ಡೋಪಿಂಗ್‌ ಸುಳಿಯಲ್ಲಿ ಕರ್ನಾಟಕದ ಮನು: ಪ್ಯಾರಿಸ್‌ ಒಲಿಂಪಿಕ್ಸ್‌ನ ಕನಸು ಭಗ್ನ?

KannadaprabhaNewsNetwork | Updated : Jun 29 2024, 04:39 AM IST

ಸಾರಾಂಶ

ಉದ್ದೀಪನ ಪರೀಕ್ಷೆಯಲ್ಲಿ ಮನು ಸ್ಟೆರಾಯ್ಡ್‌ ತೆಗೆದುಕೊಂಡಿರುವುದು ಪತ್ತೆಯಾಗಿದೆ. ಅಮಾನತು ಶಿಕ್ಷೆಯಿಂದಾಗಿ ಮನು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳುವುದು ಬಹುತೇಕ ಖಚಿತವೆನಿಸಿದೆ.

ಪಂಚಕುಲ(ಹರ್ಯಾಣ): ಭಾರತದ ತಾರಾ ಜಾವೆಲಿನ್‌ ಎಸೆತಗಾರ, ಕರ್ನಾಟಕದ ಡಿ.ಪಿ.ಮನು ಡೋಪಿಂಗ್‌ ಸುಳಿಯಲ್ಲಿ ಸಿಲುಕಿದ್ದಾರೆ. ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ(ನಾಡಾ) ಮನು ಅವರನ್ನು ತಾತ್ಕಾಲಿಕ ಅಮಾನತುಗೊಳಿಸಿದೆ. 

ಮನು, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳುವುದು ಬಹುತೇಕ ಖಚಿತವೆನಿಸಿದೆ.ಸದ್ಯ ನಡೆಯುತ್ತಿರುವ ರಾಷ್ಟ್ರೀಯ ಅಂತರ್‌-ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸದಂತೆ ನಾಡಾ ಸೂಚಿಸಿದೆ.

 ಕಳೆದ ಏಪ್ರಿಲ್‌ನಲ್ಲಿ ನಡೆದಿದ್ದ ಇಂಡಿಯನ್‌ ಗ್ರ್ಯಾನ್‌ ಪ್ರಿ ಚಾಂಪಿಯನ್‌ಶಿಪ್‌ ವೇಳೆ ನಡೆಸಿದ ಉದ್ದೀಪನ ಪರೀಕ್ಷೆಯಲ್ಲಿ ಮನು ಸ್ಟೆರಾಯ್ಡ್‌ ತೆಗೆದುಕೊಂಡಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಮನು ಇನ್ನೂ ಒಲಿಂಪಿಕ್ಸ್‌ ಅರ್ಹತೆಗೆ ಬೇಕಿರುವ ಗುರಿ ತಲುಪಿಲ್ಲವಾದರೂ, ವಿಶ್ವ ರ್‍ಯಾಂಕಿಂಗ್‌ ಆಧಾರದಲ್ಲಿ ಅವರಿಗೆ ಅವಕಾಶ ಸಿಗುವುದು ಖಚಿತವಾಗಿತ್ತು. ಆರಂಭದಲ್ಲಿ ಅವರ ಹೆಸರು ಅಂತರ್‌-ರಾಜ್ಯ ಅಥ್ಲೆಟಿಕ್ಸ್‌ನ ಸ್ಪರ್ಧಿಗಳ ಪಟ್ಟಿಯಲ್ಲಿದ್ದರೂ ಹೊಸದಾಗಿ ತಯಾರಿಸಿದ ಪಟ್ಟಿಯಿಂದ ಹೆಸರು ಕೈಬಿಡಲಾಗಿದೆ.

ವಿಂಬಲ್ಡನ್‌ನ ಮೊದಲ ಸುತ್ತಿನಲ್ಲಿ ಸುಮಿತ್‌ಗೆ ಮಿಯೋಮಿರ್‌ ಸವಾಲು

ಲಂಡನ್‌: ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ನ ಸಿಂಗಲ್ಸ್ ಪ್ರಧಾನ ಸುತ್ತಿನಲ್ಲಿ ಮೊದಲ ಬಾರಿ ಆಡಲು ಸಜ್ಜಾಗಿರುವ ಭಾರತದ ಸುಮಿತ್‌ ನಗಾಲ್‌ಗೆ ಮೊದಲ ಸುತ್ತಿನಲ್ಲೇ ಕಠಿಣ ಸವಾಲು ಎದುರಾಗಲಿದೆ. ಜು.1ರಿಂದ ಆರಂಭಗೊಳ್ಳಲಿರುವ ಟೂರ್ನಿಯಲ್ಲಿ ವಿಶ್ವ ನಂ.72 ನಗಾಲ್‌ ಅವರು ವಿಶ್ವ ನಂ.53 ಸರ್ಬಿಯಾದ ಮಿಯೋಮಿರ್‌ ಕೆಕ್‌ಮನೋವಿಚ್‌ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ. 

ಪುರುಷರ ಡಬಲ್ಸ್‌ ಮೊದಲ ಸುತ್ತಿನಲ್ಲಿ ರೋಹನ್‌ ಬೋಪಣ್ಣ-ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೋಡಿಗೆ ಫ್ರಾನ್ಸ್‌ನ ಆ್ಯಡ್ರಿಯನ್‌ ಮನ್ನಾರಿನೊ-ಗೊವನ್ನಿ ಪೆರಿಕಾರ್ಡ್‌ ವಿರುದ್ಧ ಆಡಲಿದ್ದಾರೆ. ಶ್ರೀರಾಂ ಬಾಲಾಜಿ ಬ್ರಿಟನ್‌ನ ಲ್ಯೂಕ್‌ ಜಾನ್ಸನ್‌ ಜೊತೆಗೂಡಿ, ಯೂಕಿ ಭಾಂಬ್ರಿ ಫ್ರಾನ್ಸ್‌ನ ಅಲ್ಬಾನೊ ಒಲಿವೆಟ್ಟಿ ಜೊತೆಗೂಡಿ ಕಣಕ್ಕಿಳಿಯಲಿದ್ದಾರೆ. ನಗಾಲ್‌ ಡಬಲ್ಸ್‌ನಲ್ಲಿ ಸರ್ಬಿಯಾದ ಡುಸಾನ್‌ ಲಜೋವಿಚ್‌ ಜೊತೆಗೂಡಿ ಆಡಲಿದ್ದಾರೆ.

Share this article