KannadaprabhaNewsNetwork | Updated : Feb 08 2024, 08:00 AM IST
ಸಾರಾಂಶ
ಇಂಗ್ಲೆಂಡ್ ವಿರುದ್ಧ ಅಬ್ಬರದ ಬೌಲಿಂಗ್ ಬಳಿಕ ರ್‍ಯಾಂಕಿಂಗ್‌ನಲ್ಲಿ 3 ಸ್ಥಾನ ಜಿಗಿದ ಭಾರತೀಯ ವೇಗಿ ಜಸ್‌ಪ್ರೀತ್ ಬೂಮ್ರಾ, ಎಲ್ಲಾ ಮಾದರಿ ರ್‍ಯಾಂಕಿಂಗ್ ಪಟ್ಟಿಯಲ್ಲೂ ಅಗ್ರಸ್ಥಾನ ಪಡೆದ ವಿಶ್ವದ ಏಕೈಕ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ದುಬೈ: ತಮ್ಮ ಅಭೂತಪೂರ್ವ ಪ್ರದರ್ಶನವನ್ನು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಮುಂದುವರಿಸಿರುವ ಭಾರತದ ತಾರಾ ವೇಗಿ ಜಸ್‌ಪ್ರೀತ್ ಬೂಮ್ರಾ ಐಸಿಸಿ ಟೆಸ್ಟ್ ಬೌಲರ್‌ಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ.ಬುಧವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ಬೂಮ್ರಾ 3 ಸ್ಥಾನ ಜಿಗಿತ ಸಾಧಿಸಿದರು. ಅವರು ಸದ್ಯ 881 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ. ಕಳೆದ 11 ತಿಂಗಳುಗಳಿಂದ ಅಗ್ರಸ್ಥಾನದಲ್ಲಿದ್ದ ತಾರಾ ಸ್ಪಿನ್ನರ್ ಆರ್.ಅಶ್ವಿನ್, 2 ಸ್ಥಾನ ಕುಸಿದು 3ನೇ ಸ್ಥಾನ ಪಡೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ 2ನೇ, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ 4ನೇ, ರವೀಂದ್ರ ಜಡೇಜಾ 2 ಸ್ಥಾನ ಕುಸಿದು ಜಂಟಿ 9ನೇ ಸ್ಥಾನದಲ್ಲಿದ್ದಾರೆ.ಮೊದಲ ಬೌಲರ್:
ಬೂಮ್ರಾ ಎಲ್ಲಾ ಮಾದರಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ವಿಶ್ವದ ಮೊದಲ ಬೌಲರ್ ಎಂಬ ಖ್ಯಾತಿಗೊಳಗಾಗಿದ್ದಾರೆ. ಈ ಮೊದಲು ಅವರು ಟಿ20, ಏಕದಿನದಲ್ಲೂ ನಂ.1 ಸ್ಥಾನಿಯಾಗಿದ್ದರು. ಆದರೆ ಈಗ ಅವರು ಏಕದಿನದಲ್ಲಿ 6ನೇ, ಟಿ20ಯಲ್ಲಿ 99ನೇ ಸ್ಥಾನದಲ್ಲಿದ್ದಾರೆ.ಜೈಸ್ವಾಲ್ ಜಿಗಿತ:
ಇದೇ ವೇಳೆ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಟೆಸ್ಟ್ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ 37 ಸ್ಥಾನ ಪ್ರಗತಿ ಸಾಧಿಸಿ 29ನೇ ಸ್ಥಾನಕ್ಕೇರಿದ್ದಾರೆ. ವಿರಾಟ್ ಕೊಹ್ಲಿ ಅಗ್ರ-10ರಲ್ಲಿ ಏಕೈಕ ಭಾರತೀಯ ಎನಿಸಿಕೊಂಡಿದ್ದು, 7ನೇ ಸ್ಥಾನದಲ್ಲಿದ್ದಾರೆ. ರಿಷಭ್ ಪಂತ್, ರೋಹಿತ್ ಶರ್ಮಾ ಕ್ರಮವಾಗಿ 12, 13ನೇ ಸ್ಥಾನಗಳಲ್ಲಿದ್ದಾರೆ. ಆಲ್ರೌಂಡರ್ ವಿಭಾಗದಲ್ಲಿ ಜಡೇಜಾ ನಂ.1 ಸ್ಥಾನದಲ್ಲಿದ್ದು, ಆರ್.ಅಶ್ವಿನ್ 2ನೇ, ಅಕ್ಷರ್ ಪಟೇಲ್ 5ನೇ ಸ್ಥಾನದಲ್ಲಿದ್ದಾರೆ.-ಎಲ್ಲಾ ಮಾದರಿ ನಂ.1:ಬೂಮ್ರಾ 4ನೇ ಕ್ರಿಕೆಟಿಗಬೂಮ್ರಾ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲೂ ನಂ.1 ಸ್ಥಾನ ಅಲಂಕರಿಸಿದ ಭಾರತದ 2ನೇ ಹಾಗೂ ವಿಶ್ವದ 4ನೇ ಕ್ರಿಕೆಟಿಗ. ಈ ಮೊದಲು ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್, ರಿಕಿ ಪಾಂಟಿಂಗ್, ಭಾರತದ ವಿರಾಟ್ ಕೊಹ್ಲಿ ಎಲ್ಲಾ ಮಾದರಿಯಲ್ಲೂ ಅಗ್ರಸ್ಥಾನ ಪಡೆದಿದ್ದರು. ಇವರೆಲ್ಲರೂ ಬ್ಯಾಟಿಂಗ್ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.-ಟೆಸ್ಟ್ ನಂ.1 ಸ್ಥಾನಿಯಾದಭಾರತದ ಮೊದಲ ವೇಗಿಬೂಮ್ರಾ ಟೆಸ್ಟ್‌ನಲ್ಲಿ ನಂ.1 ಸ್ಥಾನ ಪಡೆದ ಭಾರತದ ಮೊದಲ ವೇಗಿ ಎನಿಸಿಕೊಂಡಿದ್ದಾರೆ. ಬೂಮ್ರಾಗೂ ಮುನ್ನ ಭಾರತೀಯ ವೇಗಿಯ ಟೆಸ್ಟ್‌ನ ಶ್ರೇಷ್ಠ ದಾಖಲೆ 2ನೇ ಸ್ಥಾನ. 1979-80ರಲ್ಲಿ ಭಾರತದ ಮಾಜಿ ನಾಯಕ ಕಪಿಲ್ ದೇವ್ ಈ ಸಾಧನೆ ಮಾಡಿದ್ದರು.-04ನೇ ಭಾರತೀಯಬೂಮ್ರಾ ಟೆಸ್ಟ್ ನಂ.1 ಸ್ಥಾನಿಯಾದ ಭಾರತದ 4ನೇ ಬೌಲರ್. ಈ ಮೊದಲು ಆರ್.ಅಶ್ವಿನ್, ರವೀಂದ್ರ ಜಡೇಜಾ, ಬಿಶನ್ ಸಿಂಗ್ ಬೇಡಿ ಅಗ್ರಸ್ಥಾನ ಅಲಂಕರಿಸಿದ್ದರು.