ರಣಜಿ : ಕ್ವಾರ್ಟರ್‌ ಫೈನಲ್‌ ಪ್ರವೇಶಕ್ಕೆ ಕರ್ನಾಟಕ ಸೆಣಸು : ರಾಜ್ಯಕ್ಕೆ ಬೋನಸ್‌ ಅಂಕದೊಂದಿಗೆ ಜಯ ಅಗತ್ಯ

KannadaprabhaNewsNetwork |  
Published : Jan 30, 2025, 12:31 AM ISTUpdated : Jan 30, 2025, 04:59 AM IST
KL Rahul

ಸಾರಾಂಶ

ಇಂದಿನಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹರ್ಯಾಣ ವಿರುದ್ಧ ಪಂದ್ಯ. ರಾಜ್ಯಕ್ಕೆ ಬೋನಸ್‌ ಅಂಕದೊಂದಿಗೆ ಜಯ ಅಗತ್ಯ. ಕೆ.ಎಲ್‌.ರಾಹುಲ್‌, ವಿದ್ವತ್‌ ಕಾವೇರಪ್ಪ ಸೇರ್ಪಡೆಯಿಂದ ರಾಜ್ಯ ತಂಡಕ್ಕೆ ಬಲ । ಕ್ವಾರ್ಟರ್‌ ಸ್ಥಾನಕ್ಕಿದೆ 3 ತಂಡಗಳ ನಡುವೆ ಸ್ಪರ್ಧೆ.

  ಬೆಂಗಳೂರು : ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆಯಲ್ಲಿ ಸಿಲುಕಿರುವ ಕರ್ನಾಟಕ, ಗುರುವಾರದಿಂದ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ‘ಸಿ’ ಗುಂಪಿನ 7ನೇ ಹಾಗೂ ಅಂತಿಮ ಪಂದ್ಯದಲ್ಲಿ, ಗುಂಪಿನ ಅಗ್ರಸ್ಥಾನಿ ಹರ್ಯಾಣ ವಿರುದ್ಧ ಸೆಣಸಲಿದೆ.

ತಾರಾ ಬ್ಯಾಟರ್‌ ಕೆ.ಎಲ್‌.ರಾಹುಲ್‌ 5 ವರ್ಷ ಬಳಿಕ ರಣಜಿ ಪಂದ್ಯವಾಡಲು ಸಿದ್ಧಗೊಂಡಿದ್ದು, ಹರ್ಯಾಣ ವಿರುದ್ಧ ಬೋನಸ್‌ ಅಂಕದೊಂದಿಗೆ ಗೆದ್ದರೆ ಕರ್ನಾಟಕ ಕ್ವಾರ್ಟರ್‌ ಫೈನಲ್‌ಗೇರಲಿದೆ.

ರಾಹುಲ್‌ ಈ ಪಂದ್ಯವನ್ನು ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿ ಹಾಗೂ ಚಾಂಪಿಯನ್ಸ್‌ ಟ್ರೋಫಿಯ ಸಿದ್ಧತೆಗೆ ಬಳಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ಆಟವಾಡಿದ್ದ ರಾಹುಲ್‌, ಈ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಆಡುವುದಾಗಿ ಕೋಚ್‌ ಯರ್ರೇ ಗೌಡ್‌ ತಿಳಿಸಿದ್ದಾರೆ.

ಮಯಾಂಕ್‌ ಅಗರ್‌ವಾಲ್‌, ದೇವದತ್‌ ಪಡಿಕ್ಕಲ್‌, ಆರ್‌.ಸ್ಮರಣ್‌, ಅಭಿನವ್‌ ಮನೋಹರ್‌ರಂಥ ಬ್ಯಾಟರ್‌ಗಳನ್ನು ಹೊಂದಿರುವ ಕರ್ನಾಟಕಕ್ಕೆ ವೇಗಿ ವಿದ್ವತ್‌ ಕಾವೇರಪ್ಪ ಅವರ ಸೇರ್ಪಡೆ ಮತ್ತಷ್ಟು ಬಲ ನೀಡಲಿದೆ. ಪ್ರಸಿದ್ಧ್‌ ಕೃಷ್ಣ, ವಾಸುಕಿ ಕೌಶಿಕ್‌, ಅಭಿಲಾಷ್‌ ಶೆಟ್ಟಿ, ಶ್ರೇಯಸ್‌ ಗೋಪಾಲ್‌ ಸಹ ತಮ್ಮ ಲಯ ಮುಂದುವರಿಸುವ ನಿರೀಕ್ಷೆಯಲ್ಲಿದ್ದಾರೆ.

