ರಣಜಿ : ಬಂಗಾಳ ವಿರುದ್ಧ ಕರ್ನಾಟಕಕ್ಕಿಲ್ಲ ಗೆಲುವು, ಸಿಕ್ಕಿದ್ದು ಕೇವಲ ಒಂದು ಅಂಕ !

KannadaprabhaNewsNetwork | Updated : Nov 10 2024, 04:25 AM IST

ಸಾರಾಂಶ

ಕರ್ನಾಟಕ vs ಬಂಗಾಳ ಪಂದ್ಯ ಡ್ರಾ. 4 ಪಂದ್ಯದಲ್ಲಿ 1 ಜಯ, 3 ಡ್ರಾ, 9 ಅಂಕ ಗಳಿಸಿರುವ ಕರ್ನಾಟಕ ತಂಡ. ಇನ್ನುಳಿದ ಎಲ್ಲಾ ಮೂರು ಪಂದ್ಯಗಳಲ್ಲಿ ಗೆಲ್ಲಬೇಕಾದ ಅನಿವಾರ್ಯತೆ.

 ಬೆಂಗಳೂರು :  ದಶಕಗಳ ಬಳಿಕ ರಣಜಿ ಟ್ರೋಫಿ ಗೆಲ್ಲುವ ಕರ್ನಾಟಕ ತಂಡದ ಕನಸು ಈ ಬಾರಿಯೂ ನನಸಾಗುವ ಸಾಧ್ಯತೆ ಕ್ಷೀಣಿಸುತ್ತಿದೆ. ಮೊನಚು ಕಳೆದುಕೊಂಡ ಬೌಲಿಂಗ್‌, ತಾರಾ ಬ್ಯಾಟರ್‌ಗಳ ವೈಫಲ್ಯದಿಂದಾಗಿ ತವರಿನಲ್ಲೇ ಗೆಲ್ಲಲು ವಿಫಲವಾಗಿರುವ ತಂಡ, ಗುಂಪು ಹಂತದಿಂದಲೇ ಹೊರಬೀಳುವ ಆತಂಕಕ್ಕೆ ಗುರಿಯಾಗಿದೆ. 

ಶನಿವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ಬಂಗಾಳ ನಡುವಿನ ಪಂದ್ಯ ಡ್ರಾದಲ್ಲಿ ಮುಕ್ತಾಯಗೊಂಡಿತು. ಮೊದಲ ಇನ್ನಿಂಗ್ಸ್‌ ಹಿನ್ನಡೆ ಅನುಭವಿಸಿದ್ದ ರಾಜ್ಯ ತಂಡ ಕೇವಲ ಒಂದು ಅಂಕ ಸಂಪಾದಿಸಿದರೆ, ಬಂಗಾಳಕ್ಕೆ 3 ಅಂಕ ಲಭಿಸಿತು. ಸದ್ಯ ಕರ್ನಾಟಕ 4 ಪಂದ್ಯಗಳ ಬಳಿಕ 1 ಜಯ, 3 ಡ್ರಾದೊಂದಿಗೆ 9 ಅಂಕ ಗಳಿಸಿ ‘ಸಿ’ ಗುಂಪಿನಲ್ಲಿ 4ನೇ ಸ್ಥಾನದಲ್ಲಿದೆ. ಹರ್ಯಾಣ(19), ಕೇರಳ(15), ಮಧ್ಯಪ್ರದೇಶ(10) ಮೊದಲ 3 ಸ್ಥಾನಗಳಲ್ಲಿವೆ.

 ರಾಜ್ಯ ತಂಡಕ್ಕೆ ಇನ್ನು 3 ಪಂದ್ಯಗಳು ಬಾಕಿಯಿದ್ದು, ಎಲ್ಲಾ ಪಂದ್ಯಗಳಲ್ಲೂ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. 

ಬಂಗಾಳ ಪ್ರಾಬಲ್ಯ: 3ನೇ ದಿನದಂತ್ಯಕ್ಕೆ 2ನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 127 ರನ್‌ ಗಳಿಸಿದ್ದ ಬಂಗಾಳ ಶನಿವಾರವೂ ಪ್ರಾಬಲ್ಯ ಸಾಧಿಸಿತು. ತಂಡ 5 ವಿಕೆಟ್‌ಗೆ 283 ರನ್‌ ಗಳಿಸಿ ಡಿಕ್ಲೇರ್‌ ಘೋಷಿಸಿತು. ಸುದೀಪ್‌ ಕುಮಾರ್ ಔಟಾಗದೆ 101, ವೃತ್ತಿಬದುಕಿನ ಕೊನೆ ಟೂರ್ನಿ ಆಡುತ್ತಿರುವ ವೃದ್ಧಿಮಾನ್‌ ಸಾಹ ಔಟಾಗದೆ 63 ರನ್‌ ಸಿಡಿಸಿದರು. 

ವಿದ್ಯಾಧರ್‌ ಪಾಟೀಲ್‌ 3 ವಿಕೆಟ್‌ ಕಿತ್ತರು.ಗೆಲುವಿಗೆ 363 ರನ್‌ಗಳ ಬೃಹತ್‌ ಗುರಿ ಪಡೆದ ಕರ್ನಾಟಕಕ್ಕೆ ಕೇವಲ 28 ಓವರ್‌ ಬ್ಯಾಟ್ ಮಾಡಲು ಅವಕಾಶ ಸಿಕ್ಕಿತು. ತಂಡ 3 ವಿಕೆಟ್‌ಗೆ 110 ರನ್‌ ಗಳಿಸಿದ್ದಾಗ ಪಂದ್ಯ ಡ್ರಾ ಮಾಡಿಕೊಳ್ಳಲು ಉಭಯ ತಂಡಗಳ ನಾಯಕರು ಒಪ್ಪಿಗೆ ಸೂಚಿಸಿದರು. ಸ್ಮರಣ್‌ ಔಟಾಗದೆ 35, ಮನೀಶ್‌ ಪಾಂಡೆ ಔಟಾಗದೆ 30, ಶ್ರೇಯಸ್‌ ಗೋಪಾಲ್‌ 32 ರನ್‌ ಗಳಿಸಿದರು.ಸ್ಕೋರ್‌: ಬಂಗಾಳ 301/10 ಮತ್ತು 283/5 ಡಿಕ್ಲೇರ್‌ (ಸುದೀಪ್‌ 101*, ಸಾಹ 63*, ವಿದ್ಯಾಧರ್‌ 3-53), ಕರ್ನಾಟಕ 221/10 ಮತ್ತು 110/3 (ಸ್ಮರಣ್‌ 35, ಶ್ರೇಯಸ್‌ 32, ಸೂರಜ್‌ 3-27)

Share this article