ಟಿ20 ವಿಶ್ವಕಪ್‌ನಲ್ಲಿ ಮತ್ತೆ ವಿರಾಟ್‌ ಕೊಹ್ಲಿ, ರೋಹಿತ್‌ ಫೇಲ್‌!

KannadaprabhaNewsNetwork |  
Published : Jun 21, 2024, 01:06 AM ISTUpdated : Jun 21, 2024, 04:14 AM IST
ಕೊಹ್ಲಿ-ರೋಹಿತ್‌ | Kannada Prabha

ಸಾರಾಂಶ

ಅವಕಾಶ ಬಳಸಿಕೊಳ್ಳಲು ದುಬೆ ಮತ್ತೊಮ್ಮೆ ಫೇಲ್‌. ಜೈಸ್ವಾಲ್‌ರನ್ನು ಹೊರಗಿಟ್ಟು ಕೊಹ್ಲಿಯನ್ನು ಆರಂಭಿಕ ಸ್ಥಾನದಲ್ಲಿ ಆಡಿಸುವ ನಿರ್ಧಾರ ಪದೇ ಪದೇ ವಿಫಲ

ಬಾರ್ಬಡೊಸ್‌: ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಬೌಲರ್‌ಗಳ ಬಲದಿಂದಲೇ ಗೆಲ್ಲುತ್ತಾ ಬಂದಿರುವ ಭಾರತಕ್ಕೆ ಸೂಪರ್‌-8 ಹಂತದಲ್ಲೂ ಪ್ರಮುಖ ಬ್ಯಾಟರ್‌ಗಳು ಕೈಕೊಟ್ಟಿದ್ದಾರೆ. 

ಮಹತ್ವದ ಟೂರ್ನಿಯಲ್ಲಿ ತಂಡಕ್ಕೆ ಆಧಾರಸ್ತಂಭ ಆಗಬಲ್ಲರು ಎಂದು ನಿರೀಕ್ಷೆ ಇಡಲಾಗಿದ್ದ ಸ್ಟಾರ್‌ ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ತಮ್ಮ ಮೇಲಿನ ಭರವಸೆ ಉಳಿಸಿಕೊಳ್ಳಲು ಮತ್ತೆ ವಿಫಲರಾಗಿದ್ದಾರೆ.

ಗುಂಪು ಹಂತದಲ್ಲಿ 3 ಪಂದ್ಯಗಳಲ್ಲಿ ಕ್ರಮವಾಗಿ 1, 4 ಹಾಗೂ ಸೊನ್ನೆಗೆ ಔಟಾಗಿದ್ದ ಕೊಹ್ಲಿ, ಗುರುವಾರ ಅಫ್ಘಾನಿಸ್ತಾನ ವಿರುದ್ಧ ಸೂಪರ್‌-8 ಪಂದ್ಯದಲ್ಲಿ 24 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. ದೊಡ್ಡ ಇನ್ನಿಂಗ್ಸ್‌ನ ನಿರೀಕ್ಷೆ ಮೂಡಿಸಿದ್ದರೂ, ರಶೀದ್‌ ಖಾನ್‌ ಎಸೆತದಲ್ಲಿ ನಬಿಗೆ ಕ್ಯಾಚ್‌ ನೀಡಿ ಔಟಾದರು. ಐರ್ಲೆಂಡ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ರೋಹಿತ್‌ ಆ ಬಳಿಕ 3 ಪಂದ್ಯದಲ್ಲೂ ತಂಡದ ಕೈ ಹಿಡಿಯಲು ವಿಫಲರಾಗಿದ್ದಾರೆ.

 ಪಾಕಿಸ್ತಾನ ವಿರುದ್ಧ 13, ಅಮೆರಿಕ ವಿರುದ್ಧ 3 ರನ್‌ ಗಳಿಸಿದ್ದ ರೋಹಿತ್‌, ಅಫ್ಘಾನಿಸ್ತಾನ ವಿರುದ್ಧ ಗಳಿಸಿದ್ದು ಕೇವಲ 8 ರನ್‌. ಇನ್ನು, ಕೊಹ್ಲಿಯನ್ನು ಆರಂಭಿಕನಾಗಿ ಕಣಕ್ಕಿಳಿಸಿ, ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆಯನ್ನು ಆಡಿಸುವ ಆಯ್ಕೆ ಸಮಿತಿಯ ನಿರ್ಧಾರವೂ ಕೈ ಹಿಡಿಯುತ್ತಿಲ್ಲ.

 ಸ್ಪಿನ್ನರ್‌ಗಳನ್ನು ದಂಡಿಸಬಲ್ಲರು ಎಂಬ ವಿಶ್ವಾಸ ಹುಟ್ಟುಹಾಕಿದ್ದ ದುಬೆ, ಆಫ್ಘನ್‌ ವಿರುದ್ಧ 10 ರನ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ. ಗುಂಪು ಹಂತದ 3 ಪಂದ್ಯದಲ್ಲಿ ಅವರು ಕೇವಲ 34 ರನ್‌ ಗಳಿಸಿದ್ದರು. ಜೈಸ್ವಾಲ್‌ರನ್ನು ಹೊರಗಿಟ್ಟು ಕೊಹ್ಲಿಯನ್ನು ಆರಂಭಿಕ ಸ್ಥಾನದಲ್ಲಿ ಆಡಿಸುವ ನಿರ್ಧಾರ ಪದೇ ಪದೇ ವಿಫಲವಾಗುತ್ತಿದ್ದು, ಮುಂದಿನ ಪಂದ್ಯದಲ್ಲಾದರೂ ದುಬೆಯನ್ನು ಹೊರಗಿಟ್ಟು ಆಯ್ಕೆ ಸಮಿತಿ ಜೈಸ್ವಾಲ್‌ರನ್ನು ಆಡಿಸಬಹುದೇ ಎಂಬ ಪ್ರಶ್ನೆ ಸದ್ಯ ಅಭಿಮಾನಿಗಳಲ್ಲಿದೆ.

ಟೀಕೆಗೆ ಸೂರ್ಯ ಉತ್ತರಆರಂಭಿಕ 2 ಪಂದ್ಯಗಳಲ್ಲಿ ವಿಫಲರಾಗಿ ಟೀಕೆಗೆ ಗುರಿಯಾಗಿದ್ದ ಸೂರ್ಯಕುಮಾರ್‌ ಯಾದವ್‌ ಸತತ 2 ಅರ್ಧಶತಕಗಳ ಮೂಲಕ ತಂಡಕ್ಕೆ ನೆರವಾಗಿದ್ದಾರೆ. ಆರಂಭಿಕರ ವೈಫಲ್ಯದಿಂದ ಕಂಗೆಟ್ಟಿದ್ದ ಬುಧವಾರದ ಪಂದ್ಯದಲ್ಲಿ ಸೂರ್ಯ 28 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್‌ನೊಂದಿಗೆ 53 ರನ್‌ ಸಿಡಿಸಿದರು. ಇನ್ನು, ಗುಂಪು ಹಂತದಲ್ಲಿ ಅಬ್ಬರಿಸಿದ್ದ ರಿಷಭ್‌ ಪಂತ್‌ ಆಫ್ಘನ್‌ ವಿರುದ್ಧ 11 ಎಸೆತಗಳಲ್ಲಿ 20 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು.

PREV

Recommended Stories

ಸದ್ಯಕ್ಕೆ ನಿಲ್ಲಲ್ಲ ‘ನೋ ಶೇಕ್‌ ಹ್ಯಾಂಡ್‌’ ವಾರ್‌! ಪಾಕಿಸ್ತಾನ ಆಕ್ಷೇಪ
ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