ಮೆಂಟರ್‌ ಗಂಭೀರ್‌ vs ಕ್ಯಾಪ್ಟನ್‌ ಕಮಿನ್ಸ್‌: ಫೈನಲ್‌ನ ಕುತೂಹಲಕಾರಿ ಸಂಗತಿಗಳು

KannadaprabhaNewsNetwork | Updated : May 26 2024, 04:28 AM IST

ಸಾರಾಂಶ

2012 ಮತ್ತು 2014ರಲ್ಲಿ ಗೌತಮ್‌ ಗಂಭೀರ್‌ ನಾಯಕರಾಗಿದ್ದಾಗಲೇ ಕೆಕೆಆರ್‌ 2 ಬಾರಿ ಐಪಿಎಲ್‌ ಚಾಂಪಿಯನ್‌ ಆಗಿತ್ತು. ಈಗ ಅವರು ಕೆಕೆಆರ್‌ನ ಮಾರ್ಗದರ್ಶಕ. ಕಮಿನ್ಸ್‌ 2014ರಲ್ಲಿ ಚಾಂಪಿಯನ್‌ ಕೆಕೆಆರ್‌ ತಂಡದ ಭಾಗವಾಗಿದ್ದರು.

ಚೆನ್ನೈ: 17ನೇ ಆವೃತ್ತಿ ಐಪಿಎಲ್‌ನ ಫೈನಲ್‌ ಭಾನುವಾರ ನಡೆಯಲಿದೆ. 2 ಬಾರಿ ಚಾಂಪಿಯನ್‌ ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ 1 ಬಾರಿ ಟ್ರೋಫಿ ವಿಜೇತ ಸನ್‌ರೈಸರ್ಸ್‌ ಹೈದರಾಬಾದ್‌ ಪ್ರಶಸ್ತಿಗಾಗಿ ಸೆಣಸಾಡಲಿವೆ. 

2 ತಂಡಗಳ ಫೈನಲ್‌ ಹಾದಿ ಇಲ್ಲಿದೆ ಕೆಕೆಆರ್‌- ಲೀಗ್‌ ಹಂತದಲ್ಲಿ 14 ಪಂದ್ಯಗಳಲ್ಲಿ 9ರಲ್ಲಿ ಜಯ- 3 ಪಂದ್ಯದಲ್ಲಿ ಸೋಲು, 2 ಪಂದ್ಯ ಮಳೆಗೆ ಬಲಿ- 20 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ- ಕ್ವಾಲಿಫೈಯರ್-1ರಲ್ಲಿ ಸನ್‌ರೈಸರ್ಸ್‌ ವಿರುದ್ಧ ಜಯ

ಹೈದ್ರಾಬಾದ್‌

- ಲೀಗ್ ಹಂತದಲ್ಲಿ 14 ಪಂದ್ಯದಲ್ಲಿ 8 ಜಯ, 5 ಸೋಲು- 17 ಅಂಕಗಳೊಂದಿಗೆ ಅಂಪಟ್ಟಿಯಲ್ಲಿ 2ನೇ ಸ್ಥಾನ- ಕ್ವಾಲಿಫೈಯರ್-1ರಲ್ಲಿ ಸನ್‌ರೈಸರ್ಸ್‌ ವಿರುದ್ಧ ಸೋಲು- ಕ್ವಾಲಿಫೈಯರ್-2ರಲ್ಲಿ ರಾಜಸ್ಥಾನ ವಿರುದ್ಧ ಗೆಲುವು

ಮೆಂಟರ್‌ ಗಂಭೀರ್‌ vs ಕ್ಯಾಪ್ಟನ್‌ ಕಮಿನ್ಸ್‌

2012 ಮತ್ತು 2014ರಲ್ಲಿ ಗೌತಮ್‌ ಗಂಭೀರ್‌ ನಾಯಕರಾಗಿದ್ದಾಗಲೇ ಕೆಕೆಆರ್‌ 2 ಬಾರಿ ಐಪಿಎಲ್‌ ಚಾಂಪಿಯನ್‌ ಆಗಿತ್ತು. ಈಗ ಅವರು ಕೆಕೆಆರ್‌ನ ಮಾರ್ಗದರ್ಶಕ. ನಾಯಕನಾಗಿ ಯಶಸ್ಸು ಪಡೆದಿರುವ ಗಂಭೀರ್‌ ಮೆಂಟರ್‌ ಆಗಿಯೂ ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ ಕಮಿನ್ಸ್‌ 2014ರಲ್ಲಿ ಚಾಂಪಿಯನ್‌ ಕೆಕೆಆರ್‌ ತಂಡದ ಭಾಗವಾಗಿದ್ದರು. ಈಗ ಕೆಕೆಆರ್‌ ವಿರುದ್ಧವೇ ಫೈನಲ್‌ನಲ್ಲಿ ಸೆಣಸಲಿದ್ದಾರೆ. ಅಂದು ಆಟಗಾರನಾಗಿ ಸಿಕ್ಕ ಟ್ರೋಫಿ, ಈ ಬಾರಿ ನಾಯಕನಾಗಿ ಪಡೆಯಲು ಕಾತರಿಸುತ್ತಿದ್ದಾರೆ.

