ಬಾಂಗ್ಲಾ ಟೆಸ್ಟ್‌ಗೆ ಭಾರತೀಯರ ಅಭ್ಯಾಸ ಶುರು: ನೆಟ್ಸ್‌ನಲ್ಲಿ ಬೆವರಿಳಿಸಿದ ವಿರಾಟ್‌ ಕೊಹ್ಲಿ

KannadaprabhaNewsNetwork | Updated : Sep 14 2024, 04:17 AM IST

ಸಾರಾಂಶ

ಚೆನ್ನೈನಲ್ಲಿ ಟೀಂ ಇಂಡಿಯಾ ಆಟಗಾರರಿಂದ ನೆಟ್ ಪ್ರಾಕ್ಟೀಸ್‌ ಆರಂಭ. ಗಂಟೆಗಳ ಕಾಲ ನೆಟ್ಸ್‌ನಲ್ಲಿ ಬೆವರಿಳಿಸಿದ ವಿರಾಟ್‌ ಕೊಹ್ಲಿ, ಬೂಮ್ರಾ. ಇನ್ನೂ 5 ದಿನಗಳ ಕಾಲ ಆಟಗಾರರಿಂದ ಅಭ್ಯಾಸ. ಸೆ.19ರಿಂದ ಮೊದಲ ಟೆಸ್ಟ್‌. ಕೋಚ್‌ ಗಂಭೀರ್‌, ಮೊರ್ಕೆಲ್‌ಗೆ ತವರಲ್ಲಿ ಮೊದಲ ಪರೀಕ್ಷೆ

ಚೆನ್ನೈ: ಸೆ.19ರಿಂದ ಆರಂಭಗೊಳ್ಳಲಿರುವ ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಗೆ ಟೀಂ ಇಂಡಿಯಾ ಆಟಗಾರರು ಶುಕ್ರವಾರ ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಆಟಗಾರರು ಇನ್ನೂ 5 ದಿನಗಳ ಅಭ್ಯಾಸ ಶಿಬಿರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. 

ವೇಗಿ ಜಸ್‌ಪ್ರೀತ್‌ ಬೂಮ್ರಾ, ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌ ಸೇರಿದಂತೆ ಹಲವು ಆಟಗಾರರು ಗುರುವಾರವೇ ನಗರಕ್ಕೆ ಆಗಮಿಸಿದ್ದು, ವಿರಾಟ್‌ ಕೊಹ್ಲಿ, ನಾಯಕ ರೋಹಿತ್‌ ಶರ್ಮಾ ಸೇರಿ ಕೆಲ ಪ್ರಮುಖ ಆಟಗಾರರು ಶುಕ್ರವಾರ ತಂಡ ಕೂಡಿಕೊಂಡರು. ಕೊಹ್ಲಿ ಸುಮಾರು 45 ನಿಮಿಷಗಳ ಕಾಲ ನೆಟ್ಸ್‌ ಅಭ್ಯಾಸ ನಡೆಸಿದರೆ, ಬೂಮ್ರಾ ಗಂಟೆಗಳ ಕಾಲ ನೆಟ್ಸ್‌ನಲ್ಲಿ ಬೆವರಿಳಿಸಿದರು. 

ರೋಹಿತ್‌ ಶರ್ಮಾ, ರವೀಂದ್ರ ಜಡೇಜಾ, ಆರ್‌.ಅಶ್ವಿನ್‌, ರಾಹುಲ್‌ ಸೇರಿದಂತೆ ಬಹುತೇಕ ಎಲ್ಲಾ ಆಟಗಾರರು ಮೈದಾನದಲ್ಲಿ ಕೆಲಹೊತ್ತು ಅಭ್ಯಾಸದಲ್ಲಿ ತೊಡಗಿಸಿಕೊಂಡರು. ರೋಹಿತ್‌, ಕೊಹ್ಲಿ, ಬೂಮ್ರಾ ಸೇರಿ ಪ್ರಮುಖರಿಗೆ ಟಿ20 ವಿಶ್ವಕಪ್‌ ಬಳಿಕ ಇದು ಮೊದಲ ಸರಣಿ. ಅವರು ದೀರ್ಘ ವಿಶ್ರಾಂತಿ ಬಳಿಕ ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡರು. ಕೆಲ ಆಟಗಾರರು ಕಳೆದ ತಿಂಗಳು ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಪಾಲ್ಗೊಂಡಿದ್ದರು. 