ಹರ್ಯಾಣ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರಿದ್ದು, ನಾಯಕ ಅಂಕಿತ್‌ ಕುಮಾರ್‌ ಉತ್ತಮವಾಗಿ ತಂಡ ನಿರ್ವಹಿಸುತ್ತಿದ್ದಾರೆ. ಹಿಮಾನ್ಶು ರಾಣಾ, ನಿಶಾಂತ್‌ ಸಿಂಧು ಬ್ಯಾಟಿಂಗ್‌ ಸ್ಟಾರ್ಸ್‌ ಎನಿಸಿದರೆ, ಅನ್ಶುಲ್‌ ಕಾಂಬೋಜ್‌ ಹಾಗೂ ಅನುಜ್‌ ಥಕ್ರಾಲ್‌ ಬೌಲಿಂಗ್‌ ಟ್ರಂಪ್‌ಕಾರ್ಡ್ಸ್‌ ಎನಿಸಿದ್ದಾರೆ.

ರಾಜ್ಯದ ಕ್ವಾರ್ಟರ್‌ಫೈನಲ್‌

ಲೆಕ್ಕಾಚಾರ ಹೇಗೆ?

- ಕರ್ನಾಟಕ ಬೋನಸ್ ಅಂಕದೊಂದಿಗೆ ಗೆದ್ದರೆ

*ಕರ್ನಾಟಕ ಸದ್ಯ 19 ಅಂಕ ಹೊಂದಿದ್ದು, ಹರ್ಯಾಣ 26 ಅಂಕ ಗಳಿಸಿದೆ. ಕೇರಳ 21 ಅಂಕ ಹೊಂದಿದ್ದು, ಎರಡೂ ತಂಡಗಳ ಮೇಲೆ ಒತ್ತಡ ಹೇರುತ್ತಿದೆ. ಕರ್ನಾಟಕ ಬೋನಸ್‌ ಅಂಕ (7 ಅಂಕಗಳು)ದೊಂದಿಗೆ ಗೆಲುವು ಸಾಧಿಸಿದರೆ, ಆಗ ಒಟ್ಟು ಅಂಕ 26ಕ್ಕೆ ಏರಿಕೆಯಾಗಲಿದೆ. ಆಗ, ಆತಿಥೇಯ ತಂಡ ಗುಂಪಿನಲ್ಲಿ ಮೊದಲ ಅಥವಾ 2ನೇ ಸ್ಥಾನ ಪಡೆದು ನಾಕೌಟ್‌ ಹಂತಕ್ಕೇರಬಹದು.

* ಬಿಹಾರ ವಿರುದ್ಧ ಕೇರಳ ಬೋನಸ್‌ ಅಂಕ ಇಲ್ಲದೇ ಗೆದ್ದರೆ ಆಗ ಆ ತಂಡದ ಅಂಕ 27ಕ್ಕೆ ಹೆಚ್ಚಳವಾಗಲಿದ್ದು, ಸಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಲಿದೆ.

ಒಂದು ವೇಳೆ ಕೇರಳ ಅಗ್ರಸ್ಥಾನಿಯಾದರೆ, 26 ಅಂಕ ಹೊಂದಿರುವ ಹರ್ಯಾಣ ಹೊರಬೀಳಲಿದೆ. ಕರ್ನಾಟಕ 2 ಬೋನಸ್‌ ಅಂಕ ಪಡೆದಿರಲಿರುವ ಕಾರಣ ಕರ್ನಾಟಕ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಗಿಟ್ಟಿಸಲಿದೆ. ಕರ್ನಾಟಕ 6 ಅಂಕ ಪಡೆದರೆ?

ಒಂದು ವೇಳೆ ಕರ್ನಾಟಕ ಬೋನಸ್‌ ಅಂಕ ಇಲ್ಲದೇ ಗೆದ್ದರೆ, ಆಗ ರಾಜ್ಯತಂಡ 25 ಅಂಕ ಪಡೆಯಲಿದ್ದು, ಬಿಹಾರ ವಿರುದ್ಧ ಕೇರಳ ಡ್ರಾ ಮಾಡಿಕೊಳ್ಳುವಂತೆ ಪ್ರಾರ್ಥಿಸಬೇಕು. ಕರ್ನಾಟಕ ಡ್ರಾ ಸಾಧಿಸಿದರೆ?

ಪಂದ್ಯ ಡ್ರಾಗೊಂಡು ಕರ್ನಾಟಕ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದರೆ, 3 ಅಂಕ ಸಿಗಲಿದೆ. 8 ಬಾರಿ ಚಾಂಪಿಯನ್‌ ತಂಡದ ಬಳಿ 22 ಅಂಕ ಇರಲಿದ್ದು, ಆಗ ಬಿಹಾರ ವಿರುದ್ಧ ಕೇರಳ ಸೋತರಷ್ಟೇ ಕರ್ನಾಟಕ ಕ್ವಾರ್ಟರ್‌ ಫೈನಲ್‌ಗೇರಲಿದೆ.

ಹರ್ಯಾಣ ಹಾಗೂ ಕೇರಳ ಡ್ರಾ ಸಾಧಿಸಿದರೂ ಸಾಕು, ನಾಕೌಟ್‌ ಹಂತಕ್ಕೇರಲಿವೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!