ಕೊನೆರು ಹಂಪಿ vs ದಿವ್ಯಾ: ಚೆಸ್‌ ವಿಶ್ವಕಪ್‌ ಕಿರೀಟ ಗೆಲ್ಲೋರ್‍ಯಾರು?

Published : Jul 26, 2025, 10:56 AM IST
Koneru Humpy and Divya Deshmukh (Photo: ANI)

ಸಾರಾಂಶ

ಚೆಸ್‌ನಲ್ಲಿ ಭಾರತ ಮತ್ತೊಂದು ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಈ ಬಾರಿಯ ಫಿಡೆ ಮಹಿಳಾ ಚೆಸ್‌ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಇಬ್ಬರು ಆಟಗಾರ್ತಿಯರು ಸೆಣಸಾಡಲಿದ್ದಾರೆ.

 ಬಟುಮಿ(ಜಾರ್ಜಿಯಾ): ಚೆಸ್‌ನಲ್ಲಿ ಭಾರತ ಮತ್ತೊಂದು ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಈ ಬಾರಿಯ ಫಿಡೆ ಮಹಿಳಾ ಚೆಸ್‌ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಇಬ್ಬರು ಆಟಗಾರ್ತಿಯರು ಸೆಣಸಾಡಲಿದ್ದಾರೆ. ಹಿರಿಯ ಚೆಸ್‌ ಪಟು ಕೊನೆರು ಹಂಪಿ ಹಾಗೂ ಯುವ ತಾರೆ ದಿವ್ಯಾ ದೇಶ್‌ಮುಖ್‌ ನಡುವಿನ ಫೈನಲ್‌ ಶನಿವಾರ, ಭಾನುವಾರ ನಡೆಯಲಿದೆ.

ಇದು 3ನೇ ಆವೃತ್ತಿಯ ಮಹಿಳಾ ವಿಶ್ವಕಪ್ ಆಗಿದ್ದು, ಇದೇ ಮೊದಲ ಬಾರಿ ಭಾರತೀಯರು ಫೈನಲ್‌ಗೇರಿದ್ದಾರೆ. ಹೀಗಾಗಿ ಯಾರೇ ಗೆದ್ದರೂ ಕಿರೀಟ ಭಾರತದ ಪಾಲಾಗಲಿದೆ. ಈಗಾಗಲೇ ಇಬ್ಬರೂ ಮುಂದಿನ ವರ್ಷದ ಕ್ಯಾಂಡಿಡೇಟ್ಸ್‌ ಟೂರ್ನಿಗೆ ಅರ್ಹತೆಯನ್ನೂ ಗಿಟ್ಟಿಸಿಕೊಂಡಿದ್ದಾರೆ.

ಆಂಧ್ರ ಪ್ರದೇಶದ 38 ವರ್ಷದ ಗ್ರ್ಯಾಂಡ್‌ಮಾಸ್ಟರ್‌ ಕೊನೆರು ಹಂಪಿ ಇತ್ತೀಚೆಗಷ್ಟೇ ಮಹಿಳಾ ರ್‍ಯಾಪಿಡ್‌ ವಿಶ್ವ ಚಾಂಪಿಯನ್‌ಶಿಪ್‌ ಆಗಿ ಹೊರಹೊಮ್ಮಿದ್ದರು. ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎಂದೇ ಕರೆಸಿಕೊಳ್ಳುತ್ತಿದ್ದ ಅವರು, ಸೆಮಿಫೈನಲ್‌ನಲ್ಲಿ ಚೀನಾದ ಲೀ ಟಿಂಗ್‌ಜೀ ವಿರುದ್ಧ ಟೈ ಬ್ರೇಕರ್‌ನಲ್ಲಿ ಗೆದ್ದಿದ್ದರು.

ಮತ್ತೊಂದೆಡೆ 19 ವರ್ಷದ ನಾಗ್ಪುರದ ದಿವ್ಯಾ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ್ತಿಯರನ್ನು ಮಣಿಸಿ ಪ್ರಶಸ್ತಿ ಸುತ್ತಿಗೇರಿದ್ದಾರೆ. 2ನೇ ಶ್ರೇಯಾಂಕಿತ ಚೀನಾದ ಜಿನೆರ್‌ ಝು, ಭಾರತದ ಡಿ.ಹರಿಕಾರನ್ನು ಸೋಲಿಸಿದ್ದ ದಿವ್ಯಾ, ಸೆಮಿಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್‌, ಚೀನಾದ ಟಾನ್‌ ಝೊಂಗ್ಯಿ ವಿರುದ್ಧ ಜಯಿಸಿದ್ದರು.

