ನವದೆಹಲಿ: ವೆಸ್ಟ್‌ಇಂಡೀಸ್ ವಿರುದ್ಧ 2ನೇ ಟೆಸ್ಟ್‌ನ ಮೊದಲ ದಿನವೇ ಭಾರತ ಅಧಿಪತ್ಯ ಸಾಧಿಸಿದೆ. ಯಶಸ್ವಿ ಜೈಸ್ವಾಲ್ ಅಮೋಘ ಶತಕದ ನೆರವಿನಿಂದ ಭಾರತ ತಂಡ ದಿನದಂತ್ಯಕ್ಕೆ 2 ವಿಕೆಟ್ ನಷ್ಟದಲ್ಲಿ 318 ರನ್ ಕಲೆಹಾಕಿದೆ.
ಸತತ 6 ಟೆಸ್ಟ್‌ನಲ್ಲಿ ಟಾಸ್ ಸೋಲಿನ ಬಳಿಕ ಮೊದಲ ಬಾರಿ ಟಾಸ್ ಗೆದ್ದ ಶುಭ್‌ಮನ್ ಗಿಲ್, ಬ್ಯಾಟಿಂಗ್ ಆಯ್ಕೆ ಮಾಡಿದರು. ಮೊದಲ ವಿಕೆಟ್‌ಗೆ ಕನ್ನಡಿ ಕೆ.ಎಲ್.ರಾಹುಲ್-ಜೈಸ್ವಾಲ್ 58 ರನ್ ಸೇರಿಸಿದರು. ದೊಡ್ಡ ಮೊತ್ತದ ನಿರೀಕ್ಷೆ ಮೂಡಿಸಿದ್ದ ರಾಹುಲ್ 38 ರನ್ ಗಳಿಸಿ ನಿರ್ಗಮಿಸಿದರು. 2ನೇ ವಿಕೆಟ್‌ಗೆ ಸಾಯಿ ಸುದರ್ಶನ್ ಜೊತೆಗೂಡಿದ ಜೈಸ್ವಾಲ್, ಬರೋಬ್ಬರಿ 193 ರನ್ ಸೇರಿಸಿದರು. ಸತತ ವೈಫಲ್ಯ ಅನುಭವಿಸುತ್ತಿದ್ದ ಸುದರ್ಶನ್ 87 ರನ್ ಸಿಡಿಸಿದರು. ಆದರೆ ಚೊಚ್ಚಲ ಶತಕದಿಂದ ವಂಚಿತರಾದರು. ಟೆಸ್ಟ್‌ನಲ್ಲಿ 7ನೇ ಶತಕ ಬಾರಿಸಿರುವ 23 ವರ್ಷದ ಜೈಸ್ವಾಲ್, ದಿನದಂತ್ಯಕ್ಕೆ 253 ಎಸೆತಗಳಲ್ಲಿ 22 ಬೌಂಡರಿಗಳೊಂದಿಗೆ ಔಟಾಗದೆ 173 ರನ್ ಗಳಿಸಿದ್ದು, ನಾಯಕ ಗಿಲ್(ಔಟಾಗದೆ 20) ಜೊತೆ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ವಿಂಡೀಸ್ ಪರ ವ್ಯಾರಿಕನ್ 2 ವಿಕೆಟ್ ಪಡೆದರು.
ಸ್ಕೋರ್: ಭಾರತ 318/2 (ಮೊದಲ ದಿನದಂತ್ಯಕ್ಕೆ) (ಜೈಸ್ವಾಲ್ ಔಟಾಗದೆ 173, ಸುದರ್ಶನ್ 87, ರಾಹುಲ್ 38, ಗಿಲ್ ಔಟಾಗದೆ 20, ವ್ಯಾರಿಕನ್ 2-60)
ಸಚಿನ್, ಗ್ರೇಮ್ ಸ್ಮಿತ್
ದಾಖಲೆ ಮುರಿದ ಯಶಸ್ವಿ
23 ವರ್ಷದ ಜೈಸ್ವಾಲ್ ಟೆಸ್ಟ್‌ನಲ್ಲಿ 5 ಬಾರಿ 150+ ರನ್ ಕಲೆಹಾಕಿದ್ದಾರೆ. 24 ವರ್ಷಕ್ಕೂ ಮುನ್ನ ಗರಿಷ್ಠ ಬಾರಿ 150+ ರನ್ ಗಳಿಸಿದವರ ಪಟ್ಟಿಯಲ್ಲಿ ದಿಗ್ಗಜರಾದ ಸಚಿನ್ ತೆಂಡುಲ್ಕರ್, ಪಾಕಿಸ್ತಾನದ ಜಾವೆದ್ ಮಿಯಾಂದದ್, ದ.ಆಫ್ರಿಕಾದ ಗ್ರೇಮ್ ಸ್ಮಿತ್‌ರನ್ನು ಜೈಸ್ವಾಲ್ ಹಿಂದಿಕ್ಕಿದ್ದಾರೆ. ಸಚಿನ್, ಸ್ಮಿತ್, ಜಾವೆಲ್ ತಲಾ 4 ಬಾರಿ ಈ ಸಾಧನೆ ಮಾಡಿದ್ದಾರೆ. ಡಾನ್ ಬ್ರಾಡ್ಮನ್(8) ಮಾತ್ರ ಜೈಸ್ವಾಲ್‌ಗಿಂತ ಹೆಚ್ಚು ಬಾರಿ ಈ ಸಾಧನೆ ಮಾಡಿದ್ದಾರೆ.
ವಿರಾಟ್ ದಾಖಲೆಯನ್ನು
ಸರಿಗಟ್ಟಿದ ಜೈಸ್ವಾಲ್
ಜೈಸ್ವಾಲ್ ಭಾರತದಲ್ಲಿ ಟೆಸ್ಟ್‌ನ ಮೊದಲ ದಿನವೇ 2 ಬಾರಿ 150+ ರನ್ ಗಳಿಸಿದ್ದು, ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಕೊಹ್ಲಿ ಕೂಡಾ 2 ಬಾರಿ ಈ ಸಾಧನೆ ಮಾಡಿದ್ದಾರೆ.
ಜೈಸ್ವಾಲ್ 3000 ರನ್
ಜೈಸ್ವಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3000 ರನ್ ಪೂರ್ಣಗೊಳಿಸಿದ್ದಾರೆ. 26 ಟೆಸ್ಟ್‌ನಲ್ಲಿ 2262 ರನ್, 22 ಅಂ.ರಾ. ಟಿ20 ಪಂದ್ಯಗಳಲ್ಲಿ 723 ಹಾಗೂ 1 ಏಕದಿನ ಪಂದ್ಯದಲ್ಲಿ 15 ರನ್ ಗಳಿಸಿದ್ದಾರೆ. ಒಟ್ಟಾರೆ 71 ಇನ್ನಿಂಗ್ಸ್‌ಗಳಲ್ಲಿ ಅವರು ಈ ಮೈಲುಗಲ್ಲು ತಲುಪಿದ್ದಾರೆ.