2012ರಲ್ಲಿ ಚೆನ್ನೈನಲ್ಲೇ ಟ್ರೋಫಿ ಗೆದ್ದಿದ್ದ ಕೆಕೆಆರ್‌

ಕೆಕೆಆರ್‌ ತಂಡ 2012ರಲ್ಲಿ ಚೆನ್ನೈ ಕ್ರೀಡಾಂಗಣದಲ್ಲೇ ನಡೆದ ಸಿಎಸ್‌ಕೆ ವಿರುದ್ಧದ ಫೈನಲ್‌ನಲ್ಲಿ ಟ್ರೋಫಿ ಗೆದ್ದಿತ್ತು. ಈಗ ಮತ್ತೊಮ್ಮೆ ಚೆನ್ನೈನಲ್ಲೇ ಫೈನಲ್‌ ಆಡಲು ಸಜ್ಜಾಗಿದೆ

ಟೆಸ್ಟ್‌, ಏಕದಿನ ವಿಶ್ವಕಪ್‌ ಗೆದ್ದ ಕಮಿನ್ಸ್‌ಗೆ ಐಪಿಎಲ್‌ ಕಪ್‌ ಗುರಿ

ಕಮಿನ್ಸ್‌ ಆಸ್ಟ್ರೇಲಿಯಾ ನಾಯಕನಾದ ಅಲ್ಪ ಕಾಲದಲ್ಲೇ ಬಹಳಷ್ಟು ಸಾಧಿಸಿದ್ದಾರೆ. ಕಳೆದ ವರ್ಷ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ ಹಾಗೂ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾವನ್ನು ಕಮಿನ್ಸ್‌ ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. ಈ ಬಾರಿ ನಾಯಕನಾಗಿ ಚೊಚ್ಚಲ ಐಪಿಎಲ್‌ ಟ್ರೋಫಿ ಗೆಲ್ಲುವತ್ತ ಚಿತ್ತವಿರಿಸಿದ್ದಾರೆ.

ಫೈನಲ್‌ಗೂ ಮುನ್ನ ಅದ್ಧೂರಿ ಸಮಾರಂಭ

ಭಾನುವಾರ ಫೈನಲ್‌ ಪಂದ್ಯಕ್ಕೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಅಮೆರಿಕದ ಇಮೇಜಿನ್‌ ಡ್ರ್ಯಾಗನ್ಸ್‌ ತಂಡ ಪ್ರದರ್ಶನ ನೀಡಲಿದೆ. ಸಂಗೀತ ನಿರ್ದೇಶಕರು, ನಟ-ನಟಿಯರೂ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಮಳೆ ಬಂದರೆ ಏನಾಗಲಿದೆ?

ಚೆನ್ನೈನಲ್ಲಿ ಭಾನುವಾರ ಮಳೆ ಮುನ್ಸೂಚನೆ ಇಲ್ಲ. ಒಂದು ವೇಳೆ ಮಳೆ ಬಂದು ಪಂದ್ಯ ನಡೆಸಲು ಸಾಧ್ಯವಾಗದೇ ಇದ್ದರೆ, ಮೀಸಲು ದಿನವಾದ ಸೋಮವಾರ ಪಂದ್ಯ ನಡೆಯಲಿದೆ. ಕಳೆದ ವರ್ಷ ನಿಗದಿತ ದಿನದಂದು ಭಾರಿ ಮಳೆಯಾದ ಕಾರಣ ಮರುದಿನ ಫೈನಲ್‌ ಪಂದ್ಯ ಆಡಿಸಲಾಗಿತ್ತು.

03ನೇ ಮುಖಾಮುಖಿ: ಈ ಬಾರಿ ಐಪಿಎಲ್‌ನಲ್ಲಿ ಇತ್ತಂಡಗಳು 3ನೇ ಬಾರಿ ಮುಖಾಮುಖಿಯಾಗುತ್ತಿವೆ. ಲೀಗ್‌ ಹಂತ, ಕ್ವಾಲಿಫೈಯರ್‌-1ರಲ್ಲಿ ಕೆಕೆಆರ್‌ ಗೆದ್ದಿತ್ತು.

03ನೇ ಬಾರಿ: ಚೆನ್ನೈ 3ನೇ ಬಾರಿ ಐಪಿಎಲ್‌ ಫೈನಲ್‌ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ. 2011, 2012ರಲ್ಲೂ ಚೆಪಾಕ್‌ನಲ್ಲೇ ಫೈನಲ್‌ ನಡೆದಿತ್ತು.

Share this article