ಯಾರಿವರು ಕೊನೆರು?

- 15 ವರ್ಷದಲ್ಲೇ ಗ್ರ್ಯಾಂಡ್‌ಮಾಸ್ಟರ್‌. ಈ ಪಟ್ಟಕ್ಕೇರಿದ ಭಾರತದ ಮೊದಲ ಮಹಿಳೆ.

- 2 ಬಾರಿ ರ್‍ಯಾಪಿಡ್‌ ವಿಶ್ವ ವಿಶ್ವ ಚಾಂಪಿಯನ್‌(2019, 2024)

- ವಿಶ್ವ ರ್‍ಯಾಂಕಿಂಗ್‌ನಲ್ಲಿ 4ನೇ ಸ್ಥಾನ. ಭಾರತದ ನಂ.1

ದಿವ್ಯಾ ಸಾಧನೆಯೇನು?

ಫಿಡೆ ಮಹಿಳಾ ವಿಶ್ವಕಪ್‌ ಫೈನಲ್‌ಗೇರಿದ ಅತಿ ಕಿರಿಯೆ.

 2024ರಲ್ಲಿ ಫಿಡೆ ಅಂಡರ್‌-20 ವಿಶ್ವ ಚಾಂಪಿಯನ್‌.

ವಿಶ್ವ ರ್‍ಯಾಂಕಿಂಗ್‌ನಲ್ಲಿ 16ನೇ ಸ್ಥಾನ. ಭಾರತದ ನಂ.4

ಹೇಗೆ ನಡೆಯುತ್ತೆ ಫೈನಲ್‌ ಪಂದ್ಯ?

ಫೈನಲ್‌ನಲ್ಲಿ 2 ಕ್ಲಾಸಿಕಲ್‌ ಗೇಮ್‌ ಇರಲಿದೆ. ಶನಿವಾರ ಮೊದಲ ಗೇಮ್‌, ಭಾನುವಾರ 2ನೇ ಗೇಮ್‌ ನಡೆಯಲಿದೆ. ಅಂಕಗಳು ಸಮಬಲಗೊಂಡರೆ ಸೋಮವಾರ ಟೈ ಬ್ರೇಕರ್‌ ನಡೆಯಲಿದೆ. ಇದರಲ್ಲಿ 2 ಸುತ್ತಿನ, ತಲಾ 10 ನಿಮಿಷಗಳ ರ್‍ಯಾಪಿಡ್‌ ಗೇಮ್‌ ಆಡಿಸಲಾಗುತ್ತದೆ. ಅಲ್ಲೂ ಟೈ ಆದರೆ ತಲಾ 5 ನಿಮಿಷಗಳ ಮತ್ತೆರಡು ಗೇಮ್‌ ನಡೆಸಲಾಗುತ್ತದೆ. ಫಲಿತಾಂಶ ಬರದಿದ್ದರೆ ತಲಾ 3 ನಿಮಿಷಗಳ 2 ಬ್ಲಿಟ್ಜ್‌ ಗೇಮ್‌ ಆಡಿಸಲಾಗುತ್ತದೆ. ಅಗತ್ಯಬಿದ್ದರೆ ಫಲಿತಾಂಶ ಬರುವವರೆಗೂ 3+2 ಬ್ಲಿಟ್ಜ್‌ ಗೇಮ್‌ ನಡೆಸಲಾಗುತ್ತದೆ.

PREV
Read more Articles on

Recommended Stories

ಮ್ಯಾಂಚೆಸ್ಟರಲ್ಲಿ ಭಾರತದ ಬೆಂಡೆತ್ತಿದ ಇಂಗ್ಲೆಂಡ್‌!
ಚಿನ್ನಸ್ವಾಮಿಯಲ್ಲಿ ಇನ್ನು ಐಪಿಎಲ್‌ ಪಂದ್ಯಗಳಿಲ್ಲ?