ಕೋಲ್ಕತಾ: ಗೆಲುವು ಎಂಬುದು ಆರ್‌ಸಿಬಿಯ ಹಣೆಬರಹದಲ್ಲಿ ಬರೆದಿಲ್ಲವೋ, ಹೊಸ ಅಧ್ಯಾಯದಲ್ಲಿ ಆ ಪದ ಮಾಯವಾಗಿದೆಯೋ ಗೊತ್ತಿಲ್ಲ. ಸೋಲಂತೂ ತಂಡವನ್ನೂ ಬೆನ್ನು ಬಿಡುವ ಲಕ್ಷಣವಂತೂ ಕಂಡುಬರುತ್ತಿಲ್ಲ. ಇನ್ನೇನು ಸೋತೇ ಬಿಟ್ಟಿತು ಅನ್ನುವಷ್ಟರಲ್ಲಿ ಕರ್ಣ್ ಶರ್ಮಾ ಮ್ಯಾಜಿಕ್ ಮಾಡಿ ಅಭಿಮಾನಿಗಳಿಗೆ ಗೆಲುವಿನ ಗ್ಯಾರಂಟಿ ನೀಡಿದರೂ, ಫಲಿತಾಂಶ ಮಾತ್ರ ಸೋಲೇ ಆಗಿತ್ತು.
ಈಡನ್ ಗಾರ್ಡನ್ಸ್‌ನ ರಣ ರೋಚಕ ಪಂದ್ಯದಲ್ಲಿ ಭಾನುವಾರ ಆರ್‌ಸಿಬಿ 1 ರನ್ ವೀರೋಚಿತ ಸೋಲುಂಡಿದ್ದು, ಒಟ್ಟಾರೆ 7ನೇ ಸೋಲಿನೊಂದಿಗೆ 17ನೇ ಆವೃತ್ತಿ ಐಪಿಎಲ್‌ನ ಪ್ಲೇ-ಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.
7ರಲ್ಲಿ 5ನೇ ಜಯದೊಂದಿಗೆ ಕೆಕೆಆರ್ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.ಆರ್‌ಸಿಬಿ ಬೌಲರ್‌ಗಳನ್ನು ಬೆಂಡೆತ್ತುವುದು ಸುಲಭ ಎಂದರಿತಿದ್ದ ಕೆಕೆಆರ್ ಮೊದಲು ಬ್ಯಾಟ್ ಮಾಡಿ ಕಲೆಹಾಕಿದ್ದು 6 ವಿಕೆಟ್‌ಗೆ 222 ರನ್. ಗೆದ್ದರಷ್ಟೇ ಉಳಿಗಾಲ ಎಂಬ ಪರಿಸ್ಥಿತಿಯಲ್ಲಿದ್ದ ಆರ್‌ಸಿಬಿ ಕೂಡಾ ಸುಲಭದಲ್ಲಿ ಸೋಲೊಪ್ಪಲು ತಯಾರಿರಲಿಲ್ಲ.
ಕೊಹ್ಲಿ(18), ಡು ಪ್ಲೆಸಿ(07) ಕೈಕೊಟ್ಟರೂ, ವಿಲ್ ಜ್ಯಾಕ್ಸ್(55), ರಜತ್ ಪಾಟೀದಾರ್(52) ಆರ್‌ಸಿಬಿಯನ್ನು ಮೇಲೆತ್ತಿದರು. ಆದರೆ ಸತತ ವಿಕೆಟ್ ಕಳೆದುಕೊಂಡ ತಂಡ ಮತ್ತೆ ಕುಸಿಯಿತು. ಕೊನೆ ಓವರಲ್ಲಿ 21 ರನ್ ಬೇಕಿದ್ದಾಗ ಕರ್ಣ್ ಶರ್ಮಾ 4 ಎಸೆತದಲ್ಲಿ 3 ಸಿಕ್ಸರ್ ಬಾರಿಸಿದರೂ 5ನೇ ಎಸೆತದಲ್ಲಿ ಔಟಾದರು. ಕೊನೆ ಎಸೆತದಲ್ಲಿ 3 ರನ್ ಬೇಕಿದ್ದಾಗ ಫರ್ಗ್ಯೂಸನ್ ರನ್ ಔಟಾದರು.ಬೃಹತ್ ಮೊತ್ತ: ಆರ್‌ಸಿಬಿ ಬೌಲರ್‌ಗಳು ಈ ಪಂದ್ಯದಲ್ಲೂ ಕೈಕೊಟ್ಟರು. ಫಿಲ್ ಸಾಲ್ಟ್(14 ಎಸೆತದಲ್ಲಿ 48), ನಾಯಕ ಶ್ರೇಯಸ್ ಅಯ್ಯರ್(50), ಕೊನೆಯಲ್ಲಿ ಅಬ್ಬರಿಸಿದ ರಿಂಕು ಸಿಂಗ್(24), ರಸೆಲ್(ಔಟಾಗದೆ 27), ರಮನ್‌ದೀಪ್(ಔಟಾಗದೆ 24) ತಂಡವನ್ನು 220ರ ಗಡಿ ದಾಟಿಸಿದರು.ಸ್ಕೋರ್: ಕೋಲ್ಕತಾ 20 ಓವರಲ್ಲಿ 222/6 (ಶ್ರೇಯಸ್ 50, ಸಾಲ್ಟ್ 48, ಗ್ರೀನ್ 2-35), ಆರ್‌ಸಿಬಿ 20 ಓವರಲ್ಲಿ 221/10 (ಜ್ಯಾಕ್ಸ್ 55, ರಜತ್ 52, ರಸೆಲ್ 3-25) ಪಂದ್ಯಶ್ರೇಷ್ಠ: ಆ್ಯಂಡ್ರೆ ರಸೆಲ್.