ವಿಶಾಖಪಟ್ಟಣಂ: ಕಳೆದ ವಾರವಷ್ಟೇ ಹೈದರಾಬಾದ್-ಮುಂಬೈ ಇಂಡಿಯನ್ಸ್ ನಡುವೆ ರನ್ ಹೊಳೆ ಹರಿದಿದ್ದನ್ನು ನೋಡಿದ ಕ್ರಿಕೆಟ್ ಅಭಿಮಾನಿಗಳಿಗೆ ಈಗ ಕೋಲ್ಕತಾ ಕೂಡಾ ಭರ್ಜರಿ ರಸದೌತಣ ಒದಗಿಸಿದೆ. ಸಿಕ್ಸರ್, ಬೌಂಡರಿಗಳ ಸುರಿಮಳೆ ಸಿಡಿಸಿ ಬರೋಬ್ಬರಿ 272 ರನ್ ಚಚ್ಚಿದ ಕೆಕೆಆರ್, ಐಪಿಎಲ್‌ನ 2ನೇ ಗರಿಷ್ಠ ಮೊತ್ತದ ದಾಖಲೆ ಬರೆದಿದ್ದಲ್ಲದೇ ಬೃಹತ್ ಗೆಲುವನ್ನೂ ತನ್ನದಾಗಿಸಿಕೊಂಡಿದೆ.
ಬುಧವಾರ ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತಾಗೆ ಲಭಿಸಿದ್ದು 106 ರನ್ ಗೆಲುವು.ಐಪಿಎಲ್‌ನಲ್ಲಿ ಯಾವ ದಾಖಲೆಯೂ ಸುರಕ್ಷಿತವಲ್ಲ ಎಂಬುದು ಕೆಕೆಆರ್ ಬ್ಯಾಟಿಂಗ್‌ಗೆ ಇಳಿದಾಗಲೇ ಅರಿವಾಗಿತ್ತು. ಬೆಟ್ಟದೆತ್ತರದ ಮೊತ್ತದ ಮುಂದೆ ಡೆಲ್ಲಿ ಕ್ಯಾಪಿಟಲ್ಸ್ ಮಂಕಾಯಿತು. ಕೆಕೆಆರ್‌ನ ಮಾರಕ ದಾಳಿಗೆ ತತ್ತರಿಸಿದ ಡೆಲ್ಲಿ 17.2 ಓವರ್‌ಗಳಲ್ಲಿ 166 ರನ್‌ಗೆ ಸರ್ವಪತನ ಕಂಡಿತು.
ವಾರ್ನರ್(18), ಪೃಥ್ವಿ ಶಾ(10), ಮಿಚೆಲ್ ಮಾರ್ಷ್(00) ಹಾಗೂ ಅಭಿಷೇಕ್ ಪೊರೆಲ್(00) ಔಟಾಗಿ ಪೆವಿಲಿಯನ್ ಸೇರಿದಾಗ ತಂಡದ ಮೊತ್ತ 4.3 ಓವರ್‌ಗಳಲ್ಲಿ 33. ದಾಖಲೆಯ ಮೊತ್ತ ಬೆನ್ನತ್ತುವಾಗ ಆರಂಭದಲ್ಲೇ ಸತತ ವಿಕೆಟ್ ಕಳೆದುಕೊಂಡ ತಂಡ ಪವರ್-ಪ್ಲೇ ಮುನ್ನವೇ ಸೋಲೊಪ್ಪಿಕೊಂಡಿತ್ತು. ಬಳಿಕ ರಿಷಭ್ ಪಂತ್(25 ಎಸೆತಗಳಲ್ಲಿ 55) ಹಾಗೂ ಟ್ರಿಸ್ಟನ್ ಸ್ಟಬ್ಸ್(32 ಎಸೆತಗಳಲ್ಲಿ 54) ಸೋಲಿನ ಅಂತರವನ್ನಷ್ಟೇ ತಗ್ಗಿಸಿದರು. ವೈಭವ್ ಅರೋರಾ 3 ವಿಕೆಟ್ ಕಿತ್ತರು.
ರನ್ ಹೊಳೆ: ಇತರೆ ಮೂಲಕ ರನ್ ಖಾತೆ ತೆರೆದ ಕೋಲ್ಕತಾ 2ನೇ ಓವರ್‌ನಿಂದಲೇ ಅಬ್ಬರಿಸಲು ಶುರು ಮಾಡಿತು. ಡೆಲ್ಲಿ ಬೌಲರ್‌ಗಳ ಮೈ ಚಳಿ ಬಿಡಿಸುವಂತೆ ಅಬ್ಬರಿಸಿದ ಸುನಿಲ್ ನರೈನ್ ಚೆಂಡನ್ನು ಮೈದಾನದ ಮೂಲೆ ಮೂಲೆಗೂ ಅಟ್ಟಿದರು.
ಪವರ್-ಪ್ಲೆ ಮುಕ್ತಾಯಕ್ಕೂ ಮುನ್ನ ಅರ್ಧಶತಕ ಪೂರ್ಣಗೊಳಿಸಿದ ನರೈನ್ ಕೇವಲ 39 ಎಸೆತಗಳಲ್ಲಿ 7 ಬೌಂಡರಿ, 7 ಸಿಕ್ಸರ್‌ನೊಂದಿಗೆ 85 ರನ್ ಚಚ್ಚಿದರು. ಚೊಚ್ಚಲ ಪಂದ್ಯವಾಡುತ್ತಿರುವ ಅಂಗ್‌ಕೃಷ್ ರಘುವನ್ಶಿ 27 ಎಸೆತದಲ್ಲಿ 54 ರನ್ ದೋಚಿದರೆ, ಕೊನೆಯಲ್ಲಿ ಆ್ಯಂಡ್ರೆ ಎಸೆಲ್ 19 ಎಸೆತಗಳಲ್ಲಿ 41 ಹಾಗೂ ರಿಂಕು ಸಿಂಗ್ 8 ಎಸೆತಗಳಲ್ಲಿ 26 ರನ್ ಸಿಡಿಸಿ ತಂಡವನ್ನು 270ರ ಗಡಿ ದಾಟಿಸಿದರು.ಸ್ಕೋರ್: ಕೋಲ್ಕತಾ 20 ಓವರಲ್ಲಿ 272/7 (ನರೈನ್ 85, ರಘುವನ್ಶಿ 54, ರಸೆಲ್ 41, ನೋಕಿಯಾ 3-59), ಡೆಲ್ಲಿ 17.2 ಓವರಲ್ಲಿ 166/10 (ಪಂತ್ 55, ಸ್ಟಬ್ಸ್ 54, ವೈಭವ್ 3-27) ಪಂದ್ಯಶ್ರೇಷ್ಠ: ಸುನಿಲ್ ನರೈನ್
01ನೇ ಬಾರಿ: ಕೋಲ್ಕತಾ ಐಪಿಎಲ್ ಆವೃತ್ತಿಯ ಆರಂಭಿಕ 3 ಪಂದ್ಯಗಳನ್ನು ಗೆದ್ದಿದ್ದು ಇದೇ ಮೊದಲು.