನಡೆಯಲ್ಲಿದೆ. ಮಂಗಳವಾರ ಅಸಾಧಾರಣ ಪ್ರದರ್ಶನ ನೀಡಿ ಪಂದ್ಯ ಗೆಲ್ಲುವುದು ಭಾರತದ ಮುಂದಿರುವ ಗುರಿ.

ಏಕಾಂಗಿ ಹೋರಾಟ: ಪಂದ್ಯದ ಮೊದಲ 3 ದಿನ ಕೇವಲ 35 ಓವರ್‌ಗಳ ಆಟ ನಡೆದಿತ್ತು. ಬಾಂಗ್ಲಾ 3 ವಿಕೆಟ್‌ಗೆ 107 ರನ್‌ ಗಳಿಸಿತ್ತು. 4ನೇ ದಿನವಾದ ಸೋಮವಾರ ಮಳೆರಾಯ ಕೃಪೆ ತೋರಿದ ಕಾರಣ ಪಂದ್ಯ ಸರಾಗವಾಗಿ ನಡೆಯಿತು. ಅತ್ಯುತ್ತಮ ಬೌಲಿಂಗ್‌, ಫೀಲ್ಡಿಂಗ್‌ ಪ್ರದರ್ಶಿಸಿದ ಭಾರತಕ್ಕೆ ಪ್ರವಾಸಿ ತಂಡವನ್ನು ಆಲೌಟ್‌ ಮಾಡಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ಬಾಂಗ್ಲಾ 233 ರನ್‌ಗೆ ಗಂಟುಮೂಟೆ ಕಟ್ಟಿತು. ಏಕಾಂಗಿ ಹೋರಾಟ ಪ್ರದರ್ಶಿಸಿದ ಮೋಮಿನುಲ್‌ ಹಕ್‌ 107 ಔಟಾಗದೆ ರನ್‌ ಗಳಿಸಿದರು. ಬೂಮ್ರಾ 3, ಅಶ್ವಿನ್‌, ಸಿರಾಜ್‌, ಆಕಾಶ್‌ ದೀಪ್‌ ತಲಾ 2 ವಿಕೆಟ್‌ ಪಡೆದರು.

ಟಿ20 ಮೋಡ್‌ನಲ್ಲಿ ಅಬ್ಬರ: ಸೀಮಿತ ಅವಧಿಯಲ್ಲೇ ಪಂದ್ಯ ಗೆಲ್ಲುವ ಟಾಸ್ಕ್‌ ಪಡೆದ ಭಾರತ ಮೊದಲ ಓವರ್‌ನಲ್ಲೇ ಟಿ20 ಮೋಡ್‌ನ ಆಟಕ್ಕೆ ಇಳಿಯಿತು. ಕ್ರೀಸ್‌ಗೆ ಬಂದ ಬ್ಯಾಟರ್‌ಗಳೆಲ್ಲಾ ಸ್ಫೋಟಕ ಆಟಕ್ಕೆ ಒತ್ತುಕೊಟ್ಟರು. ಮೊದಲ ವಿಕೆಟ್‌ಗೆ ಜೈಸ್ವಾಲ್‌-ರೋಹಿತ್‌ ಶರ್ಮಾ 3.5 ಓವರ್‌ಗಳಲ್ಲಿ 55 ರನ್‌ ಸೇರಿಸಿದರು. ರೋಹಿತ್‌(11 ಎಸೆತಗಳಲ್ಲಿ 23) ನಿರ್ಗಮನದ ಬಳಿಕವೂ ಅಬ್ಬರದ ಆಟವಾಡಿದ ಜೈಸ್ವಾಲ್‌, 31 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. 51 ಎಸೆತದಲ್ಲಿ 72 ರನ್‌ ಗಳಿಸಿದ್ದಾಗ ಜೈಸ್ವಾಲ್‌ ಔಟಾದರು. 

ಶುಭ್‌ಮನ್ ಗಿಲ್‌ ಕೊಡುಗೆ 39 ರನ್‌. ಬಳಿಕ ತಂಡಕ್ಕೆ ಆಸರೆಯಾಗಿದ್ದು ವಿರಾಟ್‌ ಕೊಹ್ಲಿ ಹಾಗೂ ಕೆ.ಎಲ್‌.ರಾಹುಲ್‌. ಈ ಜೋಡಿ 6ನೇ ವಿಕೆಟ್‌ಗೆ 87 ರನ್‌ ಸೇರಿಸಿತು. ವಿರಾಟ್‌ 35 ಎಸೆತಗಳಲ್ಲಿ 47 ರನ್‌ ಗಳಿಸಿದರೆ, ರಾಹುಲ್‌ 43 ಎಸೆತಗಳಲ್ಲಿ 68 ರನ್‌ ಚಚ್ಚಿದರು. ಸತತ 2 ಸಿಕ್ಸರ್‌ ಸಿಡಿಸಿದ್ದ ಆಕಾಶ್‌ದೀಪ್‌(12) ಔಟಾಗುವುದರೊಂದಿಗೆ ಭಾರತ ಇನ್ನಿಂಗ್ಸ್‌ ಡಿಕ್ಲೇರ್‌ ಘೋಷಿಸಿತು. ಮೆಹಿದಿ ಹಸನ್‌ ಮೀರಾಜ್‌, ಶಕೀಬ್‌ ತಲಾ 4 ವಿಕೆಟ್ ಕಿತ್ತರು.ಆರಂಭಿಕ ಆಘಾತ: ಬಳಿಕ ಇನ್ನಿಂಗ್ಸ್‌ ಆರಂಭಿಸಿರುವ ಬಾಂಗ್ಲಾ ಆರಂಭಿಕ ಆಘಾತ ಅನುಭವಿಸಿತು. ಜಾಕಿರ್ ಹುಸೈನ್‌ ಹಾಗೂ ಹಸನ್‌ ಮಹ್ಮೂದ್‌ರನ್ನು ಅಶ್ವಿನ್‌ ಪೆವಿಲಿಯನ್‌ಗೆ ಅಟ್ಟಿದರು.

ಸ್ಕೋರ್: ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ 233/10 (ಮೋಮಿನುಲ್‌ 107*, ಬೂಮ್ರಾ 3-50, ಆಕಾಶ್‌ದೀಪ್‌ 2-43, ಅಶ್ವಿನ್‌ 2-45, ಸಿರಾಜ್‌ 2-57) ಮತ್ತು 2ನೇ ಇನ್ನಿಂಗ್ಸ್‌ನಲ್ಲಿ 26/2 (4ನೇ ದಿನದಂತ್ಯಕ್ಕೆ) (ಜಾಕಿರ್‌ 10, ಅಶ್ವಿನ್‌ 2-14), ಭಾರತ ಮೊದಲ ಇನ್ನಿಂಗ್ಸ್‌ 285/9 ಡಿಕ್ಲೇರ್‌ (ಜೈಸ್ವಾಲ್‌ 72, ರಾಹುಲ್ 68, ಕೊಹ್ಲಿ 47, ಮೀರಾಜ್‌ 4-41, ಶಕೀಬ್‌ 4-78)

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!