ಸದ್ಯ ಬಾಂಗ್ಲಾ ಸರಣಿಗೆ ಆಯ್ಕೆಯಾಗಿರುವ ಆಟಗಾರರ ಪೈಕಿ ಸರ್ಫರಾಜ್‌ ಖಾನ್‌ ಮಾತ್ರ ಇನ್ನೂ ತಂಡ ಕೂಡಿಕೊಳ್ಳಬೇಕಿದೆ. ಅವರು ಸದ್ಯ ದುಲೀಪ್‌ ಟ್ರೋಫಿ ಟೂರ್ನಿಯಲ್ಲಿ ಭಾರತ ‘ಬಿ’ ತಂಡದ ಪರ ಆಡುತ್ತಿದ್ದು. ಸೆ.15ರ ಬಳಿಕ ತಂಡ ಸೇರ್ಪಡೆಗೊಳ್ಳಲಿದ್ದಾರೆ. ಇನ್ನು, ಬಾಂಗ್ಲಾದೇಶ ಆಟಗಾರರು ಭಾನುವಾರ ಅಥವಾ ಸೋಮವಾರ ಚೆನ್ನೈಗೆ ಆಗಮಿಸುವ ಸಾಧ್ಯೆತೆಯಿದೆ ಎಂದು ಹೇಳಲಾಗುತ್ತಿದೆ. 

ನಜ್ಮುಲ್‌ ಹೊಸೈನ್‌ ನಾಯಕತ್ವದ ತಂಡ ಇತ್ತೀಚೆಗಷ್ಟೇ ಪಾಕಿಸ್ತಾನವನ್ನು ಅವರದೇ ತವರಿನಲ್ಲಿ 2-0 ಅಂತರದಲ್ಲಿ ಸೋಲಿಸಿತ್ತು. ಭಾರತಕ್ಕೂ ಆಘಾತ ನೀಡುವ ವಿಶ್ವಾಸದೊಂದಿಗೆ ಆಟಗಾರರು ಚೆನ್ನೈಗೆ ಆಗಮಿಸಲಿದ್ದಾರೆ. ಸದ್ಯ ಭಾರತ ತಂಡ ವಿಶ್ವ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಶೇಕಡಾ 68.52 ಗೆಲುವಿನ ಪ್ರತಿಶತದೊಂದಿಗೆ ಅಗ್ರಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ (ಶೇ.62.50) 2ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ಶೇ.45.83 ಗೆಲುವಿನ ಪ್ರತಿಶತದೊಂದಿಗೆ 4ನೇ ಸ್ಥಾನದಲ್ಲಿದೆ. ಭಾರತ ಹಾಗೂ ಬಾಂಗ್ಲಾ ನಡುವಿನ 2ನೇ ಪಂದ್ಯ ಸೆ.27ರಿಂದ ಕಾನ್ಪುರದಲ್ಲಿ ನಿಗದಿಯಾಗಿದೆ. 

ಬೌಲಿಂಗ್‌ ಕೋಚ್‌ ಆಗಿ ಮಾರ್ಕೆಲ್‌ಗೆ ಅಗ್ನಿಪರೀಕ್ಷೆ

ಭಾರತ ತಂಡ ನೂತನ ಬೌಲಿಂಗ್‌ ಕೋಚ್‌ ಆಗಿ ನೇಮಕಗೊಂಡಿರುವ ದಕ್ಷಿಣ ಆಫ್ರಿಕಾದ ಮೋರ್ನೆ ಮಾರ್ಕೆಲ್‌ ಮೊದಲ ಬಾರಿ ತಂಡದ ಹುದ್ದೆ ಅಲಂಕರಿಸಲಿದ್ದು, ಅಗ್ನಿಪರೀಕ್ಷೆ ಎದುರಾಗಲಿದೆ. ಅವರು ಶುಕ್ರವಾರ ಭಾರತೀಯ ಆಟಗಾರರ ಜೊತೆ ಅಭ್ಯಾಸ ಶಿಬಿರದಲ್ಲಿ ಕಾಣಿಸಿಕೊಂಡರು. ಇನ್ನು, ಮುಖ್ಯ ಕೋಚ್‌ ಗೌತಮ್‌ ಗಂಭೀರ್‌, ಸಹಾಯಕ ಕೋಚ್‌ ಅಭಿಷೇಕ್‌ ನಾಯರ್‌ ಕೂಡಾ ಮೊದಲ ಬಾರಿ ತವರಿನಲ್ಲಿ ಭಾರತದ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇತ್ತೀಚೆಗೆ ಅವರು ಶ್ರೀಲಂಕಾ ಪ್ರವಾಸಕ್ಕೂ ಮುನ್ನ ತಂಡಕ್ಕೆ ಕೋಚ್‌ ಆಗಿ ನೇಮಕಗೊಂಡಿದ್ದರು.

Share this article